ಎಲ್.ಇ.ಡಿ. ಒಡೆಯ ಜಿತೇಶ್

– ಡಾ. ಚಂದ್ರಹಾಸ್ ಚಾರ್ಮಾಡಿ

ಯುವಕರು ಮನಸ್ಸು ಮಾಡಿದರೆ ಯಾವ ಸಾಧನೆಯನ್ನೂ ಮಾಡಬಲ್ಲರು ಎಂಬ ಮಾತಿಗೆ ಕಾರ್ಕಳ ತಾಲೂಕಿನ ಹಿರಿಯಂಗಡಿ ಶಿವತಿಕೆರೆ ದೇವಾಲಯ ಸಮೀಪದ ಜಿತೇಶ್‌ರವರ ಪ್ರಯತ್ನ ಉತ್ತಮ ಉದಾಹರಣೆ.
‘EXON’ ಎಂಬ ಹೆಸರಿನ ಎಲ್.ಇ.ಡಿ. ಬಲ್ಬ್, ಟ್ಯೂಬ್‌ಲೈಟ್‌ಗಳನ್ನು ನೀವು ಉಪಯೋಗಿಸುತ್ತಿರಬಹುದು. ಇವು ತಯಾರಾಗುವುದು ದೂರದ ಮಹಾನಗರ ಬೆಂಗಳೂರು, ಮುಂಬೈ, ದೆಹಲಿಯಲ್ಲಲ್ಲ. ಬದಲಾಗಿ ಕಾರ್ಕಳದ ನಿಟ್ಟೆಯ ಧೂಪದಕಟ್ಟೆ ಎಂಬಲ್ಲಿ. ಇದರ ಮಾಲಕರು ಇದೇ ಊರಿನ ಜಿತೇಶ್.
ಸುಮಾರು 29 ವರ್ಷ ಪ್ರಾಯದ ಜಿತೇಶ್ ಬಿ.ಬಿ.ಎಂ. ಪದವೀಧರ. 2015ರಲ್ಲಿ ವಿದ್ಯಾಭ್ಯಾಸ ಮುಗಿಸಿ ನಂತರ ವೃತ್ತಿಯಾಗಿ ಆಯ್ಕೆ ಮಾಡಿಕೊಂಡದ್ದು ನೃತ್ಯ ತರಬೇತಿಯನ್ನು. ಮೂರು ವರ್ಷಗಳ ಕಾಲ ಊರಿನ ಒಂದಷ್ಟು ಮಂದಿಗಳನ್ನು ನೃತ್ಯಪಟುಗಳನ್ನಾಗಿಸಿದ ನಂತರ ನೇರವಾಗಿ ಮುಂಬೈಯ ರೈಲು ಹತ್ತಿದರು. ಒಂದು ವರ್ಷಗಳ ಕಾಲ ಹೋಟೆಲ್‌ನಲ್ಲಿ ದುಡಿದರು. ಆರೋಗ್ಯ ಕೈಕೊಟ್ಟ ಕಾರಣ ಒಂದೇ ವರ್ಷದಲ್ಲಿ ಮತ್ತೆ ಊರಿಗೆ ಮರಳಬೇಕಾಯಿತು. ನಂತರದ ದಿನಗಳಲ್ಲಿ ಕ್ಯಾರಿ ಬ್ಯಾಗ್‌ಗಳನ್ನು ತಂದು ಅದರ ಮೇಲೆ ದೇವಾಲಯಗಳ ಹೆಸರು ಅಚ್ಚು ಹಾಕಿಸಿ ಅವುಗಳನ್ನು ದೇವಾಲಯಗಳಿಗೆ ನೀಡುವ ವೃತ್ತಿಗೂ ಕೊರೊನಾ ಎಂಬ ಮಹಾಮಾರಿ ಬ್ರೇಕ್ ಹಾಕಿತು. ಹಾಗೆಂದು ಜಿತೇಶ್ ಎದೆಗುಂದಲಿಲ್ಲ. ಸರ್ಜಿಕಲ್ ಮಾಸ್ಕ್ ತಯಾರಿಯ ದಾರಿ ಹಿಡಿದರು. ಇದರಿಂದ ಒಂದಷ್ಟು ಆದಾಯವು ಕೈ ಸೇರಿತು.
ನೆರವಿಗೆ ಬಂದ ಯೂಟ್ಯೂಬ್
ಯೂಟ್ಯೂಬ್‌ಗಳಲ್ಲಿ ಬರುವ ಆವಿಷ್ಕಾರದ ವೀಡಿಯೋಗಳನ್ನು ಹೆಚ್ಚಾಗಿ ನೋಡುತ್ತಿದ್ದ ಜಿತೇಶ್‌ರವರಲ್ಲಿ ಬಲ್ಬು ತಯಾರಿಸುವ ಆಸೆ ಚಿಗುರೊಡೆಯಿತು. ಇದನ್ನು ತನ್ನ ಮುಂಬೈಯ ಮಿತ್ರರೋರ್ವರಲ್ಲಿ ಚರ್ಚಿಸಿದರು. ಅವರು ತಯಾರಿಯ ಬಗ್ಗೆ ಮಾರ್ಗದರ್ಶನ ನೀಡುವ ಜೊತೆಗೆ ದೆಹಲಿಯಿಂದ ಬೇಕಾದ ಕಚ್ಚಾವಸ್ತುಗಳನ್ನು ತರಿಸಿಕೊಟ್ಟರು. ಮಿತ್ರನ ಕನಸಿಗೆ ಧನ್‌ರಾಜ್ ಎಂಬ ಯುವಕ ಜೊತೆಯಾದರು.
ಕಂಪನಿ ಕಟ್ಟಿದರು
ಕಾರ್ಕಳದ ನಕ್ರೆ ಎಂಬಲ್ಲಿ ಆರಂಭವಾದ ಪ್ರಯತ್ನ ಯಶಸ್ವಿಯಾಗುತ್ತಿದ್ದಂತೆ ತಮ್ಮ ಕಚೇರಿಯನ್ನು ನಿಟ್ಟೆಯ ಧೂಪದಕಟ್ಟೆಗೆ ಸ್ಥಳಾಂತರಿಸಿದರು. ಇದೀಗ ಇಲ್ಲಿ ಎಲ್ಲ ವಿಧದ ಎಲ್.ಇ.ಡಿ. ಬಲ್ಬ್ಗಳು ತಯಾರಾಗುತ್ತಿವೆ. ನಿತ್ಯ ಆರು ಮಂದಿ ಕೆಲಸಕ್ಕಿದ್ದಾರೆ. ಹೆಚ್ಚು ಬೇಡಿಕೆ ಇರುವಾಗ ನಿತ್ಯ ಹತ್ತರಿಂದ ಹದಿನೈದು ಮಂದಿ ಇಲ್ಲಿ ದುಡಿಯುತ್ತಾರೆ. ತಯಾರಿಗೆ ಬೇಕಾದ ಕಚ್ಚಾವಸ್ತುಗಳನ್ನು ದೆಹಲಿಯಿಂದ ಖರೀದಿಸುತ್ತಾರೆ. ಬೇಡಿಕೆಗನುಗುಣವಾದ ಲೈಟ್‌ಗಳ ತಯಾರಿಯ ಕೆಲಸ ಇಲ್ಲಿ ನಡೆಯುತ್ತದೆ. ಕಾರ್ಕಳ ಉತ್ಸವ, ಕಳೆದೆರಡು ವರ್ಷಗಳಿಂದ ಮೈಸೂರು ದಸರಾ ಹೀಗೆ ಹಲವಾರು ಕಾರ್ಯಕ್ರಮಗಳಿಗೆ ಇವರು ಎಲ್.ಇ.ಡಿ. ಬಲ್ಬುಗಳನ್ನು ತಯಾರಿಸಿಕೊಟ್ಟಿದ್ದಾರೆ. ಇಲ್ಲಿ ತಯಾರಾಗುವ ಬಲ್ಬುಗಳಿಗೆ ಬೆಂಗಳೂರು, ಮೈಸೂರು, ಶಿವಮೊಗ್ಗ ಹೀಗೆ ಬೇರೆ ಬೇರೆ ಭಾಗಗಳಿಂದಲೂ ಬೇಡಿಕೆಯಿದೆ. ವಾರದಲ್ಲಿ ಒಂದು ಬಾರಿಯಂತೆ ಇವರ ಟೆಂಪೋ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳ ಅಂಗಡಿಗಳಿಗೆ ತೆರಳುತ್ತದೆ. ಪ್ರಸ್ತುತ 9 ವ್ಯಾಟ್‌ನ ಎಲ್.ಇ.ಡಿ. ಬಲ್ಬ್, ಟ್ಯೂಬ್‌ಲೈಟ್‌ಗಳಿಗೆ ಸಾಕಷ್ಟು ಬೇಡಿಕೆ ಇದೆಯಂತೆ.
ಗ್ರಾಹಕರಿಗೆ ಬೇಕಾದ ರೀತಿಯ ಲೈಟ್‌ಗಳು ಲಭ್ಯ
ಗ್ರಾಹಕರ ಅಭಿರುಚಿಯನ್ನು ಗಮನಿಸಿದ ಇವರು ಗ್ರಾಹಕರಿಗೆ ಬೇಕಾದ ಆಕಾರ, ಬಣ್ಣ, ಗಾತ್ರ, ವಿನ್ಯಾಸದ ಎಲ್.ಇ.ಡಿ. ಲೈಟ್‌ಗಳನ್ನು ತಯಾರಿಸಿಕೊಡುತ್ತಿದ್ದಾರೆ. ವಾಹನದ ಎಲ್ಲ ವಿಧದ ಎಲ್.ಇ.ಡಿ.ಗಳನ್ನು ತಯಾರಿಸುವುದರಲ್ಲೂ ಇವರು ನಿಪುಣರು. ಇದೀಗ ಬೋರ್ಡ್ ಮತ್ತು ಅದರ ಬಾಡಿಯನ್ನು ದೆಹಲಿಯಿಂದ ಖರೀದಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಅವುಗಳನ್ನು ತಾವೇ ತಯಾರಿಸುವ ಯೋಚನೆ ಇವರದ್ದು. ‘ಒಂದುವರೆ ಲಕ್ಷ ರೂಪಾಯಿಂದ ಆರಂಭಿಸಿದ ನಮ್ಮ ವ್ಯವಹಾರ ಇಂದು ರಾಜ್ಯದ ಗಮನ ಸೆಳೆಯುತ್ತಿದೆ. ತಾಯಿ ಧರ್ಮಸ್ಥಳದ ಸಂಘದಲ್ಲಿದ್ದಾರೆ. ಅವರು ಸಿಡ್ಬಿ ಮೂಲಕ ರೂ. 5 ಲಕ್ಷ ಪ್ರಗತಿನಿಧಿ ತೆಗೆಸಿಕೊಟ್ಟಿದ್ದಾರೆ. ಆ ಹಣದಿಂದ ಅಗತ್ಯ ಯಂತ್ರಗಳನ್ನು ಖರೀದಿಸಿದ್ದೇನೆ. ನನ್ನ ಉದ್ಯಮವನ್ನು ಅಭಿವೃದ್ಧಿ ಪಡಿಸಿಕೊಂಡಿದ್ದೇನೆ’ ಎಂದರು ಜಿತೇಶ್.
ಈ ಯುವಕರ ಸಾಧನೆ, ಸಾಹಸಕ್ಕೆ ಹ್ಯಾಟ್ಸಾಪ್ ಹೇಳಲೇಬೇಕು. ನೀವು ಜಿತೇಶ್‌ರವರಿಗೆ ಕರೆ ಮಾಡಬಹುದು. ಅವರ ದೂರವಾಣಿ ಸಂಖ್ಯೆ : 9326960983.

Facebook
Twitter
WhatsApp
LinkedIn
Telegram

Leave a Reply

Your email address will not be published. Required fields are marked *

Latest Updates