ಕಿನ್ನಿಗೋಳಿಯ ಯುವಕನೊಬ್ಬ ಇತ್ತೀಚೆಗೆ ಡೆತ್‍ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದ. ತನಿಖೆಯ ಬೆನ್ನು ಹಿಡಿದ ಪೊಲೀಸರಿಗೆ ಪ್ರಾಥಮಿಕ ತನಿಖೆಯಲ್ಲಿ ಮೊಬೈಲ್ ಆ್ಯಪ್ ಲೋನ್ ಮೂಲಕ ಲೋನ್ ಪಡೆದು ಅವರ ಕಿರುಕುಳಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಮಾಹಿತಿಗಳು ದೊರೆತವು. ಈ ಘಟನೆ ಮರೆಮಾಚುವ ಮುನ್ನವೇ ಸುಶಾಂತ್ ಎಂಬ ಯುವಕ ಮಂಗಳೂರಿನಲ್ಲಿ ನೇಣಿಗೆ ಶರಣಾದ. ಸುರತ್ಕಲ್ ಠಾಣೆಯಲ್ಲಿ ಕೇಸು ದಾಖಲಾಯಿತು. ಹಲವಾರು ಸಂಶಯಗಳೊಂದಿಗೆ ತನಿಖೆಯ ಬೆನ್ನು ಹತ್ತಿದ ಖಾಕಿಗಳಿಗೆ ಸುಶಾಂತ್ ಆ್ಯಪ್‍ವೊಂದರ ಮೂಲಕ ರೂ.30 ಸಾವಿರ ಆನ್‍ಲೈನ್ ಸಾಲ ಪಡೆದಿದ್ದ. ಪಡೆದ 30 ಸಾವಿರಕ್ಕೆ ಮೂರು ತಿಂಗಳಲ್ಲಿ 30 ಸಾವಿರ ರೂಪಾಯಿ ಬಡ್ಡಿಯನ್ನು ಹೆಚ್ಚುವರಿಯಾಗಿ ಪಾವತಿಸಬೇಕಾಗಿತ್ತು. ಬಳಿಕ ಅದನ್ನು ಪಾವತಿಸಲಾಗದಿದ್ದಾಗ ಆ್ಯಪ್ ಕಂಪೆನಿ ಕಿರುಕುಳ ನೀಡಿತ್ತು. ಸುಶಾಂತ್‍ನ ಮೊಬೈಲ್‍ನ ಎಲ್ಲ ಕಾಂಟಾಕ್ಟ್‍ಗಳ ಮಾಹಿತಿ ಪಡೆದು ಅವರೆಲ್ಲರಿಗೆ ಸಂದೇಶ ಕಳುಹಿಸುವ ಬೆದರಿಕೆಯನ್ನೊಡ್ಡಿತು.
ಮೇಲಿನವು ಎರಡು ಉದಾಹರಣೆಗಳಷ್ಟೆ. ಕ್ರೈ ಬ್ರ್ಯಾಂಚ್ ಪೊಲೀಸರೋರ್ವರು ಹೇಳುವ ಪ್ರಕಾರ ತಿಂಗಳಲ್ಲಿ ಇಂತಹ ಹತ್ತಾರು ಪ್ರಕರಣಗಳು ರಾಜ್ಯದಲ್ಲಿ ದಾಖಲಾಗುತ್ತಿವೆ. ಅದರಲ್ಲೂ ಯುವಕ – ಯುವತಿಯರೇ ಈ ‘ಆ್ಯಪ್’ಗಳ ಮೋಸದ ಜಾಲಕ್ಕೆ ಸಿಲುಕುತ್ತಿರುವುದು ಬೇಸರದ ಸಂಗತಿ. ಮೊಬೈಲ್ ಆ್ಯಪ್‍ಗಳನ್ನು ಬಳಸಿಕೊಂಡು ಸುಲಭವಾಗಿ ಸಾಲ ನೀಡಿ ನಂತರ ಅವರಿಂದ ದ್ವಿಗುಣ ಮೊತ್ತವನ್ನು ಸಂಗ್ರಹಿಸುವ ಈ ಮೋಸದ ಜಾಲ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದ್ದು ಮೊಬೈಲ್ ಬಳಕೆದಾರರು ಈ ಬಗ್ಗೆ ಎಚ್ಚರದಿಂದಿರಬೇಕು.
ಮೋಸ ಹೋಗುವುದು ಹೇಗೆ?
ಭಾರತದಲ್ಲಿ 600ಕ್ಕಿಂತ ಹೆಚ್ಚು ಲೋನ್ ಆ್ಯಪ್‍ಗಳಿವೆ. ಇವುಗಳಿಗೆ ಆರ್‍ಬಿಐ ಮಾನ್ಯತೆ ಇಲ್ಲ. ಪ್ಲೇಸ್ಟೋರ್‍ನಲ್ಲಿ ‘ಆನ್‍ಲೈನ್ ಲೋನ್’ ಎಂದು ತಡಕಾಡಿದ ಕೂಡಲೇ ಹತ್ತಾರು ಆ್ಯಪ್‍ಗಳು ಕಾಣಿಸಿಕೊಳ್ಳುತ್ತವೆ. ಈ ಆ್ಯಪ್‍ಗಳನ್ನು ಇನ್‍ಸ್ಟಾಲ್ ಮಾಡುವಾಗ ನಿಮ್ಮ ಮೊಬೈಲ್ ನಂಬರ್, ಭಾವಚಿತ್ರ, ವಿಡಿಯೋ, ಆಧಾರ್‍ಕಾರ್ಡ್, ಪಾನ್‍ಕಾರ್ಡ್, ಬ್ಯಾಂಕ್‍ಪಾಸ್ ಬುಕ್, ಕೆಲಸ ಮಾಡುವಲ್ಲಿನ ಐಡೆಂಟಿಟಿ ಕಾರ್ಡ್‍ನ ಫೋಟೋ ಹೀಗೆ ನಿಮ್ಮಿಂದ ಹತ್ತಾರು ದಾಖಲಾತಿಗಳನ್ನು ಪಡೆದು, ಹಲವಾರು ನೀತಿ ನಿಯಮಗಳಿಗೆ ನಿಮ್ಮ ಒಪ್ಪಿಗೆ ಪಡೆದು ನಂತರ ನಿಮ್ಮ ಮೊಬೈಲ್‍ಗೆ ಇನ್‍ಸ್ಟಾಲ್ ಆಗುತ್ತದೆ.
ಎಷ್ಟು ಮೊತ್ತದ ಸಾಲ ಸಿಗುತ್ತದೆ?
ತುರ್ತಾಗಿ ಕೈ ಸಾಲಗಳನ್ನು ಪಡೆಯುವ ಯುವಕರೇ ಈ ಆ್ಯಪ್‍ನ ಟಾರ್ಗೆಟ್. 3 ಸಾವಿರ ರೂಪಾಯಿಯಿಂದ 10 ಸಾವಿರದವರೆಗೆ ಸಾಲವನ್ನು ಈ ಆ್ಯಪ್‍ಗಳು ನೀಡುತ್ತವೆ. ಮೊದಲೇ ಎಲ್ಲ ದಾಖಲೆಗಳನ್ನು ನೀಡಿರುವ ಕಾರಣ ಸಾಲ ಪಡೆಯುವುದು ಸುಲಭ. ಪಡೆದ ಸಾಲಕ್ಕೆ ಆ ದಿನದಿಂದಲೇ ದಿನವಾರು ಲೆಕ್ಕದಲ್ಲಿ ಶೇ.30ರಿಂದ ಶೇ.60ರಷ್ಟು ಬಡ್ಡಿಯನ್ನು ವಿಧಿಸಿ ಗೊತ್ತುಪಡಿಸಿದ ದಿನದೊಳಗೆ ಸಾಲ ಚುಕ್ತಾ ಮಾಡಲು ಹೇಳುತ್ತಾರೆ. ಈ ಆ್ಯಪ್‍ಗಳು ದಿನಗಳ, ತಿಂಗಳುಗಳ ಲೆಕ್ಕಾಚಾರದಲ್ಲಿ ಸಾಲ ನೀಡುತ್ತವೆ. ಸಣ್ಣ ಪ್ರಮಾಣದ ಸಾಲಗಳನ್ನು ಹೆಚ್ಚೆಂದರೆ ಒಂದು ತಿಂಗಳ ಅವಧಿಗೆ ನೀಡುತ್ತವೆ.
ಪಾವತಿಸದಿದ್ದರೆ ಬ್ಲ್ಯಾಕ್‍ಮೇಲ್
ಸಾಲ ಪಡೆಯುವ ಆರಂಭದಲ್ಲಿ ಬಡ್ಡಿಯ ಸರಿಯಾದ ಲೆಕ್ಕಾಚಾರವನ್ನು ಆ್ಯಪ್‍ಗಳು ನಿಮಗೆ ನೀಡುವುದಿಲ್ಲ. ನಂತರ ಪಡೆದ ಸಾಲಕ್ಕೆ ವಿಧಿಸುವ ಬಡ್ಡಿ ಮೊತ್ತವು ಅಸಲಿನಷ್ಟೇ ಬೆಳೆದಿರುವುದರಿಂದ ಸಾಮಾನ್ಯವಾಗಿ ಅಷ್ಟು ಮೊತ್ತವನ್ನು ತಕ್ಷಣ ಪಾವತಿಸಲು ಸಾಲಗಾರರು ಸಿದ್ಧರಿರುವುದಿಲ್ಲ. ಒಂದೆರಡು ದಿನ ತಡವಾದರೂ ಅದು ಆ್ಯಪ್‍ಗಳಿಗೆ ಲಾಭವೇ. ಆ ದಿನಗಳಿಗೂ ಬಡ್ಡಿ ವಿಧಿಸುತ್ತಾರೆ. ಸಾಲ ಹಿಂತಿರುಗಿಸದೆ ಇದ್ದಲ್ಲಿ ‘ಕ್ರೆಡಿಟ್ ರೇಟ್’ ಕಡಿಮೆಯಾಗುತ್ತದೆ ಎಂದು ಬ್ಲ್ಯಾಕ್‍ಮೇಲ್ ಮಾಡುತ್ತಾರೆ. ನಿಮ್ಮ ಮೊಬೈಲ್‍ಗಳಿಂದ ಚಿತ್ರಗಳನ್ನು ಕದ್ದು ಅಶ್ಲೀಲ ಚಿತ್ರಗಳಾಗಿ ಮಾರ್ಫಿಂಗ್ ಮಾಡಿ ಪರಿಚಯಸ್ಥರಿಗೆ ಕಳುಹಿಸುವುದಾಗಿ ಬೆದರಿಕೆ ಹಾಕುತ್ತಾರೆ. ವಂಚನೆ ಕೇಸು ದಾಖಲಿಸುವುದಾಗಿಯೂ ಹೇಳುತ್ತಾರೆ. ಮುಂದುವರೆದು ಕೆಲವೊಮ್ಮೆ ನಕಲಿ ಎಫ್‍ಐಆರ್ ಪ್ರತಿಯನ್ನು ಕಳುಹಿಸುತ್ತಾರೆ. ಮುಂದೆ ನಿಮಗೆ ಯಾವ ಬ್ಯಾಂಕಿನಲ್ಲೂ ಸಾಲ ಸಿಗುವುದಿಲ್ಲ ಎಂದೂ ಹೆದರಿಸುತ್ತಾರೆ. ಪೊಲೀಸ್ ಅಧಿಕಾರಿಯೊಬ್ಬರು ಹೇಳುವ ಪ್ರಕಾರ ಅವರು ಹೆದರಿಸುವ ಪರಿ ಹೇಗಿರುತ್ತದೆಯೆಂದರೆ ಸಾಲ ಪಡೆದ ಶೇ.80ರಷ್ಟು ಮಂದಿ ಉಪಾಯವಿಲ್ಲದೆ ಅವರು ತಿಳಿಸುವಷ್ಟು ಮೊತ್ತವನ್ನು ಹಿಂದಿರುಗಿಸುತ್ತಾರಂತೆ. ಒಂದಷ್ಟು ಮಂದಿ ಅವರಿಗೆ ಹಣ ಪಾವತಿಸಲು ಕಷ್ಟವಾಗಿ ಆತ್ಮಹತ್ಯೆಯಂತಹ ಮೊರೆ ಹೋಗುತ್ತಾರೆ.
ಟಾರ್ಚರ್… ಟಾರ್ಚರ್…
ಆನ್‍ಲೈನ್ ಸಾಲ ನೀಡುವ ಸಂಸ್ಥೆಗಳ ಟಾರ್ಚರ್ ಯಾವ ರೀತಿ ಇರುತ್ತದೆಯೆಂದರೆ ನೀವು ಒಮ್ಮೆ ಆನ್‍ಲೈನ್ ಸಾಲ ಪಡೆದರೆ ಮತ್ತೆ ಜೀವಮಾನದಲ್ಲಿ ನೀವು ಅಂತಹ ಆ್ಯಪ್‍ಗಳ ಮೊರೆ ಹೋಗುವುದಿಲ್ಲ. ಆನ್‍ಲೈನ್ ಮೂಲಕ ಸಾಲ ಪಡೆದ ಯುವಕನೋರ್ವ ಹೇಳುವ ಪ್ರಕಾರ ಸಾಮಾನ್ಯವಾಗಿ ನಾಲ್ಕು ವಿಧದಲ್ಲಿ ಟಾರ್ಚರ್ ನೀಡುತ್ತಾರೆ. ಆನ್‍ಲೈನ್ ಸಾಲವನ್ನು ಪಡೆದ ಬಳಿಕ ನಿಗದಿತ ಕಂತಿನಂತೆ ಮೊತ್ತವನ್ನು ಪಾವತಿ ಮಾಡಬೇಕು. ಒಂದು ವೇಳೆ ಪಾವತಿ ಮಾಡದಿದ್ದರೆ
• ಪ್ರಾರಂಭಿಕ ಹಂತದಲ್ಲಿ ಮೊಬೈಲ್ ಕರೆ ಮಾಡಿ ಸಾಲ ಕಟ್ಟಲು ಒತ್ತಡ ಹಾಕಲಾಗುತ್ತದೆ.
• ಎರಡನೇ ಹಂತದಲ್ಲಿ ಗೂಂಡಾಗಳಿಂದ ಕರೆ ಮಾಡಿ ಬೆದರಿಕೆ ಹಾಕಲಾಗುತ್ತದೆ. ಇದಾದ ಬಳಿಕವೂ ಕಟ್ಟದಿದ್ದಲ್ಲಿ
• ಮೂರನೇಯದಾಗಿ ಆ್ಯಪ್ ಮೂಲಕ ಸಾಲಗಾರನ ಹತ್ತಿರದ ಸಂಬಂಧಿ, ಗೆಳೆಯ/ತಿಯರಿಗೆ ಕರೆ, ಸಂದೇಶ ಕಳುಹಿಸಿ ಹಣ ಕಟ್ಟಲು ಒತ್ತಡ ಹಾಕುತ್ತಾರೆ.
• ನಾಲ್ಕನೇ ಅಸ್ತ್ರವಾಗಿ ಸಾಲಗಾರನ ಫೋಟೊದ ಮೇಲೆ ‘ವಂಚಕ’ ಎಂಬ ಸಂದೇಶ ಹಾಕಿ ಫೇಸ್‍ಬುಕ್, ಟ್ವಿಟರ್, ಇನ್‍ಸ್ಟಾಗ್ರಾಂ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಹಾಕುವ ಬೆದರಿಕೆ ಒಡ್ಡುತ್ತಾರೆ. ಇದಕ್ಕೆ ಹೆದರಿ ಈ ಹಂತಗಳಲ್ಲಿ ಸಾಕಷ್ಟು ಮಂದಿ ಆತ್ಮಹತ್ಯೆಯ ಮೊರೆ ಹೋಗುತ್ತಾರೆ.
5 ಸಾವಿರ ರೂಪಾಯಿ ಸಾಲಕ್ಕೆ ಒಂದು ವಾರಕ್ಕೆ ರೂ.1500 ಬಡ್ಡಿ
ಬಡ್ಡಿ ಲೆಕ್ಕಾಚಾರದ ವಿಧಾನಗಳಲ್ಲಿ ಆ್ಯಪ್‍ಗಳಿಂದ ಆ್ಯಪ್‍ಗಳಿಗೆ ವ್ಯತ್ಯಾಸವಿದೆ. ಶೇ.30ರಿಂದ ಶೇ.60ರಷ್ಟು ಬಡ್ಡಿಯನ್ನು ದಿನವಾರು ಲೆಕ್ಕಾಚಾರದಲ್ಲಿ ಹಾಕುತ್ತಾರೆ. ಸಾಮಾನ್ಯವಾಗಿ ನೀವು ಐದು ಸಾವಿರ ರೂಪಾಯಿ ಸಾಲ ಪಡೆದರೆ ಒಂದು ವಾರಕ್ಕೆ ರೂ.1500 ಬಡ್ಡಿ ಸೇರಿ ರೂ. 6500 ಅನ್ನು ಪಾವತಿಸಬೇಕಾಗುತ್ತದೆ.
ಆನ್‍ಲೈನ್ ಸಾಲದ ಮೊರೆ ಯಾಕೆ ಹೋಗುತ್ತಾರೆ?
ಕೆಲವೊಮ್ಮೆ ತುರ್ತಾಗಿ ನಾಲ್ಕೈದು ಸಾವಿರ ರೂಪಾಯಿ ಕೈಸಾಲ ಬೇಕಾಗುತ್ತದೆ. ಗೆಳೆಯರಲ್ಲಿ ಕೇಳಿದಾಗ ಸಿಗುವುದಿಲ್ಲ. ಸಂಬಂಧಿಕರಲ್ಲಿ ಕೇಳಲು ಮುಜುಗರವಾಗುತ್ತದೆ. ಒಂದು ವಾರದಲ್ಲಿ ಹಿಂದಿರುಗಿಸುವ ಇಷ್ಟು ಸಣ್ಣ ಪ್ರಮಾಣದ ಸಾಲ ಬ್ಯಾಂಕ್‍ಗಳಲ್ಲೂ ದೊರೆಯುವುದಿಲ್ಲ. ತಕ್ಷಣ ಸಾಲ ಬೇಕಾಗಿರುವುದರಿಂದ ಯಾರ ರಗಳೆಯೂ ಬೇಡವೆಂದು ಆ್ಯಪ್‍ಗಳ ಮೊರೆ ಹೋಗುತ್ತಾರೆ.
ಯುವಕರೇ ಎಚ್ಚರ!
• ತಿಂಗಳ ವೇತನ ಪಡೆಯುವ 25 – 45 ವರ್ಷದ ಯುವಕ/ಯುವತಿಯರೆ ಇವರ ಟಾರ್ಗೆಟ್. ಆದ್ದರಿಂದ ಇಂತಹ ಆ್ಯಪ್‍ಗಳ ಬಗ್ಗೆ ಜಾಗರೂಕರಾಗಿರಿ.
• ಲೇಖನವನ್ನು ಓದಿ ತಮಾಷೆಗೆಂದೂ ಆ್ಯಪ್‍ಗಳನ್ನು ಡೌನ್‍ಲೋಡ್ ಮಾಡಿಕೊಳ್ಳುವ ಪ್ರಯತ್ನವನ್ನು ಮಾಡದಿರಿ.
• ನೀವು ಪಡೆಯುವ ಸಾಲಕ್ಕಿಂತ ಹೆಚ್ಚು ಬಡ್ಡಿ ಪಾವತಿಸಬೇಕಾಗುತ್ತದೆ.
• ಯಾವುದೇ ಆ್ಯಪ್‍ಗಳ ಬಗ್ಗೆ ಸರಿಯಾದ ಮಾಹಿತಿ ಇಲ್ಲದೇ ಡೌನ್‍ಲೋಡ್ ಮಾಡಿಕೊಳ್ಳಬೇಡಿ. ಸಾಲ ಪಡೆದು ಸಮಸ್ಯೆಯಲ್ಲಿ ಸಿಲುಕದಿರಿ.
• ಸಾಮಾಜಿಕ ಜಾಲತಾಣಗಳ ಬಳಕೆ ಹೆಚ್ಚಿದಂತೆ ಇಂತಹ ಮೋಸ ಮಾಡುವವರ ಸಂಖ್ಯೆಯೂ ಹೆಚ್ಚುತ್ತಿದೆ. ಈ ಕುರಿತು ನಿಮಗೆ ಅರಿವಿರಲಿ.