ಜಗತ್ತಿನ ಪ್ರತಿಯೊಂದು ಘಟನೆಯು ಮುಂದಿನ ಬದುಕಿಗೆ ಒಂದು ಸುಂದರವಾದ ಮುನ್ನುಡಿಯನ್ನು ನೀಡುತ್ತದೆ. ಯಾವುದೋ ಒಂದು ಪ್ರಮುಖವಾದದ್ದು ಇನ್ನೇನು ತೆರೆಮರೆಗೆ ಸರಿಯುತ್ತದೆ, ಅದನ್ನು ಉಳಿಸುವವರೇ ಇಲ್ಲ ಎನ್ನುವಾಗ ವಿಸ್ಮಯದಂತೆ ಕೆಲವೊಂದು ಘಟನೆಗಳು ನಡೆದು ಅವು ಮತ್ತೆ ಹಿಂದಿನ ದಿನಗಳತ್ತ ಮುಖ ಮಾಡುವಂತೆ ಮಾಡುತ್ತವೆ. ಕೊರೊನಾ ಎಂಬ ಮಹಾಮಾರಿ ಜಗತ್ತಿಗೆ ಆರೋಗ್ಯದ ಬಗೆಗಿನ ಕಾಳಜಿಯ ಪಾಠವನ್ನು ಕಲಿಸಿದೆ. ಇದೀಗ ಅಮೆರಿಕ-ಇಸ್ರೇಲ್-ಇರಾನ್ ಯುದ್ಧ ಕೂಡಾ ಭವಿಷ್ಯದ ದಿನಗಳಿಗೆ ನಾವು ಹೇಗೆ ಸಿದ್ಧರಾಗಬೇಕು ಎಂಬ ಪಥವನ್ನು ತೋರಿಸಿದೆ. ಇದು ಕೇವಲ ಮೂರು ದೇಶಗಳ ನಡುವಿನ ಯುದ್ಧಕ್ಕೆ ಸೀಮಿತವಾಗದೆ ಇಂಧನ, ತೈಲ, ಅನಿಲಗಳಲ್ಲಿ ಜಗತ್ತಿನ ಅವಲಂಬನೆಯ ಮೇಲೆ ನೇರ ಪರಿಣಾಮವನ್ನು ಬೀರಿದೆ.
ಆರಂಭದಲ್ಲಿ ಎರಡು ದೇಶಗಳ ನಡುವಿನ ಯುದ್ಧವೆಂದು ಸುಮ್ಮನಿದ್ದ ನಾವುಗಳು ಯುದ್ಧ ಮುಂದುವರಿದಂತೆ ಗ್ಯಾಸ್ ಸಿಲಿಂಡರ್ ಅನ್ನು ಹಿಡಿದುಕೊಂಡು ರಸ್ತೆಯಲ್ಲಿ ಸಾಲು ಸಾಲಾಗಿ ನಿಲ್ಲುವಂತಾಯಿತು. ಅನಿಲವನ್ನು ನಂಬಿದ್ದ ಅಟೋ ರಿಕ್ಷಾಗಳ ಟ್ಯಾಂಕ್‌ಗಳು ಬರಿದಾದವು. ಹೋಟೆಲ್ ಮಾಲಕರು ‘ಎಲ್‌ಪಿಜಿ ಖಾಲಿಯಾಗಿದೆ’ ಎಂಬ ನಾಮಫಲಕವನ್ನು ತೂಗುಹಾಕಿ ಹೋಟೆಲ್‌ಗಳ ಬಾಗಿಲು ಮುಚ್ಚಿದರು. ಆಹಾರದ ಬೆಲೆಯಲ್ಲಿ ಹೆಚ್ಚಳವಾಯಿತು. ಹೀಗೆ ಎಲ್ಲೆಡೆ ಅಸಹಜ ಪರಿಸ್ಥಿತಿ ನಿರ್ಮಾಣವಾಯಿತು. ಒಂದು ವೇಳೆ ಹೊರ್ಮುಜ್ ಜಲಸಂಧಿ ಸಂಪೂರ್ಣವಾಗಿ ಮುಚ್ಚಿದರೆ ದೇಶದ ಅರ್ಥವ್ಯವಸ್ಥೆಯ ಮೇಲೆ ಬೀಳಬಹುದಾದ ಹೊಡೆತವೇನು ಸಣ್ಣದಲ್ಲ! ಇದು ಕೇವಲ ಎರಡು ದೇಶಗಳ ಯುದ್ಧವಾಗಿರದೆ ಭಾರತ ಮುಂದಿನ ದಿನಗಳಲ್ಲಿ ಹೇಗೆ ಸ್ವಾವಲಂಬಿಯಾಗಬೇಕೆಂಬ ಪಾಠವನ್ನು ಬೋಧಿಸಿದಂತಿದೆ. ಬದಲಿ ಇಂಧನಗಳತ್ತ ಮುಖ ಮಾಡಬೇಕಾದ ಅನಿವಾರ್ಯತೆ ಇದೀಗ ನಮ್ಮೆದುರಿಗಿದೆ. ಪರ್ಯಾಯ ಇಂಧನಗಳತ್ತ ಒಲವು ತೋರಲು ಇದು ಸಕಾಲ.
ಪರ್ಯಾಯ ಇಂಧನ ಬಳಕೆ ಹೇಗೆ? : ಎಲ್‌ಪಿಜಿ ಬದಲಿಗೆ ಗೋಬರ್ ಗ್ಯಾಸ್, ಸೋಲಾರ್ ಮತ್ತು ವಿದ್ಯುತ್ ಉಪಕರಣ, ವಿದ್ಯುತ್ ದೀಪಗಳ ಬದಲು ಸೌರಶಕ್ತಿಯ ಸಮರ್ಪಕ ಬಳಕೆ, ವಿದ್ಯುತ್‌ಚಾಲಿತ ವಾಹನಗಳು, ಎಥೆನಾಲ್ ಮುಂತಾದ ಪರ್ಯಾಯಗಳನ್ನು ಬಳಸುವತ್ತಾ ಒಲವು ತೊರಬೇಕಿದೆ. ನೈಸರ್ಗಿಕವಾಗಿ ದೊರೆಯುವ ಯಾವೆಲ್ಲ ವಸ್ತುಗಳನ್ನು ಅಡುಗೆ ಇಂಧನದ ಮೂಲವನ್ನಾಗಿ ಬಳಕೆ ಮಾಡಬಹುದು ಎಂಬ ಮಾಹಿತಿ ಇಲ್ಲಿದೆ.
ಗೋಬರ್ ಗ್ಯಾಸ್-ಈಗ ಬಲು ಫೇಮಸ್ : ಹೈನುಗಾರಿಕೆಯನ್ನು ಹೊಂದಿರುವವರು ‘ಗೋಬರ್ ಗ್ಯಾಸ್’ ಅನ್ನು ಅಳವಡಿಸಿಕೊಳ್ಳುವುದು ಹೆಚ್ಚು ಸೂಕ್ತ. ಇದರಿಂದ ಹತ್ತು ಹಲವು ಪ್ರಯೋಜನಗಳಿವೆ.ಇದನ್ನು ಅಡುಗೆಗೆ ಮಾತ್ರವಲ್ಲ, ವಿದ್ಯುತ್ ಬಳಕೆಗೂ ಉಪಯೋಗಿಸಬಹುದಾಗಿದೆ. ಎಲ್‌ಪಿಜಿಗೆ ಹೋಲಿಸಿದರೆ ಇದು ಅಗ್ಗವಾಗಿ ದೊರೆಯುವ, ಪರಿಸರ ಸ್ನೇಹಿ ಮತ್ತು ಅಡುಗೆ ತ್ಯಾಜ್ಯಗಳ ಮರುಬಳಕೆಗೆ ಇರುವ ಉತ್ತಮ ಅವಕಾಶವೂ ಹೌದು. ಇಂದಿಗೂ ಹಳ್ಳಿ ಭಾಗದ ಹೆಚ್ಚಿನ ಮನೆಗಳಲ್ಲಿ ಎಲ್‌ಪಿಜಿಯನ್ನು ಬಳಸುತ್ತಿಲ್ಲ. ಬದಲಾಗಿ ಗೋಬರ್ ಗ್ಯಾಸ್ ಅನ್ನೇ ಅಡುಗೆ ಅನಿಲವಾಗಿ ಬಳಕೆ ಮಾಡಲಾಗುತ್ತಿದೆ. ಮನೆಯಲ್ಲಿ ವಿದ್ಯುತ್ ದೀಪದ ಸೌಲಭ್ಯವಿದ್ದರೂ ಗೋಬರ್ ಗ್ಯಾಸ್‌ನಿಂದಲೇ ದೀಪಗಳನ್ನು ಉರಿಸುತ್ತಾರೆ.
ದೇಶಕ್ಕೆ ಮಾದರಿಯಾದ ಅದಮ್ಯ ಚೇತನ ಸಂಸ್ಥೆ : ಕಳೆದ 25 ವರ್ಷಗಳಿಂದ ಕೇಂದ್ರ ಮಾಜಿ ಸಚಿವರಾದ ಅನಂತ ಕುಮಾರ್‌ರವರು ಆರಂಭಿಸಿದ ‘ಅದಮ್ಯ ಚೇತನ ಸಂಸ್ಥೆ’ಯಲ್ಲಿ ಲಕ್ಷಾಂತರ ಮಂದಿಗೆ ನವೀಕರಿಸಬಹುದಾದ ಇಂಧನದ ಮೂಲಗಳಿಂದ ಅಡುಗೆಯನ್ನು ತಯಾರಿಸಿ ನೀಡುತ್ತಿದ್ದಾರೆ ಎನ್ನುವ ಸುದ್ದಿ ಎಲ್ಲರಲ್ಲೂ ಅಚ್ಚರಿಯನ್ನು ಮೂಡಿಸಿದೆ. ಇಲ್ಲಿನ ಅಡುಗೆ ಮನೆಗೆ ಇದುವರೆಗೆ ಒಂದು ಎಲ್‌ಪಿಜಿ ಸಿಲಿಂಡರ್ ಕೂಡಾ ಪ್ರವೇಶಿಸಿಲ್ಲ. ಅದರ ಬದಲಾಗಿ ಪ್ಲಾಸ್ಟಿಕ್, ಲೋಹ ಮತ್ತು ಕಲ್ಲು-ಮಣ್ಣು ಇಲ್ಲದ ಕೃಷಿ ತ್ಯಾಜ್ಯ, ತುಂಡಾದ ನೋಟ್‌ಗಳು, ಕೋಟಾ ನೋಟುಗಳಿಂದ ಇದ್ದಿಲನ್ನು ತಯಾರಿಸಲಾಗುತ್ತದೆ. ಜೊತೆಗೆ ಅಕ್ಕಿ ಅಥವಾ ಇತರ ಕಾಳುಗಳನ್ನು ಬೇರ್ಪಡಿಸುವಾಗ ಮಿಲ್ಲ್ಗಳಲ್ಲಿ ದೊರೆಯುವ ತೌಡು, ತೆಂಗಿನ ಚಿಪ್ಪುಗಳಿಂದ ಇಂಧನವನ್ನು ತಯಾರಿಸಿ ಅಡುಗೆಗೆ ಬಳಕೆ ಮಾಡಲಾಗುತ್ತಿದೆ. ಬೆಂಗಳೂರಿನ ಇಸ್ಕಾನ್‌ನಲ್ಲಿ ಆರು ಅಡುಗೆ ಮನೆಗಳಿದ್ದು ಒಂದು ಅಡುಗೆ ಮನೆಗೆ ಮಾತ್ರ ಗೇಲ್ ಪೈಪ್‌ಲೈನ್ ಮೂಲಕ ಹಬೆಯ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ಇನ್ನು ಬೆಂಗಳೂರು ಸೇರಿದಂತೆ ದೇಶದಾದ್ಯಂತ ಐದು ಅಡುಗೆ ಮನೆಗಳಿವೆ. ಪ್ರತಿದಿನ ಅಡುಗೆ ತಯಾರಿಗೆ ಬೇಕಾದ 3 ಟನ್‌ನಷ್ಟು ಇದ್ದಿಲನ್ನು ಬಳಸಲಾಗುತ್ತದೆ. ಅಂದರೆ 120 ಎಲ್‌ಪಿಜಿ ಸಿಲಿಂಡರ್‌ಗಳಷ್ಟು ಇಂಧನವನ್ನು ಈ ಮೂಲಕ ಉತ್ಪಾದಿಸಲಾಗುತ್ತದೆ. ಚಪಾತಿಯನ್ನು ಬೇಯಿಸಲು ತೆಂಗಿನ ಚಿಪ್ಪುಗಳಿಂದ ತಯಾರಿಸಿದ ಹೊಗೆ ರಹಿತ ಇಂಧನವನ್ನು ಬಳಸಲಾಗುತ್ತದೆ. ಸೋಲರ್ ವಿದ್ಯುತ್ ಮೂಲಕ ಚಪಾತಿ ಒತ್ತುವ ಯಂತ್ರಗಳು ಕಾರ್ಯನಿರ್ವಹಿಸುತ್ತವೆ.
ವಿದ್ಯುತ್ ಇಲ್ಲದ ಬದುಕು! : ಇಸ್ಕಾನ್ ಸಂಸ್ಥೆಯ ಗೋಕುಲಧಾಮಕ್ಕೆ ಒಮ್ಮೆ ಭೇಟಿ ನೀಡಿದರೆ ವಿದ್ಯುತ್‌ಗೆ ಪರ್ಯಾಯ ವ್ಯವಸ್ಥೆಯನ್ನು ಯಾವ ರೀತಿ ಕಲ್ಪಿಸಿಕೊಳ್ಳಬಹುದು ಎನ್ನುವುದರ ಮಾಹಿತಿ ದೊರೆಯುತ್ತದೆ. ಒಂದು ಕ್ಷಣ ವಿದ್ಯುತ್ ಕಡಿತಗೊಂಡರೂ ಪರಿತಪಿಸುವ ನಮ್ಮ ಮನಸ್ಥಿತಿಯನ್ನು ಈ ಗೋಕುಲ ಧಾಮ ಬದಲಾಯಿಸಬಲ್ಲದು. ಇಲ್ಲಿ ಕುಡಿಯುವ ಮತ್ತು ಮನೆ ಬಳಕೆಯ ನೀರಿಗೆ ಸೋಲರ್ ಪಂಪ್ ಅಳವಡಿಕೆ, ಹೈಡ್ರಾಲಿಕ್ ರಾಮ್ ಪಂಪ್ ಮತ್ತು ಒಂದು ವಾಯುಚಾಲಿತ ಗಾಳಿಯಂತ್ರವಿದೆ. ಇತರ ಯಾವುದಕ್ಕೂ ಇಲ್ಲಿ ವಿದ್ಯುತ್ ಅನ್ನು ಬಳಸಲಾಗುತ್ತಿಲ್ಲ.
ನೈಸರ್ಗಿಕ ವಸ್ತುಗಳಿಗೆ ಇಂಧನ ಭಾಗ್ಯ : ಮನೆ ಸಮೀಪ ಇರುವ ಮರದ ಒಣ ರೆಂಬೆಗಳನ್ನೋ, ಕೊಂಬೆಗಳನ್ನೋ ಹಾಗೆ ಬಿಟ್ಟು ವ್ಯರ್ಥ ಮಾಡುವ ಬದಲು ಅದನ್ನು ಸೌದೆಯಾಗಿ ಬಳಸಿ ನಿತ್ಯ ಸ್ನಾನಕ್ಕೆ ಬೇಕಾದ ಬಿಸಿ ನೀರನ್ನು ತಯಾರಿಸಿಕೊಳ್ಳಬಹುದು. ತೆಂಗಿನ ಮರದ ಗರಿ, ದಿಂಡನ್ನು ಚಿಕ್ಕ ತುಂಡುಗಳಾಗಿ ಕತ್ತರಿಸಿಯೂ ಬಳಸಬಹುದಾಗಿದೆ. ಎಳನೀರಿನ ಗೊರಟೆ, ತೆಂಗಿನ ಕಾಯಿ ಸಿಪ್ಪೆ ಮತ್ತು ಗೊರಟೆಗಳನ್ನು ಚೆನ್ನಾಗಿ ಒಣಗಿಸಿ ಬಳಕೆ ಮಾಡಬಹುದು. ಸುಮಾರು 30 ವರ್ಷಗಳ ಹಿಂದೆ ವಿದ್ಯುತ್ ಚಾಲಿತ ಇಸ್ತ್ರಿ ಪೆಟ್ಟಿಗೆಗಳು ಬೆರಳೆನಿಕೆಯಷ್ಟು ಮನೆಗಳಲ್ಲಿ ಮಾತ್ರ ಬಳಕೆಯಲ್ಲಿತ್ತು. ಹಳ್ಳಿ ಪ್ರದೇಶದ ಹೆಚ್ಚಿನ ಕಡೆಗಳಲ್ಲಿ ಕಬ್ಬಿಣದಿಂದ ತಯಾರಿಸಿದ ಇಸ್ತ್ರೀ ಪೆಟ್ಟಿಗೆಗಳೇ ರಾರಾಜಿಸುತ್ತಿದ್ದವು. ಅದರಲ್ಲಿ ತೆಂಗಿನ ಕಾಯಿಯ ಗೊರಟೆಯ ಕೆಂಡವನ್ನು ಹಾಕಿ ಬಿಸಿಯಾದ ನಂತರ ಬಟ್ಟೆಗೆ ಇಸ್ತ್ರಿ ಮಾಡಲಾಗುತ್ತಿತ್ತು. ಕಾಲ ಕ್ರಮೇಣ ಇವು ಹಳ್ಳಿ ಭಾಗದಲ್ಲೂ ಮೂಲೆಗುಂಪಾದವು. ಅವುಗಳಿಗೆ ಮತ್ತೆ ಮರು ಜೀವ ನೀಡಬಹುದಾಗಿದೆ.
ಅಡಕೆಯನ್ನು ಸುಲಿದ ಸಿಪ್ಪೆಯನ್ನು ನಾನಾ ರೀತಿಯಲ್ಲಿ ಬಳಕೆ ಮಾಡುವವರು ಇದ್ದಾರೆ. ಕೆಲವರು ಅದನ್ನು ನೇರವಾಗಿ ಹಟ್ಟಿ ಗೊಬ್ಬರ ತಯಾರಿಸಲು ಬಳಕೆ ಮಾಡಿದರೆ ಇನ್ನು ಕೆಲವರು ಅದನ್ನು ಸುಟ್ಟು ಅಡಕೆ ಗಿಡಗಳ ಬುಡಕ್ಕೆ ಹಾಕುತ್ತಾರೆ. ಇದರ ಬದಲು ಹೊಸ ಅನ್ವೇಷಣೆಯಂತೆ ಸ್ಟೀಮ್ ಮೂಲಕ ಅಡುಗೆಗೂ ಬಳಕೆ ಮಾಡಬಹುದು. ವಿದೇಶಿ ಇಂಧನಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವುದು ಮತ್ತು ನೈಸರ್ಗಿಕವಾಗಿ ದೊರೆಯುವ ವಸ್ತುಗಳಿಂದ ಅಡುಗೆ ಇಂಧನವನ್ನು ಉತ್ಪಾದಿಸಿ ಬಳಕೆ ಮಾಡುವುದು ಇದರ ಪ್ರಮುಖ ಉದ್ದೇಶವಾಗಿದೆ.
ಹಿಂದಿನ ಕಾಲದಲ್ಲಿ ನಿತ್ಯ ಬಳಸುತ್ತಿದ್ದ ವಸ್ತುಗಳು ಇಂದು ಬದಲಿ ಇಂಧನ ಮೂಲಗಳಾಗಿವೆ. ನಮ್ಮ ಸುತ್ತಮುತ್ತಲಿರುವ ಬದಲಿ ಇಂಧನ ಮೂಲಗಳತ್ತ ಮತ್ತೆ ಒಲವು ತೋರಬೇಕಾದ ಅನಿವಾರ್ಯತೆ ಇಂದು ನಮ್ಮೆದುರಿಗಿದೆ.
ಇಂಧನಕ್ಕಾಗಿ ಯಾವೆಲ್ಲ ವಸ್ತುಗಳನ್ನು ಬಳಸಬಹುದು
ಫ್ಯಾಕ್ಟರಿಗಳಲ್ಲಿ ದೊರೆಯುವ ಗೇರುಸಿಪ್ಪೆ ಮತ್ತು
ಶೇಂಗಾ ಸಿಪ್ಪೆ.
ಮರದ ಮಿಲ್ಲ್ಗಳಲ್ಲಿ ದೊರೆಯುವ ವ್ಯರ್ಥ ತುಂಡುಗಳು
ಮತ್ತು ಮರದ ಹೊಟ್ಟು.
ಫ್ಲೈವುಡ್ ಫ್ಯಾಕ್ಟರಿಯ ತ್ಯಾಜ್ಯಗಳು.
ಕಬ್ಬಿನ ಸಿಪ್ಪೆ ಸೇರಿದಂತೆ ಇತರ ನೈಸರ್ಗಿಕ ವಸ್ತುಗಳನ್ನು ಬಳಸಬಹುದು.
