ಷಡ್‌ ಲೇಶ್ಯೆ

ಒಂದು ಮಾವಿನ ತೋಟದೊಳಗೆ ಓರ್ವ ಮುನಿ ತಪಸ್ಸು ಮಾಡುತ್ತಿರುತ್ತಾನೆ. ಒಂದು ದಿನ ಆ ತೋಟಕ್ಕೆ ಕೈಯಲ್ಲಿ ಕೊಡಲಿ ಹಿಡಿದುಕೊಂಡ ಆಗಂತುಕನೊಬ್ಬನ ಪ್ರವೇಶವಾಗುತ್ತದೆ. ಹಸಿವಿನಿಂದಾಗಿ ಆತನ ಮುಖದಲ್ಲಿ ರೋಷ, ಅಸಹನೆ ಎದ್ದು ಕಾಣುತ್ತಿರುತ್ತದೆ. ಒಂದೆ ಸಮನೆ ತನ್ನ ಕೈಯಲ್ಲಿರುವ ಕೊಡಲಿಯಿಂದ ಮಾವಿನ ಮರವೊಂದರ ಬುಡವನ್ನೇ ಕಡಿಯಲಾರಂಭಿಸುತ್ತಾನೆ. ಇದನ್ನು ಕಂಡು ಮುನಿ ಚಿಂತಿಸುತ್ತಾನೆ. ‘ಇವನ ಹಸಿವು ನೀಗಲು ಎಂಟರಿoದ ಹತ್ತು ಹಣ್ಣುಗಳು ಸಾಕಾಗುತ್ತದೆ. ಆದರೆ ಈತ ಇಡೀ ಮರವನ್ನೇ ಉರುಳಿಸುತ್ತಿದ್ದಾನೆ’. ಬಿದ್ದ ಹಣ್ಣನ್ನು ಹೆಕ್ಕಿ ತಿನ್ನುವ ಬದಲು ಮರವನ್ನೇ ಕಡಿಯುವುದರಿಂದ ಪರಿಣಾಮ ಏನಾಗುತ್ತದೆಯೆಂಬುವುದನ್ನು ಜೈನದರ್ಶನದಲ್ಲಿ ಬಣ್ಣಗಳ ರೂಪಕದೊಂದಿಗೆ ವಿವರಿಸಲಾಗಿದೆ. ಆ ವಿವರಣೆ ಈ ರೀತಿ ಇದೆ. ಮರ ಕಡಿದ ವ್ಯಕ್ತಿಯದ್ದು ಕೃಷ್ಣ ಲೇಶ್ಯೆ. ಕಪ್ಪು ಬಣ್ಣ, ಕ್ರೂರ ಮನಸ್ಸು. ತನ್ನ ಬಗ್ಗೆ ಮಾತ್ರ ಆತನ ಚಿಂತನೆ. ಅಪ್ಪಟ ಸ್ವಾರ್ಥಿ. ಇಂಥ ಸ್ವಭಾವವುಳ್ಳ ವ್ಯಕ್ತಿಗಳನ್ನು ನಾವು ನಮ್ಮ ಸುತ್ತಮುತ್ತ ಆಗಾಗ ನೋಡುತ್ತಿರುತ್ತೇವೆ. ತನ್ನ ಕೆಲಸ ಆದರೆ ಆಯಿತು ಬೇರೆಯವರ ಗೊಡವೆ ನನಗೇಕೆ! ಅಂದುಕೊoಡು ಬದುಕುವವರು. ಸರದಿ ಸಾಲಿನಲ್ಲಿ ನುಗ್ಗಿ ಮುಂದೆ ಹೋಗುವವರು, ತನ್ನ ಮನೆ ಕಸ ಗುಡಿಸಿ ಪಕ್ಕದ ಕಾಂಪೌoಡ್‌ಗೆ ಸುರಿಯುವವರು, ಹಳ್ಳಿಗಳಲ್ಲಾದರೆ ಬೇರೆಯವರ ಗದ್ದೆಗೆ ಬಿಟ್ಟ ನೀರನ್ನು ಕಟ್ಟಿ ತನ್ನ ಗದ್ದೆಗಷ್ಟೇ ಬಳಸಿಕೊಳ್ಳುವವರು. ಕೆಟ್ಟ ದಾರಿಯಲ್ಲಾದರೂ ಸರಿ ತನಗೆ ಲಾಭ ಬರಬೇಕೆಂಬುವವರು, ದೇಶವನ್ನೆ ಕೊಳ್ಳೆ ಹೊಡೆಯಲು ಅಂಜದವರು. ಪರದೇಶಕ್ಕೆ ನಮ್ಮ ದೇಶದ ರಹಸ್ಯಗಳನ್ನು ಮಾರಿ ದುಡ್ಡು ಮಾಡಿಕೊಳ್ಳುವವರು ಹೀಗೆ ಸಣ್ಣ ಪುಟ್ಟ ವಿಷಯಗಳಿಂದ ಹಿಡಿದು ಆತಂಕಕಾರಿ ಅನಿಸುವ ವಿಷಯಗಳನ್ನು ಯಾವುದೇ ಮುಲಾಜಿಲ್ಲದೆ ಮಾಡುವವರು ಇವರಾಗಿದ್ದಾರೆ.
ಅದೇ ಮಾವಿನ ತೋಟಕ್ಕೆ ಇನ್ನೊಬ್ಬ ವ್ಯಕ್ತಿ ಬರುತ್ತಾನೆ. ಆತನಿಗೂ ತುಂಬಾ ಹಸಿವಾಗಿದೆ. ಅತ್ತಿತ್ತ ನೋಡಿ ಹಣ್ಣುಗಳಿಂದ ತುಂಬಿದ ದೊಡ್ಡ ಕೊಂಬೆಯೊoದನ್ನು ಕತ್ತಿಯಿಂದ ಕಡಿದು ಹಣ್ಣುಗಳನ್ನು ತಿಂದು ಹಸಿವನ್ನು ನೀಗಿಸಿಕೊಳ್ಳುತ್ತಾನೆ. ಈತ ನೀಲ ಲೇಶ್ಯೆಯವ. ಈತನೂ ಸ್ವಾರ್ಥಿಯೇ. ತಾನು, ತನ್ನ ಮಕ್ಕಳು, ತನ್ನ ಮನೆ ಎನ್ನುವವನು. ತನ್ನ ವ್ಯಾಪಾರದಲ್ಲಿ ಸದಾ ಲಾಭದ ಲೆಕ್ಕಾಚಾರದಲ್ಲೇ ಇರುವವನು. ಸಣ್ಣಪುಟ್ಟ ಮೋಸ ವಂಚನೆಗಳನ್ನೆಲ್ಲ ಕರಗತ ಮಾಡಿಕೊಂಡವ. ಲೋಭಿ, ಸಿಕ್ಕಿದ್ದೆಲ್ಲಾ ನನಗೆ ಬೇಕು ಎನ್ನುವವ.
ತೋಟಕ್ಕೆ ಬಂದ ಮೂರನೇ ವ್ಯಕ್ತಿಯ ಕೈಯಲ್ಲಿ ಆಯುಧಗಳಿಲ್ಲ. ಕೈಯಿಂದಲೇ ಕೊಂಬೆಯೊpದನ್ನು ಬಗ್ಗಿಸಿ ಹಣ್ಣುಗಳನ್ನು ಕಿತ್ತು ತಿನ್ನುತ್ತಾನೆ. ಈತನ ಬಣ್ಣವೂ ಶುಭ ಎನ್ನುವಂತಿಲ್ಲ. ಈತ ಕಪೋತ (ಪಾರಿವಾಳ) ಲೇಶ್ಯೆಯವ. ತನ್ನಲ್ಲಿದ್ದದ್ದನ್ನು ಯಾರಿಗೂ ಕೊಡಲಾರ. ತನ್ನ ಹಸಿವು ನೀಗಿಸಿಕೊಳ್ಳುವ ಜೊತೆಗೆ ತನ್ನ ಮನೆ ಮಂದಿಗೆ ಬೇಕಾದಷ್ಟು ಹಣ್ಣುಗಳನ್ನು ಕೊಯ್ದುಕೊಂಡು ಹೋಗುತ್ತಾನೆ.
ಸ್ವಲ್ಪ ಹೊತ್ತಿನಲ್ಲಿ ತೋಟಕ್ಕೆ ಹಳದಿ ಬಣ್ಣದವನೊಬ್ಬ ಬರುತ್ತಾನೆ. ಅಂದರೆ ಪೀತ ಲೇಶ್ಯೆಯವ. ಆತ ಸರಳ ಸ್ವಭಾವದವ. ಇನ್ನೊಬ್ಬರದನ್ನು ಕಿತ್ತು ತಿನ್ನಬೇಕೆಂಬ ಇರಾದೆ ಅವನಿಗಿಲ್ಲ. ತಾನು ತಿನ್ನಬೇಕು, ಇತರರಿಗೂ ಕೊಡಬೇಕೆಂಬ ಮನಸ್ಸುಳ್ಳವನು. ಪರಿಣಾಮ ಮರಕ್ಕೆ ಹಾನಿ ಆಗದಂತೆ ಒಂದಿಷ್ಟು ಹಣ್ಣುಗಳನ್ನು ಸಂಗ್ರಹಿಸುತ್ತಾನೆ. ಇದಕ್ಕೆ ವಾಸ್ತವದ ಉದಾಹರಣೆಯೊಂದು ಇಲ್ಲಿದೆ. ಒಬ್ಬಳು ಮುದುಕಿ ಚಪಾತಿ ಮಾರಾಟ ಮಾಡುತ್ತಾ ಇದ್ದಳು. ಅಲ್ಲಿಗೆ ಬಂದ ಗಿರಾಕಿಯೊಬ್ಬ ಹೇಳುತ್ತಾನೆ; ‘ಅಲ್ಲ ಚಪಾತಿ ಜೊತೆ ಟೀಯನ್ನು ಮಾರಾಟ ಮಾಡಿದರೆ ಜಾಸ್ತಿ ಹಣ ಸಂಪಾದಿಸಬಹುದಲ್ವಾ!’ ಆಗ ಮುದುಕಿ ಪಕ್ಕದ ಟೀ ಅಂಗಡಿಯವನನ್ನು ತೋರಿಸಿ ‘ನೋಡಿ ಅಣ್ಣ, ನಾನು ಟೀ ಮಾಡಲು ಆರಂಭಿಸಿದರೆ ಆತನ ಹೊಟ್ಟೆ ಮೇಲೆ ಹೊಡೆದ ಹಾಗೆ ಆಗಲ್ವಾ? ಇಬ್ಬರಿಗೂ ಈಗ ಲಾಭ ಬರುತ್ತಿದೆ. ಅಷ್ಟು ಸಾಕಲ್ವಾ’ ಅನ್ನುತ್ತಾಳೆ. ಇದು ಪೀತ ಲೇಶ್ಯೆಯವರ ಸ್ವಭಾವ.
ಅದೇ ತೋಟಕ್ಕೆ ತನ್ನ ಹಸಿವು ನೀಗಿಸಿಕೊಳ್ಳಲು ಬಂದ ಇನ್ನೊಬ್ಬ ವ್ಯಕ್ತಿ ಅತ್ಯಂತ ಸಾಧು ಸ್ವಭಾವಿ. ಆತನ ಬಣ್ಣ ಗುಲಾಬಿ. ಹೆಚ್ಚು ಸಂಸಾರಕ್ಕೆ ಅಂಟಿಕೊಳ್ಳದವ. ತನಗೆಷ್ಟು ಬೇಕೋ ಅಷ್ಟನ್ನು ಮಾತ್ರ ಸಮಾಜದಿಂದ ಪಡೆದುಕೊಳ್ಳಬಯಸುವವ. ಸಮಾಜಕ್ಕೆ, ಇತರರಿಗೆ ಹೊರೆಯಾಗದಂತೆ ಸಾತ್ವಿಕತೆಯಿಂದ ತನ್ನ ವ್ಯವಹಾರ ನಡೆಸುವವನು. ಆತ ಮರದ ಬಳಿ ಬಂದು ತನಗೆ ಬೇಕಾದಷ್ಟು ಹಣ್ಣುಗಳನ್ನು ಮಾತ್ರ ತೆಗೆದುಕೊಳ್ಳುತ್ತಾನೆ. ಸಮಾಜದಲ್ಲಿ ವ್ಯವಹಾರದಲ್ಲಿ ಇಂಥಾ ವ್ಯಕ್ತಿಗಳು ಅತೀ ಆಸೆಗೆ ಹೋಗುವವರಲ್ಲ. ಅಲ್ಪ ಲಾಭ, ಮನೆ ಮಂದಿಯ ಹೊಟ್ಟೆ ಹೊರೆಯಲೆಷ್ಟು ಬೇಕೋ ಅಷ್ಟು ದೊರೆತರೆ ಸಾಕು ಎನ್ನುವ ನಿರುಪದ್ರವಿಗಳು.
ಕೊನೆಯದಾಗಿ ಬಂದವ ಶುಕ್ಲ ಲೇಶ್ಯೆಯವ. ಆತ ಮರದ ಅಡಿಯಲ್ಲೇ ಸಾಕಷ್ಟು ಹಣ್ಣುಗಳು ಬಿದ್ದಿರುವುದನ್ನು ಗಮನಿಸುತ್ತಾನೆ. ತನ್ನ ಹಸಿವನ್ನು ನೀಗಿಸಲು ಕೆಳಗೆ ಬಿದ್ದಿರುವ ಹಣ್ಣುಗಳನ್ನಷ್ಟೇ ಆರಿಸಿಕೊಳ್ಳುತ್ತಾನೆ. ಮರದ ಮೇಲಿರುವ ಹಣ್ಣುಗಳು ಮುಂದೆ ಯಾರಿಗಾದರೂ ಪ್ರಯೋಜನಕ್ಕೆ ಬರಬಹುದು, ಮಾತ್ರವಲ್ಲದೆ ಅದಿನ್ನೂ ಪೂರ್ತಿ ಹಣ್ಣಾಗಿಲ್ಲ, ಹಣ್ಣಾದ ಬಳಿಕ ಮರ ಇಟ್ಟುಕೊಳ್ಳುವುದಿಲ್ಲ. ಹಾಗಿರುವಾಗ ನಾನೇಕೆ ಹಣ್ಣು ಕೀಳಬೇಕು. ಮರ ಕೈ ನೀಡಿ ಕೊಟ್ಟಿದ್ದಷ್ಟೇ ನನ್ನ ಪಾಲಿನದ್ದು ಎಂಬ ಭಾವನೆ ಆತನದ್ದು.
ಋಷಿ ಮುನಿಗಳು ಭಿಕ್ಷೆಗೆ ಹೋಗುವಾಗ ಇತರರ ಮನೆಯಲ್ಲಿ ಮಾಡಿದ ಅಡುಗೆಯಲ್ಲಿ ಅಲ್ಪ ಭಾಗವನ್ನಷ್ಟೇ ಬೇಡಿ ತಂದು ತಮ್ಮ ಹೊಟ್ಟೆ ತುಂಬಿಸಿಕೊಳ್ಳುತ್ತಾರೆ. ಒಂದೇ ಮನೆಯವರಿಗೆ ಹೊರೆ ಆಗದಂತೆ ಹತ್ತು ಮನೆಗೆ ಹೋಗಿ ಅಲ್ಪ ಆಹಾರ ಪಡೆದುಕೊಂಡು ಸಂತುಷ್ಟರಾಗುತ್ತಾರೆ. ಬಿಳಿ ಬಣ್ಣದಂತೆ ಅವರ ಮನಸ್ಸು ಕೂಡಾ ಶುದ್ಧವಾಗಿರುತ್ತದೆ. ಯಾರಲ್ಲೂ ವೈಮನಸ್ಸಿರುವುದಿಲ್ಲ.
ನಮ್ಮ ಮನೆ, ಉದ್ದಿಮೆ, ವ್ಯವಹಾರ, ದೈನಂದಿನ ಬದುಕಿನ ಎಲ್ಲಾ ಆಯಾಮಗಳಲ್ಲೂ ನಮ್ಮ ವರ್ತನೆ ಹೇಗಿರುತ್ತದೆ ಎಂಬುವುದನ್ನು ಗಮನಿಸಿಕೊಂಡು ನಾವು ಕೃಷ್ಣ ಲೇಶ್ಯೆಯಿಂದ ಮೇಲೇರುತ್ತಾ ಶುಕ್ಲ ಲೇಶ್ಯೆವರೆಗೆ ತಲುಪುವ ಬಗೆ ಹೇಗೆ ಎಂಬ ಬಗ್ಗೆ ಚಿಂತಿಸಬೇಕಾಗಿದೆ. ನಮ್ಮ ಭಾವನೆಗಳೇ ಭಾವನಾಶಕ್ಕೆ ಕಾರಣವಾಗುತ್ತದೆ. ಕ್ರೂರ, ಕಪಟಿ, ಸ್ವಾರ್ಥ ಭಾವನೆ ಉಳ್ಳವರನ್ನು ಯಾರೂ ಮೆಚ್ಚಲಾರರು. ಯಾರಲ್ಲಿ ವಿನಯ, ಮೃದು ವಚನ, ಸ್ನೇಹಪರತೆಯಂತಹ ಶುಭ ಭಾವನೆಗಳಿರುತ್ತವೆಯೋ ಅವರನ್ನು ಎಲ್ಲರೂ ಮೆಚ್ಚಿಕೊಳ್ಳುತ್ತಾರೆ.
ತೋಟದಲ್ಲಿ ಕುಳಿತ ಮುನಿಗಳು ಯಾರಿಗೂ ಏನನ್ನೂ ಹೇಳುವುದಿಲ್ಲ. ಆದರೆ ಎಲ್ಲವನ್ನೂ ಗಮನಿಸುತ್ತಿರುತ್ತಾರೆ. ಹಾಗೇ ನಾವು ನಮ್ಮ ಸುತ್ತಮುತ್ತಲಿನ ಸಮಾಜದಲ್ಲಿ ನಡೆಯುವ ವಿಷಯಗಳನ್ನು ಗಮನಿಸುತ್ತಿರುತ್ತೇವೆ. ಕೆಲವೊಮ್ಮೆ ಕೆಲವರ ವರ್ತನೆಗಳನ್ನು ಕಂಡು ಬೇಸರ ಆಗುವುದೂ ಇದೆ. ಆದರೆ ಯಾರೂ, ಯಾರ ಮಾತನ್ನು ಕೇಳುವ ಮನಸ್ಥಿತಿಯಲ್ಲಿ ಇರುವುದಿಲ್ಲ. ನಮ್ಮ ಮನಃಸಾಕ್ಷಿಯನ್ನು ಎಚ್ಚರಿಸುವ, ನಮ್ಮನ್ನು ಸುಧಾರಿಸಿಕೊಳ್ಳುವ ಕೆಲಸವನ್ನಷ್ಟೇ ನಾವು ಮಾಡಬಹುದು. ಷಡ್ ಲೇಶ್ಯೆಗಳಲ್ಲಿ ನಾವು ಎಲ್ಲಿದ್ದೇವೆ.. ಎಂಬುವುದನ್ನು ಯೋಚಿಸಿ ಅದಕ್ಕೆ ತಕ್ಕಂತೆ ನಮ್ಮ ವರ್ತನೆಗಳನ್ನು ಬದಲಾಯಿಸಿಕೊಳ್ಳೋಣ.

Facebook
Twitter
WhatsApp
LinkedIn
Telegram