ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು
ಎಪ್ರಿಲ್ ತಿಂಗಳು ಬಂತೆoದರೆ ಶಾಲಾ ಮಕ್ಕಳಿಗೆಲ್ಲ ರಜೆಯ ಖುಷಿ. ಅಜ್ಜಿ ಮನೆ, ಮಾವನ ಮನೆಗೆ ತೆರಳುವ ಸಡಗರ, ಸಂಭ್ರಮ. ಮಕ್ಕಳು ರಜೆಗಾಗಿ ಜಾತಕಪಕ್ಷಿಯಂತೆ ಕಾಯುವ, ಅಜ್ಜ-ಅಜ್ಜಿಯಂದಿರೂ ಕಾತರದಿಂದ ಮೊಮ್ಮಕ್ಕಳ ಬರುವಿಕೆಗಾಗಿ ಕಾಯುತ್ತಿದ್ದ ಕಾಲವೊಂದಿತ್ತು. ಈಗ ಎಲ್ಲವೂ ಬದಲಾಗಿದೆ. ಸಂಬoಧಗಳ ಬಾಂಧವ್ಯ, ಅಜ್ಜಿ ಮನೆಗಳ ಪರಿಸರ, ಅಲ್ಲಿನ ಆಟ ಪಾಠ ಮುಂತಾದ ಸುಮಧುರ ಕ್ಷಣಗಳಿಂದ ಇಂದಿನ ಪೀಳಿಗೆ ದೂರ ಸರಿಯುತ್ತಿದೆ.
ಬಾಲ್ಯದಲ್ಲಿ ಅಜ್ಜ-ಅಜ್ಜಿ ಹೇಳುವ ಕಥೆಯನ್ನು ಕೇಳುವುದೇ ಒಂದು ಕೌತುಕದ ಸಂಗತಿಯಾಗಿತ್ತು. ಅಜ್ಜಿ ಕಥೆಗಳೆಂದರೆ ಅದರ ಸ್ವಾರಸ್ಯವೇ ಬೇರೆ. ವರ್ಣಿಸಲಸಾಧ್ಯ. ಅಜ್ಜಿ ವೀಳ್ಯದೆಲೆ ಮೆಲ್ಲುತ್ತ ಸುತ್ತಲೂ ಹತ್ತಾರು ಮೊಮ್ಮಕ್ಕಳನ್ನು ಕುಳ್ಳಿರಿಸಿಕೊಂಡು ಕಥೆ ಹೇಳಲು ಪ್ರಾರಂಭಿಸಿದರೆ ಮಕ್ಕಳು ಮಂತ್ರಮುಗ್ಧರಾಗುತ್ತಿದ್ದರು. ರಾಮಾಯಣ, ಮಹಾಭಾರತ ಮಾತ್ರವಲ್ಲದೆ ರಾಜ-ರಾಣಿಯರ ಕಥೆ, ಪಂಚತoತ್ರ ಕಥೆೆ ಹೀಗೆ ನೂರಾರು ಕಥೆಗಳನ್ನು ನಿರರ್ಗಳವಾಗಿ ಹೇಳುತ್ತಿದ್ದರು. ಆ ಕಾಲದಲ್ಲಿ ಅಷ್ಟೇನೂ ವಿದ್ಯಾಭ್ಯಾಸ ಹೊಂದಿರದ ಅಜ್ಜ ಅಜ್ಜಿಯಂದಿರಲ್ಲಿದ್ದ ಕಥೆ ಹೇಳುವ ಚಾಕಚಕ್ಯತೆ, ಚತುರತೆಯನ್ನು ಮೆಚ್ಚಲೇಬೇಕು. ಕಥೆಗಳನ್ನು ಹೇಳುತ್ತಾ ಅದರಲ್ಲಿನ ಪಾತ್ರಗಳನ್ನು ವರ್ಣಿಸುವ ರೀತಿ ಮನೋಜ್ಞವಾಗಿತ್ತು. ಕಥೆಗಳು ಮನೋರಂಜನೆಯ ಜೊತೆಗೆ ನೀತಿ ಹಾಗೂ ಜೀವನ ಮೌಲ್ಯವನ್ನು ಪ್ರೇರೇಪಿಸುತ್ತಿದ್ದವು. ಈಗ ‘ಅಜ್ಜಿ ಕಥೆ’ಯ ಪರಿಪಾಠ ಮರೀಚಿಕೆಯಾಗುತ್ತಿದೆ.
ಕಥೆಯನ್ನು ಆಲಿಸುತ್ತ ಅಜ್ಜಿಯ ಮಡಿಲಲ್ಲಿ ಮಲಗುವುದು ಎಲ್ಲ ಮಕ್ಕಳಿಗೂ ಖುಷಿ ನೀಡುವ ವಿಷಯವಾಗಿತ್ತು. ಅದಕ್ಕಾಗಿ ಮಕ್ಕಳ ನಡುವೆ ನಾ ಮುಂದು, ತಾ ಮುಂದು ಎಂಬ ಕಸರತ್ತುಗಳು ನಡೆಯುತ್ತಿತ್ತು. ಕಡೆಗೆ ಅಜ್ಜಿ ಉಪಾಯ ಮಾಡಿ ಪ್ರತಿಯೊಬ್ಬರನ್ನೂ ಒಂದೊoದು ದಿನ ತನ್ನ ಮಡಿಲಲ್ಲಿ ಮಲಗಿಸುವ ನಿರ್ಣಯಕ್ಕೆ ಬಂದು ಎಲ್ಲರನ್ನು ಸಮಾಧಾನಪಡಿಸುತ್ತಿದ್ದಳು.
ಅಜ್ಜಿಯ ಕೆಲವು ಕಥೆಗಳಲ್ಲಿ ಯಾರು ಹೀರೋ ಎಂದು ಕೇಳಿದರೆ ಅಜ್ಜನೇ ಹೀರೋ. ಅಜ್ಜನ ಸಾಹಸ, ಅವರ ದಿನದ ಚಟುವಟಿಕೆಗಳೇ ಕಥೆ ರೂಪ ಪಡೆಯುತ್ತಿದ್ದುವು. ಮಕ್ಕಳಿಗೆ ಇದು ಮನೋರಂಜನೆಯಾಗುತ್ತಿತ್ತು. ‘ಅದೊಂದು ಮಳೆಗಾಲದ ಸಂದರ್ಭ, ನಮ್ಮ ಹಟ್ಟಿಯಿಂದ ದನಗಳನ್ನೆಲ್ಲ ಮೇಯಲು ಕಾಡಿಗೆ ಬಿಟ್ಟಿದ್ದೆವು. ಸಂಜೆಯಾದಾಗ ಎಲ್ಲ ದನಗಳು ಬಂದರೂ ‘ಗಂಗೆ’ ಎಂಬ ದನ ಬರಲೇ ಇಲ್ಲ. ಹಾಗೆ ತಪ್ಪಿಸಿಕೊಂಡು ಹೋದ ದನವನ್ನು ಹುಡುಕಿಕೊಂಡು ಬರಲು ಅಜ್ಜ ಟಾರ್ಚ್ ಹಿಡಿದುಕೊಂಡು ಹೋಗಿದ್ದರು. ‘ಗಂಗೇ.. ಗಂಗೇ..’ ಎಂದು ಕರೆಯುತ್ತಾ ಹೋದವರಿಗೆ ದೂರದಲ್ಲಿ ಹುಲಿಯ ಘರ್ಜನೆ ಕೇಳಿತು, ನೇರವಾಗಿ ಮನೆಗೆ ಬಂದವರೇ ಕೋವಿ ಹಿಡಿದುಕೊಂಡು ದನವನ್ನು ಹುಡುಕಲು ಒಂದಷ್ಟು ಜನರನ್ನು ಸೇರಿಸಿಕೊಂಡು ಹೋದರು. ಗುಡ್ಡದ ತುದಿಯಲ್ಲಿ ಗಂಗೆ ಗಾಬರಿಯಿಂದ ನಿಂತಿದ್ದಳು. ಅವಳ ಮುಂದೆಯೇ ಬಂಡೆಗಲ್ಲಿನ ಮೇಲೆ ದೊಡ್ಡ ಗಾತ್ರದ ಹುಲಿಯೊಂದು ದನದ ಮೇಲೆರಗಲು ಸಿದ್ಧವಾಗುತ್ತಿತ್ತು. ಆಗಲೇ ಬಂದೂಕಿನಿoದ ಅಜ್ಜ ಹುಲಿಯತ್ತ ಗುರಿಯಿರಿಸಿ ಗುಂಡು ಹಾರಿಸಿಯೇ ಬಿಟ್ಟಿದ್ದರು. ದೊಡ್ಡದಾದ ಶಬ್ದವೊಂದು ಕೇಳಿ ಬಂದಿತ್ತಷ್ಟೇ. ಹುಲಿಗೆ ಗುಂಡು ತಾಕಿತೋ, ಇಲ್ಲವೋ! ಹುಲಿಯಂತೂ ನಾಪತ್ತೆಯಾಗಿತ್ತು. ಗಂಗೆ ಅಜ್ಜನ ಬಳಿ ಓಡೋಡಿ ಬಂದಿತ್ತು. ಈ ಘಟನೆಯನ್ನು ಕಣ್ಣಾರೆ ಕಂಡ ಜೊತೆಗಿದ್ದವರು ಹುಲಿಯನ್ನು ಓಡಿಸಿ ದನ ಕಾಪಾಡಿದ ವೀರ ಎಂದು ಊರಲ್ಲಿ ಸುದ್ದಿ ಹಬ್ಬಿಸಿದ್ದರು. ಅಂದಿನಿoದ ಅಜ್ಜನಿಗೆ ಊರಿನಲ್ಲಿ ಮಾತ್ರವಲ್ಲದೆ ಪರ ಊರಿನಲ್ಲಿಯೂ ಎಲ್ಲಿಲ್ಲದ ಗೌರವ ದೊರೆಯುತ್ತಿತ್ತು.’ ಇಂದಿಗೂ ಆ ಘಟನೆಯನ್ನು ಊರಮಂದಿ ಆಗಾಗ ನೆನಪಿಸಿಕೊಳ್ಳುತ್ತಾರೆ. ಇಂತಹ ಕಥೆಗಳು ಮಕ್ಕಳಿಗೆ ಅಜ್ಜನ ಬಗ್ಗೆ ಅಭಿಮಾನ ಮೂಡಿಸುತ್ತಿದ್ದುವು.
ಅಜ್ಜಿ ದಿನವೂ ಕಥೆ ಹೇಳುತ್ತಾಳೆ, ಬಗೆ ಬಗೆಯ ಕರಿದ ತಿಂಡಿಯನ್ನು ನೀಡುತ್ತಾಳೆ ಎನ್ನುವ ಕಾರಣಕ್ಕಾಗಿಯೇ ಅನೇಕ ಮಕ್ಕಳು ಬೇಸಿಗೆ ರಜಾ ತಿಂಗಳನ್ನು ಕಳೆಯಲು ಅಜ್ಜಿ ಮನೆಗೆ ದಾಂಗುಡಿ ಇಡುತ್ತಿದ್ದರು. ಅಜ್ಜಿ ಮನೆಗೆ ಹೋಗಲು ಅಪ್ಪ -ಅಮ್ಮನಲ್ಲಿ ಹಠ ಹಿಡಿಯುತ್ತಿದ್ದರು, ಪುಸಲಾಯಿಸುತ್ತಿದ್ದರು. ಬಹುಶಃ ತಂದೆ ತಾಯಿಯನ್ನು ಬಿಟ್ಟು ಮಕ್ಕಳಿಗೆ ಅತಿ ಹೆಚ್ಚು ದಿನ ಕಳೆಯಲು ಸಾಧ್ಯವಿರುವುದು ಎಂದರೆ ಅದು ಅಜ್ಜಿ ಮನೆಯಲ್ಲಿ ಮಾತ್ರ. ಅಲ್ಲಿ ಮಕ್ಕಳಿಗೆ ಅಷ್ಟೊಂದು ಆರೈಕೆ, ಕಾಳಜಿ ದೊರೆಯುತ್ತಿತ್ತು.
ಇಂದಿನ ವಾಸ್ತವ ಸ್ಥಿತಿ ಬಹಳಷ್ಟು ಭಿನ್ನವಾಗಿದೆ. ಈಗಿನ ಮಕ್ಕಳು ಟ್ಯೂಶನ್ ಕ್ಲಾಸ್, ಕೋಚಿಂಗ್ ಸೆಂಟರ್ ಬೇಸಿಗೆ ಶಿಬಿರಗಳಲ್ಲಿ ತಮ್ಮ ರಜೆಯನ್ನು ಕಳೆಯುತ್ತಾರೆ. ಇಲ್ಲವೇ ಮೊಬೈಲ್, ಕಂಪ್ಯೂಟರ್ ಗೇಮ್‌ಗಳಲ್ಲಿ ಮುಳುಗಿರುತ್ತಾರೆ. ಅಜ್ಜಿ-ಅಜ್ಜನ, ಮಾವನ ಮನೆಗೆ ಹೋಗುವುದಿರಲಿ, ಪಟ್ಟಣಗಳಲ್ಲಿ ಅಕ್ಕ-ಪಕ್ಕದ ಮನೆಗೂ ಹೋಗುವುದು ಬಹಳ ಕಡಿಮೆಯಾಗಿದೆ. ಕೆಲವು ಅಜ್ಜಿಮನೆಗಳಲ್ಲಿ ಅಜ್ಜ-ಅಜ್ಜಿಯರೇ ಕಾಣಸಿಗುತ್ತಿಲ್ಲ. ಅಜ್ಜಿ ಮನೆಗಳ ಜೊತೆಗೆ ‘ಅಜ್ಜಿ ಕಥೆ’ ಎನ್ನುವುದು ಮಾಯವಾಗುತ್ತಿದೆ. ಅಜ್ಜಿಯ ಮಮತೆ, ಮನೆಯ ಮಣ್ಣಿನ ನಂಟು ನಿಧಾನವಾಗಿ ಕಳಚುತ್ತಿದೆ. ಇದಕ್ಕೆಲ್ಲ ಕಾರಣವಾಗುತ್ತಿರುವುದು ಈಗಿನ ಆಧುನಿಕ ಜೀವನ ವಿಧಾನ. ಇಂದಿನ ಮಕ್ಕಳು ಮೊಬೈಲ್, ಟಿ.ವಿ., ಕಂಪ್ಯೂಟರ್ ಬಳಸಿ ಅಂತರ್ಜಾಲದ ಮೂಲಕ ತಮಗೇನು ಬೇಕು ಅದನ್ನು ನೋಡುತ್ತಾರೆ. ಮೊಬೈಲ್, ಆನ್‌ಲೈನ್ ಜಗತ್ತಿನಲ್ಲಿ ಕಳೆದು ಹೋಗುತ್ತಿದ್ದಾರೆ. ಅವರಿಗೆ ಅಜ್ಜಿಯ ಕಥೆಗಳು, ಅಜ್ಜನ ಸಾಹಸಗಳನ್ನು ಕೇಳುವ ವ್ಯವಧಾನವಿಲ್ಲವಾಗಿದೆ.
ಮಕ್ಕಳಿಗೆ ಅಜ್ಜಿ ಮನೆಯ ಆಟ, ಅಲ್ಲಿಯ ಪ್ರೀತಿ, ವಾತಾವರಣ ಬೇಡವಾಗಿದೆ. ನಾಲ್ಕು ಗೋಡೆಯ ಮಧ್ಯೆ ಕಂಪ್ಯೂಟರ್‌ನಲ್ಲೋ, ಮೊಬೈಲ್‌ನಲ್ಲೋ ಆನ್‌ಲೈನ್ ಆಟಗಳನ್ನು ಆಡುವುದರಲ್ಲೇ ಸಂಭ್ರಮಿಸುತ್ತಿದ್ದಾರೆ. ಆದರೆ ಇದು ನೈಜ ಸಂತೋಷವಲ್ಲ ಎಂಬುವುದನ್ನು ಮನವರಿಕೆ ಮಾಡುವ ಅಗತ್ಯತೆ ಇಂದು ಹೆತ್ತವರೆದುರಿಗಿದೆ.
ಫೇಸ್‌ಬುಕ್, ಟ್ವಿಟರ್, ವಾಟ್ಸಾಪ್, ಯೂಟ್ಯೂಬ್ ಹೀಗೆ ವಿವಿಧ ಸಾಮಾಜಿಕ ಜಾಲತಾಣ, ಆನ್‌ಲೈನ್ ಗೇಮ್‌ಗಳಲ್ಲಿ ಕಾಲ ಕಳೆಯುತ್ತಿರುವ ಮಕ್ಕಳಲ್ಲಿ ಅತಿಯಾದ ಮೊಬೈಲ್ ಬಳಕೆ ವ್ಯಸನವಾಗಿ ಪರಿಣಮಿಸುತ್ತಿದೆ. ಮಕ್ಕಳ ಕೈಯಲ್ಲಿ ಮೊಬೈಲ್ ಇದ್ದರಂತೂ ಯಾರೂ, ಯಾವುದು.. ಬೇಡವಾಗುತ್ತಿದೆ. ಹಿಂದೆಲ್ಲ ರಜೆಯಲ್ಲಿ ಒಟ್ಟಾಗಿ ಕುಂಟೆಬಿಲ್ಲೆ, ಮರಕೋತಿ, ಕಣ್ಣಾಮುಚ್ಚಾಲೆ, ಗೋಲಿ, ಲಗೋರಿ, ಕಲ್ಲಾಟ, ಮಣ್ಣಿನಲ್ಲಿ ಮನೆ ಕಟ್ಟುವ ಹೀಗೇ ಪ್ರಕೃತಿಯ ಒಡನಾಟದಲ್ಲೇ ಮಕ್ಕಳ ಆಟಗಳು ಸಾಗುತ್ತಿತ್ತು. ಇವೆಲ್ಲ ಮಕ್ಕಳ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಪೂರಕವಾಗುತ್ತಿತ್ತು. ಮಕ್ಕಳಲ್ಲಿ ಪರಸ್ಪರ ಸಹಾಯ, ಒಗ್ಗಟ್ಟು, ತಂಡದಲ್ಲಿ ಕಾರ್ಯನಿರ್ವಹಣೆ, ನಾಯಕತ್ವ ಇತ್ಯಾದಿ ಗುಣ ಬೆಳೆಯಲು ಸಹಕಾರಿಯಾಗುತ್ತಿತ್ತು. ಗ್ರಾಮೀಣ ಪ್ರದೇಶಗಳ ಪ್ರತಿಯೊಂದು ಆಟಗಳೂ ಮಕ್ಕಳನ್ನು ವಿಶಾಲ ಚಿಂತನೆಗೆ ಎಡೆ ಮಾಡಿಕೊಡುತ್ತಿತ್ತು. ಬುದ್ಧಿಯನ್ನು ಚುರುಕುಗೊಳಿಸುತ್ತಿತ್ತು. ದೇಹಕ್ಕೂ ಒಳ್ಳೆಯ ವ್ಯಾಯಾಮ ದೊರೆಯುತ್ತಿತ್ತು. ಆದರೆ ಈಗ ಎಲ್ಲೋ ಒಂದು ಮೂಲೆಯಲ್ಲಿ ಕುಳಿತು ಮೊಬೈಲ್‌ನಲ್ಲಿ ಮುಳುಗುವುದರಿಂದ ಹೊರ ಜಗತ್ತಿಗೆ ತಮ್ಮನ್ನು ತಾವು ತೆರೆದುಕೊಳ್ಳುವುದು ಕಡಿಮೆಯಾಗಿದೆ. ಅಜ್ಜ ಅಜ್ಜಿಯಂದಿರ ಒಡನಾಟ, ಸಂಬoಧಗಳ ಮಹತ್ವದ ಅರಿವೂ ಇಲ್ಲವಾಗುತ್ತಿದೆ. ಬಾಂಧವ್ಯಗಳ ಜೊತೆ ಅವರಿಂದ ದೊರೆಯುವ ಮಾರ್ಗದರ್ಶನ, ತಿಳುವಳಿಕೆಗಳೂ ಮಕ್ಕಳಿಗೆ ದೊರೆಯುತ್ತಿಲ್ಲ. ಬಹುತೇಕ ಅಜ್ಜಿ ಕಥೆಗಳು ಬಾಯಿಂದ ಬಾಯಿಗೆ ಹರಿದು ಬಂದಿದ್ದು, ಅವೆಲ್ಲ ದಾಖಲಾಗಿದೆ ಎಂದು ಹೇಳಲಾಗದು. ಅಜ್ಜಿಯಂದಿರ ಜೊತೆ ಅಂತಹ ಕಥೆಗಳೂ ನಶಿಸುತ್ತಿರುವುದು ಜನಪದ ಸಾಹಿತ್ಯ ಲೋಕಕ್ಕೂ ಅಪಾರ ನಷ್ಟವೇ ಸರಿ.
ಕೌಟುಂಬಿಕ ವ್ಯವಸ್ಥೆಯಲ್ಲಿ ಸಾಕಷ್ಟು ಬದಲಾವಣೆಯಾಗಿದ್ದು, ಗಂಡ-ಹೆoಡತಿ, ಮಗ ಅಥವಾ ಮಗಳು ಇವರಷ್ಟೇ ಕುಟುಂಬ ಎನ್ನುವಂತಾಗಿದೆ. ಅಜ್ಜ-ಅಜ್ಜಿಯರು ಊರಲ್ಲೋ ಅಥವಾ ವೃದ್ಧಾಶ್ರಮದಲ್ಲೋ ದಿನ ಕಳೆಯುವ ಪ್ರಮೇಯಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿವೆ. ದೊಡ್ಡಪ್ಪ-ದೊಡ್ಡಮ್ಮ, ಚಿಕ್ಕಪ್ಪ-ಚಿಕ್ಕಮ್ಮ, ಅತ್ತೆ ಮಾವಂದಿರೆಲ್ಲ ಅಂಕಲ್-ಆoಟಿಗಳಾಗಿ ಬದಲಾಗುತ್ತಿದ್ದಾರೆ. ಅವರೊಂದಿಗೆ ಇರುತ್ತಿದ್ದ ಆತ್ಮೀಯ ಭಾವನೆ ಕೂಡಾ ಮಾಯವಾಗಿ ನಗು, ಮಾತುಗಳಿಗಷ್ಟೇ ಸೀಮಿತವಾಗುತ್ತಿದೆ.
ಅಜ್ಜಿ-ಮೊಮ್ಮಕ್ಕಳ ಬಾಂಧವ್ಯದ ಕುರಿತು ಅರಿವು ಮೂಡಿಸುವ ಬಗ್ಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನವಿಕಾಸ ಕಾರ್ಯಕ್ರಮದ ಅಧ್ಯಕ್ಷರಾದ ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು ‘ಅಜ್ಜಿ ಕಥೆ-ಕೈ ತುತ್ತಿನ ಜೊತೆ’ ಎಂಬ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಸಣ್ಣಮಕ್ಕಳೆಲ್ಲ ಅಜ್ಜಿಯ ಸುತ್ತ ಕುಳಿತುಕೊಂಡು ಅಜ್ಜಿ ಹೇಳುವ ಕಥೆಯನ್ನು ಆಲಿಸುತ್ತಾರೆ. ನಡು ನಡುವೆ ಅಜ್ಜಿ ಕೊಡುವ ಕೈ ತುತ್ತನ್ನೋ, ತಿಂಡಿಯನ್ನೋ ಮೆಲ್ಲುತ್ತಾರೆ. ಇದರಿಂದ ಅಜ್ಜಿ ಮೊಮ್ಮಕ್ಕಳ ಬಾಂಧವ್ಯ ವೃದ್ಧಿಯ ಜೊತೆ ಮಕ್ಕಳಿಗೆ ಅಜ್ಜಿಯ ಪ್ರೀತಿ, ವಾತ್ಸಲ್ಯ ದೊರೆಯುತ್ತದೆ. ಈ ಕಾರ್ಯಕ್ರಮವು ಬಹಳಷ್ಟು ಮಕ್ಕಳಿಗೆ ಖುಷಿಯನ್ನು ನೀಡಿದೆ.
ಮಕ್ಕಳಿಗೆ ತಂದೆ-ತಾಯಿಯ ಪ್ರೀತಿಯಲ್ಲದೆ ಅಜ್ಜ-ಅಜ್ಜಿಯರ, ಬಂಧು-ಬಳಗ, ನೆಂಟರಿಷ್ಟರ ಪ್ರೀತಿಯೂ ದೊರೆಯುವುದು ಮುಖ್ಯ. ಮಕ್ಕಳಿಗೆ ಸಂಬoಧ-ಬಾoಧವ್ಯ, ಪ್ರೀತಿ, ಪರೋಪಕಾರ ಮುಂತಾದ ಬದುಕಿಗೆ ಅತಿ ಅಗತ್ಯವಾದ ಗುಣಗಳನ್ನು ಬೆಳೆಸುವತ್ತಾ ಹೆತ್ತವರು ಪ್ರಯತ್ನಿಸಬೇಕಿದೆ. ಇನ್ನೇನು ಶಾಲಾ ರಜೆಯ ದಿನಗಳು ಎದುರಾಗುತ್ತಿವೆ. ನಿಮ್ಮ ಮಕ್ಕಳನ್ನು ಅಜ್ಜಿ ಮನೆಗೆ ಕಳುಹಿಸಿ ಅವರ ಕಥೆಗಳನ್ನು ಕೇಳಲು ಇದು ಸೂಕ್ತ ಸಮಯ.
