ಮಕ್ಕಳಿಗೆಷ್ಟು ಸಮಯ ಕೊಡುತ್ತೀರಾ?

ಅಶ್ವಿನಿ ಹೆಚ್. ಮನಃಶಾಸ್ತ್ರಜ್ಞರು

ಲಲಿತಮ್ಮ ವಯೋಸಹಜ ಖಾಯಿಲೆಗೆ ತುತ್ತಾಗಿ ಆಸ್ಪತ್ರೆಗೆ ಸೇರಿದ್ದರು. ಮನೆಯಲ್ಲಿ ಇದ್ದಷ್ಟು ದಿನ ಮೊಮ್ಮಗನ ತುಂಟಾಟ ನೋಡುವುದು ಅವರ ದಿನಚರಿ. ಆಸ್ಪತ್ರೆ ಸೇರಿದಾಗಿನಿಂದ ಮೊಮ್ಮಗನ ಒಡನಾಟವಿಲ್ಲದೆ ಅವನದ್ದೇ ಚಿಂತೆಯಲ್ಲಿ ಅವರ ಆರೋಗ್ಯ ಸಮಸ್ಯೆಯು ಬಿಗಡಾಯಿಸಿತು. ಒಂದು ದಿನ ಮೊಮ್ಮಗ ಅಜ್ಜಿಯನ್ನು ನೋಡಲು ಬಂದ. ಮಗು ಬಂದ ಮಾರನೇ ದಿನ ಲಲಿತಮ್ಮ ಚೇತರಿಸಿಕೊಂಡರು. ಮಾತ್ರವಲ್ಲದೇ ಇದಾದ ಎರಡನೇ ದಿನಕ್ಕೆ ಆಸ್ಪತ್ರೆಯಿಂದ ಮನೆಗೆ ವಾಪಸಾದರು. ಇದು ಮಕ್ಕಳೊಂದಿಗಿನ ಒಡನಾಟ ಹಿರಿಯರ ಮೇಲೆ ಬೀರುವ ಪ್ರಭಾವವೂ ಹೌದು.
ಮಕ್ಕಳು – ಪೋಷಕರು – ವೃದ್ಧರು ಎಂಬ ಮೂರು ತಲೆಮಾರುಗಳ ಸಂಬoಧದಲ್ಲಿ ಕೆಲವೊಂದು ವಿಚಾರಗಳನ್ನು ನಾವು ಪರಿಗಣಿಸಲೇಬೇಕು. ಅದರಲ್ಲಿ ಮುಖ್ಯವಾದದ್ದು ಮಕ್ಕಳಿಗೆ ಸರಿಯಾದ ರೀತಿಯ ಪೋಷಕತ್ವ ಹಾಗೂ ಮಕ್ಕಳೊಂದಿಗೆ ಪೋಷಕರು ಕಳೆಯುವ ಗುಣಮಟ್ಟದ ಸಮಯ. ಈ ಎರಡು ವಿಚಾರವನ್ನು ಕ್ರಮವಾಗಿ ಮಾಡಿದ್ದಲ್ಲಿ ನಿಮ್ಮ ಮಕ್ಕಳ ಸಾಮಾಜಿಕ ಹಾಗೂ ಭಾವನಾತ್ಮಕ ಬೆಳವಣಿಗೆಯನ್ನು ಉತ್ತೇಜಿಸಿದಂತಾಗುತ್ತದೆ.
ಇoದಿನ ಕಾಲದಲ್ಲಿ ಪೋಷಕರಿಬ್ಬರೂ ಉದ್ಯೋಗಕ್ಕೆ ಹೋಗುತ್ತಾರೆ. ಮಗುವಿನ ಜೊತೆ ಸಮಯ ಕಳೆಯಲು ಸಾಧ್ಯವಾಗುವುದಿಲ್ಲ ಎಂಬ ಕಾರಣವನ್ನು ಕೊಡುತ್ತಿರುತ್ತಾರೆ. ನಿಮ್ಮ ಮಕ್ಕಳೊಂದಿಗೆ ಕಳೆಯುವ ಕೇವಲ 10 ನಿಮಿಷಗಳ ಗುಣಮಟ್ಟದ ಸಮಯವು ಅವರ ಜೀವನದ 10 ಗಂಟೆಗಳಿಗಿoತ ಹೆಚ್ಚಿನ ಅರ್ಥವನ್ನು ನೀಡಬಲ್ಲದು.
ಉದಾಹರಣೆಗೆ ಕಚೇರಿಯ ಕೆಲಸ ಮುಗಿಸಿ ದಣಿದು ಬಂದ ಸಂದರ್ಭ ನಿಮ್ಮ ನಾಲ್ಕು ವರ್ಷದ ಮಗು ಉತ್ಸಾಹದಿಂದ ಓಡಿಬಂದು, ‘ಅಮ್ಮ ನಾನು ಕಟ್ಟಿರುವ ಕೋಟೆಯನ್ನು ನೋಡು’ ಎಂದು ನಿಮ್ಮನ್ನು ಮನೆಯೊಳಕ್ಕೆ ಕರೆದುಕೊಂಡು ಹೋಗುತ್ತದೆ. ದಿಂಬುಗಳು, ಹೊದಿಕೆಗಳಿಂದ, ಕುರ್ಚಿಗಳ ಸಹಾಯದಿಂದ ಮಗು ಕೋಟೆ ನಿರ್ಮಿಸಿರುತ್ತದೆ. ಮಗುವಿನ ಈ ಪ್ರಯತ್ನದಲ್ಲಿ ಮನೆಯೊಳಗಿನ ವಸ್ತುಗಳು ಅಸ್ತವ್ಯಸ್ತಗೊಂಡಿರುತ್ತದೆ. ಅಂತಹ ಸಂದರ್ಭದಲ್ಲಿ ಚೆಲ್ಲಾಪಿಲ್ಲಿಯಾಗಿರುವ ವಸ್ತುಗಳನ್ನು ನೋಡಿ ನೀವು ಯಾವ ರೀತಿ ವರ್ತಿಸುತ್ತೀರಾ?
* ಅಸಮಾಧಾನದಿಂದ ಕೂಡಲೇ ಸ್ವಚ್ಛಗೊಳಿಸುವಂತೆ ಮಗುವಿನ ಮೇಲೆ ರೇಗುತ್ತೀರಾ?

* ಮತ್ತೆ ನಿನ್ನ ಕೋಟೆಯನ್ನು ನೋಡುತ್ತೇನೆ ಈಗ ಬೇರೆ ಮುಖ್ಯವಾದ ಕೆಲಸ ಮಾಡುವುದಿದೆ ಎಂದು ಮಗುವಿಂದ ದೂರ ಹೋಗುತ್ತೀರಾ?
* ಕೆಲಸದಿಂದ ಬಂದು ತುಂಬಾ ದಣಿದಿದ್ದೀನಿ. ಮತ್ತೆ ನೋಡುವುದಾಗಿ ಹೇಳುತ್ತೀರಾ?

* ನೀವು ಎಲ್ಲಾ ಕೆಲಸ ಬಿಟ್ಟು ಮಗು ಮಾಡಿದ ಕೋಟೆ ನೋಡಿ ಮಗುವಿನ ಜೊತೆ ಕಾಲ ಕಳೆಯುತ್ತೀರಾ?
ಈ ನಾಲ್ಕು ಆಯ್ಕೆಗಳಲ್ಲಿ ಕೊನೆಯ ಆಯ್ಕೆ ನಿಮ್ಮದಾದಲ್ಲಿ ಮಗುವಿನ ಜೊತೆಗೆ ಪರಿಪೂರ್ಣವಾದ ಸಂಪರ್ಕ ಹೊಂದುವಲ್ಲಿ ಸಫಲರಾಗುತ್ತೀರಿ. ಈ ೧೦ ನಿಮಿಷದ ಆಟ ಮಗುವಿನ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಮಕ್ಕಳಿಗೆ ನಿಮ್ಮ ಮೇಲೆ ನಂಬಿಕೆ, ಬಾಂಧವ್ಯ ಬೆಳೆಯುತ್ತದೆ. ಇದು ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಮೊದಲ ಅಡಿಪಾಯವಾಗುತ್ತದೆ.
ಮಗುವಿಗೆ ಪೋಷಕರ ಲಭ್ಯತೆ
ಪೋಷಕರಾಗಿ ಸದಾ ನಾವು ಮಕ್ಕಳಿಗೆ ಲಭ್ಯವಿರುತ್ತೇವೆ. ಮಗುವಿನ ಕೆಲಸಗಳನ್ನು ಮಾಡಿಕೊಡುವಲ್ಲಿ, ಅವರ ಅಗತ್ಯತೆಗಳನ್ನು ಪೂರೈಸುವುದು, ಶಾಲೆಗೆ ಸಿದ್ಧಪಡಿಸುವುದು, ಆಹಾರ ನೀಡುವುದು ಮತ್ತು ಇನ್ನಷ್ಟು. ಆದರೆ ನಿಜವಾಗಿ ಮಕ್ಕಳೊಂದಿಗೆ ಭಾವನಾತ್ಮಕ ಸಂಬoಧ ಹೊಂದಿದ್ದೇವೆಯೇ? ಹೊಸ ಭಾವನೆಗಳು ಮಗುವಿನಲ್ಲಿ ಮೂಡುವಂತೆ ಮಾಡಿದ್ದೇವೆಯೇ? ಪರಸ್ಪರ ಅನುಭವ ಹಂಚಿಕೊoಡಿದ್ದೇವೆಯೇ? ಎಂಬುದು ಮುಖ್ಯವಾಗುತ್ತದೆ.
ಮಹತ್ವದ ಕ್ಷಣಗಳು
ಸಮಯದ ಅಭಾವದ ಬಗ್ಗೆ ಕಾರಣ ಕೊಡುತ್ತಾ ಹೆತ್ತವರು ಮಗುವಿನೊಂದಿಗೆ ಕಳೆಯಬಹುದಾದ ಅನಿರೀಕ್ಷಿತ ಕ್ಷಣಗಳನ್ನು ಮರೆಯಬಾರದು.
ಉದಾಹರಣೆಗೆ, * ವಾಹನ ಪ್ರಯಾಣದಲ್ಲಿ ಮಗುವಿನೊಂದಿಗೆ ಉತ್ತಮ ಸಂಭಾಷಣೆ ಮಾಡುವುದು.

  • ನೆಚ್ಚಿನ ಹಾಡು ಬಂದಾಗ ಅಡುಗೆ ಮನೆಯಂತಹ ಜಾಗದಲ್ಲೂ ಮಗುವಿನೊಂದಿಗೆ ಹಾಡುವುದು, ಕುಣಿಯುವುದು.
  • ಮಳೆ ಬಂದಾಗ ಪೋಷಕರು ಮಕ್ಕಳಂತೆ ಮಗು ಜೊತೆ ನೀರಿನಲ್ಲಿ, ಕೆಸರಿನಲ್ಲಿ ಆಡುವುದು.
  • ಮಕ್ಕಳು ನೀವು ಹೇಳಿದ್ದನ್ನು ಕೇಳುವ ಮನಸ್ಸು ಹೊಂದಿದಾಗ ಯಾವುದು ಸರಿ? ಯಾವುದು ತಪ್ಪು? ಯಾವುದು ಮಾಡಬಾರದು ಎಂಬ ವಿಚಾರವನ್ನು ಮಕ್ಕಳಿಗೆ ಮನವರಿಕೆ ಮಾಡುವುದು.
    ಇಂತಹ ಚಟುವಟಿಕೆಗಳು ಮಗುವಿನ ಮಾನಸಿಕ ಬೆಳವಣಿಗೆಗೆ ಸಹಾಯಕವಾಗುತ್ತದೆ. ಮಾತ್ರವಲ್ಲ ಪೋಷಕರ ಜೊತೆ ಕಳೆದ ಅಮೂಲ್ಯ ಕ್ಷಣಗಳನ್ನು ಚೆನ್ನಾಗಿ ನೆನಪಿಟ್ಟುಕೊಳ್ಳುತ್ತಾ ಒಂದು ಭಾವನಾತ್ಮಕ ಸಂಬoಧ ಬೆಸೆದುಕೊಳ್ಳುತ್ತದೆ.
    ಹೆಚ್ಚು ಜಾಗರೂಕರಾಗಬೇಕಾದ ಸಂದರ್ಭ
    ಪೋಷಕರು ಕೆಲಸ ಕಾರ್ಯಗಳಲ್ಲಿ ಹೆಚ್ಚು ತೊಡಗಿಕೊಂಡಾಗ ಮಕ್ಕಳ ಜೊತೆಗೆ ದೈಹಿಕವಾಗಿ ಉಪಸ್ಥಿತರಾಗಿದ್ದರೂ ಮಾನಸಿಕವಾಗಿ ಕೆಲಸದ ಒತ್ತಡಗಳ ಬಗ್ಗೆ ಯೋಚಿಸುತ್ತಿರುತ್ತಾರೆ.
    ಮಕ್ಕಳ ಚಟುವಟಿಕೆ ಬಗ್ಗೆ ಸರಿಯಾದ ಮಾಹಿತಿ ಇಲ್ಲದಂತಾಗುತ್ತದೆ. ಇದು ಮಕ್ಕಳು ಮತ್ತು ಹೆತ್ತವರ ನಡುವಿನ ಅಮೂಲ್ಯ ಕ್ಷಣಗಳೇ ಕಳೆದು ಹೋಗುವಂತೆ ಮಾಡುತ್ತದೆ.
    ಉದಾಹರಣೆಗೆ ಮಗು ಮಾತನಾಡುತ್ತಿದ್ದರೂ ಪೋಷಕರು ಅವರ ಕೆಲಸದಲ್ಲಿ ನಿರತರಾಗುವುದು, ಮೊಬೈಲ್ ಪರದೆಗಳ ಮೇಲೆ ಕಳೆದು ಹೋಗುವಂತದ್ದು, ಕಂಪ್ಯೂಟರ್‌ನಲ್ಲಿ ಕೆಲಸ ಮಾಡುತ್ತಿದ್ದರೆ ಮಕ್ಕಳನ್ನು ಅಲಕ್ಷಿಸಿದಂತಾಗುತ್ತದೆ. ಇದು ಮಕ್ಕಳನ್ನು ಒಂಟಿತನ ಮತ್ತು ವರ್ತನೆಯ ಸಮಸ್ಯೆ ಕಡೆಗೆ ದೂಡುತ್ತದೆ. ಇಂತಹ ಸಂದರ್ಭದಲ್ಲಿ ಮಕ್ಕಳ ಜೊತೆ ವ್ಯವಹರಿಸುವಾಗ ಬಹಳ ಜಾಗರೂಕರಾಗಬೇಕಾಗುತ್ತದೆ.
    ಪೋಷಕರ ಗುಣಮಟ್ಟದ ಸಮಯದಿಂದ ಮಕ್ಕಳ ಮೇಲಾಗುವ ಪರಿಣಾಮಗಳು
    ಭಾವನಾತ್ಮಕವಾಗಿ : ಮಕ್ಕಳು ಮತ್ತು ಪೋಷಕರ ಸಂಬoಧದ ತಳಹದಿಯೇ ‘ಸಂಪರ್ಕ’. ಹೆತ್ತವರು ದಿನನಿತ್ಯ ಮಕ್ಕಳ ಜೊತೆ ಸ್ವಲ್ಪ ಸಮಯ ಕಳೆದರೆ ಮಾತ್ರವೇ ಈ ಸಂಪರ್ಕ ಸಾಧಿಸಲು ಸಾಧ್ಯ. ಅದರಿಂದ ಮಕ್ಕಳ ಮನಸ್ಸಿನಲ್ಲಿ ಪೋಷಕರು ನಮ್ಮನ್ನು ಪ್ರೀತಿಸುತ್ತಾರೆ ಹಾಗೂ ಅವರ ಗೌರವಕ್ಕೆ ನಾವು ಪಾತ್ರರು ಎಂಬ ಭಾವನೆ ಮೂಡುತ್ತದೆ. ಇದು ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಿಸಲು ಸಹಕಾರಿಯಾಗುತ್ತದೆ. ಭಾವನಾತ್ಮಕವಾಗಿ ಮಕ್ಕಳನ್ನು ಸದೃಢಗೊಳಿಸುತ್ತದೆ.
    ವರ್ತನೆಯ ಮೇಲೆ : ಮಕ್ಕಳ ಬಗ್ಗೆ ಪೋಷಕರು ಸಕಾರಾತ್ಮಕವಾಗಿ ಗಮನ ನೀಡುವುದರಿಂದ ಅವರ ಅಗತ್ಯಗಳನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಬಹುದು. ಇದರಿಂದ ಮಗುವಿನ ಮನಸ್ಥಿತಿ ಮತ್ತು ವರ್ತನೆಯಲ್ಲಾದ ಸಣ್ಣ ಬದಲಾವಣೆಯನ್ನು ಶೀಘ್ರವಾಗಿ ಪತ್ತೆ ಹಚ್ಚಬಹುದು. ಮಾತ್ರವಲ್ಲದೇ ಅವರಲ್ಲಿ ಕೋಪೋದ್ರೇಕ ಮತ್ತು ಭಾವನಾತ್ಮಕ ಕುಸಿತಗಳನ್ನು ತಡೆಗಟ್ಟಲು ಮತ್ತು ನಿಭಾಯಿಸಲು ಪೋಷಕರಿಗೆ ನೆರವಾಗುತ್ತದೆ.
    ಶಾರೀರಿಕವಾಗಿ : ಪೋಷಕರು ಸಂವೇದನಾಶೀಲರಾಗಿರುವಾಗ ಹಾಗೂ ಮಗುವಿನ ನಡುವೆ ಉತ್ತಮ ಒಡನಾಟವಿದ್ದಾಗ ಮಾತ್ರ ಮಕ್ಕಳಿಗೆ ತಾವು ಸುರಕ್ಷಿತ ಎಂಬ ಭಾವನೆ ಬೆಳೆಯುತ್ತದೆ. ಇದು ಪ್ರತಿಯಾಗಿ ಮಕ್ಕಳ ನರಗಳ ಅಭಿವೃದ್ಧಿಯ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ. ಇದು ಮಕ್ಕಳಲ್ಲಿ ಒತ್ತಡದ ಪ್ರತಿಕ್ರಿಯೆ, ಹಸಿವು, ನಿದ್ರೆ ಹಾಗೂ ಶಾರೀರಿಕ ಚಟುವಟಿಗಳ ಸಮತೋಲಿತ ನಿಯಂತ್ರಣಕ್ಕೆ ನೆರವಾಗುತ್ತದೆ.
    ಮಕ್ಕಳ ಪರಿಪೂರ್ಣ ಬೆಳವಣಿಗೆಗೆ ಪೋಷಕರು ಗುಣಮಟ್ಟದ ಸಮಯ ನೀಡಲೇಬೇಕು. ಅವರೊಂದಿಗೆ ಸಮಯವನ್ನು ಹೇಗೆ ಕಳೆಯುತ್ತೇವೆ? ಎನ್ನುವುದು ಮುಖ್ಯವಾಗುತ್ತದೆ. ಅದು ಯಾವುದೇ ಕೆಲಸವಿರಲಿ ಮಕ್ಕಳ ಜೊತೆಗೆ ಕಾಲ ಕಳೆಯುವುದು ಅಗತ್ಯ. ಉದಾಹರಣೆಗೆ ಅಡುಗೆ ಮಾಡುವುದು, ಊಟ ಮಾಡುವುದು, ದಿನನಿತ್ಯದ ಕೆಲಸ ಮಾಡುವುದು, ಮನೋರಂಜನಾತ್ಮಕವಾದ ಆಟ ಆಡುವುದು, ನಡೆದಾಡುವುದು ಇತ್ಯಾದಿ. ನಿಮ್ಮ ಮಕ್ಕಳ ಸಂತೋಷ ಮತ್ತು ಸಾಧನೆ ನೀವು ಕೊಡುವ ಗುಣಮಟ್ಟದ ಸಮಯದಲ್ಲಿ ಅಡಗಿದೆ. ಮಕ್ಕಳ ಜೊತೆ ಭಾವನಾತ್ಮಕ ಸಂಪರ್ಕ ಹೊಂದಲು ಪೋಷಕರು ತಮ್ಮನ್ನು ತಾವು ಈ ಸಮಯದಲ್ಲಿ ತೊಡಗಿಸಿಕೊಳ್ಳುವುದು ಬಹಳ ಮುಖ್ಯ. ಪೋಷಕರ ಒಡನಾಟ ಮಕ್ಕಳನ್ನು ಮಾನಸಿಕವಾಗಿ, ದೈಹಿಕವಾಗಿ, ಭಾವನಾತ್ಮಕವಾಗಿ ಸದೃಢ ಹೊಂದುವAತೆ ಮಾಡುತ್ತದೆ. ಇಂತಹ ಸಮಯವೇ ಅತ್ಯಂತ ಸೂಕ್ಮವಾಗಿ ಮಕ್ಕಳ ವ್ಯಕ್ತಿತ್ವ ರೂಪಿಸುತ್ತಿರುತ್ತದೆ. ಇದು ಮಕ್ಕಳಲ್ಲಿ ಆತ್ಮವಿಶ್ವಾಸ ಬೆಳೆಯಲು, ಸಮಾಜದಲ್ಲಿ ಎಲ್ಲರೊಂದಿಗೆ ಬೆರೆಯಲು, ಯಶಸ್ವಿಯಾಗಿ ಜೀವನ ಸಾಗಿಸಲು ದಾರಿದೀಪವಾಗುತ್ತದೆ.
Facebook
Twitter
WhatsApp
LinkedIn
Telegram

Leave a Reply

Your email address will not be published. Required fields are marked *