ನಾವೇನಾಗಬೇಕು ನಿರ್ಧಾರ ನಮ್ಮದೇ

ಗಂಧದ ಮರಕ್ಕೆ ಇತರ ಎಲ್ಲಾ ಮರಗಳಿಗಿಂತ ಬೆಲೆ ಜಾಸ್ತಿ. ಹಾಗಂತ ಆ ಮರ ಯಾವುದೇ ಹೂ, ಹಣ್ಣುಗಳನ್ನು ಕೊಡುವುದಿಲ್ಲ. ಅದರ ಸುವಾಸನೆಯಿಂದಾಗಿ ಅದರ ಚಂದನ ದೇವರಿಗೆ ಪ್ರಿಯವಾಗುತ್ತದೆ. ಪ್ರತಿಯೊಂದು ಮರಗಿಡಗಳೂ ಪ್ರಕೃತಿ, ಪ್ರಾಣಿ, ಪಕ್ಷಿ, ಮನುಷ್ಯರಿಗೆ ತನ್ನದೇ ಆದ ಕೊಡುಗೆಯನ್ನು ನೀಡುತ್ತವೆ. ಕೆಲವು ಮರಗಳಲ್ಲಿ ಹೂ, ಹಣ್ಣುಗಳಿರದಿದ್ದರೂ ಅದು ವಿಶಾಲವಾಗಿ ಹಬ್ಬಿಕೊಂಡಿರುವ ತನ್ನ ಕೊಂಬೆ ಹಾಗೂ ತುಂಬಿಕೊoಡ ಹಸಿರೆಲೆಗಳಿಂದಾಗಿ ದಾರಿ ಹೋಕರಿಗೆ ದಣಿವರಿಸಿಕೊಳ್ಳಲು ಸಹಾಯಮಾಡುತ್ತವೆ. ಕೆಲವು ಮರಗಳು ಕೊಂಬೆಗಳಿಲ್ಲದೆ ಉದ್ದಕ್ಕೆ ಬೆಳೆದರೂ ಅದು ದೇವಸ್ಥಾನದ ಧ್ವಜಸ್ಥಂಭಕ್ಕೆ, ಮನೆ ಕಟ್ಟುವಲ್ಲಿ ಪ್ರಯೋಜನಕ್ಕೆ ಬರುತ್ತವೆ. ಹೂ – ಹಣ್ಣುಗಳಿರುವ ಮರಗಳಂತೂ ಎಲ್ಲರಿಗೂ ಪ್ರಿಯವೇ. ಹಕ್ಕಿ, ಆಳಿಲು, ಕೋತಿ ಹೀಗೆ ಎಲ್ಲವೂ ಹಣ್ಣುಗಳಿದ್ದ ಮರಕ್ಕೆ ದಾಳಿ ಇಟ್ಟು ತಮ್ಮ ಹೊಟ್ಟೆ ತುಂಬಿಸಿಕೊಳ್ಳುತ್ತವೆ. ಚಿಕ್ಕ ಮಕ್ಕಳಿಂದ ಕಲ್ಲಿನೇಟು ತಿಂದು ಬದಲಾಗಿ ಹಣ್ಣು ಕೊಡುವ ಗುಣ ಹಣ್ಣಿನ ಮರಗಳದ್ದಾಗಿದೆ. ಮನೆಯ ಎದುರು ಹಿತ್ತಲಲ್ಲಿ ಒಂದಾದರೂ ಪೇರಳೆ, ನೆಲ್ಲಿಕಾಯಿ, ಸಪೋಟಾ, ಪಪ್ಪಾಯಿ ಗಿಡಗಳಿದ್ದಲ್ಲಿ ಅವು ಹಣ್ಣಾದಾಗ ಮಕ್ಕಳಿಗೆ ಸುಲಭವಾಗಿ ಒಳ್ಳೆಯ ಹಣ್ಣುಗಳು ಸಿಗುವಂತಾಗುತ್ತದೆ. ನಮ್ಮೆಲ್ಲರ ಜೀವದಾಯಕವಾದ ಆಮ್ಲಜನಕದ ಕಾರ್ಖಾನೆಯಾಗಿರುವ ನಾಲ್ಕೆöÊದು ಮರಗಳಾದರೂ ಮನೆ ಮುಂದೆ ಇದ್ದರೆ ಒಳ್ಳೆಯ ಆರೋಗ್ಯ ನಮ್ಮದಾಗುತ್ತದೆ. ಮರಗಳ ಮಹತ್ವದ ಬಗ್ಗೆ ಮಕ್ಕಳಿಗೆ ತಿಳಿಹೇಳಿ ಅವರ ಕೈಯಿಂದಲೇ ಹೂ – ಹಣ್ಣಿನ ಮರ ನೆಡಿಸಿ ದಿನಾ ನೀರು ಹೊಯ್ಯುವ, ಆರೈಕೆ ಮಾಡುವ ಕೆಲಸ ಅವರಿಂದ ಮಾಡಿಸುತ್ತಿದ್ದರೆ ಅವರಲ್ಲೂ ವೃಕ್ಷ ಪ್ರೀತಿ ಹುಟ್ಟುತ್ತದೆ.
ಅಮೆರಿಕಾದ ಕ್ಯಾಲಿಫೋರ್ನಿಯದ ದಟ್ಟ ಕಾಡಿನಲ್ಲಿರುವ ಬೃಹದಾದ ಮರ ‘ಕಿಂಗ್ ಶೆರ್ಮನ್’ ಬಗ್ಗೆ ಎಲ್ಲೋ ಓದಿದ್ದೆ. ಅದರ ಉದ್ದ 300 ಅಡಿ. ಆದರೆ ಅಗಲ ತಿಳಿಯಲು ಐವತ್ತು ಜನ ಮರದ ಸುತ್ತ ನಿಂತು ಪರಸ್ಪರ ಕೈಹಿಡಿಯಬೇಕಂತೆ. ಇದು ಎಲ್ಲರ ಆಕರ್ಷಣೆಯ ಕೇಂದ್ರ ಮಾತ್ರವಲ್ಲ, ಎಷ್ಟೋ ಜೀವಿಗಳ ಆಶ್ರಯ ತಾಣ. ಅದರದೇ ಜಾತಿಯ ಇನ್ನೊಂದು ಮರವನ್ನು ಒಬ್ಬಾತ ತನ್ನ ಮನೆಯ ಮಣ್ಣಿನ ಮಡಿಕೆಯಲ್ಲಿ ನೆಟ್ಟು ಬೆಳೆಸಿದರೆ ಅದು ದೊಡ್ಡದಾದ ಹಾಗೇ ಮತ್ತೆ ಮಡಿಕೆ ಬದಲಾಯಿಸಬೇಕಾಗಿತ್ತು. ಕೊನೆಗೆ ಆತ ಒಂದು ಉಪಾಯ ಕಂಡುಹಿಡಿಯುತ್ತಾನೆ. ನೀರು, ಪೋಷಕಾಂಶಗಳನ್ನು ಮರಕ್ಕೆ ವಿತರಿಸುವ ಬೇರನ್ನು ಕತ್ತರಿಸಿದ ಹಾಗೇ ಎಲೆ ದಟ್ಟವಾಗದಂತೆ ಎಲೆಗಳನ್ನು ಕತ್ತರಿಸಿದ. ಆತನ ಉಪಾಯ ಫಲಿಸಿತು. ಅದು ಆತನ ಮಡಿಕೆಯ ಅಳತೆಯಷ್ಟೇ ಕುಬ್ಜವಾಗಿ ಬೆಳೆಯಿತು. ಆದರೆ ಆಗಾಗ ಬಿಸಿಲಿಗಿಡಬೇಕು, ನೀರು ಹಾಕಬೇಕು, ಮಣ್ಣು ಬದಲಾಯಿಸುತ್ತಿರಬೇಕು. ಇಲ್ಲವಾದಲ್ಲಿ ಸತ್ತು ಹೋಗುತ್ತದೆ. ಒಬ್ಬರ ಮೇಲ್ವಿಚಾರಣೆಯಲ್ಲೆ ಬೆಳೆಯಬೇಕಾದ ಅನಿವಾರ್ಯತೆ ಆ ಮರದ್ದಾಯಿತು.
ಇಂಥಾ ಮರಗಳು ಮನುಷ್ಯನಿಗೂ ಅನೇಕ ರೀತಿಯ ಪಾಠವನ್ನು ಹೇಳಿಕೊಡುತ್ತವೆ. ಬಿಸಿಲಿನಲ್ಲಿರುವವರಿಗೆ ನೆರಳಾಗುವ, ಹಸಿದವರಿಗೆ ಅನ್ನ ನೀಡುವ, ಪಶುಪಕ್ಷಿಗಳಿಗೂ ಕೈಲಾದ ಸೇವೆ ಮಾಡುವ, ಸಮಾಜಕ್ಕೆ ವಿಷವೂಡದೆ ಅಮೃತವನ್ನಹರಿಸುವ ಗುಣ ಮರಗಳಲ್ಲಿದೆ. ಅಂದರೆ ಮರ ಕಾರ್ಬನ್ ಡೈ ಆಕ್ಸೆöÊಡ್ ಅನ್ನು ಸೇವಿಸಿ ಆಮ್ಲಜನಕವನ್ನು ಹೊರಹಾಕುತ್ತದೆ. ಇಂಥಾ ಅನೇಕ ಪಾಠಗಳನ್ನು ನಾವು ದಿನನಿತ್ಯ ಕಲಿಯಬಹುದು. ನಮ್ಮಲ್ಲಿ ಅವುಗಳನ್ನು ಸೂಕ್ಷö್ಮವಾಗಿ ನೋಡುವ ದೃಷ್ಟಿ ಬೇಕು ಅಷ್ಟೆ.
ಮಾವು – ಹಲಸು ಹೀಗೆ ಪ್ರತಿಯೊಂದು ಫಲ ಬರಬೇಕಾದರೆ ಅದಕ್ಕೊಂದು ಋತು ಇರುತ್ತದೆ. ಪ್ರಕೃತಿ ಆಯಾ ಋತುಗಳಿಗೆ ಅನುಸಾರವಾಗಿ ಹೂ, ಹಣ್ಣುಗಳನ್ನು ಒದಗಿಸುತ್ತದೆ. ಮಳೆಗಾಲಕ್ಕೆ ಮೊದಲೇ ಪ್ರಕೃತಿ ಮಳೆಗಾಲದ ಹೂ, ಹಣ್ಣುಗಳ ಬಗ್ಗೆ ಸಿದ್ಧತೆ ನಡೆಸುತ್ತದೆ. ಋತುಗಳ ರಾಜ ವಸಂತ ಬಂದಾಗ ಪ್ರತಿ ಮರದಲ್ಲೂ ಹೂ, ಮಿಡಿ, ಕಾಯಿ, ಹಣ್ಣಾಗುವ ಪ್ರಕ್ರಿಯೆ ಆರಂಭವಾಗುತ್ತದೆ.
ಮನುಷ್ಯರೂ ಅಷ್ಟೇ, ಸದಾ ಇನ್ನೊಬ್ಬರ ಆರೈಕೆಗಾಗಿ ಕಾಯುವ ಆಸರೆಯಲ್ಲೇ ಬೆಳೆಯುವ ಬೋನ್ಸಾಯಿಗಳಾದರೆ ಕೆಲಸವೇನೂ ಇಲ್ಲ. ಅವರಲ್ಲಿ ಸ್ವಂತ ಸಾಮರ್ಥ್ಯವೂ ಇರುವುದಿಲ್ಲ. ಯಾರು ಹೆಚ್ಚು ಕಷ್ಟಪಟ್ಟು ದುಡೀತಾರೆ ಅವರ ರಟ್ಟೆ ಗಟ್ಟಿಯಾಗುತ್ತದೆ. ತನ್ನ ಸ್ವ ಸಾಮರ್ಥ್ಯದಿಂದ ಮೇಲೆ ಬಂದಾಗ ಸಮಾಜದಲ್ಲಿ ತಲೆ ಎತ್ತಿ ನಿಲ್ಲುವ ಸಾಮರ್ಥ್ಯವೂ ಬರುತ್ತದೆ. ಹತ್ತಾರು ಜನರಿಗೆ ಉಪಕಾರಿಗಳಾಗಿ ಬಾಳುವ ಧೈರ್ಯವೂ ಇರುತ್ತದೆ. ಆದರೆ ಬೆಳೆಯುವ ಹೊತ್ತಿನಲ್ಲಿ ಬರುವ ಕಷ್ಟನಷ್ಟಗಳಿಗೆ ಎದೆ ಒಡ್ಡುವ ಹಠ ಸಾಧನೆ ಇರಬೇಕು ಅಷ್ಟೆ. ಯಾವುದೇ ಮಹಾತ್ಮರ ಜೀವನ ಚರಿತ್ರೆಯನ್ನು ಓದಿದರೂ ಹೆಚ್ಚಿನ ಎಲ್ಲರೂ ಸಾಕಷ್ಟು ಕಷ್ಟಪಟ್ಟು ಸ್ವಂತ ಪರಿಶ್ರಮದಿಂದ ಮೇಲೆ ಬಂದವರೇ ಆಗಿದ್ದಾರೆ. ಹಾಗಾಗಿ ‘ಕಿಂಗ್ ಶರ್ಮೆನ್’ನಂತಾಗುವುದು ಸುಲಭವಲ್ಲ. ಆಳಕ್ಕೆ ಬೇರಿಳಿಸಿ ಬೇಕಾದ ಪೋಷಣೆಯನ್ನು ಪಡೆದುಕೊಂಡು ಮೇಲೆರಬೇಕು. ಮೇಲೆ ಏರಿದ ಬಳಿಕ ಎಲ್ಲರ ದೃಷ್ಟಿ ಸಾಧಕನ ಮೇಲಿರುತ್ತದೆ. ಹಾಗಾಗಿ ನಮ್ಮ ಬದುಕಿನಲ್ಲಿ ನಾವು ಕಿಂಗ್ ಶರ್ಮೆನ್ ಆಗಬೇಕೋ ಅದರ ತಮ್ಮನಾದ ಕುಬ್ಜ ಬೋನ್ಸಾಯಿ ಆಗಬೇಕೋ ಎಂದು ತೀರ್ಮಾನಿಸಬೇಕಾದವರು ನಾವು.

Facebook
Twitter
WhatsApp
LinkedIn
Telegram

Leave a Reply

Your email address will not be published. Required fields are marked *

Latest Updates