ವಿಶ್ವ ಆರೋಗ್ಯ ದಿನಾಚರಣೆ – ವೃತ್ತಿಯಲ್ಲಿ ಆರೋಗ್ಯ

ವಿಶ್ವಾದ್ಯಂತ ಎಪ್ರಿಲ್ 07 ಅನ್ನು ‘ವಿಶ್ವ ಆರೋಗ್ಯ ದಿನ’ವನ್ನಾಗಿ ಆಚರಿಸಲಾಗುತ್ತದೆ. ಕೆಲವು ದಶಕಗಳ ಹಿಂದೆ ಯುವಜನತೆಯಲ್ಲಿ ಆರೋಗ್ಯದ ಸಮಸ್ಯೆಗಳು ಕಾಣಿಸಿಕೊಳ್ಳುವುದು ಬಹಳ ಅಪರೂಪವಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಯುವಜನತೆಯಲ್ಲಿ ಅನಾರೋಗ್ಯ ಸಮಸ್ಯೆಗಳು ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತಿವೆ. ಪಟ್ಟಣ ಪ್ರದೇಶಗಳಲ್ಲಿರುವ ಹೈಟೆಕ್ ಆಸ್ಪತ್ರೆಗಳಿಗೊಮ್ಮೆ ಭೇಟಿ ನೀಡಿದರೆ ಅಲ್ಲಿ ಮದ್ಯವಯಸ್ಕರೇ ಹೆಚ್ಚಾಗಿ ಕಾಣಿಸುತ್ತಾರೆ. ಇನ್ನು ವೆಲ್‌ನೆಸ್, ಫಿಟ್‌ನೆಸ್ ಇತ್ಯಾದಿ ಆಧುನಿಕ ಹೆಸರಿನೊಂದಿಗೆ ನೀಡುವ ವೈದ್ಯಕೀಯ ಚಿಕಿತ್ಸೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಯುವಜನತೆಯೇ ಪಡೆಯುತ್ತಿದ್ದಾರೆ. ಸ್ಟ್ರೆಸ್ ಮ್ಯಾನೇಜ್‌ಮೆಂಟ್ ಅಥವಾ ಮನೋವೈದ್ಯಕೀಯ ಸಮಾಲೋಚನೆ (Pshychriatic Consultation) ವಿಚಾರದಲ್ಲಂತೂ ಯುವಜನತೆಯೆ ಮೇಲುಗೈಯನ್ನು ಸಾಧಿಸುತ್ತಿದ್ದಾರೆ ಎಂಬುವುದನ್ನು ವಿಸ್ತರಿಸಿ ಹೇಳಬೇಕಾದ ಅಗತ್ಯವಿಲ್ಲ.
ಮೇಲಿನ ಈ ಎಲ್ಲ ಬೆಳವಣಿಗೆಗಳು ಖಂಡಿತ ಆತಂಕಕಾರಿ. ಈಗಾಗಲೇ ಈ ಕುರಿತು ಕೆಲವು ವಿಶ್ಲೇಷಕ ಸಂಸ್ಥೆಗಳು ಅಧ್ಯಯನವನ್ನು ಮಾಡಿವೆ. ಸಾಮಾನ್ಯವಾಗಿ ಅವರೆಲ್ಲರು ಕಂಡುಕೊಂಡ ಸತ್ಯವೆಂದರೆ, ಯುವಜನತೆಯ ಜೀವನ ಶೈಲಿ, ಆಧುನಿಕ ವೃತ್ತಿಜೀವನ, ಒತ್ತಡಯುಕ್ತ ಮನಸ್ಸು, ಕಡಿಮೆ ಶಾರೀರಿಕ ಚಟುವಟಿಕೆಗಳು, ಆಧುನಿಕ ಆಹಾರ ಪದ್ಧತಿ ಇಂತಹ ಐದಾರು ವಿಷಯಗಳು ಯುವಜನತೆಗೆ ಆರೋಗ್ಯ ಸಮಸ್ಯೆಗಳನ್ನು ತಂದೊಡ್ಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿವೆ. ಇತ್ತೀಚೆಗೆ ವೃತ್ತಿ ಜೀವನದಲ್ಲಿರುವ ಯುವಜನತೆ ಹೆಚ್ಚಾಗಿ ಹೃದಯಾಘಾತ, ಬ್ರೈನ್ ಸ್ಕ್ರೋಕ್ ಮುಂತಾದ ಮಾರಕ ಖಾಯಿಲೆಗಳಿಗೆ ತುತ್ತಾಗುವುದನ್ನು ಕಾಣುತ್ತೇವೆ. ಸ್ವಲ್ಪ ಶಾರೀರಿಕ ಚಟುವಟಿಕೆ, ಗ್ರಾಮೀಣ ಪ್ರದೇಶದ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ಯುವಕರ ಆರೋಗ್ಯ ಇತರರಿಗಿಂತ ಬಹಳಷ್ಟು ಉತ್ತಮವಾಗಿರುವುದು ಸಮಾಧಾನಕರ ವಿಚಾರವಾಗಿದೆ. ಆದರೆ ಇಂದು ಅಗಾಧ ಪ್ರಮಾಣದಲ್ಲಿ ಯುವಜನತೆ ಪಟ್ಟಣಕ್ಕೆ ವಲಸೆ ಹೋಗುತ್ತಿರುವುದರಿಂದ ಅವರು ಕೂಡಾ ಅನಾರೋಗ್ಯ ಸಮಸ್ಯೆಗಳಿಗೆ ಈಡಾಗುವಂತಹ ಸಂಭವಗಳು ಹೆಚ್ಚುತ್ತಿವೆ. ಪಟ್ಟಣದಲ್ಲಿಯೂ ಕೂಡ ಉತ್ತಮ ಜೀವನ ಶೈಲಿಯನ್ನು ಬೆಳೆಸಿಕೊಂಡು ಒತ್ತಡಯುಕ್ತ ಉನ್ನತ ಹುದ್ದೆಯಲ್ಲಿರುವವರು ಕೂಡಾ ತಮ್ಮ ಶಾರೀರಿಕ ಹಾಗೂ ಮಾನಸಿಕ ಆರೋಗ್ಯವನ್ನು ಉತ್ತಮ ರೀತಿಯಲ್ಲಿ ಕಾಪಾಡಿಕೊಂಡು ಬಂದಿರುವ ಸಹಸ್ರಾರು ನಿದರ್ಶನಗಳಿವೆ. ಆದ್ದರಿಂದ ಆರೋಗ್ಯದ ರಕ್ಷಣೆಯಲ್ಲಿ ಹೊರಗಿನ ಅಂಶಗಳ ಪ್ರಭಾವಕ್ಕಿಂತಲೂ ಆಂತರಿಕ ಅಂಶಗಳೇ ಪ್ರಮುಖ ಪಾತ್ರವನ್ನು ವಹಿಸುತ್ತವೆ ಎನ್ನುವುದು ಅಕ್ಷರಶಃ ಸತ್ಯ. ಪಟ್ಟಣವಾಗಲೀ, ಅರೆಪಟ್ಟಣವಾಗಲೀ ತಮ್ಮ ವೃತ್ತಿ ಬದುಕಿನಲ್ಲಿ ಕೆಲವೊಂದು ಮುಂಜಾಗ್ರತೆ ಹಾಗೂ ಅನುಪಾಲನೆಯನ್ನು ಮಾಡಿದಲ್ಲಿ, ಯುವಜನತೆ ಸುಲಭವಾಗಿ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ.
ಅವುಗಳಲ್ಲಿ ಪ್ರಮುಖವಾದವು
‘ವ್ಯಾಯಾಮ’ ಆರೋಗ್ಯ ರಕ್ಷಣೆಯ ಒಂದು ಭಾಗ. ನಿತ್ಯ
ವ್ಯಾಯಾಮ ಮಾಡುವ ಹವ್ಯಾಸವನ್ನು ಬೆಳೆಸಿಕೊಳ್ಳಿರಿ.
ಧ್ಯಾನ ಮೊದಲಾದ ಧನಾತ್ಮಕ ಚಟುವಟಿಕೆಗಳ ಹವ್ಯಾಸಗಳು
ಜೊತೆಗಿರಲಿ.
ನಿತ್ಯ ಕನಿಷ್ಠ ೩೦ ನಿಮಿಷದ ವೇಗದ ನಡಿಗೆಯನ್ನು ಮಾಡಿ.
ಧೂಮಪಾನ, ಮದ್ಯಪಾನದಂತಹ ದುಶ್ಚಟಗಳಿಂದ ದೂರವಿರಿ.
ಆಹಾರದಲ್ಲಿ ಎಣ್ಣೆಯ ಬಳಕೆಯನ್ನು ಕಡಿಮೆಗೊಳಿಸಿ.
೩೦ ವರ್ಷ ಮೇಲ್ಪಟ್ಟವರು ವರ್ಷದಲ್ಲಿ ಒಂದು ಭಾರಿ ಸಂಪೂರ್ಣ
ಆರೋಗ್ಯ ತಪಾಸಣೆಯನ್ನು ಮಾಡಿಸಿಕೊಳ್ಳಿ.
ಖಾದ್ಯ ಪದಾರ್ಥಗಳು, ಜಂಕ್ ಫುಡ್ ಮುಂತಾದ ಆಹಾರ
ಪದ್ಧತಿಯ ಬದಲಾಗಿ ಮನೆಯಲ್ಲೇ ತಯಾರಿಸಿದ ಅಥವಾ
ಆರೋಗ್ಯಕರ ಆಹಾರವನ್ನೇ ಆದಷ್ಟು ಸ್ವೀಕರಿಸಿರಿ.
ಕೆಲಸದ ಸಮಯದಲ್ಲಿ ಸಾಕಷ್ಟು ನೀರನ್ನು ಕುಡಿಯಿರಿ.
ಕುಟುಂಬದವರ, ಗೆಳೆಯರ ಜೊತೆ ಸಣ್ಣಪುಟ್ಟ ಮನರಂಜನೆಗಳನ್ನು
ಆಸ್ವಾದಿಸಿರಿ.
ಪೈಪೋಟಿಯುತ ಸ್ಪರ್ಧಾತ್ಮಕ ಜೀವನದಲ್ಲಿ ಯಾವುದನ್ನೋ ಗಳಿಸುವ ಭರದಲ್ಲಿ ಅಮೂಲ್ಯವಾದ ಆರೋಗ್ಯವನ್ನು ಕಡೆಗಣಿಸಿ, ನಂತರ ಪಶ್ಚಾತ್ತಾಪ ಪಡುವುದಕ್ಕಿಂತಲೂ ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಂಡು ಆರೋಗ್ಯವನ್ನು ಗಳಿಸಿಕೊಂಡು ಸಾಧನೆಯ ಗುರಿಯನ್ನು ತಲುಪುವುದು ಸಮಷ್ಟಿಗೆ ಒಳಿತನ್ನು ಉಂಟುಮಾಡುತ್ತದೆ. ಈ ನಿಟ್ಟಿನಲ್ಲಿ ಇಂದಿನ ಯುವಜನತೆ ತಮ್ಮ ಜೀವನಶೈಲಿ, ಆಲೋಚನಾ ಲಹರಿ ಹಾಗೂ ಬದುಕಿನ ಪ್ಯಾಷನ್ ಅನ್ನು ಬದಲಾಯಿಸಿಕೊಳ್ಳಬೇಕಾಗಿದೆ.
ಭಾರತ ಪ್ರಪಂಚದಲ್ಲಿಯೇ ಅತ್ಯಂತ ಹೆಚ್ಚು ಜನಸಂಖ್ಯೆಯನ್ನು ಹೊಂದಿದ ದೇಶ, ಮಾತ್ರವಲ್ಲ ಪ್ರಪಂಚದಲ್ಲಿಯೇ ಹೆಚ್ಚು ಯುವಜನತೆಯನ್ನು ಹೊಂದಿದ ದೇಶವೂ ಆಗಿದೆ. ಯುವ ಜನಾಂಗ ಆರೋಗ್ಯವಾಗಿದ್ದಲ್ಲಿ ಮಾತ್ರ ಅದು ದೇಶದ ಮಹಾಸಂಪತ್ತಾಗಿ ದೇಶದ ಸರ್ವಾಂಗೀಣ ಅಭಿವೃದ್ಧಿಯ ಕೀಲು ಕೈ ಆಗುತ್ತದೆ.
ಯುವಕರೇ, ಆರೋಗ್ಯವನ್ನು ಕಾಳಜಿಯಿಂದ ಕಾಪಾಡಿಕೊಂಡು, ನಮ್ಮ ಕುಟುಂಬ, ಊರು ಮತ್ತು ದೇಶಕ್ಕೆ ಆಸ್ತಿಯಾಗುವಂತೆ ಬದುಕೋಣ.

Facebook
Twitter
WhatsApp
LinkedIn
Telegram