ಮೇಘ ಶಿವರಾಜ್
ಇತ್ತೀಚಿನ ದಿನಗಳಲ್ಲಿ ಯುವಕರು ಉತ್ತಮ ಸಂಬಳದ ವೃತ್ತಿಯನ್ನು ಆರಿಸಿಕೊಳ್ಳಲು ವಿದೇಶದಲ್ಲಿ ಉದ್ಯೋಗವನ್ನು ಪಡೆಯುವ ಕನಸನ್ನು ಕಾಣುತ್ತಿದ್ದಾರೆ. ಆದರೆ ಇದಕ್ಕೆ ಸರಿಯಾದ ಯೋಜನೆ, ತಯಾರಿ ಮತ್ತು ಮಾಹಿತಿ ಅಗತ್ಯ. ವಿದೇಶ ಕನಸಿನ ಹಾದಿಯಲ್ಲಿ ಪ್ರತಿಯೊಂದು ಹೆಜ್ಜೆಯನ್ನು ಬಹಳ ಸೂಕ್ಷ್ಮವಾಗಿಡಬೇಕು. ಅದರಲ್ಲೂ ಮೊದಲಿಗೆ ನೀವು ಯಾವ ದೇಶದಲ್ಲಿ ಕೆಲಸ ಮಾಡಲು ಬಯಸುತ್ತೀರಿ ಎಂಬ ಸ್ಪಷ್ಟತೆ ಇರಬೇಕು. ಪ್ರತಿಯೊಂದು ದೇಶದಲ್ಲಿ ಉದ್ಯೋಗಾವಕಾಶಗಳು, ಸಂಬಳ, ವೀಸಾ ನಿಯಮಗಳು ಮತ್ತು ಜೀವನ ವೆಚ್ಚಗಳು ವಿಭಿನ್ನವಾಗಿರುತ್ತವೆ. ಉದಾಹರಣೆಗೆ, ಜರ್ಮನಿಯಲ್ಲಿ ಎಂಜಿನಿಯರಿಂಗ್, ಐಟಿ, ಆರೋಗ್ಯ ಕ್ಷೇತ್ರಗಳಿಗೆ ಹೆಚ್ಚು ಅವಕಾಶವಿದ್ದರೆ, ಕೆನಡಾದಲ್ಲಿ ಆರೋಗ್ಯ, ಐಟಿ, ಕೃಷಿ ಮತ್ತು ಸಂಶೋಧನೆಗೆ ಉತ್ತಮ ಅವಕಾಶವಿದೆ. ಆಸ್ಟ್ರೇಲಿಯಾದಲ್ಲಿ ನರ್ಸಿಂಗ್, ಬಯೋಟೆಕ್ನಾಲಜಿ, ಕೃಷಿ, ಐಟಿ ಕ್ಷೇತ್ರದಲ್ಲಿ ಹಾಗೂ ಯುಎಇಯಲ್ಲಿ ಹೋಟೆಲ್, ಆಸ್ಪತ್ರೆ ನಿರ್ಮಾಣ ಮತ್ತು ಮಾರಾಟ ಇಂತಹ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶಗಳಿವೆ.
ಪಾಸ್ಪೋರ್ಟ್ ಕಡ್ಡಾಯ : ವಿದೇಶಕ್ಕೆ ಹೋಗಲು ಇರಬೇಕಾದ ಒಂದು ಪ್ರಮುಖ ದಾಖಲೆ ಅಂದರೆ ಅದು ಪಾಸ್ಪೋರ್ಟ್. ಅದಿಲ್ಲದೆ ಯಾವುದೇ ವಿದೇಶಿ ಉದ್ಯೋಗ ಪ್ರಕ್ರಿಯೆ ಆರಂಭವಾಗುವುದಿಲ್ಲ. ಆದ್ದರಿಂದ ಮೊದಲು ಪಾಸ್ಪೋರ್ಟ್ಗೆ ಅರ್ಜಿ ಸಲ್ಲಿಸಬೇಕಾಗುತ್ತದೆ. ಪಾಸ್ಪೋರ್ಟ್ ಸೇವಾ ಕೇಂದ್ರಗಳಲ್ಲಿ ಅಥವಾ ಆನ್ಲೈನ್ನಲ್ಲಿಯೂ ಅರ್ಜಿ ಸಲ್ಲಿಬಹುದು. ಆದರೆ ವೆರಿಫಿಕೇಶನ್ಗೆ ಪಾಸ್ಪೋರ್ಟ್ ಕಚೇರಿಗೆ ಭೇಟಿ ನೀಡಲೇಬೇಕು. ಪಾಸ್ಪೋರ್ಟ್ಗೆ ಅರ್ಜಿ ಸಲ್ಲಿಸಲು ಆಧಾರ್ ಕಾರ್ಡ್, ಪಾನ್ ಕಾರ್ಡ್, ಎಸ್ಸೆಸೆಲ್ಸಿ ಅಂಕಪಟ್ಟಿ, ವಿಳಾಸದ ಪುರಾವೆ, ಪಾಸ್ಪೋರ್ಟ್ ಗಾತ್ರದ ಭಾವಚಿತ್ರ ಮುಂತಾದ ದಾಖಲೆಗಳು ಬೇಕು. ಇವೆಲ್ಲವುಗಳಲ್ಲಿ ಹೆಸರು ಒಂದೇ ರೀತಿ ಇರಬೇಕು. ದಾಖಲೆಗಳನ್ನು ಸಲ್ಲಿಸಿದ ನಂತರ ಪೊಲೀಸರಿಂದ ಪರಿಶೀಲನೆ ಪೂರ್ಣಗೊಂಡು ನಂತರ ಪಾಸ್ಪೋರ್ಟ್ ಅನ್ನು ನೀಡಲಾಗುತ್ತದೆ.
ಉತ್ತಮ ಗುಣಮಟ್ಟದ ರೆಸ್ಯೂಮ್ ತಯಾರಿರಲಿ : ಇದರೊಂದಿಗೆ ಉತ್ತಮವಾದ ರೆಸ್ಯೂಮ್ ಅನ್ನು ಸಿದ್ಧಪಡಿಸಿಟ್ಟುಕೊಳ್ಳಬೇಕು. ಅದರಲ್ಲಿ ಮುಖ್ಯವಾಗಿ ನಿಮ್ಮ ಸ್ಪಷ್ಟ ಪರಿಚಯ, ವೃತ್ತಿ ಹಿನ್ನೆಲೆ, ಅನುಭವ, ಶೈಕ್ಷಣಿಕ ಅರ್ಹತೆ, ಸಂಶೋಧನಾ ಅನುಭವ, ಕೌಶಲ್ಯಗಳು, ಉಪಕರಣಗಳನ್ನು ನಿರ್ವಹಿಸುವ ಮತ್ತು ತಾಂತ್ರಿಕ ಕೌಶಲ್ಯಗಳು ಹಾಗೂ ತಿಳಿದಿರುವ ಭಾಷೆಗಳ ವಿವರಗಳಿರಲಿ. ನೀವು ಯಾವ ಕ್ಷೇತ್ರ, ಯಾವ ಹುದ್ದೆಗೆ ಅರ್ಜಿ ಸಲ್ಲಿಸುತ್ತಿದ್ದೀರಿ ಎನ್ನುವ ಮಾಹಿತಿಯನ್ನು ನೀಡಿರಿ.
ಉದ್ಯೋಗ ಹುಡುಕುವುದು ಹೇಗೆ? : ‘ವಿದೇಶದಲ್ಲಿ ಉದ್ಯೋಗ ಹುಡುಕುವುದು ಹೇಗೆ?’ ಎಂಬುದು ಅನೇಕರ ಪ್ರಶ್ನೆಯಾಗಿದೆ. ವಿದೇಶಿ ಉದ್ಯೋಗಗಳಿಗಾಗಿ ಜನಪ್ರಿಯ ಪೋರ್ಟಲ್ಗಳಿವೆ. ಲಿಂಕ್ಡ್ಇನ್ ಜಾಬ್ಸ್, ಇಂಡೀಡ್, ಗ್ಲಾಸ್ಡೋರ್, ಫೌಂಡಿಟ್, ನೌಕ್ರಿ ಗಲ್ಫ್ ಹಾಗೂ ಇತರ ಕಂಪನಿಗಳ ವೆಬ್ಸೈಟ್ಗಳನ್ನು ಆಗಾಗ ಗಮನಿಸುತ್ತಿರಬೇಕಾಗುತ್ತದೆ. ಲಿಂಕ್ಡ್ಇನ್ ಆ್ಯಪ್ನಲ್ಲಿ ನಿಮ್ಮ ಪ್ರೊಫೈಲ್ ಅನ್ನು ನಿರ್ಮಿಸಿಕೊಳ್ಳಿ. ಇದನ್ನು ಡಿಜಿಟಲ್ ರೆಸ್ಯೂಮ್ ಎನ್ನಲಾಗುತ್ತದೆ. ಇಲ್ಲಿ ಪ್ರೊಫೈಲ್ನಲ್ಲಿ ನಿಮ್ಮ ಛಾಯಾಚಿತ್ರ, ಅನುಭವ, ಕೌಶಲ್ಯಗಳು, ಪ್ರಮಾಣಪತ್ರಗಳು, ಸಂಶೋಧನಾ ಪ್ರಬಂಧಗಳು, ಲೇಖನಗಳು ಇವುಗಳನ್ನೆಲ್ಲ ಉಲ್ಲೇಖಿಸಿರಿ.
ಉದ್ಯೋಗ ಗಿಟ್ಟಿಸಲು ಪರೀಕ್ಷೆ : ವಿದೇಶಿ ಉದ್ಯೋಗದ ಬಗ್ಗೆ ಅಲ್ಪ ಸ್ವಲ್ಪ ತಿಳಿದವರು, ಗೊಂದಲದಲ್ಲಿರುವವರ ಮುಂದೆ ಇರುವ ದೊಡ್ಡ ಪ್ರಶ್ನೆ ‘ಐಇಎಲ್ಟಿಎಸ್’ ಅಥವಾ ಭಾಷಾ ಪರೀಕ್ಷೆ ಅಗತ್ಯವಿದೆಯೇ? ಎಂದು. ಇದು ಎಲ್ಲಾ ಉದ್ಯೋಗಗಳಿಗೆ ಕಡ್ಡಾಯವಲ್ಲ. ವಿದೇಶದಲ್ಲಿ ಉದ್ಯೋಗ ಪಡೆಯಲು ಐಇಎಲ್ಟಿಎಸ್ (International English Language Testing System) ಅಥವಾ ಇತರ ಭಾಷಾ ಪರೀಕ್ಷೆಗಳು ಅಗತ್ಯವೇ ಎಂಬುದು ನೀವು ಯಾವ ದೇಶಕ್ಕೆ ಹೋಗುತ್ತಿದ್ದೀರಿ, ಯಾವ ಉದ್ಯೋಗಕ್ಕೆ ಅರ್ಜಿ ಸಲ್ಲಿಸುತ್ತಿದ್ದೀರಿ ಮತ್ತು ಯಾವ ರೀತಿಯ ವೀಸಾ ಪಡೆಯುತ್ತಿದ್ದೀರಿ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ‘ಐಇಎಲ್ಟಿಎಸ್’ ಎಂಬುದು ಇಂಗ್ಲಿಷ್ ಭಾಷೆಯಲ್ಲಿ ನಿಮ್ಮ ಮಾತನಾಡುವಿಕೆ, ಕೇಳುವಿಕೆ, ಓದುವಿಕೆ ಮತ್ತು ಬರವಣಿಗೆ ಕೌಶಲ್ಯವನ್ನು ಪರೀಕ್ಷಿಸುವ ಅಂತಾರಾಷ್ಟ್ರೀಯ ಮಟ್ಟದ ಪರೀಕ್ಷೆಯಾಗಿದೆ. ಅನೇಕ ದೇಶಗಳ ವಿಶ್ವವಿದ್ಯಾಲಯಗಳು, ಕಂಪನಿಗಳು ಮತ್ತು ಇಲಾಖೆಗಳು ಇದಕ್ಕೆ ಮಾನ್ಯತೆ ನೀಡಿವೆ. ಇನ್ನು ಅನೇಕ ಐಟಿ, ಬಯೋಟೆಕ್ನಾಲಜಿ, ಎಂಜಿನಿಯರಿಂಗ್ ಮತ್ತು ಖಾಸಗಿ ಕಂಪನಿಗಳು ನಿಮ್ಮ ಇಂಗ್ಲಿಷ್ ಸಂವಹನ ಕೌಶಲ್ಯವನ್ನು ಸಂದರ್ಶನದಲ್ಲಿಯೇ ಮೌಲ್ಯಮಾಪನ ಮಾಡುತ್ತವೆ.
ಕೆಲವು ದೇಶಗಳಲ್ಲಿ Work Visa ಪಡೆಯಲು ಐಇಎಲ್ಟಿಎಸ್ನ ಅಗತ್ಯವಿಲ್ಲ. ಆದರೆ ಶಾಶ್ವತ ವಲಸೆ (Permanent Residency) ಅಥವಾ ಕೆಲವು ನಿರ್ದಿಷ್ಟ ವೀಸಾ ವರ್ಗಗಳಿಗೆ ಐಇಎಲ್ಟಿಎಸ್ ಅಂಕಗಳು ಬೇಕಾಗುತ್ತದೆ. ಉದಾಹರಣೆಗೆ ಕೆನಡಾದಲ್ಲಿ Permanent Residencyಗೆ ಮಾತ್ರ ಸಾಮಾನ್ಯವಾಗಿ ಐಇಎಲ್ಟಿಎಸ್ ಅಥವಾ ಸಿಇಎಲ್ಪಿಐಪಿ ಅಂಕಗಳು ಅಗತ್ಯ. ಇನ್ನು ಕೆಲವು ಉದ್ಯೋಗಗಳಿಗೆ ಐಇಎಲ್ಟಿಎಸ್ ಅಗತ್ಯವಿಲ್ಲದಿದ್ದರೂ ಉತ್ತಮ ಇಂಗ್ಲಿಷ್ ಕೌಶಲ್ಯ ಮುಖ್ಯ.
ಆಸ್ಟ್ರೇಲಿಯಾದಲ್ಲಿ Skilled Migration ಮತ್ತು ಕೆಲವು ವೀಸಾಗಳಿಗೆ ಐಇಎಲ್ಟಿಎಸ್, ಪಿಟಿಇ (Pearson Test of English) ಅಥವಾ ಟಿಒಇಎಫ್ಎಲ್ (Test of English as a Foreign Language) ಅಗತ್ಯವಿದೆ. ಕೆಲವು ಉದ್ಯೋಗಗಳಲ್ಲಿ ಉದ್ಯೋಗದಾತರ ನಿಯಮದ ಪ್ರಕಾರ ಭಾಷಾ ಪರೀಕ್ಷೆಯನ್ನು ಎದುರಿಸಬೇಕಾಗುತ್ತದೆ. ಜರ್ಮನಿಯ ಅಂತಾರಾಷ್ಟ್ರೀಯ ಕಂಪನಿಗಳಲ್ಲಿ ಕೆಲಸ ಮಾಡಲು ಕೇವಲ ಇಂಗ್ಲಿಷ್ ಭಾಷೆ ಗೊತ್ತಿದ್ದರೆ ಸಾಕು. ಆದರೆ ಜರ್ಮನ್ ಭಾಷೆ (A1, A2, B1, B2 ಮಟ್ಟ) ತಿಳಿದಿದ್ದರೆ ಉದ್ಯೋಗಾವಕಾಶಗಳು ಹೆಚ್ಚುತ್ತವೆ. ಯುನೈಟೆಡ್ ಅರಬ್ ಎಮಿರೇಟ್ಸ್ (UAE)ನಲ್ಲಿ ಸಾಮಾನ್ಯವಾಗಿ ಐಇಎಲ್ಟಿಎಸ್ ಕಡ್ಡಾಯವಿಲ್ಲ. ಉತ್ತಮ ಇಂಗ್ಲಿಷ್ ಮಾತನಾಡುವ ಕೌಶಲ್ಯ ಇದ್ದರೆ ಸಾಕಾಗುತ್ತದೆ.
ಆಯ್ಕೆ ಪ್ರಕ್ರಿಯೆ : ಕಂಪನಿಗಳಿಂದ ಆಯ್ಕೆ ಆದರೆ ಸಾಮಾನ್ಯವಾಗಿ ಸಂದರ್ಶನವು ಮೂರು ಹಂತಗಳಲ್ಲಿ ನಡೆಯುತ್ತದೆ. ಪ್ರತಿಯೊಂದು ಹಂತದಲ್ಲೂ ನಿಮ್ಮ ಜ್ಞಾನ, ಕೌಶಲ್ಯ, ವ್ಯಕ್ತಿತ್ವ ಮತ್ತು ವೃತ್ತಿಪರತೆಯನ್ನು ಮೌಲ್ಯಮಾಪನ ಮಾಡಲಾಗುತ್ತದೆ. ಮೊದಲನೆಯದು ಎಚ್ಆರ್ ಸಂದರ್ಶನ. ಸಾಮಾನ್ಯವಾಗಿ ಇದು ಮೊದಲ ಹಂತವಾಗಿದ್ದು ನಿಮ್ಮ ವ್ಯಕ್ತಿತ್ವ, ಸಂವಹನ ಕೌಶಲ್ಯ, ಕೆಲಸದ ಬಗ್ಗೆ ನಿಮ್ಮ ಮನೋಭಾವ ಮತ್ತು ಕಂಪನಿಗೆ ನೀವು ಸೂಕ್ತ ಅಭ್ಯರ್ಥಿಯೇ ಎಂಬುವುದನ್ನು ಪರಿಶೀಲಿಸಲಾಗುತ್ತದೆ. ಇಲ್ಲಿ ನಿಮ್ಮ ಹೆಸರು, ಶೈಕ್ಷಣಿಕ ಹಿನ್ನೆಲೆ, ಕೆಲಸದ ಅನುಭವ, ಪ್ರಮುಖ ಕೌಶಲ್ಯಗಳು, ಸಂಶೋಧನಾ ಅನುಭವ, ವೃತ್ತಿಜೀವನದ ಗುರಿ ಈ ರೀತಿಯ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಇದರೊಂದಿಗೆ ನೀವು ಆ ಕಂಪನಿಯನ್ನು, ದೇಶವನ್ನು ಏಕೆ ಆಯ್ಕೆ ಮಾಡಿಕೊಂಡಿದ್ದೀರಿ? ನಿಮ್ಮ ಬಲ ಮತ್ತು ದುರ್ಬಲತೆಗಳು ಹಾಗೂ ಐದು ವರ್ಷಗಳ ನಂತರ ನಿಮ್ಮ ಗುರಿ ಏನು ಇಂತಹ ಪ್ರಶ್ನೆಗಳನ್ನು ಕೇಳುತ್ತಾರೆ.
ಎರಡನೇ ಹಂತದಲ್ಲಿ ತಾಂತ್ರಿಕ ಸಂದರ್ಶನ ಇರುತ್ತದೆ. ಈ ಹಂತದಲ್ಲಿ ನಿಮ್ಮ ವಿಷಯದ ಜ್ಞಾನ ಮತ್ತು ಪ್ರಾಯೋಗಿಕ ಅನುಭವವನ್ನು ಪರೀಕ್ಷಿಸಲಾಗುತ್ತದೆ. ಉದ್ಯೋಗಾವಕಾಶದ ವಿಷಯದ ಬಗ್ಗೆ ನಿಮಗಿರುವ ಜ್ಞಾನ ಹಾಗೂ ಪ್ರಾಯೋಗಿಕ ಕೌಶಲ್ಯಗಳು ಹಾಗೂ ಪ್ರಯೋಗಾಲಯದ ಉಪಕರಣಗಳ ಬಗ್ಗೆ ವಿವರವಾಗಿ ಕೇಳುತ್ತಾರೆ. ಕೊನೆಯ ಅಂತಿಮ ಸುತ್ತಿನಲ್ಲಿ ವೇತನದ ಬಗ್ಗೆ ಚರ್ಚೆ ನಡೆಯುತ್ತದೆ. ಈ ಹಂತದಲ್ಲಿ ನಿಮಗಿರುವ ಸಂಶಯಗಳನ್ನು ಕೇಳಬಹುದು. ಸಾಮಾನ್ಯವಾಗಿ ಮೊದಲು ಆ ದೇಶದಲ್ಲಿ ಯಾವ ಹುದ್ದೆಗೆ, ಎಷ್ಟು ಸಂಬಳ ನೀಡುತ್ತಾರೆ ಎಂಬುದನ್ನು ತಿಳಿದುಕೊಳ್ಳಬೇಕಾಗುತ್ತದೆ. ಯಾವಾಗ ಕೆಲಸಕ್ಕೆ ಸೇರಬಹುದು? ನೋಟೀಸ್ ಸಮಯ ಇದೆಯೇ? ಎಂಬುದರ ಬಗ್ಗೆಯೂ ವಿಚಾರಿಸಲು ಇಲ್ಲಿ ಅವಕಾಶವಿದೆ.
ಇದೇ ಹಂತದಲ್ಲಿ Work Visa, ವೈದ್ಯಕೀಯ ಪರೀಕ್ಷೆ, ಪೊಲೀಸ್ ಪ್ರಮಾಣಪತ್ರ, ಉದ್ಯೋಗಿಯ ಕಾಂಟ್ರಾಕ್ಟ್ ವೀಸಾ ಪ್ರಾಯೋಜಕತ್ವ (ಕಂಪನಿಯೇ ವೀಸಾ ನೀಡುವುದಾದರೆ), ಫ್ಲೈಟ್ ಟಿಕೆಟ್, ವಸತಿ ಸೌಲಭ್ಯ, ವಿಮಾ ಸೌಲಭ್ಯ ಇತ್ಯಾದಿ ವಿಷಯಗಳನ್ನೂ ಚರ್ಚಿಸಲಾಗುತ್ತದೆ. ಈ ಬಗ್ಗೆ ಅಭ್ಯರ್ಥಿಗಳಿಗೆ ಏನೇ ಸಂದೇಹವಿದ್ದರೂ ಅಲ್ಲೇ ಬಗೆಹರಿಸಿಕೊಳ್ಳಬಹುದು. ಎಲ್ಲವೂ ಸರಿಯಾಗಿ ನಡೆದರೆ ಕಂಪನಿಯಿಂದ ‘ನೇಮಕಾತಿ ಪತ್ರ’ ಬರುತ್ತದೆ. ಅದರಲ್ಲಿ ವೇತನ, ಕೆಲಸದ ಸಮಯ, ವಿಮೆ, ವಸತಿ, ಟಿಕೆಟ್, ರಜಾ ನಿಯಮ ಇತ್ಯಾದಿ ವಿಷಯಗಳ ಬಗ್ಗೆ ಉಲ್ಲೇಖವಿರುತ್ತದೆ.
ವಿದೇಶದಲ್ಲಿ ಉದ್ಯೋಗ ಪಡೆಯುವುದು ಕಷ್ಟವಲ್ಲ. ಆದರೆ ಸರಿಯಾದ ಮಾಹಿತಿ, ಉತ್ತಮ ತಯಾರಿ, ಸೂಕ್ತ ದಾಖಲೆಗಳು, ಕೌಶಲ್ಯ ಮತ್ತು ನಿರಂತರ ಪ್ರಯತ್ನ ಅತ್ಯಗತ್ಯ. ಮೊದಲು ಸಲ್ಲಿಸಿದ ಅರ್ಜಿಯಿಂದಲೇ ಉದ್ಯೋಗ ಸಿಗದೇ ಇರಬಹುದು. ಆದರೆ ನೂರಾರು ಅರ್ಜಿಗಳಲ್ಲಿ ಒಂದು ಅವಕಾಶ ನಿಮ್ಮ ಜೀವನವನ್ನು ಬದಲಾಯಿಸಬಹುದು. ಯಶಸ್ಸಿನ ರಹಸ್ಯ ಅದೃಷ್ಟದಲ್ಲಲ್ಲ, ನಿರಂತರ ಪರಿಶ್ರಮ ಮತ್ತು ಸರಿಯಾದ ದಾರಿಯಲ್ಲಿದೆ.
