ಡಾ| ಚಂದ್ರಹಾಸ್ ಚಾರ್ಮಾಡಿ
ಮೂರು ಗಂಡು, ನಾಲ್ಕು ಹೆಣ್ಮಕ್ಕಳಲ್ಲಿ ಕಮಲ ಎಲ್ಲರಿಗೆ ಅಕ್ಕ. ಏಳು ಮಂದಿಯಲ್ಲಿ ತಂಗಿಯೊಬ್ಬಳು ಹದಿನೆಂಟನೆ ವಯಸ್ಸಿನಲ್ಲೆ ಮೂರ್ಛೆರೋಗದಿಂದಾಗಿ ಇಹಲೋಕ ತ್ಯಜಿಸಿದ್ದಾಳೆ. ತಮ್ಮನೊಬ್ಬ ಮಾನಸಿಕ ಅಸ್ವಸ್ಥನಾಗಿ ಊರು ಬಿಟ್ಟು ಹೋದವನ ಪತ್ತೆಯೇ ಇಲ್ಲ. ಕಮಲಳಿಗೆ ವಯಸ್ಸು 63. ತಂಗಿಯರಾದ ಬೇಬಿಗೆ 62, ಯಶೋದoಗೆ 43. ಒಡಹುಟ್ಟಿದವರು ಸಾಮಾನ್ಯರಂತೆ ಇರುತ್ತಿದ್ದರೆ ಕಮಲ ಇಷ್ಟೊತ್ತಿಗೆ ಮದುವೆಯಾಗಿ ಗಂಡನ ಮನೆಯಲ್ಲಿ ಇರುತ್ತಿದ್ದಳು. ಆದರೆ ಇಲ್ಲಿ ಭಗವಂತನ ಆಟವೇ ಬೇರೆಯಾಗಿದೆ. ಕಮಲ ಸಂಸಾರದ ನೊಗವನ್ನು ಹೊತ್ತು ತನ್ನ ಸಹೋದರ – ಸಹೋದರಿಯರ ಕಷ್ಟಗಳಲ್ಲಿ ಭಾಗಿಯಾಗುತ್ತಿದ್ದಾಳೆ. ಒಡ ಹುಟ್ಟಿದವರಿಗಾಗಿ ತನ್ನ ಬದುಕನ್ನೇ ಸಮರ್ಪಿಸಿಕೊಂಡ ಕಮಲರ ಕಣ್ಣೀರ ಕಥೆಗೆ ದಕ್ಷಿಣ ಕನ್ನಡ ಜಿಲ್ಲೆಯ ಪರ್ಲಡ್ಕ ಬೀರಮಲೆಯ ವಿಶ್ವಕರ್ಮ ನಗರ ಸಾಕ್ಷಿಯಾಗಿದೆ.
ಕಮಲರಲ್ಲಿ ಮಾತನಾಡಬೇಕೆಂದು ಹೊರಟ ‘ನಿರಂತರ’ ತಂಡದೊoದಿಗೆ ಜ್ಞಾನವಿಕಾಸ ಉಡುಪಿ ಪ್ರಾದೇಶಿಕ ಯೋಜನಾಧಿಕಾರಿ ಅಮೃತ, ಮೇಲ್ವಿಚಾರಕಿ ಶೃತಿ, ಸೇವಾಪ್ರತಿನಿಧಿ ಪುಷ್ಪಲತಾ, ಪರ್ಲಡ್ಕ ಒಕ್ಕೂಟದ ಅಧ್ಯಕ್ಷರಾದ ಪರ್ವಿನ್ ಲತಾ ಜೊತೆಯಾದರು.
ಕಮಲರಿಗೆ ಇರುವುದು ಹತ್ತು ಸೆನ್ಸ್ ಜಮೀನು. ಅದರಲ್ಲೊಂದು ಸಿಮೆಂಟ್ ಇಟ್ಟಿಗೆ ಮತ್ತು ಶೀಟ್‌ನಿಂದ ನಿರ್ಮಿಸಿದ ಪುಟ್ಟ ಮನೆ. ಮನೆಯ ಅಂಗಳ ತಲುಪಿದರೂ ಅಲ್ಲಿ ನಿಶಬ್ದ. ಮನೆಯೊಳಗೆ ಕಾಲಿಡುತ್ತಿದ್ದಂತೆ ಕಮಲರ ತಂಗಿ ಬೇಬಿಗೆ ಆ ದಿನ ಮೂರ್ಛೆ ರೋಗ ವಿಪರೀತವಾಗಿ ಜಗಲಿಯಲ್ಲೆ ಮಲಗಿದ್ದರು. ಯಾರು ಎಷ್ಟೇ ಕರೆದರೂ ಅವoರಿಂದ ಉತ್ತರ ಬಾರದು. ಕಮಲರ ತಂಗಿ ಯಶೋದ ನಮ್ಮನ್ನು ನೋಡಿ ಮಾತಿಗೆ ಸಿಗದೆ ಕಣ್ಮರೆಯಾದರು. ಕಮಲ ತನ್ನ ನೋವುಗಳನ್ನು ಮರೆಮಾಚುತ್ತಾ ನಮ್ಮೊಂದಿಗೆ ಮಾತುಕತೆ ಆರಂಭಿಸಿದರು.
“ತoಗಿ ಬೇಬಿ ಚಿಕ್ಕಂದಿನಿoದಲೇ ಮೂರ್ಛೆ ರೋಗದಿಂದ ಬಳಲುತ್ತಿದ್ದಾಳೆ. ಇಂದಿಗೂ ಬೇಬಿಗೆ ನಾನೇ ಕೈತುತ್ತನ್ನು ಕೊಡಬೇಕು. ನಾನು ಊಟ ಕೊಡದಿದ್ದರೆ ಅವಳು ಉಪವಾಸ ಮಲಗಬೇಕಾಗುತ್ತದೆ. ಯಶೋದಳಂತೂ ಯಾರೊಂದಿಗೂ ಬೆರೆಯುವುದಿಲ್ಲ. ಯಾರ ಮಾತನ್ನೂ ಕೇಳುವುದಿಲ್ಲ. ಕಳೆದ ಐದು ವರ್ಷದಿಂದ ಅವಳು ಕೂಡಾ ಎಲ್ಲರಂತಿಲ್ಲ. ಇಬ್ಬರು ತಮ್ಮಂದಿರಿಗೂ ಮದುವೆಯಾಗಿದೆ. ಒಬ್ಬ ಮೈಸೂರಿನಲ್ಲಿ ಆಶ್ರಮವೊಂದರಲ್ಲಿ ಸ್ವಾಮೀಜಿಯೋರ್ವರ ಜೊತೆ ಇದ್ದಾನೆ. ಅವನು ಮನೆಗೆ ಬಾರದೆ ಎರಡು ವರ್ಷಗಳೆ ಕಳೆದಿವೆ. ಇನ್ನೊಬ್ಬ ಅಡುಗೆ ಕೆಲಸಕ್ಕೆಂದು ಮನೆ ಬಿಟ್ಟವನು ಮನೆ ಕಡೆ ಬರುವುದೇ ಅಪರೂಪ. ಎಂದಾದರೊಮ್ಮೆ ಮನೆಗೆ ಬಂದರೆ ವಿಚಿತ್ರವಾಗಿ ವರ್ತಿಸುತ್ತಾನೆ. ತಮ್ಮಂದಿರಿಗೆ ಮಕ್ಕಳಿಲ್ಲ. ಅವರ ಪತ್ನಿಯರು ನನ್ನ ಜೊತೆ ಇದೆ ಮನೆಯಲ್ಲಿದ್ದಾರೆ. ಅವರು ಪಕ್ಕದ ಗೇರು ಬೀಜದ ಫ್ಯಾಕ್ಟರಿಗೆ ಕೆಲಸಕ್ಕೆ ಹೋಗಿ ದುಡಿದು ತಂದುದರಲ್ಲಿ ನಮ್ಮ ಹೊಟ್ಟೆ ತುಂಬುತ್ತಿದೆ. ನಾನು ಸಾಧ್ಯವಾದಷ್ಟು ಬೀಡಿ ಕಟ್ಟುತ್ತೇನೆ. ಅಂತೂ ದಿನಗಳು ಕಳೆಯುತ್ತಿವೆ. ರೋಗ – ರುಜಿನಗಳು ಬಂದರೆ ಕಷ್ಟವೋ ಕಷ್ಟ. ಇಂತಹ ಪರಿಸ್ಥಿತಿಯಲ್ಲಿ ನಾನು ಮದುವೆಯಾದರೆ ಒಡಹುಟ್ಟಿದವರಿಗೆ ಇನ್ಯಾರು ಗತಿ! ತಂಗಿಯರ ನಿತ್ಯ ಚಾಕರಿ ಮಾಡುವರ‍್ಯಾರು?” ಎಂದಾಗ ಕಮಲರವರ ಕಣ್ಣುಗಳು ಒದ್ದೆಯಾದವು.
ವಾತ್ಸಲ್ಯದ ನೆರವು
ಇಲ್ಲಿನ ಒಕ್ಕೂಟದ ಅಧ್ಯಕ್ಷರು ಮತ್ತು ಯೋಜನೆಯ ಕಾರ್ಯಕರ್ತರ ಪ್ರಯತ್ನವಾಗಿ ಯಶೋದಳನ್ನು ಗ್ರಾಮಾಭಿವೃದ್ಧಿ ಯೋಜನೆಯ ‘ವಿಶ್ವಜ್ಯೋತಿ’ ಸ್ವಸಹಾಯ ಸಂಘಕ್ಕೆ ಸೇರಿಸಿದ್ದಾರೆ. ವಾತ್ಸಲ್ಯ ಕಾರ್ಯಕ್ರಮದಡಿ ಬೇಬಿಯವರಿಗೆ ಧರ್ಮಸ್ಥಳದಿಂದ ಮಾಸಿಕ
ರೂ. 1,000 ಮಾಸಾಶನವನ್ನು ನೀಡುತ್ತಿದ್ದಾರೆ. ವಾತ್ಸಲ್ಯ ಕಿಟ್ ಕೂಡಾ ನೀಡಿದ್ದಾರೆ. ಬೀಳಲು ಸಿದ್ಧಗೊಂಡ ಮನೆಯನ್ನು ದುರಸ್ತಿ ಕೂಡಾ ಮಾಡಿದ್ದಾರೆ. ಧರ್ಮಸ್ಥಳದ ಈ ನೆರವನ್ನು ನಾನೆಂದಿಗೂ ಮರೆಯಲು ಸಾಧ್ಯವೇ ಇಲ್ಲ ಎನ್ನುತ್ತಾರೆ ಕಮಲ. ಬೇಬಿಗೆ ಆಧಾರ್ ಕಾರ್ಡ್ ಮಾಡಿಸಲು ಸಾಧ್ಯವಾಗದ ಕಾರಣ ಸರಕಾರದ ಮಾಸಾಶನ ಸೌಲಭ್ಯವು ದೊರೆಯುತ್ತಿಲ್ಲ. ಇವರನ್ನು ಸರಿಪಡಿಸುವ ನಿಟ್ಟಿನಲ್ಲಿ ಕಮಲ ಒಂದಷ್ಟು ಆಸ್ಪತ್ರೆಗಳ ಕದ ತಟ್ಟಿದ್ದಾರೆ. ಇವರ ದೊಡ್ಡಪ್ಪನ ಮಗನು ತನ್ನ ಕೈಲಾದ ಸಹಾಯ ಮಾಡಿದ್ದಾರೆ. ಆದರೆ ಅವರ ರೋಗವನ್ನಂತೂ ಗುಣಪಡಿಸಲು ಸಾಧ್ಯವಾಗಲಿಲ್ಲ. ತನ್ನ ಸಹೋದರ – ಸಹೋದರಿಯರಿಗಾಗಿ ತನ್ನ ಸರ್ವಸ್ವವನ್ನೇ ತ್ಯಾಗ ಮಾಡಿದ ಕಮಲರ ಮಾನವೀಯತೆ, ಆದರ್ಶವನ್ನು ಮೆಚ್ಚಲೇಬೇಕು.
ಇವರ ಕಷ್ಟಗಳಿಗೆ ನೆರವು ನೀಡಬೇಕೆಂದೆನಿಸಿದವರಿಗೆ ಅವರ ಬ್ಯಾಂಕ್ ಖಾತೆ ಸಂಖ್ಯೆ : 5267108000771, IFSC : CNRB0000615.