ಅಪಘಾತಗಳ ಸಂಖ್ಯೆ ತಗ್ಗಲಿ

‘ಎರಡು ವಾಹನಗಳು ಪರಸ್ಪರ ವಿರುದ್ಧ ದಿಕ್ಕಿನಿಂದ ಬರುತ್ತಿದ್ದವು. ಒಂದು ವಾಹನ ರಸ್ತೆ ವಿಭಾಜಕವನ್ನು ಹಾರಿ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ವಾಹನಕ್ಕೆ ಡಿಕ್ಕಿ ಹೊಡೆದ ಕಾರಣ ಆರು ಜನರ ಅಪಮೃತ್ಯುವಾಯಿತು’ ಇಂತಹ ಸುದ್ದಿಗಳನ್ನು ಓದಿದಾಗ ಬೇಸರವಾಗುತ್ತದೆ. ಅಲ್ಲದೆ ‘ಪಾಪ ಅವರಿಗೇನೋ ಗ್ರಹಚಾರ ಸರಿ ಇರಲಿಲ್ಲ, ಕೆಟ್ಟ ಘಳಿಗೆ, ಹಾಗಾಗಿ ಅಪಮೃತ್ಯು ಬಂತು’ ಎಂದು ಹೇಳುತ್ತೇವೆ. ನಮ್ಮ ದೌರ್ಬಲ್ಯವೆಂದರೆ ನಿತ್ಯವೂ ಬರುವ ಇಂತಹ ವರದಿಗಳನ್ನು ಓದಿ ಅದನ್ನು ಬದಿಗೆ ಇಟ್ಟುಬಿಡುತ್ತೇವೆ. ವರದಿಯಲ್ಲಿ ಓದಿದ ಸಾವಿನ ರೀತಿ ಮತ್ತು ಸಂಖ್ಯೆಯನ್ನು ಆಗಲೇ ಮರೆತು ಬಿಡುತ್ತೇವೆ.
ಒಮ್ಮೆ ಬೀಡಿನ ಚಾವಡಿಗೆ ಬಂದ ಭಕ್ತನೊಬ್ಬ ‘ನನ್ನ ಮಗನಿಗೆ ಯಾರೋ ಮಾಟ ಮಾಡಿಸಿದ್ದಾರೆ’ ಎಂದ. ಅದು ನಿನಗೆ ಹೇಗೆ ತಿಳಿಯಿತು? ಎಂದು ಪ್ರಶ್ನಿಸಿದೆ. ಅದಕ್ಕಾತ ‘ಇತ್ತೀಚೆಗೆ ಆತ ದ್ವಿಚಕ್ರ ವಾಹನ ಅಪಘಾತದಲ್ಲಿ ತೀರಿಹೋದ’ ಎಂದ. ಅಪಘಾತದಲ್ಲಿ ಆತ ಸಾಯುವುದಕ್ಕೂ, ಮಾಟಕ್ಕೂ ಏನು ಸಂಬoಧ? ಎಂದು ಕೇಳಿದ್ದಕ್ಕೆ ಆತ ‘ಮಗನ ಮರಣದ ನಂತರ ಜೋಯಿಸರಲ್ಲಿ ಹೋಗಿದ್ದೆ. ಮಾಟ ಮಾಡಿಸಿದ್ದರಿಂದಲೇ ಆತನ ಜೀವಕ್ಕೆ ಕಂಟಕ ಬಂತು ಅಂದಿದ್ದಾರೆ’ ಎಂದಾಗ ಇದಕ್ಕೆ ಹೇಗೆ ಪ್ರತಿಕ್ರಿಯಿಸಬೇಕೆಂದು ತಕ್ಷಣ ತಿಳಿಯಲಿಲ್ಲ. ಮಗನನ್ನು ಕಳೆದುಕೊಂಡ ದುಃಖ, ಇನ್ನೊಂದೆಡೆ ಇಂತಹ ಅಪಮೃತ್ಯು ಯಾಕಾಗಿರಬಹುದೆಂಬ ಆತಂಕ. ಇದನ್ನು ತಿಳಿಯಬೇಕೆಂಬ ಕುತೂಹಲ! ಇದರ ಪರಿಹಾರಕ್ಕಾಗಿ ಆತ ಜ್ಯೋತಿಷಿಯನ್ನು ಸಂಪರ್ಕಿಸಿದ್ದಾನೆ.
ಅವನ ಮಾತು ಕೇಳಿದಾಗ ನನಗನಿಸಿದ್ದನ್ನು ಆತನಿಗೆ ಹೇಳಿದೆ ‘ಮಾಟ – ಮಂತ್ರ ಮಾಡಿ ಒಬ್ಬನನ್ನು ಅಪಘಾತದಲ್ಲಿ ಕೊಲ್ಲಲಾಗದು. ಜಾತಕದಲ್ಲಿ ಕಂಟಕ ಬಂದಾಗ ಅಪಘಾತವಾಗಿರಬಹುದು. ಅಪಘಾತವಾದಾಗಲೂ ಬಹಳ ಸಲ ಜನ ಬದುಕುಳಿಯುತ್ತಾರೆ. ‘ಕೂದಲೆಳೆಯಲ್ಲಿ ಆಪತ್ತು ತಪ್ಪಿ ಬದುಕಿದ’ ಎನ್ನುವವರಿದ್ದಾರೆ. ಎಂದರೆ ಪ್ರಾಣಕ್ಕೇ ಬರುವ ಆಪತ್ತು ಅಲ್ಪದರಲ್ಲಿ ಕೈಕಾಲಿಗೆ ಬಂದು ಸ್ವಲ್ಪ ದಿನದ ಚಿಕಿತ್ಸೆಯಿಂದ ಗುಣಮುಖರಾಗುತ್ತಾರೆ. ಕಂಟಕ ಇನ್ನೂ ತೀವ್ರವಾಗಿದ್ದರೆ ಕೆಲವು ದಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕಾಗಬಹುದು. ಕಂಟಕ ಅಷ್ಟೇ ಪ್ರಬಲವಾಗಿದ್ದಾಗ ಮತ್ತು ಅಪಘಾತದ ತೀವ್ರತೆಗೆ ತಕ್ಕಂತೆ ನೋವುಗಳಾಗಬಹುದೇ ಹೊರತು ಮಾಟ-ಮಂತ್ರದಿoದ ಜೀವಹಾನಿಯಾಗುವುದಿಲ್ಲ.’
ಅಪಘಾತದಿಂದ ಅಕಾಲಿಕ ಮರಣಗಳಾದಾಗ ಹೀಗಾಗಿದ್ದೇಕೆಂದು ಕಾರಣ ಹುಡುಕುವ ಪದ್ಧತಿ ಕಾನೂನಿನಲ್ಲಿದೆ. ಸುಮಾರು 40 – 50 ವರ್ಷಗಳ ಹಿಂದೆ ಅಪಘಾತವಾದರೆ ಸಂಬAಧಿತ ವಾಹನಗಳನ್ನು ಅದೇ ಸ್ಥಳದಲ್ಲೇ ನಿಲ್ಲಿಸಬೇಕಾಗಿತ್ತು. ನಂತರ ಸಾರಿಗೆ ಇಲಾಖೆಯಿಂದ ಬ್ರೇಕ್ ಇನ್‌ಸ್ಪೆಕ್ಟರ್ ಬಂದು ಅಪಘಾತದ ವಿವರವನ್ನು ಪರಿಶೀಲಿಸುತ್ತಿದ್ದರು. ಪೊಲೀಸ್ ಅಧಿಕಾರಿಗಳು ಅಪಘಾತದ ಸ್ಥಳದಲ್ಲಿ ಗುರುತುಗಳನ್ನು ಹಾಕುತ್ತಿದ್ದರು. ಬ್ರೆಕ್ ಇನ್‌ಸ್ಪೆಕ್ಟರ್ ವಾಹನದ ತಾಂತ್ರಿಕ ಅಂಶಗಳನ್ನು ಅಂದರೆ ವಾಹನದ ಸುಸ್ಥಿತಿ, ಬ್ರೇಕ್, ಗೇರ್ ಇತ್ಯಾದಿಗಳನ್ನೂ, ಪೊಲೀಸರು ಅಪಘಾತದ ಕಾರಣಗಳನ್ನೂ ಪರಿಶೀಲಿಸುತ್ತಿದ್ದರು. ಯಾರು ರಸ್ತೆ ನಿಯಮವನ್ನು ಮೀರಿ ವಾಹನ ಚಲಾಯಿಸುತ್ತಿದ್ದರು? ಚಾಲಕನ ತಪ್ಪಿನಿಂದ ಅಪಘಾತವಾಯಿತೇ? ಚಾಲಕ ಅಮಲು ಪದಾರ್ಥವನ್ನು ಸೇವಿಸಿದ್ದನೇ? ನಿದ್ದೆಗಣ್ಣಲ್ಲಿದ್ದನೇ? ಇತ್ಯಾದಿ ಅಂಶಗಳನ್ನು ಪರಿಶೀಲಿಸುತ್ತಿದ್ದರು. ಆ ವರದಿಯ ಆಧಾರದಲ್ಲಿ ವಾಹನ ವಿಮೆ ಪರಿಹಾರ ಸಿಗುತ್ತಿತ್ತು. ಆದರೆ ಇಂದು ಈ ಪದ್ಧತಿ ಕಾಣಸಿಗಲಾರದು. ಅಫಘಾತಗಳ ಸಂಖ್ಯೆಯಲ್ಲಿ ಹೆಚ್ಚಳ, ಪೊಲೀಸ್ ಇಲಾಖೆಯಲ್ಲಿನ ಕಾರ್ಯದ ಒತ್ತಡದಿಂದಾಗಿ ಅಪಘಾತಗಳಾದಾಗ ವಿಮರ್ಶೆಗಳು ಗಂಭೀರವಾಗಿ ನಡೆಯುವುದಿಲ್ಲ. ವಿಮೆಯಂತೂ ಹೇಗೋ ಸಿಗುತ್ತದೆ.
ನನ್ನ ಪ್ರಕಾರ ಪ್ರತಿಯೊಂದು ಅಪಘಾತದಲ್ಲೂ ಅದರ ಹಿನ್ನೆಲೆಯನ್ನು ವಿಮರ್ಶಿಸಬೇಕು. ಒಬ್ಬ ಚಾಲಕ ಮಾಡಿದ ತಪ್ಪನ್ನು ಉಳಿದ ಚಾಲಕರೂ ಮಾಡಬಾರದು. ಆ ರೀತಿಯಲ್ಲಿ ಅಪಘಾತವನ್ನು ವಿಮರ್ಶಿಸಬೇಕು. ತಪ್ಪಿತಸ್ಥನಿಗೆ ಶಿಕ್ಷೆಯಾಗಬೇಕು. ಶಿಕ್ಷೆಯ ಭಯವಿರಬೇಕು. ಆಗ ಮಾತ್ರ ಅಪಘಾತಗಳ ಪ್ರಮಾಣವನ್ನು ತಗ್ಗಿಸಲು ಸಾಧ್ಯ.
ನಾನು ಕಳೆದ ಐವತ್ತು ವರ್ಷಗಳಿಂದ ಸ್ವತಹ ವಾಹನಗಳನ್ನು ಚಲಾಯಿಸುತ್ತೇನೆ. ವಾಹನ ಸಂಗ್ರಾಹಕನೂ ಆಗಿದ್ದೇನೆ. ಇಂದಿನ ವಾಹನಗಳು ವೇಗವನ್ನು ಗಣನೀಯವಾಗಿ ಹೆಚ್ಚಿಸಿಕೊಂಡಿವೆ. ಕಳೆದ ಐವತ್ತು ವರ್ಷಗಳಲ್ಲಿ ತಾಂತ್ರಿಕವಾಗಿ ತುಂಬ ಬದಲಾವಣೆಗಳಾಗಿವೆ. ವೇಗ, ವೇಗಕ್ಕೆ ತಕ್ಕುದಾದ ಬ್ರೇಕ್ ವ್ಯವಸ್ಥೆ ಮತ್ತು ಅದಕ್ಕನುಗುಣವಾದ ಆಧುನಿಕತೆ ಕಾರಿನಲ್ಲಿ ಬಂದಿದೆ. ನಾನು ತಿಳಿದಂತೆ ಕಳೆದ ೩೫ ವರ್ಷಗಳಿಗಿಂತ ಹಿಂದೆ ಮರ್ಸಿಡಿಸ್ ಕಂಪನಿಯವರು ವಾಹನದ ಬ್ರೇಕ್ ಬಗ್ಗೆಯೇ ಸಂಶೋಧನೆ ಮಾಡಿದ್ದರು. ಆ ಕಾಲದಲ್ಲಿ ವಾಹನದ ಬ್ರೇಕ್ ಅದುಮಿದಾಗ ವಾಹನದ ರಸ್ತೆಯಲ್ಲಿ ನಾಲ್ಕು ಚಕ್ರಗಳನ್ನು ಎಳೆದುಕೊಂಡು ಸ್ವಲ್ಪ ದೂರ ಚಲಿಸುತ್ತಿತ್ತು. ವಾಹನದ ಚಕ್ರದಲ್ಲಿ ಒಂದು ರೀತಿಯ ಶಬ್ದ ಕೂಡಾ ಬರುತ್ತಿತ್ತು. ಜರ್ಮನಿಯ ಮರ್ಸಿಡಿಸ್ ಕಂಪನಿಯವರ ವಿಶೇಷ ಸಂಶೋಧನೆ ಮತ್ತು ಪ್ರಯತ್ನದಿಂದಾಗಿ ಹೊಸ ಆವಿಷ್ಕಾರಗಳಾದವು. ಬ್ರೇಕ್ ಅದುಮಿದಾಗ ಚಕ್ರಗಳು ಹಿಡಿದುಕೊಳ್ಳದೇ ರಸ್ತೆಯಲ್ಲಿ ಸ್ವಲ್ಪ ಜಾರಿ ನಿಲ್ಲುವಂತೆ ಮಾಡಿದರು. ಮುಂದೆ(Anti lock braking System) ಎಂಬ ವ್ಯವಸ್ಥೆಯನ್ನು ಕಂಡುಹಿಡಿದರು. ವಾಹನಕ್ಕೆ ಬ್ರೇಕ್ ಹಾಕಿದಾಗ ಮೊದಲು ಕನಿಷ್ಠ ಮೂರರಿಂದ ಆರು ಅಡಿ ಎಳೆದುಕೊಂಡು ಹೋಗುತ್ತಿದ್ದುದು ಈಗ ಎರಡು ಅಡಿಯಲ್ಲೇ ನಿಲ್ಲುವಂತಾಯಿತು. ಮೊದಲಿನ ಬ್ರೇಕ್ ವ್ಯವಸ್ಥೆಗಿಂತ ಈ ಹೊಸ ಸಂಶೋಧನೆ ಸುರಕ್ಷಿತವಾಗಿದೆ. ವಾಹನಗಳಲ್ಲಾದ ಸಂಶೋಧನೆಗಳಿoದಾಗಿ ನಾವು ಒಂಚೂರು ಜಾಗೃತೆವಹಿಸಿದರೆ ಅಪಘಾತಗಳನ್ನು ತಡೆಗಟ್ಟಬಹುದಾಗಿದೆ. ಇದೀಗ ಅಟೋಮ್ಯಾಟಿಕ್ ಗೇರ್‌ನ ವಾಹನಗಳು ಬಂದಿವೆ. ಲೈಟ್‌ಗಳ ಮೇಲೆ ನಿಯಂತ್ರಣ ಬಂದಿದೆ. ಸ್ಪಷ್ಟವಾಗಿ ಕಾಣುವ ಕನ್ನಡಿಗಳಿವೆ. ಬಸ್, ಲಾರಿಗಳಂತಹ ದೊಡ್ಡ ವಾಹನಗಳಿರಬಹುದು ಅಥವಾ ಕಾರು, ಬೈಕ್‌ಗಳಂತಹ ಸಣ್ಣ ವಾಹನಗಳಿರಬಹುದು ಎಲ್ಲವೂ ಅನೇಕ ವರ್ಷಗಳ ಸಂಶೋಧನೆಗಳ ಮೂಲಕ ಪರಿಷ್ಕರಿಸಲ್ಪಟ್ಟಿವೆ.
ಇದೀಗ ಕೃತಕವಾಗಿ ಅಪಘಾತಗಳನ್ನು ಮಾಡಿ, ಸಂಶೋಧಿಸಿ ವಾಹನವನ್ನು ಸಿದ್ಧಪಡಿಸುತ್ತಾರೆ. ಕಾರಿನೊಳಗೆ ಗೊಂಬೆಯೊoದನ್ನು ಇಟ್ಟು ಆ ಗೊಂಬೆಗೆ ಮಾನವನಂತೆ ಬೇಕಾದ ಅಂಗಾoಗಗಳನ್ನು ಜೋಡಿಸಿ ಕಾರನ್ನು ಅತಿವೇಗವಾಗಿ ಓಡಿಸಿ ಒಂದು ಗೋಡೆಗೆ ಅಪ್ಪಳಿಸುವಂತೆ ಮಾಡುತ್ತಾರೆ. ಹಾಗೆ ಅಪ್ಪಳಿಸಿದಾಗ ಒಳಗಿದ್ದ ಮಾನವಾಕೃತಿಗೆ ಏನೇನು ಪರಿಣಾಮಗಳಾಗಿವೆ ಎಂಬುದನ್ನು ಗಮನಿಸಿ, ಏರ್‌ಬ್ಯಾಗ್‌ಗಳನ್ನು ಕಂಡುಹಿಡಿದರು. ಈಗ ಎಲ್ಲ ಬಗೆಯ ವಾಹನಗಳಲ್ಲಿ ಏರ್‌ಬ್ಯಾಗ್‌ಗಳಿವೆ. ಅಪಘಾತಗಳಾದಾಗ ಬಲೂನ್ ತರಹ ಈ ಏರ್‌ಬ್ಯಾಗ್‌ಗಳು ಊದಿಕೊಂಡು ವಾಹನದಲ್ಲಿರುವವರಿಗೆ ರಕ್ಷಣೆ ನೀಡುತ್ತವೆ. ಇಂತಹ ಏರ್‌ಬ್ಯಾಗ್‌ಗಳ ಅಳವಡಿಕೆಯಿಂದ ಅಪಘಾತವಾದರೂ ಸಾಕಷ್ಟು ಮಂದಿ ಬದುಕುಳಿದಿದ್ದಾರೆ. ಅನೇಕ ಸಂಶೋಧನೆಗಳ ಮೂಲಕ ಈಗಿನ ವಾಹನಗಳು ವೇಗವನ್ನು ಹೆಚ್ಚಿಸಿಕೊಂಡಿವೆ. ಬಾಹ್ಯ ಅಲಂಕಾರಗಳನ್ನು ಆಕರ್ಷಕವಾಗಿ ಮಾಡಿಕೊಳ್ಳುವುದರ ಜತೆಗೆ ತಾಂತ್ರಿಕ ಪ್ರಗತಿಯನ್ನು ಸಾಧಿಸಿವೆ. ಈ ಬೆಳವಣಿಗೆಗಳನ್ನು ಪ್ರತಿಯೊಬ್ಬ ಚಾಲಕನೂ ತಿಳಿದುಕೊಳ್ಳಬೇಕು. ವಾಹನ ಖರೀದಿಸುವಾಗ ಯಂತ್ರದ ಶಕ್ತಿಯನ್ನು ಗುರುತಿಸಬೇಕು. ವಾಹನ ಚಾಲನೆ ಮಾಡುವಾಗ ಬ್ರೇಕನ್ನು ಪರಿಶೀಲಿಸಿ, ವಾಹನ ತನ್ನ ಹತೋಟಿಗೆ ಹೇಗೆ ಬರುತ್ತದೆ ಎಂದು ಅರಿತಿರಬೇಕು. ತನ್ನ ಜೊತೆಯಿರುವ ಪ್ರಯಾಣಿಕರ ಜೀವವೂ ಅಮೂಲ್ಯವಾದುದೆಂಬ ತಿಳುವಳಿಕೆಯಿಂದ ಚಾಲಕ ವಾಹನವನ್ನು ಚಲಾಯಿಸಬೇಕು.
ವಾಹನ ಮಾಲಕ ಮತ್ತು ಚಾಲಕರರಿಗೆ ವಾಹನದ ಪೂರ್ಣ ಪರಿಚಯವಿದ್ದು ಪ್ರಯಾಣಿಕರ ಸುರಕ್ಷತೆ ಬಗ್ಗೆ ಗಮನ, ಚಾಲಕರಿಗೆ ಅನುಭವವಿದ್ದಾಗ ಅಪಘಾತಗಳ ಪ್ರಮಾಣವನ್ನು ತಗ್ಗಿಸಬಹುದಾಗಿದೆ.
ಸುಮಾರು ನಲುವತ್ತು ವರ್ಷಗಳ ಹಿಂದಿನ ಘಟನೆಯಿದು. ಆಗ ವರ್ಷದಲ್ಲೆರಡು ಭಾರಿ ವಾಹನಗಳ ತಪಾಸಣೆ ನಡೆಯುತ್ತಿತ್ತು. ನಮ್ಮ ಕ್ಷೇತ್ರದ ವಾಹನದ ಚಾಲಕರು ‘ಸ್ವಾಮಿ, ನಾಡಿದ್ದು ವಾಹನ ಸುರಕ್ಷತೆ ತಪಾಸಣೆಗೆ ಆರ್.ಟಿ.ಒ. ಕಚೇರಿಗೆ ಹೋಗಬೇಕಾಗಿದೆ. ವಾಹನವನ್ನು ಅಧಿಕಾರಿ ಪರೀಕ್ಷಿಸುತ್ತಾರೆ. ಕೊರತೆ ಇದ್ದರೆ ದಂಡ ಹಾಕುತ್ತಾರೆ. ಸಣ್ಣಪುಟ್ಟ ದುರಸ್ತಿಗಳಿದ್ದರೆ ಮಾಡಿಸಿಕೊಡಿ’ ಎನ್ನುತ್ತಿದ್ದರು. ನಾನು ಕೂಡಲೇ ಅನುಮತಿಸಿ ತಪಾಸಣೆ ಮಾಡಿಸುತ್ತಿದ್ದೆ. ನನ್ನ ಚಾಲಕ ಹೋಗಿ ಬ್ರೇಕ್, ಗೇರ್, ಸಸ್ಪೆನ್ಷನ್ ಮುಂತಾದವುಗಳನ್ನು ಪರಿಶೀಲನೆಗೊಳಪಡಿಸಿ ಬರುತ್ತಿದ್ದ. ದುರಸ್ತಿ ಕೆಲಸಗಳಿದ್ದರೆ ಮಾಡಿಸುತ್ತಿದ್ದ. ಕೊನೆಗೆ ಇನ್‌ಸ್ಪೆಕ್ಷನ್ ಅಧಿಕಾರಿ ಪರಿಶೀಲಿಸಿ ಪ್ರಮಾಣಪತ್ರ ನೀಡುತ್ತಿದ್ದರು. ಅಂತಹ ವಾಹನ ಚಾಲನೆಗೆ ಯೋಗ್ಯವಾಗಿರುತ್ತಿತ್ತು. ಇಂದು ವಾಹನಗಳ ಸಂಖ್ಯೆ ಹೆಚ್ಚಾಗಿದೆ. ಆದುದರಿಂದ ಇಂತಹ ತಪಾಸಣೆ ಕಷ್ಟಸಾಧ್ಯವಾಗಬಹುದು.
ಕಟ್ಟುನಿಟ್ಟಿನ ಕಾನೂನುಗಳನ್ನು ಜಾರಿಗೆ ತರುವ ಮೂಲಕ ಅಪಘಾತದಿಂದಾಗುವ ಪ್ರಾಣ ಹಾನಿಯನ್ನು ನಿಯಂತ್ರಿಸಲು ಸಾಧ್ಯವಿದೆ. ಇವುಗಳೊಂದಿಗೆ ವಾಹನ ಚಾಲಕರು ಕಾನೂನುಗಳನ್ನು ಗೌರವಿಸುವುದರೊಂದಿಗೆ ತಾಳ್ಮೆಯಿಂದ ವಾಹನ ಚಲಾಯಿಸುವ ಪರಿಪಾಠವನ್ನು ಬೆಳೆಸಿಕೊಳ್ಳಬೇಕಾಗಿದೆ.

Facebook
Twitter
WhatsApp
LinkedIn
Telegram

Leave a Reply

Your email address will not be published. Required fields are marked *