ಜನಜಾಗೃತಿ ವೇದಿಕೆಯ ಮದ್ಯವರ್ಜನ ಶಿಬಿರಗಳಿಗೆ ಸೇರಿ ಅಮಲುಮುಕ್ತರಾಗಿ ಇತರರಿಗೆ ಮಾದರಿಯಾಗಿ ಜೀವನ ನಡೆಸುತ್ತಿರುವ ಸಾವಿರಾರು ಉದಾಹರಣೆಗಳು ರಾಜ್ಯದಲ್ಲಿವೆ. ಯಶಸ್ವಿ ನವಜೀವನ ಸದಸ್ಯರೊಬ್ಬರ ಬಗ್ಗೆ ಯಶೋಗಾಥೆ ತಯಾರಿಸಬೇಕೆಂದು ಜನಜಾಗೃತಿ ವೇದಿಕೆಯ ಪ್ರಾದೇಶಿಕ ನಿರ್ದೇಶಕರಾದ ವಿವೇಕ್ ಪಾಯಸ್‌ರವರಲ್ಲಿ ಕೇಳಿಕೊಂಡಾಗ ಬ್ರಹ್ಮಾವರದ ಹರೀಶ್‌ರವರ ಹೆಸರನ್ನು ಸೂಚಿಸಿದರು. ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಬಾರ್ಕೂರು ಗ್ರಾಮದ ಹೆರಾಡಿಯಲ್ಲಿರುವ ಹರೀಶ್ ಪೂಜಾರಿಯವರ ಮನೆಗೆ ತೆರಳಿದ ನಿರಂತರ ತಂಡವನ್ನು ಹರೀಶ್‌ರವರು ಪ್ರೀತಿಯಿಂದ ಬರಮಾಡಿಕೊಂಡರು.
ಎರಡು ಅಂತಸ್ತಿನ ಸುಂದರವಾದ ಮನೆಯಲ್ಲಿ‘ಶ್ರೀ ಮಂಜುನಾಥ ಹೋಮ್ ಪ್ರಾಡಕ್ಟ್’ ಎಂಬ ನಾಮಫಲಕ, ಮನೆಯ ಎಡ – ಬಲ ಭಾಗಗಳಲ್ಲಿ ನಿಂತಿರುವ ಐದು ವಾಹನಗಳಿಗೂ ‘ಶ್ರೀ ಮಂಜುನಾಥ’ ಎಂಬ ಹೆಸರು. ‘ಎಲ್ಲ ಕಡೆ ಮಂಜುನಾಥ ಸ್ವಾಮಿಯ ಹೆಸರು ಯಾಕೆಂದು ನೀವು ಊಹಿಸುತ್ತಿರಬಹುದು ಅಲ್ವಾ! ಮನೆಯೊಳಗೆ ಬನ್ನಿಆ ಕಥೆಯನ್ನು ಹೇಳುತ್ತೇನೆ’ ಎನ್ನುತ್ತಾ ಹರೀಶ್‌ರವರು ನಮ್ಮನ್ನು ಮನೆಯೊಳಗೆ ಕರೆದುಕೊಂಡು ಹೋದರು. ಅಂದವಾದ ಡೈನಿಂಗ್ ರೂಮ್‌ನಲ್ಲಿ ಕುಳಿತು ಹರೀಶ್‌ರವರು ಮಾತು ಆರಂಭಿಸಿದರು.
‘ಮೂಲತಃ ನಾನು ಸುಳ್ಯದವನು. ನನ್ನ ತಂದೆ – ತಾಯಿಗೆ ಏಳು ಮಂದಿ ಗಂಡು, ಇಬ್ಬರು ಹೆಣ್ಮಕ್ಕಳು. ಎಸ್ಸೆಸ್ಸೆಲ್ಸಿ ನಂತರ ಹೋಟೆಲ್‌ವೊಂದಕ್ಕೆ ಸೇರಿದೆ. ಅಲ್ಲಿ ಪ್ಲೇಟ್ ತೆಗೆಯುವುದರಿಂದ ಅಡುಗೆಯವರೆಗೆ ಎಲ್ಲ ಕೆಲಸಗಳನ್ನು ಕಲಿತುಕೊಂಡೆ. ನಂತರ ಗ್ಯಾರೇಜ್‌ವೊಂದರಲ್ಲಿ ಕೆಲಸ ಮಾಡಿದೆ. ಒಂದಷ್ಟು ವರ್ಷಗಳ ಕಾಲ ಮಂಗಳೂರಿನ ಹೋಂ ಪ್ರಾಡಕ್ಟ್ವೊಂದರಲ್ಲಿ ಕೆಲಸ ಮಾಡಿದೆ. ಆ ದಿನಗಳಲ್ಲಿ ಅಂದರೆ ಇಪ್ಪತ್ತು ವರ್ಷಗಳ ಹಿಂದೆ ಗೆಳೆಯರ ಒತ್ತಾಯಕ್ಕೆ ಮಣಿದು ಆಯುಧ ಪೂಜೆಯ ದಿನ ರುಚಿ ನೋಡಲೆಂದು ಒಂಚೂರು ಬಿಯರ್ ಕುಡಿದೆ. ದಿನಕಳೆoದಂತೆ ನನಗೆ ಅರಿವಿಲ್ಲದಂತೆ ಬಿಯರ್ ಬಿಟ್ಟು ಅಮಲೇರಿಸುವ ಎಲ್ಲ ಬಾಟಲಿಗಳ ರುಚಿ ನೋಡಿದೆ. ರಜೆಯಲ್ಲಿ ಊರಿಗೆ ಬಂದರೆ ಎಷ್ಟು ಸಾಧ್ಯವೋ ಅಷ್ಟು ಕುಡಿಯುತ್ತಿದ್ದೆ. ಒಂದೆರಡು ಬಾರಿ ಮದ್ಯ ತ್ಯಜಿಸಬೇಕೆಂದು ಪ್ರಯತ್ನಪಟ್ಟರೂ ಅದು ನನ್ನಿಂದ ಸಾಧ್ಯವಾಗಲಿಲ್ಲ. ಕುಡಿತದ ಚಟ ವಿಪರೀತವಾಗುತ್ತಿರುವುದನ್ನು ಮನಗಂಡ ನನ್ನ ತಂಗಿಯ ಗಂಡ ಒಂದು ದಿನ ಜಮೀನು ಖರೀದಿಸುವ ಕಥೆ ಕಟ್ಟಿ ನನ್ನನ್ನು ಪುತ್ತೂರಿನ ಬೆಳ್ಳಾರೆಯ ಕೆಯ್ಯೂರಿನಲ್ಲಿ ನಡೆಯುತ್ತಿದ್ದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜನಜಾಗೃತಿ ವೇದಿಕೆಯ ಮದ್ಯವರ್ಜನ ಶಿಬಿರಕ್ಕೆ ಸೇರಿಸಿದರು. ಎರಡನೇ ದಿನವೇ ನಾನು ಇನ್ನೆಂದೂ ಮದ್ಯವನ್ನು ಮುಟ್ಟುವುದಿಲ್ಲ ಎಂಬ ನಿರ್ಧಾರಕ್ಕೆ ಬಂದೆ. ಕುಡಿತಬಿಟ್ಟು ಏನಾದರೊಂದು ಸಾಧನೆ ಮಾಡುವ ಮೂಲಕ ಸಮಾಜದಲ್ಲಿ ಗುರುತಿಸಿಕೊಳ್ಳಬೇಕೆಂಬ ಹಠ ನನ್ನಲ್ಲಿ ಚಿಗುರೊಡೆಯಿತು. ಮದ್ಯಮುಕ್ತನಾದ ನಂತರ ಮದ್ಯಕ್ಕೆ ಖರ್ಚು ಮಾಡುತ್ತಿದ್ದ ಹಣವನ್ನು ಕೂಡಿಡಲು ಆರಂಭಿಸಿದೆ. 2012ರಲ್ಲಿ ಸ್ವಂತ ಖರ್ಚಿನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದೆ. ಆ ದಿನಗಳಲ್ಲಿ ಉಡುಪಿಯ ಕ್ಯಾಟರಿಂಗ್‌ವೊoದರಲ್ಲಿ ಕೆಲಸ ಮಾಡುತ್ತಿದ್ದೆ. ಐಸ್‌ಕ್ರೀಮ್‌ನಿಂದ ಹಿಡಿದು ಎಲ್ಲಾ ತಿಂಡಿ ತಯಾರಿಯಲ್ಲಿ ನಾನು ನಿಪುಣನಾಗಿದ್ದು 2015ರಲ್ಲಿ ತಾನೇ ಸ್ವತಃ ಕ್ಯಾಟರಿಂಗ್ ನಡೆಸುವ ನಿರ್ಧಾರ ಮಾಡಿದೆ.
ಬ್ರಹ್ಮಾವರದಲ್ಲೊಂದು ಜಮೀನು ಬಾಡಿಗೆಗೆ ಪಡೆದು ಅದರಲ್ಲಿ ಸಣ್ಣ ಪ್ರಮಾಣದಲ್ಲಿ ಕ್ಯಾಟರಿಂಗ್ ಆರಂಭಿಸಿದೆ. ಕೆಲವೇ ದಿನಗಳಲ್ಲಿ ಆಪಂ, ಸಾಬಕ್ಕಿ ದೋಸೆ, ಸೆಟ್‌ದೋಸೆ, ನೀರ್‌ದೋಸೆ, ಇಡ್ಲಿ, ಕೊಟ್ಟೆ, ಮೂಡೆ, ಶಾವಿಗೆ ಮುಂತಾದ ತಿಂಡಿಗಳು ಜನಮನಗೆದ್ದವು. ಬೇಕಾದಲ್ಲಿಗೆ ತೆರಳಿ ಸ್ಥಳದಲ್ಲೇ ತಿಂಡಿ ತಯಾರಿಸಿಕೊಡುವುದು ನನ್ನ ವಿಶೇಷತೆಯಾಗಿತ್ತು. ಗುಣಮಟ್ಟಕ್ಕೆ ಪ್ರಥಮ ಆದ್ಯತೆ ನೀಡಿದ ಪರಿಣಾಮ ತುಮಕೂರು, ಬಳ್ಳಾರಿಯಿಂದಲೂ ಬೇಡಿಕೆ ಬರತೊಡಗಿತು. ಕ್ಯಾಟರಿಂಗ್‌ನಲ್ಲಿ ಬಂದ ಆದಾಯವನ್ನು ಒಟ್ಟುಗೂಡಿಸಿ ಬ್ರಹ್ಮಾವರದಲ್ಲೊಂದು 12 ಸೆನ್ಸ್ ಜಮೀನು ಖರೀದಿಸಿದೆ. ಕಳೆದೆರಡು ವಷÀðಗಳ ಹಿಂದೆ ಕ್ಯಾಟರಿಂಗ್ ಕೆಲಸಕ್ಕೂ ಅನುಕೂಲವಾಗುವಂತೆ ಸುಂದರವಾದ ಈ ಮನೆಯನ್ನು ನಿರ್ಮಿಸಿದೆ. ಬಾಡಿಗೆ ಜಾಗದಲ್ಲಿ ನಡೆಯುತ್ತಿದ್ದ ಕ್ಯಾಟರಿಂಗ್ ವ್ಯವಹಾರವನ್ನು ಕಳೆದ ವರ್ಷ ಈ ಮನೆಗೆ ವಿಸ್ತರಿಸಿದೆ. ಇದೀಗ ಎಂಟು ಮಂದಿ ಖಾಯಂ ಉದ್ಯೋಗಿಗಳಿದ್ದಾರೆ. ಮಳೆಗಾಲವನ್ನು ಹೊರತುಪಡಿಸಿ ಇತರ ದಿನಗಳಲ್ಲಿ ಇನ್ನೊಂದಷ್ಟು ಮಂದಿ ಕೆಲಸದಲ್ಲಿ ಜೊತೆಯಾಗುತ್ತಾರೆ. ಗಿರಾಕಿಗಳನ್ನು ಹುಡುಕುವುದು ನನಗೆ ಕಷ್ಟವಾಗಲಿಲ್ಲ. ಇತ್ತೀಚೆಗಂತೂ ನಮ್ಮ ವ್ಯವಹಾರಕ್ಕೆ ಒಂದು ದಿನವು ಬಿಡುವಿಲ್ಲದಷ್ಟು ಬೇಡಿಕೆ ಇದೆ. ರಾಜ್ಯವಲ್ಲದೆ ಕೇರಳ, ಗೋವಾಕ್ಕೂ ಕ್ಯಾಟರಿಂಗ್‌ಗಾಗಿ ಹೋಗುತ್ತೇವೆ. 100 ಕಿ.ಮೀ. ಒಳಗಡೆಯಾದರೆ ಮನೆಯಲ್ಲೆ ಹಿಟ್ಟು ತಯಾರಿಸಿಕೊಂಡು ಹೋಗುತ್ತೇವೆ. ದೂರದ ಊರುಗಳಿಗಾದರೆ ಅಕ್ಕಿ ಕೊಂಡೊಯ್ದು ಅಲ್ಲೆ ಹಿಟ್ಟು ತಯಾರಿಸಿ ಸ್ಥಳದಲ್ಲೇ ಬಿಸಿ ಬಿಸಿ ಐಟಮ್ತ ಯಾರಿಸಿ ನೀಡುತ್ತೇವೆ. ಕಾರ್ಯಕ್ರಮವೊಂದರಲ್ಲಿ ಹದಿನೈದು ಸಾವಿರ ದೋಸೆ ಮಾಡಿಕೊಟ್ಟ ಹೆಗ್ಗಳಿಕೆ ನಮ್ಮ ತಂಡದ್ದು. ಸಾಗಾಟಕ್ಕಾಗಿ ಐದು ವಾಹನಗಳನ್ನು ಖರೀದಿಸಿದ್ದೇನೆ. ಇದೀಗ ಪಾತ್ರೆ, ಜನರೇಟರ್, ವಾಹನ ಎಲ್ಲ ಲೆಕ್ಕಹಾಕಿದರೆ ಸುಮಾರು ರೂ. 50 ಲಕ್ಷಕ್ಕೂ ಹೆಚ್ಚು ಮೌಲ್ಯದ ವಸ್ತುಗಳು ನನ್ನ ಬಳಿ ಇದೆ. ಇತ್ತೀಚೆಗೆ ಮನೆ ಪಕ್ಕದಲ್ಲಿರುವ ಹತ್ತು ಸೆನ್ಸ್ ಜಮೀನನ್ನು ಖರೀದಿಸಿದ್ದೇನೆ. ಶಿಬಿರ ಮುಗಿಸಿ ಬರುವಾಗ ಒಂದು ರೂಪಾಯಿ ನನ್ನ ಕೈಯಲ್ಲಿ ಇರಲಿಲ್ಲ. ಆದರೆ ನನ್ನ ಛಲ, ಕಷ್ಟದ ದುಡಿಮೆ ನನಗೆ ಎಲ್ಲವನ್ನು ನೀಡಿದೆ. ಮಕ್ಕಳಿಬ್ಬರು ಶಾಲೆಗೆ ಹೋಗುತ್ತಿದ್ದಾರೆ. ಕೆಲವೊಮ್ಮೆ ಅವರು ಅಗತ್ಯ ಕೆಲಸಗಳಲ್ಲಿ ನೆರವಾಗುತ್ತಾರೆ. ಇನ್ನು ಪತ್ನಿ ಪ್ರೇಮ ಬಿ.ಯವರು ನನ್ನೆಲ್ಲ ಕೆಲಸಗಳಿಗೆ ಸಾಥ್ ನೀಡುತ್ತಾರೆ. ಒಂದು ವೇಳೆ ನಾನು ಅಂದು ಮದ್ಯವರ್ಜನ ಶಿಬಿರಕ್ಕೆ ಸೇರದಿದ್ದರೆ ಇಂದು ಹೇಗೆ ಇರುತ್ತಿದ್ದೆನೋ ಏನೋ?! ವರ್ಷದಲ್ಲಿ ಒಂದೆರಡು ಮದ್ಯವರ್ಜನ ಶಿಬಿರಗಳಿಗೆ ಹೋಗದಿದ್ದರೆ ನನಗೆ ಸಮಾಧಾನ ಇರುವುದಿಲ್ಲ. ನನ್ನಂತಹ ಸಾವಿರಾರು ಮಂದಿಯ ಬದುಕನ್ನು ಬೆಳಗಿದ ಹೆಗ್ಗಡೆಯವರು ನನ್ನ ಪಾಲಿನ ದೇವರು. ನನ್ನ ಯಶಸ್ಸಿಗೆ ಧರ್ಮಸ್ಥಳವೇ ಕಾರಣ. ಹೀಗಾಗಿ ನನ್ನ ಕ್ಯಾಟರಿಂಗ್‌ಗೆ, ಮನೆಗೆ, ವಾಹನಗಳಿಗೆ ಮಂಜುನಾಥ ಸ್ವಾಮಿಯ ಹೆಸರನ್ನೇ ಇರಿಸಿದ್ದೇನೆ.’
ನೀವು ಹರೀಶ್‌ರವರಲ್ಲಿ ಮಾತನಾಡಬೇಕೆಂದಿದ್ದರೆ ಅವರ ದೂರವಾಣಿ ಸಂಖ್ಯೆ : 900511016 / 9480855868.