ಅಭಿವೃದ್ಧಿಗಾಗಿ ಸುಸ್ಥಿರತೆಯ ಸ್ವಸಹಾಯ ಸಂಘಗಳು

ಹಿಂದಿನ ಸಂಚಿಕೆಯಲ್ಲಿ ನೂತನ ಸಂಘಗಳ ಸುಸ್ಥಿರತೆಗಾಗಿ ಪ್ರಾರಂಭದಲ್ಲಿ ನೀಡುವ 6 ಪ್ರಮುಖ ತರಬೇತಿಗಳಲ್ಲಿ 1. ಸ್ವಸಹಾಯ ಸಂಘಗಳ ಸಭಾ ನಡವಳಿಕೆ ಮತ್ತು ಶ್ರಮ ವಿನಿಮಯ 2. ಸ್ವಸಹಾಯ ಸಂಘದ ಉಳಿತಾಯ ಮತ್ತು ದಾಖಲಾತಿ ನಿರ್ವಹಣಾ ತರಬೇತಿ 3. ಸ್ವಸಹಾಯ ಸಂಘಗಳ ಹಿಡುವಳಿ ಯೋಜನೆ ತರಬೇತಿಗಳ ಬಗ್ಗೆ ವಿವರಿಸಲಾಗಿದೆ. ಇನ್ನುಳಿದ ಮೂರು ತರಬೇತಿಗಳ ಬಗ್ಗೆ ಈ ಸಂಚಿಕೆಯಲ್ಲಿ ತಿಳಿಯೋಣ.

4. ಸ್ವಸಹಾಯ ಸಂಘದ ಸದಸ್ಯರಲ್ಲಿ ನಾಯಕತ್ವ : ಸ್ವಸಹಾಯ ಸಂಘದ ವ್ಯವಸ್ಥೆಯಲ್ಲಿ ಸಂಘದ ಅಧ್ಯಕ್ಷರು, ಕಾರ್ಯದರ್ಶಿ, ಕೋಶಾಧಿಕಾರಿಗಳಿಗೆ ಸಂಘದ ನಾಯಕತ್ವ ವಹಿಸಿ, ನಿರ್ವಹಿಸಿಕೊಂಡು ಹೋಗುವ ಸಂಪೂರ್ಣ ಜವಾಬ್ದಾರಿ ಇರುತ್ತದೆ. ಹಾಗೆಯೇ ಇವರು ನಿರ್ದಿಷ್ಟ ಅವಧಿಯೊಳಗೆ (ಸಾಮಾನ್ಯವಾಗಿ 3 ವರ್ಷ) ಮಾತ್ರ ಈ ಹುದ್ದೆಯನ್ನು ನಿರ್ವಹಿಸಿಕೊಂಡು ತದನಂತರ ಅಧಿಕಾರವನ್ನು ಉಳಿದ ಸದಸ್ಯರಿಗೆ ಹಸ್ತಾಂತರಿಸಬೇಕಾಗುತ್ತದೆ. ಆದ್ದರಿಂದ ಸಂಘದ ಎಲ್ಲಾ ಸದಸ್ಯರಿಗೂ ಈ ನಾಯಕತ್ವದ ಗುಣಗಳನ್ನು ಬೆಳೆಸುವ ವಿಶೇಷ ತರಬೇತಿಯನ್ನು ನೀಡಲಾಗುತ್ತದೆ. ಉತ್ತಮ ಮಾತುಗಾರಿಕೆ, ತಂಡವನ್ನು ಮುನ್ನಡೆಸುವ ಕೌಶಲ್ಯ, ಹೊಂದಾಣಿಕೆಯ ಗುಣ, ಸಮಸ್ಯೆಗಳಿಗೆ ಸ್ಪಂದಿಸುವ ಮನೋಭಾವನೆ, ಧೈರ್ಯ, ಸಹನೆ, ಯೋಜಿತಗಳನ್ನು ರೂಪಿಸುವ ಕಲೆ ಇತ್ಯಾದಿಗಳನ್ನು ಕಲಿಸಲಾಗುವುದು. ವಾರದ ಸಭೆಯ ನಿರ್ವಹಣೆ, ಹಣಕಾಸಿನ ನಿರ್ವಹಣೆ, ಸಭಾ ಕಾರ್ಯಕ್ರಮದ ನಿರ್ವಹಣೆ ಮತ್ತು ಸಾಮಾಜಿಕ ಕಾರ್ಯಕ್ರಮಗಳಲ್ಲಿ ಸಂಘವು ಸಕ್ರಿಯವಾಗಿ ಪಾಲ್ಗೊಳ್ಳುವಿಕೆಯ ಬಗ್ಗೆ, ನಾಯಕರ ಜವಾಬ್ದಾರಿ ಮತ್ತು ನಿರ್ವಹಣೆಯ ಬಗ್ಗೆ ಸಮಗ್ರವಾಗಿ ತರಬೇತಿ ನೀಡಲಾಗುವುದು.

5. ಸ್ವಸಹಾಯ ಸಂಘದ ಸೇವಾಶುಲ್ಕದ ತಿಳುವಳಿಕೆ : ಸ್ವಸಹಾಯ ಸಂಘದ ರಚನೆ, ದಾಖಲಾತಿ ನಿರ್ವಹಣೆ, ಲೆಕ್ಕಾಚಾರದ ನಿರ್ವಹಣೆ, ಬ್ಯಾಂಕ್‍ಗಳಿಗೆ ಸಲ್ಲಿಸಬೇಕಾದ ದಾಖಲಾತಿಗಳ ನಿರ್ವಹಣೆ, ಪ್ರಗತಿನಿಧಿಯ ನಿರ್ವಹಣೆ ಹಾಗೂ ವಿನಿಯೋಗ ಪರಿಶೀಲನೆಗಳು, ಮರುಪಾವತಿ ನಿರ್ವಹಣೆ, ಸಂಘಗಳ ಲೆಕ್ಕಪರಿಶೋಧನೆ ಮತ್ತು ಗುಣಮಟ್ಟ ನಿರ್ವಹಣೆ ಇತ್ಯಾದಿ ಎಲ್ಲಾ ಕಾರ್ಯಚಟುವಕೆಗಳನ್ನು ನಿರ್ವಹಿಸುವ ಪ್ರಯುಕ್ತ ಯೋಜನೆಗೆ ನಿಗದಿತ ಸೇವಾಶುಲ್ಕವಾದ ಪ್ರಗತಿನಿಧಿಯ ಹೊರಬಾಕಿಯ ಮೇಲೆ ಶೇಕಡಾ 5 (ವಾರ್ಷಿಕ) ದೊರೆಯುತ್ತದೆ. ಈ ಸೇವಾಶುಲ್ಕದ ಬಗ್ಗೆ ಪರಿಪೂರ್ಣವಾದ ಮಾಹಿತಿ ತಿಳಿಸಲಾಗುತ್ತದೆ. ಸಂಘವು ಬ್ಯಾಂಕ್‍ನಿಂದ ಪಡೆದ ಸಾಲವನ್ನು ತನ್ನ ಸದಸ್ಯರಿಗೆ ನೀಡುವಾಗ ಪ್ರಸ್ತುತ ವಿಧಿಸುವ ಶೇಕಡಾ 14 ಬಡ್ಡಿದರದಲ್ಲಿ ಬ್ಯಾಂಕ್‍ನ ಬಡ್ಡಿದರ ಹಾಗೂ ಸೇವಾಶುಲ್ಕವು ಒಳಗೊಂಡಿರುವುದಲ್ಲದೇ ಸಂಘಕ್ಕೆ ಸಿಗುವ ಲಾಭಾಂಶದ ಬಗ್ಗೆಯೂ ಪ್ರಾತ್ಯಕ್ಷಿಕೆ ಲೆಕ್ಕಾಚಾರದೊಂದಿಗೆ ವಿವರಣೆ ನೀಡಲಾಗುವುದು. ಉದಾ : ಸಂಘವು ತನ್ನ ಸದಸ್ಯರಿಗೆ ಶೇ. 14 ಬಡ್ಡಿದರವನ್ನು ವಿಧಿಸಿದ ಸಂದರ್ಭದಲ್ಲಿ ಸಂಘದ ಸಾಲದ ವೆಚ್ಚ (ಬ್ಯಾಂಕ್‍ನ ಬಡ್ಡಿ ಮತ್ತು ಸೇವಾ ಶುಲ್ಕ) ಒಂದು ವೇಳೆ ಶೇ. 13.5 ಆಗಿದ್ದಲ್ಲಿ ಹೆಚ್ಚುವರಿ ಸಿಗುವ ಶೇ. 0.50 ಸಂಘದ ಲಾಭಾಂಶವಾಗಿ ಪರಿವರ್ತನೆಯಾಗುತ್ತದೆಯೇ ಹೊರತು ಬೇರೆಲ್ಲೂ ಹೋಗುವುದಿಲ್ಲ. ಈ ವಿಚಾರದ ಬಗ್ಗೆ ಪ್ರಾತ್ಯಕ್ಷಿಕೆ ಲೆಕ್ಕಾಚಾರದೊಂದಿಗೆ ತಿಳಿಸಲಾಗುವುದು. ಸಂಘದ ಸಾಲದ ಖಾತೆಯು ಬ್ಯಾಂಕ್‍ನಲ್ಲಿ ಕ್ಯಾಶ್ ಕ್ರೆಡಿಟ್‍ನ ಮಾದರಿಯಲ್ಲಿ (ಔveಡಿ ಆಡಿಚಿಜಿಣ) ಇರುವುದರಿಂದ ಸದಸ್ಯರು ಪ್ರತೀ ವಾರ ಮಾಡುವ ಉಳಿತಾಯವು ಈ ಸಾಲದ ಖಾತೆಗೆ ಜಮೆ ಆಗುವುದು. ಆದ್ದರಿಂದ ತಮ್ಮ ಉಳಿತಾಯವು ಆಂತರಿಕ ಸಾಲಕ್ಕೆ ಪ್ರಥಮದಲ್ಲಿ ಬಳಕೆಯಾಗಿ ನಂತರ ಬ್ಯಾಂಕ್‍ನ ಸಾಲವನ್ನು ಬಳಸಲಾಗುತ್ತದೆ. ಹೀಗೆ ಅಂತಹ ಆಂತರಿಕ ಸಾಲಕ್ಕೆ ವಿಧಿಸುವ ಬಡ್ಡಿದರವು ಪೂರ್ಣವಾಗಿ ಲಾಭಾಂಶವಾಗಿ ಸದಸ್ಯರಿಗೆ ದೊರೆಯುತ್ತದೆ. ಇದರಿಂದ ಸಂಘದ ಸುಸ್ಥಿರತೆ ಮತ್ತು ಸದಸ್ಯರ ಲಾಭಾಂಶ, ಉತ್ತಮ ಗಳಿಕೆಯ ಬಗ್ಗೆ ತಿಳಿಸಲಾಗುತ್ತದೆ.

6. ಸ್ವಸಹಾಯ ಸಂಘಗಳ ಪ್ರಗತಿನಿಧಿ ಬೇಡಿಕೆ ಮತ್ತು ಅರ್ಜಿ ತಯಾರಿ : ಈ ತರಬೇತಿಯಲ್ಲಿ ಸ್ವಸಹಾಯ ಸಂಘ ರಚನೆಗೊಂಡು ಆರ್ಥಿಕ ಶಿಸ್ತನ್ನು ಹೊಂದಿ, ಉತ್ತಮ ಶ್ರೇಣಿ ಪಡೆದು ಮೂರು ತಿಂಗಳ ನಂತರ ಬ್ಯಾಂಕ್‍ನಿಂದ ಹೇಗೆ ಪ್ರಗತಿನಿಧಿಯನ್ನು ಪಡೆಯಬಹುದು ಹಾಗೂ ಆ ಸಲುವಾಗಿ ನಿರ್ವಹಿಸಬೇಕಾದ ಎಲ್ಲಾ ಪ್ರಕ್ರಿಯೆಗಳ ಬಗ್ಗೆ ವಿಸ್ತøತವಾಗಿ ತಿಳಿಸಲಾಗುವುದು. ಸದಸ್ಯರಿಗೆ ಪ್ರಗತಿನಿಧಿ ಅಗತ್ಯವಿರುವಾಗ ಯೋಜನೆಯಿಂದ ಸರಳ ಲೀಡ್ ಆ್ಯಪ್ ಮೂಲಕ ಹೇಗೆ ಬೇಡಿಕೆ ಸಲ್ಲಿಸುವುದು ಮತ್ತು ಆ ಬೇಡಿಕೆಗಳನ್ನು ವಾರದ ಸಭೆಯಲ್ಲಿ ಚರ್ಚಿಸಿ ಯಾವ ರೀತಿ ನಿರ್ಣಯ ಕೈಗೊಳ್ಳಬೇಕು, ಯೋಜನೆಯ ಅಧಿಕಾರಿಗಳ ಪರಿಶೀಲನೆ, ಅನುಮೋದನೆ ಹಾಗೂ ಸದಸ್ಯರು ಯೋಜನೆಯ ಗ್ರಾಹಕ ಸೇವಾ ಕೇಂದ್ರಕ್ಕೆ ತೆರಳಿ ಡಿಜಿಟಲ್ ವ್ಯವಸ್ಥೆಯಲ್ಲಿ ಪ್ರಗತಿನಿಧಿ ವಿತರಣೆಗೆ ಕೈಗೊಳ್ಳಬೇಕಾದ ಕ್ರಮಗಳು, ವಿತರಣೆಗೊಂಡ ಪ್ರಗತಿನಿಧಿಯ ಮೊತ್ತ ನೇರವಾಗಿ ಸದಸ್ಯರ ಖಾತೆಗೆ ಜಮೆ, ಪ್ರಗತಿನಿಧಿ ಸದ್ಭಳಕೆ, ವಿನಿಯೋಗ ಪರಿಶೀಲನೆ, ಶಿಸ್ತುಬದ್ಧವಾದ ವಾರದ ಮರುಪಾವತಿ, ಮರುಪಾವತಿ ಚೀಟಿಯ ನಿರ್ವಹಣೆ ಇತ್ಯಾದಿ ಎಲ್ಲಾ ವಿಚಾರಗಳ ಬಗ್ಗೆ ಸಮಗ್ರವಾದ ಮಾಹಿತಿ ನೀಡಲಾಗುವುದು. ಸ್ವಸಹಾಯ ಸಂಘಗಳ ಪ್ರಬುದ್ಧತೆಯ ಆಧಾರದ ಮೇಲೆ ಬ್ಯಾಂಕ್‍ಗಳು ನೀಡುವ ಸಾಲದ ಮೊತ್ತ ಮತ್ತು ಸದಸ್ಯರಿಗೆ ಇರುವ ಗರಿಷ್ಠ ಸಾಲದ ಮೊತ್ತ, ಕನಿಷ್ಠ ಮತ್ತು ಗರಿಷ್ಠ ಮರುಪಾವತಿಯ ಅವಧಿಗಳ ಬಗ್ಗೆ ಪ್ರಾತ್ಯಕ್ಷಿಕೆಯೊಂದಿಗೆ ತಿಳಿಸಲಾಗುವುದು. ಯಾವೆಲ್ಲಾ ಉದ್ದೇಶಗಳಿಗೆ ಪ್ರಗತಿನಿಧಿ ಪಡೆಯಬಹುದು ಹಾಗೂ ಸದಸ್ಯರಿಗೆ ಲಭ್ಯವಿರುವ ಅನೇಕ ರೀತಿಯ ಪ್ರಗತಿನಿಧಿಯ ಬಗ್ಗೆ ವಿವರಿಸಲಾಗುವುದು. ಹೀಗೆ ಪ್ರಮುಖವಾದ ಆರು ತರಬೇತಿಗಳನ್ನು ಸಮಗ್ರವಾಗಿ ನೂತನವಾಗಿ ರಚನೆಗೊಂಡ ಸಂಘಗಳಿಗೆ ನೀಡಿ ಆ ಸಂಘಗಳು ನಿರಂತರವಾಗಿ ಸುಸ್ಥಿರತೆಯನ್ನು ಕಾಯ್ದುಕೊಂಡು ಹೋಗುವಲ್ಲಿ ಭದ್ರ ಅಡಿಪಾಯವನ್ನು ಹಾಕಲಾಗುತ್ತದೆ. ಸ್ವಸಹಾಯ ಸಂಘಗಳ ಪರಿಕಲ್ಪನೆಯಲ್ಲಿ ಉಂಟಾದ ಅನೇಕ ಅಭಿವೃದ್ಧಿ, ಪರಿವರ್ತನೆಯ ಬಗ್ಗೆ ಮುಂದಿನ ಸಂಚಿಕೆಯಲ್ಲಿ ತಿಳಿಯೋಣ.

Facebook
Twitter
WhatsApp
LinkedIn
Telegram

Leave a Reply

Your email address will not be published. Required fields are marked *