ದ್ವಿಸಹಸ್ರ ಮದ್ಯರ‍್ಜನ ಶಿಬಿರ

ಮಹಾತ್ಮಾ ಗಾಂಧೀಜಿಯವರು ಅಂದು ಕಂಡ ಗ್ರಾಮಗಳ ಅಭಿವೃದ್ಧಿ, ಮಹಿಳಾ ಸಬಲೀಕರಣ, ಯುವಜನತೆಗೆ ಉದ್ಯೋಗ, ಸ್ವಚ್ಛ ಭಾರತ, ಗುಡಿ ಕೈಗಾರಿಕೆಗಳಿಗೆ ಉತ್ತೇಜನ, ನೈತಿಕ ಶಿಕ್ಷಣ, ಯೋಗ, ಭಜನೆ ಮದ್ಯವರ್ಜಿತ ಭಾರತ ಹೀಗೆ ಎಷ್ಟೋ ಕನಸುಗಳನ್ನು ಕರ್ನಾಟಕ ರಾಜ್ಯದಲ್ಲಿ ಅಕ್ಷರಶಃ ನನಸು ಮಾಡುತ್ತಿರುವವರು ನಮ್ಮ ಪೂಜ್ಯ ಡಾ|| ಡಿ.ವೀರೇಂದ್ರ ಹೆಗ್ಗಡೆಯವರು.
ಗ್ರಾಮಾಭಿವೃದ್ಧಿ ಯೋಜನೆಯ ಅನೇಕ ಕಾರ್ಯಕ್ರಮಗಳಲ್ಲಿ ‘ಜನಜಾಗೃತಿ ವೇದಿಕೆ’ಯ ಕಾರ್ಯಕ್ರಮ ಮುಖ್ಯವಾದ ಕಾರ್ಯಕ್ರಮವಾಗಿದೆ. ಜನಜಾಗೃತಿ ವೇದಿಕೆಯ ಮೂಲಕ ಕೈಗೊಳ್ಳಲಾಗುವ ‘ಮದ್ಯವರ್ಜನ ಶಿಬಿರ’ ಒಂದು ವ್ಯಕ್ತಿಗತ ಪರಿವರ್ತನೆಯ ಕಾರ್ಯಕ್ರಮವಷ್ಟೇ ಆಗಿರದೇ ಸಾಮಾಜಿಕ ಹಬ್ಬವೂ ಆಗಿರುತ್ತದೆ. ಪ್ರತೀ ವರ್ಷವೂ ರಾಜ್ಯಾದ್ಯಂತ ಸಮುದಾಯ ಶಿಬಿರಗಳ ಮೂಲಕ ಸಾಮಾನ್ಯ ಜನರನ್ನು ಮದ್ಯವ್ಯಸನದಿಂದ ವಿಮುಕ್ತಿಗೊಳಿಸಿದರೆ, ಗೌಪ್ಯತೆ ಬಯಸುವವರಿಗೆ ವಿಶೇಷ ಮದ್ಯವರ್ಜನ ಶಿಬಿರಗಳನ್ನು ಕೈಗೊಳ್ಳಲಾಗುತ್ತಿದೆ. ಪೂಜ್ಯರ ಮಾರ್ಗದರ್ಶನದಲ್ಲಿ ನಡೆಯುವ ನಮ್ಮ ಮದ್ಯವರ್ಜನ ಶಿಬಿರಗಳು ದೇಶದಲ್ಲೇ ಅತ್ಯಂತ ಹೆಚ್ಚು ಫಲಿತಾಂಶ ಕೊಡುವ ಮದ್ಯವರ್ಜನ ಶಿಬಿರ ಎನ್ನುವುದು ನಮಗೆಲ್ಲ ಹೆಮ್ಮೆಯ ವಿಷಯವಾಗಿದೆ. ನಮ್ಮ ಶಿಬಿರಗಳಲ್ಲಿ ಯಾವುದೇ ಮದ್ಯ ಬಿಡಿಸುವ ಔಷಧಿ ಅಥವಾ ಆಳವಾದ ಮನೋಚಿಕಿತ್ಸೆಗಳು ಇರುವುದಿಲ್ಲ. ಬದಲಾಗಿ ಆಳವಾದ ಇಚ್ಛಾಶಕ್ತಿಯನ್ನು ಮೂಡಿಸುವುದು ಹಾಗೂ ಸ್ವಯಂಪ್ರೇರಿತರಾಗಿ ಆತ್ಮವಿಮರ್ಶೆ ಹಾಗೂ ಸ್ವಸಂಕಲ್ಪದೊoದಿಗೆ ಶಾಶ್ವತವಾಗಿ ಮದ್ಯವ್ಯಸನದಿಂದ ಮುಕ್ತರಾಗುವುದು ಆಗಿದೆ.
ಈ ಶಿಬಿರದ ಅವಧಿಯಲ್ಲಿ ಶಿಬಿರಾರ್ಥಿಗಳೊಂದಿಗೆ ಸಮಾಲೋಚನೆ ನಡೆಸುವಾಗ, ಅವರ ಕುಟುಂಬ ಎಂತಹ ಶೋಚನೀಯ ಪರಿಸ್ಥಿತಿಯಲ್ಲಿ ದಿನದೂಡುತ್ತಿತ್ತು ಎಂಬುದನ್ನು ತಿಳಿದುಕೊಳ್ಳುವಾಗ ದಿಗ್ಭçಮೆಯಾಗುತ್ತಿತ್ತು. ಮದ್ಯ ಸೇವಿಸಿದ ವ್ಯಕ್ತಿಗೆ ತನ್ನ ಕುಟುಂಬದ ಸದಸ್ಯರ ಮೇಲೆ ಪ್ರೀತಿ, ವಿಶ್ವಾಸ ಇರುತ್ತಿರಲಿಲ್ಲ. ಕುಡಿದು ಮನೆಯೊಳಗೆ ಬಂದು ಮಾಡುತ್ತಿರುವ ರಾದ್ಧಾಂತಗಳನ್ನು ಸಮಾಲೋಚನೆಯ ಸಂದರ್ಭದಲ್ಲಿ ವಿವರಿಸುತ್ತಿದ್ದರು. ಕುಡಿದ ಅಮಲಿನಲ್ಲಿ ಮೃಗೀಯರಂತಾಗಿ ಹೆಂಡತಿಯ ಮೇಲೆ ದೈಹಿಕ ಹಲ್ಲೆ ಮಾಡುವುದು, ಚಿಕ್ಕ ಮಕ್ಕಳನ್ನು ಹೊಡೆಯುವುದು, ಬಡಿಯುವುದು ದಿನ ನಿತ್ಯದ ಗೋಳಾಗಿತ್ತು. ಹೆತ್ತ ತಂದೆ-ತಾಯಿಗಳಿಗೂ ದೈಹಿಕ ಹಲ್ಲೆ ಮಾಡಿದ ಎಷ್ಟೋ ಮದ್ಯವ್ಯಸನಿಗಳಿದ್ದಾರೆ. ಅಂತಹ ಕತ್ತಲೆ ಮನೆಯಲ್ಲಿ ಇರುವ ಮಕ್ಕಳ ಬದುಕು ಹೇಗಿದ್ದಿರಬಹುದು? ಅವರ ಭವಿಷ್ಯದಲ್ಲಿ ಬೆಳಕು ಮೂಡುವುದಾದರೂ ಹೇಗೆ? ಸಂಜೆ ಆಗುತ್ತಿದ್ದ ಹಾಗೆ ಆ ಮುಗ್ಧ ಮಕ್ಕಳ ಮನಸ್ಸಿನಲ್ಲಿ ಆತಂಕಗಳು ಶುರುವಾಗುತ್ತಿದ್ದವು.
ಮದ್ಯವ್ಯಸನಿಗಳ ಮಕ್ಕಳು ಬದುಕಿನ ಕರಾಳ ಕತ್ತಲೆಯಲ್ಲಿ ಎಷ್ಟೇ ಕಷ್ಟಕಾರ್ಪಣ್ಯ ತಿಂದರೂ ಬದುಕನ್ನು ಧನಾತ್ಮಕವಾಗಿ ತೆಗೆದುಕೊಂಡು, ಛಲಬಿಡದೆ ಕಷ್ಟಪಟ್ಟು ಮೇಲೆ ಬಂದು ಸಮಾಜಕ್ಕೆ ಬೆಳಕಾದವರೂ ಇದ್ದಾರೆ. ಇವರು ಕತ್ತಲೆಯಿಂದ ಮಿನುಗಿದ ನಕ್ಷತ್ರಗಳಾಗಿದ್ದಾರೆ. ಆದರೆ ಇಂತವರ ಸಂಖ್ಯೆ ಬಹಳ ಕಡಿಮೆ. ಮದ್ಯವ್ಯಸನದಿಂದಾಗಿ ಕತ್ತಲೆಯ ಬದುಕನ್ನು ಕಂಡ ಬಹಳಷ್ಟು ಮಕ್ಕಳು ಬದುಕು ಮತ್ತು ಸಮಾಜವನ್ನು ದ್ವೇಷಿಸುತ್ತಾ, ಗೊತ್ತಿಲ್ಲದೇ ಋಣಾತ್ಮಕ ಗುಣಗಳನ್ನು ಬೆಳೆಸಿಕೊಳ್ಳುತ್ತಾರೆ. ಇವರೂ ಬಹಳ ಸುಲಭವಾಗಿಯೇ ಮದ್ಯವ್ಯಸನಿಗಳಾಗಿ ತಮ್ಮ ತಂದೆಯ ಹಾದಿಯನ್ನೇ ಹಿಡಿಯುತ್ತಾರೆ. ಇದು ಕತ್ತಲೆಯಿಂದ ಕತ್ತಲೆಯ ಕಡೆಗೆ ನಡೆಯುವ ವಂಶಪಾರoಪರ್ಯವಾಗಿದೆ.
ಪೂಜ್ಯರ ಧೀಮಂತ ಚಿಂತನೆಯಿoದ ಪ್ರಾರಂಭಗೊoಡ ಯೋಜನೆಯ ‘ಮದ್ಯವರ್ಜನ ಶಿಬಿರ’ ಮದ್ಯವ್ಯಸನಿಗಳ ಹಾಗೂ ಅವರ ಕುಟುಂಬದ ಬದುಕಿಗೆ ನಂದಾದೀಪವಾಗಿದೆ. ಕತ್ತಲನ್ನು ಹೊಡೆದೋಡಿಸಿ ಭವಿಷ್ಯದ ಉಜ್ವಲ ಬದುಕನ್ನು ನೀಡುವ ಬದುಕಿನ ಬೆಳಕೂ ಆಗಿದೆ. ಶಿಬಿರದ ನಂತರ ಮದ್ಯಮುಕ್ತರಾದವರ ಬದುಕು ನಿಜಕ್ಕೂ ಬಂಗಾರವಾಗಿದೆ. ಇಂದು ಅವರ ಬದುಕಿನಲ್ಲಿ ರಾತ್ರಿಯೂ ಬೆಳಕಿದೆ. ಸೂರ್ಯ ಮುಳುಗುತ್ತಿದ್ದಂತೆ ಮನೆಯ ಎಲ್ಲ ಕೊಠಡಿಗಳಲ್ಲಿಯೂ ದೀಪಗಳು ವಿಜೃಂಭಿಸುತ್ತವೆ. ಸಂತೋಷ, ನಗು, ಪ್ರೀತಿ, ವಿಶ್ವಾಸಗಳು ಆ ಮನೆಯಲ್ಲಿ ತುಂಬಿ ತುಳುಕಾಡುತ್ತಿವೆ. ಮದ್ಯಮುಕ್ತನಾಗಿ ನವಜೀವನ ಪ್ರಾರಂಭಿಸಿದ ವ್ಯಕ್ತಿ ಅತ್ಯಂತ ಜವಾಬ್ದಾರಿಯಿಂದ, ಪ್ರೀತಿ ವಿಶ್ವಾಸದಿಂದ ತನ್ನ ಹೆಂಡತಿ, ಮಕ್ಕಳನ್ನು, ತಂದೆ ತಾಯಿಯನ್ನು ನೋಡಿಕೊಳ್ಳುವುದಲ್ಲದೇ ಸಮಾಜಕ್ಕೆ ಓರ್ವ ಆದರ್ಶ ವ್ಯಕ್ತಿಯೂ ಆಗುತ್ತಾನೆ. ಈ ಮಕ್ಕಳ ಸಾಮಾಜಿಕ ಬದುಕು, ಶೈಕ್ಷಣಿಕ ಬದುಕು, ವ್ಯಕ್ತಿತ್ವ ವಿಕಸನ ಎಲ್ಲವೂ ಸಹಜವಾಗಿ ಉಜ್ವಲವಾಗುತ್ತಾ ಹೋಗುತ್ತದೆ. ಪೂಜ್ಯರ ಒಂದು ಚಿಂತನೆ ಹಾಗೂ ಕಾರ್ಯಕ್ರಮದಿಂದ ಇಂದು ಲಕ್ಷಾಂತರ ಕುಟುಂಬಗಳು ಬದುಕನ್ನು ಮರಳಿ ಪಡೆದುಕೊಂಡಿರುವುದಲ್ಲದೇ ಸುಂದರವಾದ ಜೀವನವನ್ನು ನಡೆಸುತ್ತಿದ್ದಾರೆ. ರಾಜ್ಯದಾದ್ಯಂತ ನಮ್ಮ ಕಾರ್ಯಕರ್ತರು, ಜನಜಾಗೃತಿಯ ಪದಾಧಿಕಾರಿಗಳು ಅತ್ಯುತ್ತಮ ಸೇವೆ ಸಲ್ಲಿಸಿದ ಫಲಶ್ರುತಿ ಇದಾಗಿದೆ.
ಇದೀಗ ದ್ವಿಸಹಸ್ರ (2000ನೇ) ಮದ್ಯವರ್ಜನ ಶಿಬಿರ ನಡೆಸುವ ಪ್ರಯುಕ್ತ ದಿನಾಂಕ 30.10.2025ರಿಂದ 6.11.2025ರವೆರೆಗೆ ಏಕಕಾಲದಲ್ಲಿ ರಾಜ್ಯದ 13 ಕಡೆಗಳಲ್ಲಿ 8 ದಿನಗಳ ಕಾಲ ‘ಸಮುದಾಯ ಮದ್ಯವರ್ಜನ ಶಿಬಿರ’ಗಳನ್ನು ನಡೆಸಿ, ಆ ಮೂಲಕ 1000ಕ್ಕೂ ಮೇಲ್ಪಟ್ಟು ಮದ್ಯವ್ಯಸನಿಗಳನ್ನು ಮದ್ಯಮುಕ್ತರನ್ನಾಗಿಸಲು ಪ್ರಯತ್ನಿಸಲಾಗುತ್ತಿದೆ. ಈ ಎಲ್ಲಾ ಶಿಬಿರಗಳ ಮದ್ಯವರ್ಜಿತರು ಮತ್ತು ಅವರ ಕುಟುಂಬಸ್ಥರನ್ನು ಒಂದುಗೂಡಿಸಿ ಶ್ರೀ ಕ್ಷೇತ್ರ ಧರ್ಮಸ್ಥಳದ ಅಮೃತವರ್ಷಿಣಿ ಸಭಾಂಗಣದಲ್ಲಿ ‘ದ್ವಿಸಹಸ್ರ ಮದ್ಯವರ್ಜನ ಶಿಬಿರದ ಮದ್ಯವರ್ಜಿತರ ಸಮಾವೇಶ’ ಮಾಡುವ ಮೂಲಕ ಸಂಭ್ರಮಾಚರಣೆಯನ್ನು ಆಚರಿಸಲಾಗುತ್ತಿದೆ. ದೇಶದಲ್ಲೇ ಅತೀ ಹೆಚ್ಚು ಸಮುದಾಯ ಶಿಬಿರಗಳನ್ನು ಮಾಡಿ 1.33. ಲಕ್ಷಕ್ಕೂ ಮಿಕ್ಕಿದ ಮದ್ಯವ್ಯಸನಿಗಳನ್ನು ಮದ್ಯಮುಕ್ತರನ್ನಾಗಿ ಮಾಡಿದ ಕೀರ್ತಿಗೆ ಪೂಜ್ಯ ಶ್ರೀ ಹೆಗ್ಗಡೆಯವರ ಗ್ರಾಮಾಭಿವೃದ್ಧಿ ಯೋಜನೆಯ ಜನಜಾಗೃತಿ ವೇದಿಕೆಯು ಪಾತ್ರವಾಗಿದೆ.

Facebook
Twitter
WhatsApp
LinkedIn
Telegram