ಬದಲಾವಣೆ ಜಗದ ನಿಯಮ

ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು

ಬದಲಾವಣೆ ಜಗದ ನಿಯಮ. ಅದನ್ನು ಯಾರೂ ನಿಲ್ಲಿಸುವಂತಿಲ್ಲ. ಒಂದು ಮಗು ಹುಟ್ಟಿ ದಿನೇ ದಿನೇ ಬೆಳೆಯುವುದಕ್ಕೆ ಆರಂಭಿಸುತ್ತದೆ. ಮಲಗಿದ್ದ ಮಗು ಎದ್ದು ಕುಳಿತು ನಿಧಾನಕ್ಕೆ ನಡೆಯಲು ಆರಂಭಿಸುತ್ತದೆ. ಹಲ್ಲುಗಳು ಮೂಡುತ್ತವೆ. ಆದರೆ ಅಲ್ಲಿಗೆ ನಿಲ್ಲದ ಮಗುತನ ಯೌವನ, ಯೌವನವೂ ನಿಧಾನಕ್ಕೆ ವೃದ್ಧಾಪ್ಯಕ್ಕೆ ಎಡೆಮಾಡಿಕೊಡುತ್ತದೆ. ಇಂದು ಬಿತ್ತಿದ ಬೀಜ ಕೆಲವೆ ದಿನಗಳಲ್ಲಿ ಮೊಳಕೆ ಒಡೆದು ಮುಂದೆ ಅದೇ ಗಿಡ ಮರವಾಗಿ ಬೆಳೆದು ಹೂವು, ಹಣ್ಣುಗಳಿಂದ ಕಂಗೊಳಿಸುತ್ತದೆ. “ಎಳೆಗರುಂ ಎತ್ತಾಗದೆ” ಎಂಬoತೆ ಸಣ್ಣ ಕರು ಮುಂದೆ ಬಲಿತ ಬಲಿಷ್ಠವಾದ ಎತ್ತು ಆಗುತ್ತದೆ.
ಇವತ್ತು ಗೃಹಪ್ರವೇಶವಾದ ಹೊಚ್ಚ ಹೊಸ ಮನೆ ಒಂದೆರಡು ಮಳೆಗಾಲ ಮುಗಿದರೆ ಬಣ್ಣ ಕಳೆದುಕೊಂಡು ನಿಸ್ತೇಜವಾಗುತ್ತದೆ. ಶರೀರದ ಸಾವಿರಾರು ಜೀವಕೋಶಗಳು ದಿನೇ ದಿನೇ ಸಾಯುತ್ತಿರುತ್ತದೆ. ಹಿಂದಿನವರ ಊಟ, ತಿಂಡಿ ಇಂದಿನ ಪೀಳಿಗೆಗೆ ಹಿಡಿಸುವುದಿಲ್ಲ ಯಾಕೆಂದರೆ ಇಂದು ಬರೀ ನಮ್ಮ ಊರಿನ ತಿಂಡಿಯಷ್ಟೆ ಅಲ್ಲ ಉತ್ತರ ಭಾರತೀಯರಿಂದ ಹಿಡಿದು ಚೈನೀಸ್, ಇಟಾಲಿಯನ್, ಬರ್ಮೀಸ್ ಹೀಗೆ ಬೇರೆ ಬೇರೆ ದೇಶಗಳ ಆಹಾರವು ನಮ್ಮ ಊಟದ ಟೇಬಲ್ ಅನ್ನು ಅಲಂಕರಿಸತೊಡಗಿವೆ. ಸೀಬೆಕಾಯಿ, ಬಾಳೆಹಣ್ಣು, ಮಾವಿನ ಜೊತೆಗೆ ದೇಶ-ವಿದೇಶಗಳ ಅನೇಕ ಹಣ್ಣು-ಹಂಪಲುಗಳು ಸುಲಭವಾಗಿ ದೊರೆಯುವಂತಾಗಿದೆ.
ಪ್ರಕೃತಿಯಲ್ಲಿ ಆಗುವ ಪರಿವರ್ತನೆ ಮಾತ್ರವಲ್ಲದೆ ಜೀವನ ಶೈಲಿಯಲ್ಲೂ ನಾನಾ ರೀತಿಯ ಬದಲಾವಣೆಗಳು ಆಗುತ್ತಿರುತ್ತವೆ. ಅಂದು ಸೀರೆ ಉಡುತ್ತಿದ್ದವರು ಇಂದು ಚೂಡಿದಾರ, ಪ್ಯಾಂಟ್ ಹಾಕಿಕೊಂಡು ತಿರುಗಾಡುತ್ತಾರೆ. ಹಿಂದೆ ಮನೆಬಿಟ್ಟು ಒಬ್ಬಂಟಿಯಾಗಿ ಹೊರಹೋಗದ ಮಹಿಳೆಯರಿದ್ದರೆ, ಇಂದು ಒಬ್ಬಂಟಿಯಾಗಿ ದೇಶ ಸುತ್ತುವ ಛಾತಿ ಉಳ್ಳ ಮಹಿಳೆಯರು ಅನೇಕರಿದ್ದಾರೆ. ಶಾಲೆಗೆ ಹೋಗದೆ ಭಾಷೆ ಗೊತ್ತಿಲ್ಲದ ಅಂದಿನವರಿಗಿAತ ಇಂದು ಇಂಗ್ಲೀಷ್ ಭಾಷೆಯೊಂದಿದ್ದರೆ ಎಲ್ಲಿ ಬೇಕಾದರೂ ಹೋಗಿ ಯಾರನ್ನಾದರೂ ಮಾತನಾಡಿಸಬಹುದಾದ ಧೈರ್ಯ. ಅಂದು ಫೋನ್ ಬುಕ್ ಮಾಡಿ ಗಂಟೆಗಟ್ಟಲೆ ಕಾಯೋ ಶಿಕ್ಷೆ ಆದರೆ ಇಂದು ಮೊಬೈಲ್ ಒಂದಿದ್ದರೆ ದೇಶ – ವಿದೇಶದಲ್ಲಿರುವ ಬಂಧುಗಳೊಡನೆ ಹರಟೆ ಹೊಡೆಯುವ ಅವಕಾಶ. ಟಿ.ವಿ. ಬಂದ ಮೇಲಂತೂ ಕೇಳುವುದೇ ಬೇಡ, ಮನೆಯಲ್ಲೆ ಕುಳಿತು ಪ್ರಪಂಚದ ಆಗುಹೋಗುಗಳ ದರ್ಶನ ಮಾಡಬಹುದು.
ಮಾನವನ ಬಯಕೆಗಳು ಬದಲಾದಂತೆ ವಸ್ತುಗಳು ಬದಲಾಗತೊಡಗಿದವು. ಅವುಗಳ ಗಾತ್ರದಲ್ಲೂ ವ್ಯತ್ಯಯಗಳಾದವು. ದೊಡ್ಡ ಗಾತ್ರದ ರೇಡಿಯೋಗಳ ಬದಲಿಗೆ ಜೇಬಿನಲ್ಲಿ ಹಾಕಿಕೊಳ್ಳಬಹುದಾದ ಎಫ್.ಎಂ.ಗಳು ಬಂದವು. ಕ್ಯಾಸೆಟ್‌ಗಳ ಬದಲಿಗೆ ಸಿ.ಡಿ.ಗಳು. ನಂತರ ಚಿಪ್‌ಗಳು ಮುಂದುವರಿದು ಬೇಕಾದಲ್ಲಿಗೆ ಸುಲಭವಾಗಿ ಒಯ್ಯಬಹುದಾದ ಪೆನ್‌ಡ್ರೆöÊವ್‌ಗಳು ಬಂದವು. ಲ್ಯಾಂಡ್‌ಫೋನ್‌ಗಳ ಬದಲಿಗೆ ಮೊಬೈಲ್‌ಗಳು ಬಂದವು. ಇಂದು ಕಿಸೆಯಲ್ಲಿಟ್ಟರೂ ಗೊತ್ತಾಗದಷ್ಟು ಸಣ್ಣ ಗಾತ್ರದ ಮೊಬೈಲ್‌ಗಳು ಜನಮನ ಗೆದ್ದಿವೆ. ಹಿಂದಿನ ಕಾಲದಲ್ಲಿ ಮನೆಯೊಳಗಿರುವ ಸೋಫಾ, ಕುರ್ಚಿ, ಟೇಬಲ್‌ಗಳ ಗಾತ್ರ ದೊಡ್ಡದಿತ್ತು. ಇದೀಗ ಸಣ್ಣ ಗಾತ್ರದ ಮಡಚಿಡಬಹುದಾದ ಟೇಬಲ್, ಸೋಫಾ, ಗಾಳಿ ತುಂಬಿಸಿ ಬೇಕಾದಾಗ ಉಪಯೋಗಿಸುವ ಸೋಫಾಗಳನ್ನು ಜನ ಇಷ್ಟಪಡುತ್ತಿದ್ದಾರೆ. ಹೀಗೆ ಎಲ್ಲದರಲ್ಲಿಯೂ ಎಲ್ಲೆಡೆಯೂ ಬದಲಾವಣೆ ಆಗಿದೆ, ಆಗುತ್ತಿದೆ.
ಒಟ್ಟಿನಲ್ಲಿ ಕಾಲದೊಂದಿಗೆ ಅನೇಕ ಬದಲಾವಣೆಗಳಾಗುತ್ತಿವೆ. ಆ ಬದಲಾವಣೆಗೆ ನಾವು ಹೊಂದಿಕೊಳ್ಳಬೇಕೆನ್ನುವುದು ನಿಜ. ಆದರೆ ಮರ ಬೆಳೆಯುತ್ತಿರಬೇಕಾದರೆ ಅದರ ಬೇರನ್ನು ಮರೆತು ಬಿಡುವಂತಿಲ್ಲ. ಮರದಲ್ಲಿ ಹೂ ಹಣ್ಣುಗಳನ್ನಷ್ಟೇ ನೋಡಿದ್ರೆ ಸಾಲದು ಆ ಮರಕ್ಕೆ ಬೇಕಾದ ಸತ್ವವನ್ನು ತನ್ನ ಮಣ್ಣಿನಿಂದಲೇ ಹೀರಿ ಕಳುಹಿಸುವ ಬೇರನ್ನು ಮರೆಯುವಂತಿಲ್ಲ. ಹಾಗೇ ನಮ್ಮ ವೇಷ ಭೂಷಣ, ಭಾಷೆ, ವಿದ್ಯೆ, ಉದ್ಯೋಗ, ಆಹಾರ-ವಿಹಾರಗಳಲ್ಲಿ ಎಷ್ಟೇ ಬದಲಾವಣೆಗಳಾಗಲಿ ನಮ್ಮ ಬೇರುಗಳಂತಿರುವ ದೇಶದ ಸಂಸ್ಕೃತಿ, ಮೌಲ್ಯಗಳನ್ನು ಮರೆಯಬಾರದು ಎನ್ನುವುದರಲ್ಲಿ ಎರಡು ಮಾತಿಲ್ಲ. ಅನೇಕ ವರ್ಷಗಳ ಕಾಲ ಪರಕೀಯರ ದಾಳಿಗೆ ಒಳಗಾಗಿ ಎಷ್ಟೋ ದೇಶಗಳು ತಮ್ಮ ಸಂಸ್ಕೃತಿ, ಧರ್ಮಗಳ ನೆಲೆಗಟ್ಟನ್ನು ಕಳೆದುಕೊಂಡಿವೆ. ಆದರೆ ಭಾರತ ದೇಶ ಮಾತ್ರ ಇನ್ನೂ ತನ್ನ ಧರ್ಮ ಸಂಸ್ಕೃತಿಗಳನ್ನು ಜೀವಂತವಾಗಿರಿಸಿಕೊoಡಿದೆ. ಸಮಾಜದಲ್ಲಿ ಆಗುವ ಬದಲಾವಣೆಗಳು ನಮ್ಮ ಕಣ್ಣಿಗೆ ಕಾಣುತ್ತಿವೆ. ಮಕ್ಕಳು ಹೆತ್ತವರ ಮಾತು ಕೇಳಲ್ಲ, ಗುರುಹಿರಿಯರನ್ನು ಗೌರವಿಸಲ್ಲ ಎಂಬೆಲ್ಲಾ ಮಾತುಗಳು ಕೇಳಿ ಬರುತ್ತಿವೆ. ಆದರೂ 100ರಲ್ಲಿ ಶೇ. 60ಷ್ಟು ಕುಟುಂಬಗಳಲ್ಲಿ ಇಂದಿಗೂ ಅಪ್ಪ, ಅಮ್ಮ, ಅಜ್ಜ-ಅಜ್ಜಿ ಎಲ್ಲಾ ಒಟ್ಟಾಗಿರುವುದನ್ನು ಕಾಣುತ್ತೇವೆ. ಹಬ್ಬ ಹರಿದಿನಗಳ ಆಚರಣೆ, ಪೂಜೆ, ಧಾರ್ಮಿಕ ವಿಚಾರಗಳ ಬಗ್ಗೆ ಆಸಕ್ತಿ ಇರುವುದನ್ನು ಕಾಣುತ್ತೇವೆ. ವಿದೇಶಗಳಲ್ಲಿ ಇದ್ದರೂ ತಮ್ಮ ಮಕ್ಕಳಿಗೆ ಭಾರತದ ರೀತಿ ರಿವಾಜುಗಳ ಬಗ್ಗೆ ಹೇಳಿಕೊಡುತ್ತಾ ಅಲ್ಲಿ ನಡೆಯುವ ತಮ್ಮ ತಮ್ಮ ಧರ್ಮಕ್ಕೆ ಸಂಬoಧಪಟ್ಟ ಧಾರ್ಮಿಕ ತರಗತಿಗಳ ಮೂಲಕ ಮಕ್ಕಳಿಗೆ ಧಾರ್ಮಿಕ ಸಂಸ್ಕಾರ ಕೊಡುವುದನ್ನು ನೋಡುತ್ತೇವೆ. ಎಷ್ಟೇ ದೂರದಲ್ಲಿದ್ದರೂ ತಮ್ಮ ತಮ್ಮ ಬೇರುಗಳಾದ ಧರ್ಮ, ಸಂಸ್ಕೃತಿ ಭಾಷೆ ಇತ್ಯಾದಿಗಳನ್ನು ಮರೆಯದಂತೆ ಕಾಪಾಡಿಕೊಂಡು ಬರುವ ಕಾಳಜಿಯನ್ನು ಕಾಣುತ್ತೇವೆ.
ಬದಲಾವಣೆ ಜಗದ ನಿಯಮ ಹೌದಾದರೂ ಬಾಹ್ಯದ ಬದಲಾವಣೆ ಅಂತರoಗವನ್ನು ಕಲುಷಿತಗೊಳಿಸದಂತಹ ಎಚ್ಚರ ನಮ್ಮಲ್ಲಿರಬೇಕು. ಬದಲಾವಣೆಗಳು ಒಳಿತಿನತ್ತ ಸಾಗಬೇಕಲ್ಲದೆ ಕೆಡುಕನ್ನು ಉಂಟು ಮಾಡದಂತೆ ನೋಡಿಕೊಳ್ಳಬೇಕು. ಎಲ್ಲಿ ನೋಡಿದರೂ ಭ್ರಷ್ಟಾಚಾರ, ಸ್ವಜನ ಪಕ್ಷಪಾತಗಳೂ ಇಲ್ಲದಿಲ್ಲ. ಆದರೂ ಒಟ್ಟು ಜನಜೀವನವನ್ನು ಗಮನಿಸಿದರೆ ಎಷ್ಟೋ ಕುಟುಂಬಗಳಲ್ಲಿ ತಾವು ದುಡಿದು ಗಳಿಸಿದ ಸಂಬಳದಲ್ಲಿ ಸಾತ್ವಿಕ ಜೀವನ ನಡೆಸುತ್ತಿರುವವರ ಸಂಖ್ಯೆ ಹೆಚ್ಚೇ ಇದೆ. ಒಂದು ಹಬ್ಬ ಬಂತೆoದರೆ ಬೆಂಗಳೂರಿನoಥಾ ಪೇಟೆಯಲ್ಲೂ ಜನ ಹಬ್ಬಕ್ಕೆ ಬೇಕಾದ ವಸ್ತುಗಳನ್ನು ಕೊಳ್ಳಲು ಮುಗಿಬೀಳುವುದನ್ನು ನೋಡುತ್ತೇವೆ. ಇಂದಿಗೂ ಮನೆ ಎದುರಿಗೆ ರಂಗೋಲಿ, ತುಳಸಿ ಕಟ್ಟೆ, ದೇವರೆದುರು ದೀಪವನ್ನು ಬೆಳಗಿಸುತ್ತಿದ್ದಾರೆ. ಹೀಗೆ ಮಹಿಳೆಯರು ಸಂಪ್ರದಾಯಗಳನ್ನು ಪಾಲಿಸುವಲ್ಲಿ ಹೆಚ್ಚಿನ ಉತ್ಸಾಹ ನಿಷ್ಠೆಯನ್ನು ತೋರಿಸುತ್ತಾರೆ ಎನ್ನುವುದು ಸತ್ಯ.
ಬದುಕು ಸದಾ ಕ್ರಿಯಾಶೀಲವಾಗಿರುತ್ತದೆ. ಸದಾ ಬದಲಾಗುತ್ತಿರುತ್ತದೆ. ಆದರೆ ನಮ್ಮ ಮನಸ್ಸು ಮಾತ್ರ ವಿಷಯಗಳು ಬದಲಾಗಬಾರದೆಂದು ಬಯಸುತ್ತದೆ. ಅದೂ ಪ್ರಾಯ ಸಂದoತೆ ಹಿರಿಯರು ನೀವು ಚಿಕ್ಕವರಿರುವಾಗ ಹಾಗಿತ್ತು, ಹೀಗಿತ್ತು ಎಂದು ಹೇಳುತ್ತಿರುತ್ತಾರೆ. ಯಾಕೆಂದರೆ ನಮ್ಮ ಮನಸ್ಸಿಗೆ ಹೊಸದರೊಂದಿಗೆ ಅಷ್ಟು ವೇಗವಾಗಿ ಹೊಂದಾಣಿಕೆ ಮಾಡಲಾಗುವುದಿಲ್ಲ. ಹಳೆಯದು ರೂಢಿಯಾಗಿರುತ್ತದೆ. ಹೊಸ ಕಂಪ್ಯೂಟರ್ ಬಂದರೂ ಪುಸ್ತಕದಲ್ಲೇ ಲೆಕ್ಕ ಬರೆದಿಡುವ ಹಾಗೆ.
ನೀರು, ಗಾಳಿ, ಆಕಾಶ ಕ್ಷಣ ಕ್ಷಣಕ್ಕೂ ಬದಲಾಗುತ್ತಿರುತ್ತದೆ. ಯಾವಾಗ ಈ ಬದಲಾವಣೆ ಅನಿವಾರ್ಯವೋ ಅದನ್ನು ಪ್ರೀತಿಸುವುದು ಒಳಿತು. ನಾವು ಮಾತ್ರ ಸ್ಥಿರ. ಬಾಕಿದ್ದೆಲ್ಲಾ ಬದಲಾಗುವಂತಹದು ಎಂಬ ಸತ್ಯವನ್ನು ಅರಿತುಕೊಳ್ಳೋಣ.

Facebook
Twitter
WhatsApp
LinkedIn
Telegram

Leave a Reply

Your email address will not be published. Required fields are marked *

Latest Updates