ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು
‘ತಾಯ್ತನ’ ಎನ್ನುವುದು ಬರಿಯ ಶಬ್ದವಲ್ಲ, ಅದೊಂದು ಅನುಭವ. ಹೆಣ್ಣಿಗೆ ಮಾತ್ರ ದೇವರು ಕೊಟ್ಟ ವಿಶೇಷ ವರ. ಈ ಅನುಭವವನ್ನು ಕಳೆದುಕೊಂಡರೆ ದೇವರು ಕೊಟ್ಟ ವರವನ್ನು ಕಳಕೊಂಡಂತೆ. ‘ತಾಯ್ತನ’ ಎಂಬ ಮಾತಿದೆ ‘ತಂದೆತನ’ ಎಂಬ ಮಾತು ಎಲ್ಲೂ ಇಲ್ಲ.
ತಾಯಿ ತಮ್ಮ ಮಕ್ಕಳಿಗೆ ಎದೆಹಾಲು ಉಣಿಸುತ್ತಾಳೆ. ಹಾಲುಣಿಸುವುದೆಂದರೆ ಬರಿಯ ಹಾಲಷ್ಟೇ ಅಲ್ಲ, ಹಾಲಿನ ಜತೆಗೆ ತಾಯಿ ತನ್ನ ಪ್ರೀತಿ, ಅಭಿಮಾನ, ವಾತ್ಸಲ್ಯದ ಧಾರೆಯನ್ನು ಮಗುವಿನೆಡೆಗೆ ಹರಿಸುತ್ತಾಳೆ. ಇದು ತಾಯಿ ಮಗುವಿನ ಮಧ್ಯೆ ಪರಸ್ಪರ ಬಾಂಧವ್ಯ ಬೆಸೆಯುವ ಕಾಲ. ಇದು ಮಗುವಿನ ದೈಹಿಕ, ಮಾನಸಿಕ ಬೆಳವಣಿಗೆಗೆ ಪೂರಕವೂ ಹೌದು. ಆ ಬಾಲ್ಯದ ತಾಯಿ ಮಗುವಿನ ಒಡನಾಟವೇ ಮುಂದೆ ಜೀವಮಾನವಿಡೀ ತಾಯಿ ಮಕ್ಕಳ ಪ್ರೀತಿಗೆ ಬೀಜಾಂಕುರವಾಗುತ್ತದೆ.
ಒಂದು ಮಗುವಿನ ಜನನದೊಂದಿಗೆ ತಾಯಿಯ ಜನನವೂ ಆಗುತ್ತದೆ. ಒಂದು ಮಗು ನಿಶ್ಚಿಂತೆಯಿಂದ ಈ ಭೂಮಿಗೆ ಬರುವುದಕ್ಕೆ ಅಲ್ಲಿ ಓರ್ವ ತಾಯಿ, ಆಕೆಯ ಮಡಿಲು ಮತ್ತು ಹಾಲು ತನಗಾಗಿ ಸಿದ್ಧವಾಗಿರುತ್ತದೆ ಎಂಬ ಮಗುವಿನ ನಂಬಿಕೆಯೇ ಕಾರಣ. ಆ ನಂಬಿಕೆ ಇಂದಿಗೂ ಸತ್ಯವಾಗುತ್ತಿದೆ.
ನಮ್ಮ ಹಿಂದಿನ ಕಾಲದ ಅಜ್ಜಿಯಂದಿರು, ತಾಯಂದಿರಿಗೆ ಎದೆ ಹಾಲಿನ ಮಹತ್ವ ಗೊತ್ತಿತ್ತು ಮಾತ್ರವಲ್ಲ ಎದೆ ಹಾಲು ಹೆಚ್ಚಿಸಲು ಬೇಕಾದ ಆಹಾರ ಪದ್ಧತಿಯ ಅರಿವೂ ಇತ್ತು. 5-6 ಮಕ್ಕಳನ್ನು ಹೆತ್ತು ಪ್ರೀತಿಯಿಂದ ಹಾಲುಣಿಸುತ್ತಿದ್ದ ಅಂದಿನ ತಾಯಂದಿರಿಂದಾಗಿ ಅಂದಿನ ಮಕ್ಕಳು ಹೆಚ್ಚು ಆರೋಗ್ಯವಂತರಾಗಿ, ರೋಗನಿರೋಧಕ ಶಕ್ತಿ ಉಳ್ಳವರಾಗಿ ಬೆಳೆಯುತ್ತಿದ್ದರು. ಅಂದು ಹಾಲಿನ ಪುಡಿ, ಸೆರೆಲ್ಯಾಕ್ ಇತ್ಯಾದಿ ಅಂಗಡಿಗಳಲ್ಲಿ ಲಭ್ಯವಿರುತ್ತಿರಲಿಲ್ಲ. ಆ ಬಗ್ಗೆ ಹಳ್ಳಿಗಳಲ್ಲಿ ಮಾಹಿತಿಯೂ ಇರಲಿಲ್ಲ. ಆದ್ದರಿಂದ ಸಂಸ್ಕರಿಸಿದ ಆಹಾರವನ್ನು ಎಳೆ ಮಕ್ಕಳು ತಿನ್ನುವ ಪ್ರಮೇಯವೇ ಬರುತ್ತಿರಲಿಲ್ಲ.
ಹೆರಿಗೆ ನಂತರ ತಾಯಿ ಉಣಿಸುವ ಮೊದಲ ಮೂರು ದಿನದ ಹಾಲಿನಲ್ಲಿ ರೋಗನಿರೋಧಕ ಶಕ್ತಿ ಹೆಚ್ಚು ಇದ್ದು ಅದು ಮಗುವನ್ನು ಖಾಯಿಲೆಗಳಿಂದ ರಕ್ಷಿಸುವ ಔಷಧವೂ ಹೌದು. ಇದು ಡಬ್ಬ ಹಾಲಿನ ಉಪಯೋಗದಿಂದ ಬರುವ ಸ್ಥೂಲಕಾಯವನ್ನೂ ತಪ್ಪಿಸುತ್ತದೆ. ಮೊದಲ 6 ತಿಂಗಳು ಮಗುವಿಗೆ ಎದೆ ಹಾಲೇ ಶ್ರೇಷ್ಠ ಎನ್ನಲಾಗಿದೆ. ಯಾಕೆಂದರೆ ಯಾವುದೇ ಕಲಬೆರಕೆ, ಕ್ರಿಮಿನಾಶಕವಿಲ್ಲದ ಸಮೃದ್ಧ, ಶುದ್ಧ, ಪರಿಪೂರ್ಣ ಆಹಾರ ತಾಯಿ ಹಾಲು. ಅದಕ್ಕೆ ನಮ್ಮ ಹಿರಿಯರು ಮಗುವಿಗೆ 1 ವರ್ಷ ಆಗುವ ಹೊತ್ತಿಗೆ “ಅನ್ನಪ್ರಾಶನ” ಸಮಾರಂಭವನ್ನು ಏರ್ಪಡಿಸಿ ಮನೆಯಲ್ಲೆ ತಯಾರಿಸಿದ ಗಂಜಿ, ಹಣ್ಣಿನ ರಸ, ಬೇಳೆನೀರು, ಬೇಯಿಸಿದ ತರಕಾರಿ ಮುಂತಾದ ಪೂರಕ ಆಹಾರಗಳನ್ನು ಕೊಡುತ್ತಿದ್ದರು. ಅಂದು ಸಂತತಿ ನಿರೋಧದ ಅರಿವು ಇರಲಿಲ್ಲವಾದುದರಿಂದ ಮಗುವಿಗೆ ಹಾಲು ಕೊಡುವಷ್ಟು ದಿನ ಮತ್ತೆ ಗರ್ಭ ನಿಲ್ಲುವುದಿಲ್ಲವೆಂಬ ನಂಬಿಕೆಯೂ ಇತ್ತು.
ಇಂದು ಡಬ್ಬಿಯಲ್ಲಿ ಸಿಗುವ ಮಕ್ಕಳ ಆಹಾರದ ಬಗ್ಗೆ ಟಿ.ವಿ.ಯಲ್ಲಿ ಬರುವ ಜಾಹೀರಾತುಗಳು ಹೆಚ್ಚು ಆಕರ್ಷಕವಾಗಿದ್ದು ಈ ಆಹಾರವನ್ನು ಕೊಟ್ಟಲ್ಲಿ ತನ್ನ ಮಗ ಹೆಚ್ಚು ವೇಗವಾಗಿ, ಸುಂದರವಾಗಿ ಬೆಳೆಯುವುದು ಸಾಧ್ಯ ಎಂಬ ಭ್ರಮೆ ತಾಯಂದಿರದ್ದಾಗಿದೆ. ಮಾತ್ರವಲ್ಲ್ಲ ಇಂದಿನ ವೇಗದ ಯುಗದಲ್ಲಿ ಕೆಲಸಕ್ಕೆ ಹೋಗುವ ತಾಯಂದಿರಿಗೆ ಎದೆ ಹಾಲು ಕೊಡುವ ಅಥವಾ ಮನೆಯಲ್ಲೇ ಪೂರಕ ಆಹಾರ ತಯಾರಿಸುವಷ್ಟು ವ್ಯವಧಾನವೂ ಇರುವುದಿಲ್ಲ. ನಾನಾ ಕೆಲಸ ಕಾರ್ಯಗಳಿಂದಾಗಿ ಹೊರ ಜಗತ್ತಿಗೆ ತೆರೆದುಕೊಳ್ಳಬೇಕಾದ ಮಹಿಳೆಯರಿಗೆ ತಮ್ಮ ಆಕರ್ಷಕ ಮೈಮಾಟದ ಬಗ್ಗೆಯೂ ಹೆಚ್ಚಿನ ಕಾಳಜಿ ಇರುವುದೂ ಸಹಜ. ಆದರೆ ಹಾಲುಣಿಸುವುದರಿಂದ ತಾಯಿಯ ಬೊಜ್ಜು ಕರಗುತ್ತದೆ, ಕ್ಯಾನ್ಸರ್ ಇತ್ಯಾದಿ ಕಾಯಿಲೆಗಳಿಂದ ಶರೀರದ ರಕ್ಷಣೆ ಆಗುತ್ತದೆ.
ಮಗು ಅರಮನೆಯಲ್ಲೇ ಇರಲಿ, ಗುಡಿಸಲಲ್ಲೇ ಇರಲಿ ತಾಯಿಹಾಲು ದೊರಕಿದ ಮಗು ಹೆಚ್ಚು ಅದೃಷ್ಟವಂತ ಮಗು ಎನ್ನಲು ಅಡ್ಡಿಯಿಲ್ಲ. ಹೆಣ್ಣಿನ ದೇಹದ ರಕ್ತ, ಮಗು ಹುಟ್ಟಿದ ತಕ್ಷಣ ಹಾಲಾಗುವುದು ಒಂದು ಪವಾಡ. ಇದು ತಾಯಿಯ ಪ್ರೀತಿಗೆ ಮಾತ್ರ ಸಾಧ್ಯವಾಗುವ ಪವಾಡ. ಅದಕ್ಕೆ ‘ಉಪ್ಪಿಗಿಂತ ರುಚಿಯಿಲ್ಲ, ತಾಯಿಗಿಂತ ಬಂಧುವಿಲ್ಲ’ ಎಂಬ ಮಾತು ನಿಜವಾಗಿಯೂ ಹೆಚ್ಚು ಮೌಲ್ಯವುಳ್ಳದ್ದು.
ಆಗಸ್ಟ್ ತಿಂಗಳ ಮೊದಲ ವಾರವನ್ನು ವಿಶ್ವ ಸ್ತನ್ಯಪಾನ ದಿನವನ್ನಾಗಿ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಎಲ್ಲ ತಾಯಂದಿರಿಗೂ ವಿಶ್ವ ಸ್ತನ್ಯಪಾನ ದಿನದ ಶುಭಾಶಯಗಳು.