ಸರಳ ಪೂಜಾ ಪದ್ಧತಿಯ ಕೈಪಿಡಿ ನವಜೀವನ ಪೂಜಾ ವಿಧಾನ

ಬರಹ : ಡಾ. ಚಂದ್ರಹಾಸ್ ಚಾರ್ಮಾಡಿ

ಸರಳವಾಗಿ ದೇವರನ್ನು ಪೂಜಿಸುವುದು ಹೇಗೆ? ಜಪ – ತಪ, ಮಂತ್ರ – ಪಠಣಗಳು ದೇವರನ್ನು ಒಲಿಸಿಕೊಳ್ಳಲು ಅಗತ್ಯವೇ? ಸರಳವಾಗಿ ದೇವರನ್ನು ಪೂಜಿಸಲು ಸಾಧ್ಯ ಇದೆಯಾ? ಇಂತಹ ಹತ್ತಾರು ಪ್ರಶ್ನೆಗಳು ‘ದೇವರು’ ಇದ್ದಾರೆ ಎಂಬ ನಂಬಿಕೆಯಲ್ಲಿ ಜೀವನ ಸಾಗಿಸುವವರಲ್ಲಿ ಇದ್ದೇ ಇರುತ್ತದೆ. ಈ ಎಲ್ಲ ಪ್ರಶ್ನೆಗಳಿಗೆ ತನ್ನ ಬದುಕಿನ ಅನುಭವಗಳ ಮೂಲಕ ಉತ್ತರವನ್ನು ಕಂಡುಕೊಳ್ಳುವ ಕೆಲಸವನ್ನು ಡಾ| ಎಲ್.ಎಚ್. ಮಂಜುನಾಥ್‌ರವರು ‘ನವಜೀವನ ಪೂಜಾ ವಿಧಾನ’ ಪುಸ್ತಕದ ಮೂಲಕ ಮಾಡಿದ್ದಾರೆ. ಪ್ರತಿಯೊಬ್ಬರು ಸರಳವಾಗಿ ದೇವರನ್ನು ಪೂಜಿಸಬೇಕು, ಆ ಮೂಲಕ ನಮ್ಮ ಸಂಸ್ಕೃತಿ – ಸಂಸ್ಕಾರ ಉಳಿಯಬೇಕು, ಬೆಳೆಯಬೇಕು ಎಂಬುದು ಅವರ ಈ ಪ್ರಯತ್ನದ ಹಿಂದಿರುವ ಪ್ರಮುಖ ಉದ್ದೇಶ. ಈ ಪುಸ್ತಕದ ಹೂರಣವನ್ನು ಶ್ರೀ ಹೆಗ್ಗಡೆಯವರು ಕೂಲಂಕುಷವಾಗಿ ಗಮನಿಸಿ ಇದರ ಅಗತ್ಯತೆಯನ್ನು ಮನಗಂಡು ಆಶೀರ್ವಾದಪೂರ್ವಕ ಸಂದೇಶವನ್ನು ನೀಡಿದ್ದಾರೆ. ಸುಬ್ರಹ್ಮಣ್ಯ ಶ್ರೀ ಸಂಪುಟ ನರಸಿಂಹ ಸ್ವಾಮಿ ಮಠದ ಪೂಜ್ಯ ಶ್ರೀ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿಯವರು ಮುನ್ನುಡಿಯನ್ನು ಬರೆದಿದ್ದಾರೆ.
‘ನಿರಂತರ’ ಪತ್ರಿಕೆಯ ಪ್ರಧಾನ ಸಂಪಾದಕರಾದ ಡಾ| ಎಲ್.ಎಚ್. ಮಂಜುನಾಥ್‌ರವರು ಓರ್ವ ಹೆಸರಾಂತ ಲೇಖಕರೂ ಹೌದು. ಅವರು ಬರೆದ ‘ಮಿಶ್ರ ತಳಿಗಳ ಸಾಕಣೆಗೊಂದು ಮಾದರಿ’, ‘ಶ್ರೀಮಂತ ದೇಶದೊಳಗೊಂದಿಣುಕು’ ಹೀಗೆ ಹಲವಾರು ಪುಸ್ತಕಗಳನ್ನು ನಾನು ಓದಿದ್ದೇನೆ. ಇದಲ್ಲದೆ ನಾಡಿನ ಬೇರೆ ಬೇರೆ ಪತ್ರಿಕೆಗಳಲ್ಲಿ ಪ್ರಕಟಗೊಳ್ಳುತ್ತಿರುವ ಅವರ ಬರಹಗಳನ್ನು ಸುಮಾರು ಹದಿನೈದು ವರ್ಷಗಳಿಂದ ನಾನು ಓದುತ್ತಿದ್ದೇನೆ. ಅದ್ಭುತವಾದ ಜ್ಞಾನಭಂಡಾರ ಅವರಲ್ಲಿದೆ. ಹೇಳಬೇಕಾದ ವಿಷಯವನ್ನು ಮನಮುಟ್ಟುವಂತೆ ನೇರವಾಗಿ, ಸರಳವಾಗಿ ಬರೆಯುವ ಶೈಲಿ ಅವರಿಗೆ ಕರಗತ. ಅವರ ಬರಹಗಳಿಗೆ ಓದುಗರನ್ನು ಓದಿಸಿಕೊಂಡು ಹೋಗುವ ಶಕ್ತಿಯಿದೆ.
ಇತ್ತೀಚೆಗೆ ಕರೆ ಮಾಡಿ ನವಜೀವನ ಪೂಜಾ ವಿಧಾನದ ಬಗ್ಗೆ ಪುಸ್ತಕವೊಂದನ್ನು ಬರೆಯುತ್ತಿದ್ದೇನೆ ಎಂದಾಗ ಒಂದಷ್ಟು ಕುತೂಹಲ ನನ್ನಲ್ಲಿ ಗರಿಗೆದರಿತ್ತು. ಮರುದಿನ ಕಚೇರಿಗೆ ಬಂದವನು ಟೈಪ್ ಆದ ಲೇಖನಗಳನ್ನು ಕೈಗೆತ್ತಿಕೊಂಡು ಓದಲು ಕುಳಿತೆ. ಸುಮಾರು ಒಂದುವರೆ ತಾಸು ಕಳೆದುಹೋದದ್ದೇ ಗೊತ್ತಾಗಲಿಲ್ಲ. ಭಗವಂತನೊಳಗಿನ ನಾವು, ಮಿದುಳಿಗೆ ಹಸಿವಾಗುತ್ತಿದೆಯೇ? ಅದನ್ನು ನೀಗಿಸುವ ಬಗೆ ಹೇಗೆ?, ಹಿಂದೂ ಧಾರ್ಮಿಕ ಪೂಜಾ ಪದ್ಧತಿಯ ವೈಶಿಷ್ಟ, ಮಕ್ಕಳಿರುವ ಮನೆಯಲ್ಲಿ ದೇವರ ಪೂಜೆ, ಸಾಂಪ್ರದಾಯಿಕ ಪದ್ಧತಿಯಲ್ಲಿ ದೇವರ ಪೂಜೆ, ಸರಳ ನಿತ್ಯಪೂಜೆಗೆ ವ್ಯವಸ್ಥೆ, ದೇವರ ಸರಳ ಪೂಜಾ ವಿಧಾನ, ನಿತ್ಯಪೂಜೆಯಲ್ಲಿ ಬಳಸಬಹುದಾದ ಸ್ತೋತ್ರಗಳು, ಇಸ್ಲಾಂ ಧರ್ಮದಲ್ಲಿ ದೇವಾರಾಧನಾ ಪದ್ಧತಿಗಳು, ಕ್ರೆಸ್ತ ಧರ್ಮದಲ್ಲಿ ಪೂಜಾ ಮಹತ್ವ ಮತ್ತು ಪ್ರಾರ್ಥನೆ ಹೀಗೆ ಒಟ್ಟು 10 ಅಧ್ಯಾಯಗಳಿವೆ. ಇವತ್ತಿನ ಓದುಗರ ಅಭಿರುಚಿಗೆ ತಕ್ಕಂತೆ ಅಧ್ಯಾಯಗಳು ನಾಲ್ಕೆದು ಪುಟಗಳಿಗೆ ಸೀಮಿತಗೊಂಡಿರುವ ಈ ಪುಸ್ತಕವು ದೇವರನ್ನು ನಂಬುವವರಿಗೆ ಇಷ್ಟವಾಗುವುದರಲ್ಲಿ ಎರಡು ಮಾತಿಲ್ಲ. ಈ ಪುಸ್ತಕ ಕನ್ನಡ ಸಾಹಿತ್ಯಕ್ಕೆ ಒಂದು ಉತ್ತಮ ಕೊಡುಗೆ ಎಂದರೆ ತಪ್ಪಾಗಲಾರದು. ‘ದೇವರಿದ್ದಾನೆ’ ಎನ್ನುವವರ ಮನೆಯಲ್ಲಿ ಇರಲೇಬೇಕಾದ ಪುಸ್ತಕವಿದು. ಬಿಡುಗಡೆಯಾದ ಒಂದೇ ವಾರದಲ್ಲಿ 1,000 ಪ್ರತಿಗಳು ಮಾರಾಟವಾಗುವ ಮೂಲಕ ಪುಸ್ತಕ ಹೊಸ ದಾಖಲೆಯನ್ನೇ ಬರೆದಿದೆ. ಪುಸ್ತಕ ಇದೀಗ ಎರಡನೆ ಮುದ್ರಣದಲ್ಲಿದ್ದು ಇದರಲ್ಲಿ ಓದುಗರು ಕೇಳಿರುವ ಹಲವಾರು ಪ್ರಶ್ನೆಗಳಿಗೆ ಲೇಖಕರು ಸಂವಾದ ರೂಪದಲ್ಲಿ ಉತ್ತರಿಸಿದ್ದಾರೆ. ಹೀಗಾಗಿ ಎರಡನೆ ಆವೃತ್ತಿಯಲ್ಲಿ 11 ಅಧ್ಯಾಯಗಳಿವೆ. ಪುಸ್ತಕ ಬೇಕಾದವರು ಶ್ರೀಮತಿ ಮಂಜುಳಾ ಇವರನ್ನು 9481964111 ಸಂಪರ್ಕಿಸಬಹುದು.

Facebook
Twitter
WhatsApp
LinkedIn
Telegram

Leave a Reply

Your email address will not be published. Required fields are marked *

Latest Updates