ದೇಶಕ್ಕೆ ಮಾದರಿಯಾದ ಬೀದರ್‌ ಕ್ಷೀರ ಕ್ರಾಂತಿ

ಮೂರು ದಶಕಗಳ ಹಿಂದೆಯೇ ದಿನನಿತ್ಯ ಆದಾಯ ತರುವ ಒಂದು ಸುಸ್ಥಿರ ಮೂಲ ಹೈನುಗಾರಿಕೆ ಎಂದು ತಿಳಿದುಕೊಂಡ ಪೂಜ್ಯ ಶ್ರೀ ಹೆಗ್ಗಡೆಯವರು ಕರಾವಳಿ ಭಾಗದಲ್ಲಿ ಹೈನುಗಾರಿಕಾ ಅಭಿವೃದ್ಧಿಗೆ ವಿಶೇಷ ಪ್ರೋತ್ಸಾಹ ನೀಡಿದರ ಫಲವಾಗಿ ದಕ್ಷಿಣ ಕನ್ನಡ ಜಿಲ್ಲೆ ರಾಜ್ಯದಲ್ಲೇ ಒಂದು ಪ್ರಮುಖ ಹೈನುಗಾರಿಕಾ ಜಿಲ್ಲೆಯಾಗಿ ಗುರುತಿಸಿಕೊಂಡಿತು. ಇದೀಗ ಪೂಜ್ಯರ ಚಿತ್ತ ಕರ್ನಾಟಕ ರಾಜ್ಯದ ಕಿರೀಟಪ್ರಾಯವಾದ ಬೀದರ್ ಜಿಲ್ಲೆಯತ್ತ ಹರಿದು, ಬೀದರ್ ಜಿಲ್ಲೆಯಲ್ಲಿಯೂ ಕ್ಷೀರ ಕ್ರಾಂತಿ ಸೃಷ್ಟಿಯಾಯಿತು. ಶ್ರೀ ಹೆಗ್ಗಡೆಯವರು ತನ್ನ ರೂ. 5 ಕೋಟಿ ಸಂಸದರ ನಿಧಿಯನ್ನು ಬೀದರ್‌ನ ಹೈನುಗಾರಿಕೆಯ ಅಭಿವೃದ್ಧಿಗೆ ಮೀಸಲಿಡುವ ಮೂಲಕ ದೇಶಕ್ಕೆ ಮಾದರಿಯಾಗಿದ್ದಾರೆ.
ಬೀದರ್ ಜಿಲ್ಲೆ ಹೈನುಗಾರಿಕೆಗೆ ಬೇಕಾದ ಎಲ್ಲಾ ರೀತಿಯ ಅನುಕೂಲಕರ ಭೌಗೋಳಿಕ ಪರಿಸ್ಥಿತಿಯನ್ನು ಹೊಂದಿದ್ದರೂ ಹೈನುಗಾರಿಕೆಯಲ್ಲಿ ಬಹಳಷ್ಟು ಹಿಂದುಳಿದಿದೆ ಎಂಬುವುದನ್ನು ಅಂಕಿ ಅಂಶಗಳೇ ತಿಳಿಸುತ್ತವೆ. ಈ ಹಿಂದೆ ಕರ್ನಾಟಕದ 15 ಹಾಲು ಒಕ್ಕೂಟಗಳ ಪೈಕಿ ಕಲ್ಬುರ್ಗಿ, ಬೀದರ್, ಯಾದಗಿರಿ ಒಕ್ಕೂಟದಲ್ಲಿ ಅತೀ ಕಡಿಮೆ ಹಾಲು ಸಂಗ್ರಹಣೆ ಆಗುತ್ತಿತ್ತು. ಬೀದರ್ ಜಿಲ್ಲೆಯಲ್ಲಿರುವ ಒಟ್ಟು 518 ಹಾಲು ಉತ್ಪಾದಕರ ಸಂಘಗಳ ಪೈಕಿ 125 ಸಂಘಗಳು ಮಾತ್ರ ಕಾರ್ಯನಿರ್ವಹಿಸುತ್ತಿದ್ದು 393 ಸಂಘಗಳು ನಿಷ್ಕ್ರೀಯಗೊಂಡಿದ್ದವು. ಬೀದರ್ ಜಿಲ್ಲೆಯಲ್ಲಿನ ಈ ಸಮಸ್ಯೆಯನ್ನು ಗುರುತಿಸಿದ ಪೂಜ್ಯ ಶ್ರೀ ಹೆಗ್ಗಡೆಯವರು ತಮ್ಮ ಸಂಸದರ ನಿಧಿಯಡಿಯಲ್ಲಿ ಅನುದಾನವನ್ನು ಒದಗಿಸಿಕೊಡುವುದರೊಂದಿಗೆ ಬೀದರ್ ಜಿಲ್ಲೆಯಲ್ಲಿ ‘ಸಮಗ್ರ ಹೈನುಗಾರಿಕಾಭಿವೃದ್ಧಿ’ ಎಂಬ ಕಾರ್ಯಕ್ರಮಕ್ಕೆ 2022ರಲ್ಲಿ ಚಾಲನೆಯನ್ನು ನೀಡಿದರು.
ಈ ಕಾರ್ಯಕ್ರಮದಡಿ ಪ್ರಾಥಮಿಕ ಹಂತದಲ್ಲಿ ಸಮಾಲೋಚನಾ ಸಭೆಗಳು, ತರಬೇತಿ, ಹೈನುಗಾರರ ಆಯ್ಕೆ, ರಾಸುಗಳ ಖರೀದಿ, ಸಮತೋಲನ ಪಶು ಆಹಾರ, ಹಸಿರು ಹುಲ್ಲು ನಾಟಿ, ಕೃತಕ ಗರ್ಭಧಾರಣೆ, ಜಂತುಹುಳು ನಿವಾರಕ ಔಷಧ ವಿತರಣೆ, ಅಧ್ಯಯನ ಪ್ರವಾಸ, ವಿಸ್ತರಣಾ ಕಾರ್ಯಕ್ರಮಗಳು ಹಾಗೂ ವಿವಿಧ ತಾಂತ್ರಿಕ ತರಬೇತಿಯೊಂದಿಗೆ ಹೈನುಗಾರಿಕೆಗೆ ಸೂಕ್ತ ಮಾರ್ಗದರ್ಶನ ಮತ್ತು ಪ್ರೇರಣೆಯನ್ನು ನೀಡಲಾಗಿದೆ. ಜಾನುವಾರುಗಳಿಗೆ ಆರೋಗ್ಯ ಶಿಬಿರಗಳನ್ನು ಸಂಘಟಿಸುವ ಮೂಲಕ ಜಾನುವಾರುಗಳ ಆರೋಗ್ಯದ ಬಗ್ಗೆ ಜಾಗೃತಿಯನ್ನು ಮೂಡಿಸಲಾಗಿದೆ.
ಪ್ರಥಮ ಹಂತದಲ್ಲಿ ಸಂಸದರ ನಿಧಿ ರೂ. 2.50 ಕೋಟಿ ಮೊತ್ತವನ್ನು ಬೀದರ್ ಹೈನುಗಾರಿಕೆಯ ಅಭಿವೃದ್ಧಿಗೆ ನೀಡಿರುತ್ತಾರೆ. ಈ ನಿಧಿ ಸಮರ್ಪಕವಾಗಿ ಬಳಕೆಯಾಗಿ ಜಿಲ್ಲೆಯ ಹೈನುಗಾರರ ಮೊಗದಲ್ಲಿ ಮಂದಹಾಸ ಮೂಡುತ್ತಿರುವುದನ್ನು ಗಮನಿಸಿದ ಶ್ರೀ ಹೆಗ್ಗಡೆಯವರು ದ್ವಿತೀಯ ಹಂತದ ತನ್ನ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನದ ರೂ. 2.50 ಕೋಟಿ ಮೊತ್ತವನ್ನು ಕೂಡಾ ಬೀದರ್ ಜಿಲ್ಲೆಗೆ ನೀಡಿದ್ದಾರೆ.
ಹೀಗೆ ಪೂಜ್ಯರು ಎರಡು ವರ್ಷಗಳ ತನ್ನ ಸಂಸದರ ನಿಧಿ ಸುಮಾರು ರೂ. 5 ಕೋಟಿಯನ್ನು ಬೀದರ್ ಹೈನು ಅಭಿವೃದ್ಧಿಗೆ ಮೀಸಲಿರಿಸಿದ್ದಾರೆ. ಈ ಸಂಸದರ ನಿಧಿಯನ್ನು ಬಳಸಿ ಬೀದರ್‌ನಲ್ಲಿ ಒಟ್ಟು 72 ಹಾಲು ಸಂಘಗಳನ್ನು ಪುನಶ್ಚೇತನಗೊಳಿಸಲಾಗಿದೆ. 87 ಹೊಸ ಹಾಲು ಸಂಘಗಳನ್ನು ರಚಿಸಲಾಗಿದೆ. 17 ಹಾಲು ಸಂಗ್ರಹಣಾ ಕಟ್ಟಡಗಳನ್ನು ನಿರ್ಮಿಸಿದ್ದಲ್ಲದೆ 232 ಹಾಲು ಸಂಘಗಳಿಗೆ ಅತ್ಯಾಧುನಿಕ ಯಂತ್ರಗಳಾದ ಹಾಲು ಪರೀಕ್ಷೆ ಯಂತ್ರ, ಸ್ಪೈನ್ ಲೆಸ್ ಸ್ಟೀಲ್ ಕ್ಯಾನ್, ಫ್ಯಾಟೋಮ್ಯಾಟಿಕ್ ಯಂತ್ರ, ಸ್ವಯಂಚಾಲಿತ ಹಾಲು ಸಂಗ್ರಹಣಾ ಘಟಕ, ಹಾಲು ತೂಕದ ಯಂತ್ರ, ಹಾಲು ಸಂಗ್ರಹಿಸುವ ಟ್ರೇ, ಲೀಟರ್ ಸೆಟ್, ಪೀಠೋಪಕರಣಗಳು ಹೀಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗಿದೆ. ಪರಿಣಾಮವಾಗಿ ಈ ಹಿಂದೆ ಜಿಲ್ಲೆಯಲ್ಲಿ ಪ್ರತಿದಿನ ದೊರೆಯುತ್ತಿದ್ದ 18 ಸಾವಿರ ಲೀಟರ್ ಹಾಲಿನ ಪ್ರಮಾಣ ಇದೀಗ ದಿನಕ್ಕೆ 1.30 ಲಕ್ಷ ಲೀಟರ್‌ಗೆ ಏರಿಕೆಯಾಗಿದೆ.
ಪೂಜ್ಯರ ಸಂಸದರ ನಿಧಿ ಇದೀಗ ಬೀದರ್ ಕ್ಷೀರ ಕ್ರಾಂತಿಗೆ ಹೊಸ ಮುನ್ನುಡಿಯನ್ನು ಬರೆದಿದೆ ಎಂದರೆ ತಪ್ಪಾಗಲಾರದು. ಕೆಲಸಗಳಿಲ್ಲದೆ ಮನೆಯಲ್ಲೆ ಇದ್ದ ಒಂದಷ್ಟು ಮಂದಿ ಹೈನುಗಾರಿಕೆಯನ್ನು ಕೈಗೊಂಡು ಕೈತುಂಬಾ ಆದಾಯವನ್ನು ಗಳಿಸುತ್ತಿದ್ದಾರೆ. ಬರಡು ಭೂಮಿಯಲ್ಲಿ ಕ್ಷೀರ ಭಾಗ್ಯವಾಗಿದೆ. ಪೂಜ್ಯರ ಈ ಕೊಡುಗೆಯನ್ನು ಅಲ್ಲಿನ ಮಂದಿ ಕೊಂಡಾಡುತ್ತಿದ್ದಾರೆ. ಹೈನುಗಾರಿಕೆ ಮತ್ತು ಕೃಷಿ ಒಂದೇ ನಾಣ್ಯದ ಎರಡು ಮುಖಗಳು. ಹೈನುಗಾರಿಕೆ ಮೂಲಕ ಕೃಷಿ ಕ್ಷೇತ್ರವು ಅಭಿವೃದ್ಧಿಗೊಳ್ಳುವುದರಲ್ಲಿ ಸಂದೇಹವಿಲ್ಲ.
ಹೈನುಗಾರಿಕೆಯು ಒಂದು ಕುಟುಂಬಕ್ಕೆ ನಿತ್ಯ ಆದಾಯವನ್ನು ತರುವುದಲ್ಲದೇ ಸಮೃದ್ಧವಾದ ಹಾಲು ಮತ್ತು ಹಾಲಿನ ಉತ್ಪನ್ನಗಳಿಂದ ಆ ಕುಟುಂಬದ ಆರೋಗ್ಯವನ್ನು ಉತ್ತಮವಾಗಿ ಕಾಪಾಡುತ್ತದೆ. ಅಲ್ಲದೇ ಹೈನುಗಾರಿಕೆಯ ಜೈವಿಕ ಗೊಬ್ಬರಗಳು ಇಂದು ಕೃಷಿಯಲ್ಲಿ ಬೆಲೆಬಾಳುವ ವಸ್ತುವಾಗಿದೆ. ಅನೇಕ ಸಂಶೋಧನೆಗಳು ಕೂಡ ನಡೆಯುತ್ತಿದೆ. ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಲಕ್ಷಾಂತರ ಕುಟುಂಬಗಳು ಹೈನುಗಾರಿಕೆಯಿಂದಲೇ ಜೀವನ ಸಾಗಿಸಲು ಬಹಳಷ್ಟು ಕಾರ್ಯಕ್ರಮಗಳನ್ನು ಪೂಜ್ಯ ಶ್ರೀ ಹೆಗ್ಗಡೆಯವರು ಯೋಜನೆಯ ಮೂಲಕ ನಮ್ಮ ರಾಜ್ಯಕ್ಕೆ ಒದಗಿಸಿದ್ದು, ಅವುಗಳು ಒಂದು ರೀತಿಯಲ್ಲಿ ಮಾದರಿ ಕಾರ್ಯಕ್ರಮಗಳೇ ಅಗಿವೆ.
ಸಮಸ್ತ ಓದುಗರಿಗೆ ವಿಶ್ವ ಕ್ಷೀರ ದಿನದ ಶುಭಾಶಯಗಳು.

Facebook
Twitter
WhatsApp
LinkedIn
Telegram

Latest Updates