ಬಡವರ ಕನಸಿನ ಮನೆಯನ್ನು ನನಸು ಮಾಡಿದ ಯೋಜನೆ

ಹಿಂದಿನ ಸಂಚಿಕೆಯಲ್ಲಿ ಸುಸ್ಥಿರತೆಯ ಸಂಘಗಳ ಭದ್ರ ಬುನಾದಿಯ ಬಗ್ಗೆ ಚರ್ಚಿಸಿದೆವು. ಇನ್ನು ಮುಂದೆ ಪೂಜ್ಯರ ಮಾರ್ಗದರ್ಶನದಲ್ಲಿ ಪ್ರಾರಂಭಗೊoಡ ಸ್ವಸಹಾಯ ಸಂಘ ಚಳುವಳಿ ರಾಜ್ಯದಲ್ಲಿ ಸೃಷ್ಟಿಸಿದ ಪರಿವರ್ತನೆಯ ಬಗ್ಗೆ ಒಂದು ನೋಟ ಬೀರೋಣ. ನಮ್ಮ ಅಂಕಿ ಅಂಶದ ಪ್ರಕಾರ ಯೋಜನೆಯು ಪ್ರಾರಂಭಗೊoಡ ದಿನದಿಂದ ಇಲ್ಲಿಯವರೆಗೆ ಒಟ್ಟು 31 ಲಕ್ಷ ಪ್ರಗತಿನಿಧಿ ಸಾಲಗಳನ್ನು ಮನೆ ನಿರ್ಮಾಣ, ದುರಸ್ಥಿ, ಖರೀದಿ ಹಾಗೂ ಇತರೆ ಗೃಹಸಾಲ ಸಂಬoಧ ಉದ್ದೇಶಗಳಿಗೆ ನೀಡಲಾಗಿದೆ. ಇನ್ನು ಒಟ್ಟು ಪಡೆದುಕೊಂಡ ಸಾಲದ ಮೊತ್ತವನ್ನು ಕೇಳಿದರೆ ನೀವೇ ಆಶ್ಚರ್ಯ ಪಡುತ್ತೀರಿ. ಬರೋಬ್ಬರಿ ಸುಮಾರು 21,972 ಕೋಟಿ ರೂಪಾಯಿಗಳು. ಸ್ವಸಹಾಯ ಸಂಘಗಳ ವ್ಯವಸ್ಥೆಯಲ್ಲಿ ಯೋಜನೆಯ ಮೂಲಕ ಬ್ಯಾಂಕಿನಿoದ ನೇರವಾಗಿ ಬಡವರಿಗೆ ಮನೆಕಟ್ಟಲು ಗೃಹಸಾಲ ನೀಡಿ ಬಡವರ ತಲೆಯ ಮೇಲೊಂದು ಸೂರು ನಿರ್ಮಾಣವಾಗಲು ನೆರವಾಗಿದೆ. ಬಹಳ ಸುಲಭವಾಗಿ ಸ್ವಸಹಾಯ ಸಂಘಗಳ ವ್ಯವಸ್ಥೆಯಲ್ಲಿ ಯಾವ ಹೆಚ್ಚು ದಾಖಲಾತಿ ಇಲ್ಲದೆ ಅವರ ಮನೆ ಬಾಗಿಲಿಗೆ ಸಾಲ ಸೌಲಭ್ಯ ನೀಡಲಾಗಿದೆ. ಈಗ ನೀವೇ ಊಹಿಸಿ! ಎಷ್ಟು ಲಕ್ಷ ಬಡವರಿಗೆ ಹೊಸ ಮನೆ ನಿರ್ಮಾಣಕ್ಕೆ ನಮ್ಮ ಯೋಜನೆ ಕಾರಣವಾಗಿದೆ! ಎಷ್ಟೊಂದು ಲಕ್ಷ ಮನೆಗಳ ದುರಸ್ಥಿಗೆ ಯೋಜನೆಯಿಂದ ಸಹಾಯವಾಗಿದೆ! ಅದು ಒಂದು, ಎರಡು, ನೂರರ ಸಂಖ್ಯೆಯಲ್ಲಿಲ್ಲ, ಬದಲಾಗಿ ಆ ಸಂಖ್ಯೆ ಲಕ್ಷಗಳಲ್ಲಿ ಇವೆ.
ಈಗ ಪುನಃ ನಾನು ನನ್ನ ಹಳೆಯ ವೃತ್ತಿ ಜೀವನವನ್ನು ನೆನಪಿಸಿಕೊಳ್ಳಬೇಕಾಗಿದೆ. ನಾನು ಬ್ಯಾಂಕ್ ಮ್ಯಾನೇಜರ್ ಆಗಿದ್ದಾಗ ವರ್ಷಕ್ಕೆ ಹತ್ತು ಗೃಹ ಸಾಲ ನೀಡಿದರೆ ಅದು ನಮ್ಮ ದೊಡ್ಡ ಸಾಧನೆ ಆಗುತ್ತಿತ್ತು. ಸಾಲ ಕೊಡಲು ನಾನು ಜಿಪುಣ ಎಂದು ಭಾವಿಸಬೇಡಿ, ಉದರಿ ನೀಡಲು ನಾನು ಉದಾರಿಯೇ ಆಗಿದ್ದೆ. ಆದರೆ ಏನು ಮಾಡಲಿ? ಸಾಲ ಕೇಳಿಕೊಂಡು ಬಂದ ನನ್ನ ಗ್ರಾಹಕರಲ್ಲಿ ಒಂದು ದಾಖಲೆ ಇದ್ದರೆ ಮತ್ತೊಂದಿರಲಿಲ್ಲ, ಮತ್ತೊಂದಿದ್ದರೆ ಮಗದೊಂದಿರುತ್ತಿರಲಿಲ್ಲ. ಗೃಹ ಸಾಲ ಕೇಳಿದವರಿಗೆ ಕೂಡಲೆ ಬ್ಯಾಂಕಿಗೆ ನೀಡಬೇಕಾದ ದಾಖಲಾತಿಗಳ ಪಟ್ಟಿಯನ್ನು ನೀಡುತ್ತಿದ್ದೆ. ಅದನ್ನು ನೋಡಿದ ಹೆಚ್ಚಿನವರು ಹೊಸ ಮನೆ ಕನಸನ್ನು ಅಲ್ಲಿಯೇ ಬಿಡುತ್ತಿದ್ದರು. ಹತಾಶೆಯಿಂದ ಬ್ಯಾಂಕಿನಿoದ ಹಿಂದಿರುಗಿ ಹೋಗುತ್ತಿದ್ದರು. ಇನ್ನೊಂದಷ್ಟು ಜನರು ಆ ಪಟ್ಟಿಯಲ್ಲಿ ಕೇಳಿರುವ ದಾಖಲೆಗಳನ್ನು ಯಾರಲೆಲ್ಲಾ ಫೋನ್‌ನಲ್ಲಿ ವಿಚಾರಿಸುತ್ತಾ ಬಹಳ ಚಡಪಡಿಸಿ ಒಂದಿಷ್ಟು ಸಮಯದ ನಂತರ ಪುನಃ ಬಂದು ಒಂದೆರಡು ದಾಖಲಾತಿಗಳು ಇಲ್ಲ, ಏನಾದರೂ ಮಾಡಿ ನನಗೆ ಸಾಲ ನೀಡಿ ಎಂದು ದಂಬಾಲು ಬೀಳುತ್ತಿದ್ದರು. ಆದರೆ ಏನು ಮಾಡುವುದು? ಅನಿವಾರ್ಯವಾಗಿ ಹಾಗೆ ಸಾಧ್ಯ ಇಲ್ಲ ಎಂದು ಹೇಳಬೇಕಾಗಿತ್ತು. ಅವರಿಗೂ ಬೇಸರ, ನನಗೂ ಬೇಸರ.
ಅಷ್ಟಕ್ಕೂ ಆ ನನ್ನ ಪಟ್ಟಿಯಲ್ಲಿರುವ ದಾಖಲೆಗಳು ಏನು? ಇಲ್ಲಿದೆ ನೋಡಿ.

1. ಮನೆ ಕಟ್ಟಬೇಕಾದ ಜಾಗದ ಆರ್.ಟಿ.ಸಿ.,

2. ಇ ಸ್ವತ್ತು (ನಮೂನೆ 9/11 ದಾಖಲೆ),

3. ಭೂ ಪರಿವರ್ತನೆಯ ದಾಖಲೆ (Conversion Certificate),

4. ಮನೆ ನಿರ್ಮಾಣ ಜಾಗದ ನಕ್ಷೆ ಮತ್ತು ಗಡಿ, ಮಾರ್ಗಗಳ ನಿಖರತೆ,

5. ಆ ಜಾಗವು ಯಾರಿಂದ, ಯಾರಿಗೆ, ಹೇಗೆ, ಯಾವಾಗ ಬಂತು, ಅವುಗಳಿಗೆ ಸಂಬoಧ ಪಟ್ಟ ಎಲ್ಲಾ ವಿಭಾಗ ಪತ್ರಗಳು,

6. ಸ್ಥಿರಾಸ್ತಿ ಖರೀದಿ, ಮಾರಾಟ ದಾಖಲೆಗಳು,Gift Deed, ಸರ್ಕಾರಿ ಮಂಜೂರಾತಿ, ಅಕ್ರಮ ಸಕ್ರಮ (ಅನ್ವಯವಾದಲ್ಲಿ) ಇತ್ಯಾದಿ.

7. ಸಂಬoಧಪಟ್ಟ ವಂಶ ವೃಕ್ಷಗಳು,

8 ಋಣಭಾರ ಪ್ರಮಾಣ ಪತ್ರ (15 ವರ್ಷಕ್ಕೆ Encumbrance Certificate

9. ಮನೆ ಕಟ್ಟಡ ರಚನೆಯ ನಕ್ಷೆ, ಎಸ್ಟಿಮೇಶನ್,

10. ಪಂಚಾಯತ್‌ನಿoದ ಮನೆ ರಚಿಸಲು ಪರವಾನಿಗೆ,

11. ತೆರಿಗೆ ಪಾವತಿಸಿದ ರಶೀದಿ,

12. ನಕ್ಷೆ ಮತ್ತು ಎಸ್ಟಿಮೇಶನ್‌ಗೆ ಪಂಚಾಯತ್ ಅನುಮತಿ ಇತ್ಯಾದಿ

13. ಸಾಲ ಮರುಪಾವತಿಯ ಉದ್ದೇಶಕ್ಕೆ ಆದಾಯ ಪ್ರಮಾಣ ಪತ್ರ, IT Returns,

14. ಜಂಟಿ ಸಾಲಗಾರರ ವಿವರ (ಆದಾಯ, ಆಸ್ತಿ ಇತರೆ),

15. ಸೂಕ್ತ ಜಾಮೀನುದಾರರ ವಿವರ (ಆದಾಯ, ಆಸ್ತಿ ಇತರೆ),

16. ಈ ಮೂವರ ಸಿಬಿಲ್, ಬ್ಯಾಂಕಿನಲ್ಲಿ ಹೊಂದಿರುವ ಖಾತೆಗಳ ವ್ಯವಹಾರದ ವಿವರ ಇತ್ಯಾದಿ.


ಈ ಮೇಲೆ ಕೇಳಿದ್ದು ಕನಿಷ್ಠ ದಾಖಲಾತಿಗಳಾಗಿದ್ದು, ಹರಸಾಹಸ ಪಟ್ಟು ಇಷ್ಟನ್ನು ಹೊಂದಿಸಿಕೊoಡು ಬಂದರೆ ಮಾತ್ರ ಅವರನ್ನು ನಮ್ಮ ಬ್ಯಾಂಕಿನ ವಕೀಲರ ಹತ್ತಿರ ಪರಿಶೀಲನೆಗಾಗಿ (Legal Opinion) ಕಳುಹಿಸುತ್ತಿದ್ದೆ. ನಮ್ಮ ಬ್ಯಾಂಕಿನ ವಕೀಲರು ಸುಮ್ಮನೆ ಅಲ್ಲ ಪ್ರತಿಷ್ಠಿತ ವಕೀಲರು, ಬ್ಯಾಂಕಿನ ನಂಬಿಕೆಯನ್ನು ಉಳಿಸಿಕೊಂಡು ಹೋಗಲು ಪ್ರತಿ ದಾಖಲಾತಿಗಳನ್ನು ದುರ್ಬಿನ್ ಹಿಡಿದುಕೊಂಡು ಪರಿಶೀಲಿಸುತ್ತಿದ್ದರು. ಹೆಚ್ಚಿನ ಸಂದರ್ಭದಲ್ಲಿ ದಾಖಲೆಗಳು ಸಮರ್ಪಕವಾಗಿ ಇರುತ್ತಿರಲಿಲ್ಲ. ಒಂದೂ ದಾಖಲಾತಿ ಕೊರತೆ ಅಥವಾ ಕೆಲವು ದಾಖಲೆಗಳಲ್ಲಿ ಸರ್ವೇ ನಂಬರೋ, ಸ್ಕೆಚ್ಚೋ, ಗಡಿ ಗುರುತುಗಳಲ್ಲಿಯೋ ವ್ಯತ್ಯಾಸವೂ ಇರುತ್ತಿದ್ದವು. ಮುಂದೆ ವಕೀಲರು ಯಾವುದನ್ನು ಹೇಗೆ ದುರಸ್ಥಿ ಮಾಡಬೇಕು ಅಥವಾ ಹೊಸದಾಗಿ ಪಡೆಯಬೇಕೆಂದು ಅವರಿಗೆ ತಿಳಿಸುತ್ತಿದ್ದರು. ಎಷ್ಟೋ ಕಛೇರಿಗಳಿಗೆ ತಿಂಗಳುಗಟ್ಟಲೆ ಅಲೆದಾಡಿ ಅವುಗಳೆಲ್ಲವನ್ನು ಹೊಂದಿಸಿ Legal Opinion ಅನ್ನು ಪಡೆದ ಭಗೀರಥರೂ ಇದ್ದಾರೆ.Legal Opinion ಪಡೆದ ನಂತರ ಅಲ್ಲಿಗೆ ಮುಗಿಯುವುದಿಲ್ಲ. ನಂತರ ಎಲ್ಲಿಗೆ ಹೋಗಿ, ಏನೆಲ್ಲಾ ತರಬೇಕೆಂದು ಮುಂದಿನ ಸಂಚಿಕೆಯಲ್ಲಿ ತಿಳಿಯೋಣ.

Facebook
Twitter
WhatsApp
LinkedIn
Telegram

Leave a Reply

Your email address will not be published. Required fields are marked *

Latest Updates