ಕೃಷಿಕರ ಪಾಲಿಗೆ ವರವಾದ ಕೃಷಿ ಯಂತ್ರಧಾರೆ

ಕಳೆದ ಸಂಚಿಕೆಯಲ್ಲಿ ತಿಳಿಸಿದಂತೆ ‘ಕೃಷಿ ಯಂತ್ರಧಾರೆ’ ವಿಚಾರಗಳ ಬಗ್ಗೆ ಈ ಸಂಚಿಕೆಯಲ್ಲಿ ತಿಳಿದುಕೊಳ್ಳೋಣ. ಅದಕ್ಕೂ ಮೊದಲು ನಮ್ಮ ದೇಶದ ಕೃಷಿಯ ಬಗ್ಗೆ ಸ್ವಲ್ಪ ಗಮನಿಸೋಣ. ಕೃಷಿ ಉತ್ಪಾದನೆಯಲ್ಲಿ ನಮ್ಮ ದೇಶ ವಿಶ್ಚದಲ್ಲೆ 2ನೇ ಸ್ಥಾನದಲ್ಲಿದೆ. ಶೇ.50ಕ್ಕಿಂತಲೂ ಹೆಚ್ಚು ಜನರು ಕೃಷಿ ಚಟುವಟಿಕೆಯಲ್ಲೇ ತೊಡಗಿಸಿಕೊಂಡಿರುವುದರಿoದ ಉದ್ಯೋಗಾಧಾರಿತ ತಲಾ ಉತ್ಪಾದನೆ ಜಾಗತಿಕ ಮಟ್ಟದಲ್ಲಿ ಗಣನೀಯವಾಗಿ ಕಡಿಮೆ ಸ್ಥಾನವನ್ನು ಹೊಂದಿದೆ. ವಿಶ್ವದ ಅತೀ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ನಮ್ಮ ದೇಶದಲ್ಲಿ ಎಷ್ಟೇ ಕೃಷಿ ಉತ್ಪಾದನೆ ಆದರೂ ಅವುಗಳು ನಮ್ಮ ಆಂತರಿಕ ಬಳಕೆಗೆ ಹೆಚ್ಚಾಗಿ ಉಪಯೋಗಿಸಲ್ಪಡುತ್ತವೆ. ಕೆಲವು ಸಂದರ್ಭಗಳಲ್ಲಿ ಆಹಾರ ಧಾನ್ಯಗಳನ್ನು ಹೊರ ದೇಶಗಳಿಂದ ಆಮದು ಮಾಡಲಾಗುತ್ತಿದೆ. ಅತೀ ಹೆಚ್ಚು ಜನಸಂಖ್ಯೆ ಹೊಂದಿದ ಯಾವುದೇ ದೇಶ ತನ್ನ ಆಹಾರ ಉತ್ಪನ್ನಗಳಿಗೆ ಆಮದು ಮೂಲಕ ಅವಲಂಬಿತವಾಗಿರುವುದು ಅತ್ಯಂತ ಅಪಾಯಕಾರಿ. ನಮ್ಮ ದೇಶದಲ್ಲಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಜನಸಂಖ್ಯೆ, ಭೂಮಿ, ಸಂಪನ್ಮೂಲ, ಪರಿಶ್ರಮ ಜಾಸ್ತಿ ಇದ್ದರೂ, ಉತ್ಪಾದನಾ ಮಟ್ಟ (ಇಳುವರಿ) ಕಡಿಮೆ ಇದ್ದು, ಕೃಷಿಯ ಒಟ್ಟು ದೇಶೀಯ ಉತ್ಪನ್ನ (GDP) ಕಡಿಮೆಯಾಗಿರುತ್ತದೆ. ಆದುದರಿಂದ ಗರಿಷ್ಠ ಇಳುವರಿ ಹಾಗೂ ಉತ್ಪಾದನೆಯೇ ನಮ್ಮ ದೇಶದ ಕೃಷಿ ಅಭಿವೃದ್ಧಿ ಹಾಗೂ ಸುಸ್ಥಿರತೆಯ ಮಂತ್ರ ಎನ್ನುವುದನ್ನು ಪೂಜ್ಯ ಹೆಗ್ಗಡೆಯವರು ಕಂಡುಕೊoಡರು. ಈ ನಿಟ್ಟಿನಲ್ಲಿ ಅಧಿಕ ಇಳುವರಿ ಪಡೆಯಲು ಯಂತ್ರೋಪಕರಣ ಹಾಗೂ ಆಧುನಿಕ ಕೃಷಿ ಅನಿವಾರ್ಯ ಎನ್ನುವುದನ್ನು ಗಮನಿಸಿದ ಪೂಜ್ಯರು ಸಾಮಾನ್ಯ ರೈತರಿಗೆ ಕೃಷಿ ಯಂತ್ರೋಪಕರಣಗಳು ದೊರೆಯಬೇಕೆಂದು ‘ಕೃಷಿ ಯಂತ್ರಧಾರೆ’ಗಳನ್ನು ಪ್ರಾರಂಭಿಸಿದರು.
ಕರ್ನಾಟಕ ರಾಜ್ಯ ಸರಕಾರದೊಂದಿಗೆ ಒಂದು ಒಡಂಬಡಿಕೆ ಮಾಡಿಕೊಂಡು ಸರಕಾರದ ಪಾಲುದಾರಿಕೆಯೊಂದಿಗೆ ‘ಕೃಷಿ ಯಂತ್ರಧಾರೆ’ ಕೇಂದ್ರಗಳನ್ನು ರಾಜ್ಯದಾದ್ಯಂತ ಪ್ರಾರಂಭಿಸಲಾಯಿತು. ಈ ಕೃಷಿ ಯಂತ್ರಧಾರೆ ಸೇವಾ ಕೇಂದ್ರಗಳಲ್ಲಿ ಟ್ರಾಕ್ಟರ್, ಟ್ರಾಕ್ಟರ್‌ಚಾಲಿತ ಕಲ್ಟಿವೇಟರ್, ಟಿಲ್ಲರ್, ರೋಟೋವೇಟರ್, ಕಟಾವಿಗಾಗಿ ರೀಪರ್, ಕಂಬೈನ್ಡ್ ಹಾರ್ವೆಸ್ಟರ್‌ಗಳಂತಹ ಎಲ್ಲ ಕೃಷಿ ಯಂತ್ರಗಳು ಲಭ್ಯವಿದ್ದು, ಕೈಗೆಟಕುವ ಬಾಡಿಗೆ ದರದಲ್ಲಿ ರೈತರಿಗೆ ಸೇವೆಯನ್ನು ಒದಗಿಸಲಾಗುತ್ತಿದೆ. ಸರಕಾರದ ನಿರ್ದೇಶನದಂತೆ ನಿಗದಿಪಡಿಸಿದ ಕಡಿಮೆ ಬಾಡಿಗೆ ದರದಿಂದಾಗಿ ಸಾಮಾನ್ಯ ರೈತರೂ ಕೂಡಾ ತಮ್ಮ ಕೃಷಿ ಕಾರ್ಯಗಳಿಗೆ ಆಧುನಿಕ ಕೃಷಿ ಯಂತ್ರಗಳನ್ನು ಬಳಸಲು ಸಾಧ್ಯವಾಯಿತು. ದೊಡ್ಡ ಮಟ್ಟದಲ್ಲಿ ಇಳುವರಿ ಹೊಂದಿರುವ ರೈತರು ಸ್ವಂತ ಕೃಷಿ ಯಂತ್ರಗಳನ್ನು ಕೊಂಡುಕೊಳ್ಳುತ್ತಾರೆ. ಆದರೆ ಸಣ್ಣ ಇಳುವರಿದಾರರಿಗೆ ಆ ಯಂತ್ರಗಳನ್ನು ಖರೀದಿಸುವ ಶಕ್ತಿಯೂ ಇಲ್ಲ, ಪೂರ್ಣ ಪ್ರಮಾಣದಲ್ಲಿ ಬಳಕೆಯೂ ಆಗುವುದಿಲ್ಲ. ಈ ಹಿನ್ನೆಲೆಯಲ್ಲಿ ಅತೀ ಕಡಿಮೆ ಬಾಡಿಗೆ ದರದಲ್ಲಿ ರೈತರಿಗೆ ಅವರವರ ಗ್ರಾಮದಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ‘ಕೃಷಿ ಯಂತ್ರಧಾರೆ’ಯಿoದ ಆಧುನಿಕ ಯಂತ್ರಗಳು ಸಿಗುತ್ತಿರುವುದು ಒಂದು ದೊಡ್ಡ ವರದಾನವೇ ಆಗಿದೆ. ತಮ್ಮ ಅಗತ್ಯಾನುಸಾರ ಈ ಯಂತ್ರಗಳನ್ನು ಬಳಕೆ ಮಾಡಿ ಅತ್ಯುತ್ತಮ ಇಳುವರಿಯನ್ನು ಪಡೆಯುತ್ತಿದ್ದಾರೆ. ರಾಜ್ಯದಲ್ಲಿ ಕೃಷಿ ಉತ್ಪನ್ನದ ಗುಣಮಟ್ಟ ಮತ್ತು ಪ್ರಮಾಣದಲ್ಲಿ ಏರಿಕೆಯಾಗಲು ಇದೊಂದು ಪ್ರಮುಖ ಕಾರಣವಾಗಿದೆ. ಆಧುನಿಕ ಕೃಷಿಯ ಕಡೆಗೆ ಒಲವು ಹೆಚ್ಚಾಗಲು ಒಂದು ಸಮಗ್ರ ಅರಿವನ್ನು ಮೂಡಿಸುವ ಪ್ರಯತ್ನವನ್ನು ಮಾಡಲಾಗುತ್ತಿದೆ. ಈ ಆಧುನಿಕ ಯಂತ್ರಗಳನ್ನು ಬಳಕೆ ಮಾಡಿ ಹೆಚ್ಚು ಆದಾಯವನ್ನು ಹೊಂದಿ, ನಂತರ ರೈತರು ಸ್ವತಃ ಯಂತ್ರಗಳನ್ನು ಖರೀದಿಸಿರುವ ಎಷ್ಟೋ ನಿದರ್ಶನಗಳಿವೆ. ಒಟ್ಟಾರೆಯಾಗಿ ಆಧುನಿಕ ಕೃಷಿಯನ್ನು ಪರಿಚಯಿಸುವ ಪೂಜ್ಯರ ಕನಸು ಗ್ರಾಮಾಭಿವೃದ್ಧಿ ಯೋಜನೆಯ ‘ಕೃಷಿ ಯಂತ್ರಧಾರೆ’ಯ ಮೂಲಕ ನನಸಾಗಿದೆ. ಯಂತ್ರಗಳಿಗೆ ಬಂಡವಾಳವನ್ನು ಹೂಡದೆ, ಅವುಗಳ ನಿರ್ವಹಣೆಯ ಖರ್ಚನ್ನು ಭರಿಸದೆ, ಕಡಿಮೆ ಬಾಡಿಗೆ ದರದಲ್ಲಿ ಯಂತ್ರಗಳನ್ನು ಪಡೆಯುವ ಈ ಕಾರ್ಯಕ್ರಮದಿಂದಾಗಿ ಕೂಲಿ ಆಳುಗಳ ಸಮಸ್ಯೆಗೂ ಒಂದಿಷ್ಟು ಪರಿಹಾರ ಸಿಕ್ಕಿದೆ. ಹಾಗೆಯೇ ಎಷ್ಟೋ ಹಡಿಲು ಬಿಟ್ಟ ಭೂಮಿಯನ್ನು ಕೃಷಿ ಭೂಮಿಯನ್ನಾಗಿ ಪರಿವರ್ತಿಸಿ, ಯುವಜನತೆ ಈ ಕೃಷಿ ಕಾರ್ಯದಲ್ಲಿ ತೊಡಗಿಸಿಕೊಂಡಿರುವುದು ಈ ಯೋಜನೆಯ ಯಶಸ್ಸಿಗಿಡಿದ ಕನ್ನಡಿಯಾಗಿದೆ. ಎಷ್ಟೋ ರೈತರ ಮಕ್ಕಳು ಕೃಷಿ ಭೂಮಿ ಇದ್ದರೂ ಅನಗತ್ಯವಾಗಿ ದೂರದ ಪಟ್ಟಣಗಳಿಗೆ ವಲಸೆ ಹೋಗಿ ಪ್ರಾದೇಶಿಕ ಅಸಮಾನತೆ ಉಂಟು ಮಾಡುವ ಸಮಸ್ಯೆಗೂ ಯೋಜನೆಯ ‘ಕೃಷಿ ಯಂತ್ರಧಾರೆ’ ಕಾರ್ಯಕ್ರಮ ಒಂದು ಪರಿಹಾರ ನೀಡಿದೆ. ಗ್ರಾಮೀಣ ಯುವಕರು ‘ಕೃಷಿ’ ಆದಾಯ ತರುವ ಒಂದು ಸ್ವತಂತ್ರ ವೃತ್ತಿ ಎಂಬುವುದನ್ನು ಅರಿತು ಆಸಕ್ತಿಯಿಂದ ತೊಡಗಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಕೆಲವು ವೈಜ್ಞಾನಿಕ ಪ್ರಯೋಗಗಳನ್ನು ಮಾಡಿ, ಕೃಷಿ ವಲಯದಲ್ಲಿ ಹೊಸ ಆವಿಷ್ಕಾರಗಳನ್ನು ಸೃಷ್ಟಿಸಿದ್ದಾರೆ. ಗ್ರಾಮ ಗ್ರಾಮಗಳ ಅಭಿವೃದ್ಧಿಗೆ ಈ ಎಲ್ಲಾ ಅಭಿವೃದ್ಧಿಗಳು ಅನೇಕ ಆಯಾಮಗಳಲ್ಲಿ ಶಕ್ತಿಯನ್ನು ತುಂಬುತ್ತಿವೆ.
ಪ್ರಸ್ತುತ ರಾಜ್ಯದ 22 ಜಿಲ್ಲೆಗಳಲ್ಲಿ ಯೋಜನೆಯ ‘ಕೃಷಿ ಯಂತ್ರಧಾರೆ’ಗಳು ನಿರಂತರವಾಗಿ ಸೇವೆಯನ್ನು ಸಲ್ಲಿಸುತ್ತಿವೆ. ಯೋಜನೆಯ ಯಂತ್ರಧಾರೆಗಳಲ್ಲಿ ಅತಿ ಕಡಿಮೆ ಬಾಡಿಗೆ ದರ ಇರುವುದರಿಂದ ಸಂಸ್ಥೆಯ ಲೆಕ್ಕಾಚಾರದಲ್ಲಿ ಇದು ನಷ್ಟವನ್ನು ತೋರಿಸುತ್ತಿದೆ. ಸಂಸ್ಥೆ ಹೂಡಿರುವ ಬಂಡವಾಳ, ನಿರ್ವಹಣಾ ವೆಚ್ಚ, ಇಂಧನ ವೆಚ್ಚ ಇವುಗಳನ್ನೆಲ್ಲ ಲೆಕ್ಕಾಚಾರ ಹಾಕಿದಲ್ಲಿ ಇದು ಲಾಭದಾಯಕ ಅಲ್ಲದಿದ್ದರೂ ಕೂಡ ರೈತರ ಪ್ರಗತಿಗಾಗಿ ಪೂಜ್ಯ ಶ್ರೀ ಹೆಗ್ಗಡೆಯವರು ಈ ಕಾರ್ಯಕ್ರಮವನ್ನು ರಾಜ್ಯಾದ್ಯಂತ ನಿರಂತರವಾಗಿ ನಡೆಸಿಕೊಂಡು ಬಂದಿದ್ದಾರೆ. ಒಟ್ಟಿನಲ್ಲಿ ನಮ್ಮ ರಾಜ್ಯದ ರೈತರು ಉತ್ತಮ ಕೃಷಿ ಚಟುವಟಿಕೆಗಳನ್ನು ಕೈಗೊಂಡು ಸುಂದರ ಬದುಕನ್ನು ರೂಪಿಸಿಕೊಳ್ಳಲಿ ಎಂದು ಯೋಜನೆಯ ಮೂಲಕ ಈ ಕಾರ್ಯಕ್ರಮವನ್ನು ನಡೆಸಿಕೊಂಡು ಬರಲಾಗುತ್ತಿದೆ.

Facebook
Twitter
WhatsApp
LinkedIn
Telegram