ಅನಾಥರ ಆಸರೆ ಸಿಯೋನ್

ನಾವು ಮೂರು ಮಂದಿ ಮಕ್ಕಳು. ನಾನು ಮೂರು ತಿಂಗಳ ಮಗುವಾಗಿದ್ದಾಗ ಹೆತ್ತವರು ಕೇರಳದಿಂದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದ ಗಂಡಿಬಾಗಿಲಿಗೆ ಬಂದು ನೆಲೆಸಿದರು. ನಾಲ್ಕನೇ ತರಗತಿಯವರೆಗೆ ಗಂಡಿಬಾಗಿಲು ಶಾಲೆಯಲ್ಲಿ ವಿದ್ಯಾಭ್ಯಾಸ ಮುಗಿಸಿದೆ. ನಂತರ ಐದನೇ ತರಗತಿಗೆ ಅಲ್ಲಿಂದ ಒಂಚೂರು ದೂರದಲ್ಲಿರುವ ನೆರಿಯ ಶಾಲೆಗೆ ಹೋಗಬೇಕಿತ್ತು. ಆ ದಿನಗಳಲ್ಲಿ ಪುಸ್ತಕ, ಬಟ್ಟೆಬರೆ ಹೀಗೆ ವಿದ್ಯಾಭ್ಯಾಸಕ್ಕೆ ವರ್ಷಕ್ಕೆ ಐದು ರೂಪಾಯಿ ಬೇಕಿತ್ತು. ಕೃಷಿ ಭೂಮಿ ಇದ್ದರೂ ಅದರಲ್ಲಿ ಹೇಳಿಕೊಳ್ಳುವಂತಹ ಯಾವುದೇ ಆದಾಯದ ಮೂಲಗಳಿರಲಿಲ್ಲ. ದಿನಕೂಲಿಯನ್ನೇ ನಂಬಿ ಬದುಕುತ್ತಿದ್ದ ಹೆತ್ತವರಿಗೆ ಐದು ರೂಪಾಯಿಯನ್ನು ಹೊಂದಿಸಲು ಸಾಧ್ಯವಾಗಲೇ ಇಲ್ಲ. ನಾನು ಹಣಕ್ಕಾಗಿ ಹತ್ತಾರು ಸ್ಥಿತಿವಂತರ ಮನೆ ಬಾಗಿಲಿಗೆ ಹೋದೆ. ಹಣವನ್ನು ಹೊಂದಿಸುವುದು ಅಸಾಧ್ಯವಾದಾಗ ಮುಂದಿನ ಶಿಕ್ಷಣದ ಕನಸನ್ನು ಕೈಚೆಲ್ಲಿಬಿಟ್ಟೆ. ನಂತರ ನಾನು ಹೆತ್ತವರೊಂದಿಗೆ ಕೂಲಿ ಕೆಲಸದ ಮೊರೆ ಹೋದೆ. ಆಗ ದಿನಗೂಲಿ ಐದು ಆಣೆ ಅಂದರೆ 30 ಪೈಸೆ ಇತ್ತು. (16 ಆಣೆ ಅಂದರೆ 1 ರೂಪಾಯಿ). 1978ರಲ್ಲಿ ನನಗೆ ಮದುವೆಯನ್ನು ಮಾಡಿಸಿದರು. ಒಬ್ಬ ಮಗ ಮತ್ತು ಮೂರು ಮಂದಿ ಹೆಣ್ಮಕ್ಕಳಿಗೆ ತಂದೆಯಾದೆ. ಆ ದಿನಗಳಲ್ಲಿ ನಾನು ಹಾಲ್‍ಸೆಲ್ ವ್ಯಾಪಾರ, ರೈಸ್‍ಮಿಲ್‍ನಲ್ಲಿ, ಕಾಳುಮೆಣಸಿನ ತೋಟವನ್ನು ವಹಿಸಿಕೊಳ್ಳುವುದು ಹೀಗೆ ಹತ್ತಾರು ಕೆಲಸಗಳನ್ನು ಮಾಡುತ್ತಿದ್ದೆ. ಇದರಿಂದಾಗಿ ಒಂದಷ್ಟು ಆದಾಯವು ಕೈ ಸೇರಿತು. ಮಕ್ಕಳನ್ನು ಚೆನ್ನಾಗಿ ಓದಿಸಿದೆ.
ಆಶ್ರಮ ಆರಂಭದ ಕಥೆ : 1999ರ ಸಮಯವದು. ನಾನು ಕೇರಳದ ಪಾಲೆಕ್ಕಾಡ್‍ನಿಂದ ಮಂಗಳೂರಿಗೆ ಹಿಂದಿರುಗಲು ರೈಲಿನ ಬರುವಿಕೆಗಾಗಿ ಕಾಯುತ್ತಿದ್ದೆ. ರೈಲ್ವೆ ನಿಲ್ದಾಣದ ಗಟಾರವೊಂದರ ಕೊಳಚೆ ನೀರಿನಿಂದ ಯಾರೋ ಉಂಡು ಬಿಸಾಡಿದ ತಿಂಡಿಪದಾರ್ಥಗಳನ್ನು ಅಲ್ಲಿರುವ ಮಾನಸಿಕ ಅಸ್ವಸ್ಥರು ಹೆಕ್ಕಿ ತಿನ್ನುತ್ತಿದ್ದರು. ಆ ಆಹಾರಕ್ಕಾಗಿ ಅವರೊಳಗೆ ಪೈಪೋಟಿ ನಡೆಯುತ್ತಿತ್ತು. ಇದನ್ನು ನೋಡುತ್ತಿದ್ದಂತೆ ನನ್ನ ಕಣ್ಣಂಚುಗಳು ಒದ್ದೆಯಾದವು. ‘ಒಂದು ವೇಳೆ ಇಂತಹ ಪರಿಸ್ಥಿತಿ ನನ್ನ ಮನೆಯವರಿಗೆ ಬಂದರೆ!’ ಎಂಬ ಪ್ರಶ್ನೆ ನನ್ನನ್ನು ಬೆಂಬಿಡದೆ ಕಾಡಿತು. ಮನೆ ತಲುಪಿದ ಕೂಡಲೇ ನಾನು ಕಂಡ ವಾಸ್ತವ ಸತ್ಯವನ್ನು ಪತ್ನಿ ಶ್ರೀಮತಿ ಮೇರಿಯವರೊಂದಿಗೆ ಹಂಚಿಕೊಂಡೆ.
ಅನಾಥರ ಸೇವೆಗೆ ಮೇರಿಯವರ ಸಾಥ್ : ‘ಅನಾಥರಿಗೆ ನಮ್ಮ ಮನೆಯಲ್ಲಿ ಆಸರೆ ಕಲ್ಪಿಸೋಣ! ಒಂದು ವೇಳೆ ನಾಳೆ ನಮ್ಮ ಮಕ್ಕಳಿಗೆ ಈ ಪರಿಸ್ಥಿತಿ ಬಂದರೆ’ ಎಂಬ ನನ್ನ ಮಾತುಗಳು ಪತ್ನಿ ಮೇರಿಯ ಮನತಟ್ಟಿದವು. ‘ಈಗ ಬೇಡ ಮಕ್ಕಳು ದೊಡ್ಡÀವರಾದ ಮೇಲೆ ಅನಾಥರ ಬಗ್ಗೆ ಚಿಂತಿಸೋಣ’ ಎಂಬ ಯೋಚನೆಯಲ್ಲಿದ್ದ ಮೇರಿಯವರು ನನ್ನ ಮಾತಿಗೆ ಮರು ಮಾತನಾಡದೆ ಒಪ್ಪಿಗೆಯನ್ನು ಸೂಚಿಸಿದರು.
ಸೋಗೆ ಮಾಡಿನ ಮನೆಯೇ ಆಶ್ರಮ : ಸಕಲೇಶಪುರದಲ್ಲಿ ಕಾಳುಮೆಣಸಿನ ತೋಟವನ್ನು ಗುತ್ತಿಗೆಗೆ ಪಡೆಯುವ ಕೆಲಸ ಮಾಡುತ್ತಿದ್ದೆ. ಅಲ್ಲಿ ತನ್ನ ಕಾಲುಗಳ ಬಲವನ್ನು ಕಳೆದುಕೊಂಡು ನಡೆದಾಡಲು ಸಾಧ್ಯವಾಗದೆ ತನ್ನವರಿಲ್ಲದೆ ಸಾವು – ನೋವಿನ ಜೊತೆ ದಿನಗಳನ್ನು ಕಳೆಯುತ್ತಿದ್ದ ಯಶೋಧರವರನ್ನು ನಮ್ಮ ಮನೆಗೆ ಕರೆದುಕೊಂಡು ಬಂದೆ. ನಂತರ ಕುತ್ತಿಗೆ ಭಾಗದಲ್ಲಿ ಕ್ಯಾನ್ಸರ್ ಪೀಡಿತನಾಗಿ ರಸ್ತೆ ಬದಿ ಎಷ್ಟೋ ದಿನಗಳಿಂದ ಆಹಾರವಿಲ್ಲದೆ ದಿನಗಳನ್ನು ದೂಡುತ್ತಿದ್ದ ಓರ್ವರನ್ನು ಮನೆಗೆ ಕರೆತಂದೆ. ಹೀಗೆ ಎರಡು ತಿಂಗಳೊಳಗೆ ಏಳು ಮಂದಿ ಮನೆ ತುಂಬಿದರು. ಅನಾಥರನ್ನು ಮನೆಗೆ ಕರೆ ತರುವ ಕೆಲಸವನ್ನು ಮಾತ್ರ ನಾನು ಮಾಡುತ್ತಿದ್ದೆ. ಉಳಿದಂತೆ ಅವರ ಮೈಯಲ್ಲಿದ್ದ ಹುಳಗಳನ್ನು ತೆಗೆಯುವ, ಸ್ನಾನ ಮಾಡಿಸುವ, ಔಷಧ ನೀಡುವ ಹೀಗೆ ಅವರ ಸಂಪೂರ್ಣ ಚಾಕರಿಯನ್ನು ಪತ್ನಿಯೇ ಮಾಡುತ್ತಿದ್ದರು. ಐದಾರು ತಿಂಗಳಲ್ಲಿ ಅನಾಥರ ಸಂಖ್ಯೆ 65ಕ್ಕೇರಿತು. ಮನೆಯಲ್ಲಿ ಜಾಗ ಸಾಲದದಾಗ ಪಕ್ಕದಲ್ಲೆ ಸೋಗೆ ಮಾಡಿನ ಗುಡಿಸಲೊಂದನ್ನು ನಿರ್ಮಿಸಿದೆವು.
ಸಾವಿನ ಮೊರೆ ಹೋದ ಪೌಲೋಸ್ : ಸಹಜವಾಗಿ ಸಾರ್ವಜನಿಕರ ಚಿತ್ತ ಇತ್ತ ಸುಳಿಯಿತು. ಸಹೃದÀಯರು ಕೈಲಾದದ್ದನ್ನು ಕೊಟ್ಟು ಸಹಕರಿಸಿದರೆ, ಒಂದಷ್ಟು ಮಂದಿ ಮೊಸರಿನಲ್ಲೂ ಕಲ್ಲು ಹುಡುಕತೊಡಗಿದರು. 2005ರ ಸಮಯವದು. ಟಿ.ವಿ. ಮಾಧ್ಯಮವೊಂದು ಸಿಯೋನ್ ಆಶ್ರಮದಲ್ಲಿ ಮತಾಂತರ ನಡೆಯುತ್ತಿದೆ, ಕಿಡ್ನಿ ವ್ಯಾಪಾರ ಮಾಡುತ್ತಾರೆ, ಸತ್ತ ಹೆಣಗಳ ರಾಶಿ ಅಲ್ಲಿದೆ ಹೀಗೆ ಇಲ್ಲಸಲ್ಲದ ಆರೋಪಗಳನ್ನು ಮಾಡಿ ಸುದೀರ್ಘ ಕಾರ್ಯಕ್ರಮವನ್ನು ಪ್ರಸಾರ ಮಾಡಿತು. ಆಗ ನಾನು ಯಾವುದೋ ಕೆಲಸದ ನಿಮಿತ್ತ ಮಂಗಳೂರಿನಲ್ಲಿದ್ದೆ. ಕಾರ್ಯಕ್ರಮವನ್ನು ನೋಡಿ ಮಾನಸಿಕವಾಗಿ ಕುಗ್ಗಿ ಹೋದೆ. ‘ಇನ್ನು ನಾನು ಬದುಕಿ ಪ್ರಯೋಜವಿಲ್ಲ’ ಅಂದುಕೊಂಡು ಮಂಗಳೂರಿನಿಂದ ವಿಷದ ಬಾಟಲಿಯೊಂದಿಗೆ ಮನೆ ತಲುಪಿದೆ.
ದೇವರ ರೂಪದಲ್ಲಿ ಬಂದ ಶ್ರೀ ಹೆಗ್ಗಡೆಯವರು : ಇದ್ದಕ್ಕಿದ್ದಂತೆ ಶ್ರೀಕ್ಷೇತ್ರ ಧರ್ಮಸ್ಥಳದ ಬೀಡಿನಿಂದ ಕರೆಯೊಂದು ಬಂತು. ‘ಶ್ರೀ ಹೆಗ್ಗಡೆಯವರು ಟಿ.ವಿ.ಯಲ್ಲಿ ಬಂದ ವರದಿ ಬಗ್ಗೆ ಸ್ಪಷ್ಟೀಕರಣ ಕೇಳಲು ಕರೆದಿರಬಹುದು!’ ಅಂದುಕೊಂಡು ಧರ್ಮಸ್ಥಳ ತಲುಪಿದೆ. ಬೀಡಿಗೆ ಕಾಲಿಡುತ್ತಿದ್ದಂತೆ ‘ಪೌಲೋಸ್‍ರವರೇ, ನೀವು ಮುಂದೆ ಇಟ್ಟ ಹೆಜ್ಜೆಯನ್ನು ಎಂದಿಗೂ ಹಿಂದಕ್ಕೆ ಇಡಬೇಡಿ. ಜನರು ಸಿಹಿ ಮಾವುಗಳಿದ್ದ ಮರಕ್ಕೆ ಕಲ್ಲು ಬಿಸಾಡುತ್ತಾರೆಯೇ ಹೊರತು, ಹುಳಿ ಮಾವುಗಳಿರುವ ಮರಕ್ಕಲ್ಲ. ನೀವು ಯಾವುದಕ್ಕೂ ಹೆದರಬೇಡಿ. ನಿಮ್ಮ ಜೊತೆ ನಾನಿದ್ದೇನೆ. ಏನೇ ಕಷ್ಟ ಬಂದರೂ ನನ್ನೊಂದಿಗೆ ಹಂಚಿಕೊಳ್ಳಿ’ ಎಂದು ಧೈರ್ಯ ತುಂಬಿದರು. ಅಂದಿನಿಂದ ಇಂದಿನವರೆಗೂ ಶ್ರೀ ಹೆಗ್ಗಡೆಯವರು ಸಾಕಷ್ಟು ಸಹಕಾರವನ್ನು ನೀಡಿದ್ದಾರೆ. ಅಂದು ಶ್ರೀ ಹೆಗ್ಗಡೆಯವರು ನನಗೆ ಧೈರ್ಯ ತುಂಬದಿದ್ದರೆ ನಾನಿಂದು ಬದುಕಿರಲು ಸಾಧ್ಯವೇ ಇರಲಿಲ್ಲ.
ಪ್ರಯೋಜನ ಪಡೆದರು ಸಾವಿರಾರು ಮಂದಿ : ಸಾಮಾನ್ಯವಾಗಿ ಅನಾಥರಿಗೆ, ವಿಶೇಷಚೇತನರಿಗೆ ಹೀಗೆ ಪ್ರತ್ಯೇಕ ಆಶ್ರಮಗಳಿವೆ. ಆದರೆ ಸಿಯೋನ್ ಆಶ್ರಮ ಇವೆಲ್ಲಕ್ಕಿಂತ ಭಿನ್ನ. ಬೀದಿಪಾಲಾಗಿದ್ದ ಮನೋರೋಗಿಗಳು, ಬುದ್ಧಿಮಾಂಧ್ಯರು, ವಿಶೇಷ ಚೇತನರು, ನಿರ್ಗತಿಕರು, ವಿಶೇಷಚೇತನ ಮಕ್ಕಳು, ವೃದ್ಧರು, ವಿಧವೆಯರು, ಮಾನಸಿಕ ಅಸ್ವಸ್ಥರು, ಕಿವುಡರು, ಮೂಗರು ಹೀಗೆ ಸರ್ವಧರ್ಮಗಳ, ಸರ್ವ ಸಮಸ್ಯೆಗಳ ಅನಾಥರು ಇಲ್ಲಿದ್ದಾರೆ. ಕಳೆದ ಇಪ್ಪತ್ತೈದು ವರ್ಷಗಳಲ್ಲಿ ಸುಮಾರು ಮೂರು ಸಾವಿರ ಮಂದಿ ಆಶ್ರಮದ ಪ್ರಯೋಜನವನ್ನು ಪಡೆದಿದ್ದಾರೆ. ಒಂದು ಸಾವಿರಕ್ಕೂ ಹೆಚ್ಚು ಮಂದಿ ಆಶ್ರಮಕ್ಕೆ ಸೇರಿ ಆರೋಗ್ಯದಲ್ಲಿ ಸುಧಾರಣೆಯಾಗಿ ಮತ್ತೆ ಮನೆ ಸೇರಿದ್ದಾರೆ. ಪ್ರಸ್ತುತ 387 ಮಂದಿ ಆಶ್ರಮದಲ್ಲಿದ್ದಾರೆ. ಆಶ್ರಮಕ್ಕೆ ಸೇರುವಾಗ ಗರ್ಭಿಣಿಯಾಗಿದ್ದ ಮಾನಸಿಕ ಅಸ್ವಸ್ಥ ಮಹಿಳೆಯರಿಗೆ ಜನಿಸಿದ ಹದಿಮೂರು ಮಂದಿ ಮಕ್ಕಳು ಶಿಕ್ಷಣವನ್ನು ಪಡೆಯುತ್ತಿದ್ದಾರೆ.
ಆಶ್ರಮದಲ್ಲಿ ಯಾರಿದ್ದಾರೆ? : ರಾಜೇಶ್ ಮುಂಬೈಯ ಹೋಟೆಲ್‍ನ ಮಾಲಕ. ಅಕ್ಕ ಮತ್ತು ತಂಗಿಗೆ ಒಳ್ಳೆಯ ಸಂಬಂಧ ನೋಡಿ ಮದುವೆ ಮಾಡಿಸಿದ್ದಾರೆ. ರಾಜೇಶ್‍ಗೂ ಮದುವೆಯಾಗಿ ಮೂರು ಮಂದಿ ಮಕ್ಕಳಿದ್ದಾರೆ. ಇದ್ದಕ್ಕಿದ್ದಂತೆ ತನ್ನ ಹೋಟೆಲ್ ವ್ಯಾಪಾರದಲ್ಲಿ ನಷ್ಟವಾಯಿತು. ಪರಿಣಾಮವಾಗಿ ರಾಜೇಶ್ ಸಾಲದ ಸುಳಿಯಲ್ಲಿ ಸಿಲುಕಿಕೊಂಡರು. ದಿನಕಳೆದಂತೆ ಮಾನಸಿಕ ಅಸ್ವಸ್ಥರಾಗಿಬಿಟ್ಟರು. ಪರಿಸ್ಥಿತಿ ಕೈಮೀರಿ ಹೋಯಿತು. ಊರಿಗೆ ಬಂದ ರಾಜೇಶ್‍ನನ್ನು ಅಮ್ಮನಿಂದ ಸಂಭಾಳಿಸುವುದು ಸಾಧ್ಯವಾಗಲೇ ಇಲ್ಲ. ಊರಿನೆÀಲ್ಲೆಡೆ ಓಡುವುದು, ಕಿರುಚಾಡುವುದು ಸಾಮಾನ್ಯವಾಗಿತ್ತು. ಕೊನೆಗೆ ಮರದ ತುಂಡಿಗೆ ಎರಡು ತೂತು ಮಾಡಿ ಅದರೊಳಗೆ ರಾಜೇಶ್‍ನ ಕಾಲುಗಳನ್ನು ಹಾಕಿ ಅವರನ್ನು ವಿಚಿತ್ರ ರೀತಿಯಲ್ಲಿ ಬಂಧಿಸಿಟ್ಟರು. ಹಲವಾರು ವರ್ಷಗಳವರೆಗೆ ಊಟ, ನಿತ್ಯಕ್ರಿಯೆ ಎಲ್ಲವು ಅಲ್ಲೆ ನಡೆಯಿತು. ವಿಷಯ ತಿಳಿದ ನಾನು ರಾಜೇಶ್‍ರವರ ಮನೆಗೆ ತೆರಳಿ ಅವರನ್ನು ಕರೆದುಕೊಂಡು ಬಂದು ಚೆನ್ನಾಗಿ ಆರೈಕೆ ಮಾಡಿದೆ. ಸಕಲೇಶಪುರದಲ್ಲಿ ಒಬ್ಬಳು ಮಾನಸಿಕ ಅಸ್ವಸ್ಥ ಮಹಿಳೆ ಹಲವಾರು ವರ್ಷಗಳಿಂದ ಒಂದೆಡೆ ಕುಳಿತಿದ್ದಾಳೆ, ಅವಳ ಸುತ್ತ ಹುತ್ತ ಬೆಳೆದಿದೆ ಎಂಬ ಮಾಹಿತಿ ಬಂತು. ಊರಿನ ಮಂದಿ ಅವಳಿದ್ದ ಕಡೆ ಹೋಗಲು ಭಯಪಡುತ್ತಿದ್ದರು. ಅವಳನ್ನು ಆಶ್ರಮಕ್ಕೆ ಕರೆ ತಂದಿದ್ದೇನೆ. ಇದೀಗ ಅವರಿಬ್ಬರು ಎಲ್ಲರಂತಾಗಿದ್ದಾರೆ.
ಹೀಗೆ ಇಲ್ಲಿರುವ ಹೆಚ್ಚಿನವರನ್ನು ನಾನೇ ಬೇರೆ ಬೇರೆ ಕಡೆಗಳಿಂದ ಕರೆ ತಂದಿದ್ದೇನೆ. ಇನ್ನು ಪೊಲೀಸ್ ಇಲಾಖೆ, ಜಿಲ್ಲಾಡಳಿತ, ಇತರ ಆಶ್ರಮಗಳಿಂದ, ಸಂಘ – ಸಂಸ್ಥೆಗಳ ಮೂಲಕ ಬಂದವರು ಇದ್ದಾರೆ. ದೆಹಲಿ, ಮುಂಬೈ, ಮಹಾರಾಷ್ಟ್ರ, ಆಂಧ್ರ ಹೀಗೆ ದೇಶದ ಬೇರೆ ಬೇರೆ ಭಾಗಗಳ ಅನಾಥರು ಇಲ್ಲಿದ್ದು ಒಬ್ಬೊಬ್ಬರದ್ದು ಒಂದೊಂದು ಸಮಸ್ಯೆ.
ಅಚ್ಚುಕಟ್ಟಾದ ವ್ಯವಸ್ಥೆ : ಸೋಗೆ ಮಾಡಿನ ಗುಡಿಸಲಿನ ಬದಲು ಇಂದು ನಾಲ್ಕು ಹಂತದ ಕಟ್ಟಡ ಎದ್ದು ನಿಂತಿದೆ. ಅವರವರ ಆರೋಗ್ಯ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕ ವಾರ್ಡ್‍ಗಳಿವೆ. ಆಶ್ರಮ ವಾಸಿಗಳಿಗೆ ಅಚ್ಚುಕಟ್ಟಾದ ವ್ಯವಸ್ಥೆಯನ್ನು ಒದಗಿಸುವ ನಿಟ್ಟಿನಲ್ಲಿ ಮೂವತ್ತೈದು ಮಂದಿ ನಿತ್ಯ ಅವರ ಚಾಕರಿಯಲ್ಲಿ ತೊಡಗಿದ್ದಾರೆ.
ಹುಚ್ಚರಂತೆ ತಿರುಗುತ್ತಿದ್ದವರು ಆಶ್ರಮದಲ್ಲಿ ಕೆಲಸ ಮಾಡುತ್ತಿದ್ದಾರೆ : ಹುಚ್ಚರಂತೆ ಇಲ್ಲಿಗೆ ಸೇರಿದವರು ಇಂದು ಆಶ್ರಮದಲ್ಲಿ ತಿಂಡಿ ತಯಾರಿ, ಅಡುಗೆ, ಕಚೇರಿ ನಿರ್ವಹಣೆ ಮುಂತಾದ ಕೆಲಸಗಳಲ್ಲಿ ಸಹಕಾರ ನೀಡುತ್ತಿದ್ದಾರೆ. ಆಶ್ರಮದಲ್ಲಿರುವ ಎಲ್ಲರಿಗೂ ಯೂನಿಫಾರಂ, ಐಡಿಕಾರ್ಡ್ ಅನ್ನು ವ್ಯವಸ್ಥೆಗೊಳಿಸಲಾಗಿದೆ. ಅವರವರ ಆರೋಗ್ಯ ಸಮಸ್ಯೆಗಳಿಗೆ ಪೂರಕವಾದ ಔಷಧವನ್ನು ನೀಡಲಾಗುತ್ತದೆ. ಫಿಸಿಯೋಥೆರಾಫಿ, ಲ್ಯಾಬ್, ಎಕ್ಸ್‍ರೇ, ಇ.ಸಿ.ಜಿ., ಔಷಧಾಲಯ ಮುಂತಾದ ಅಗತ್ಯ ಸೌಲಭ್ಯಗಳೊಂದಿಗೆ ನಿತ್ಯ ಕರ್ತವ್ಯದಲ್ಲಿ ಓರ್ವ ವೈದ್ಯರು, ಎಂಟು ಮಂದಿ ನರ್ಸ್‍ಗಳು ಇದ್ದಾರೆ. ವಯಸ್ಸಾಗಿ, ಖಾಯಿಲೆಯಿಂದ ಹೀಗೆ ಒಂದಷ್ಟು ಮಂದಿ ಈಗಾಗಲೇ ಇಲ್ಲಿ ಇಹಲೋಕವನ್ನು ಸೇರಿದ್ದಾರೆ. ಈ ಸಂದರ್ಭದಲ್ಲಿ ವಾರಸುದಾರರಿದ್ದರೆ ದೇಹವನ್ನು ಅವರಿಗೆ ನೀಡಲಾಗುತ್ತದೆ. ಇಲ್ಲವಾದಲ್ಲಿ ನಾವೇ ಅಂತ್ಯಸಂಸ್ಕಾರವನ್ನು ಮಾಡಿ ಮುಗಿಸುತ್ತೇವೆ.
ಮದುವೆಗೆ ಉಚಿತ ಹಾಲ್ : ಆಶ್ರಮದಲ್ಲಿ ಸರ್ವಧರ್ಮಗಳ ಹಬ್ಬ – ಹರಿದಿನಗಳನ್ನು ಆಚರಿಸಲಾಗುತ್ತದೆ. ಅವರವರ ಧರ್ಮಗಳಿಗನುಗುಣವಾಗಿ ಪೂಜೆಗಳಿಗೂ ಅವಕಾಶವಿದೆ. ಇನ್ನು ಆಶ್ರಮದಲ್ಲಿ ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವ ಹೀಗೆ ಯಾವುದೇ ದಿನಾಚರಣೆಯನ್ನು ಆಚರಿಸುವುದಾದರೂ ಮುಕ್ತ ಅವಕಾಶವಿದೆ. ಇಲ್ಲಿ ಮದುವೆಯಾಗಲು ಇಚ್ಛಿಸುವವರಿಗೆ ಸುಸಜ್ಜಿತವಾದ ಸಭಾಮಂಟಪವೊಂದನ್ನು ಉಚಿತವಾಗಿ ನೀಡುತ್ತೇವೆ. ಆದರೆ ಮದುವೆಯ ಊಟವನ್ನು ಇಲ್ಲಿನ ಆಶ್ರಮವಾಸಿಗಳಿಗೂ ನೀಡಬೇಕು ಮತ್ತು ಮದುವೆ ಹಾಲ್‍ನ ಪ್ರಥಮ ಮಹಡಿಯಲ್ಲಿ ಕುಳಿತು ಮದುವೆ ವೀಕ್ಷಿಸಲು ಅವರಿಗೂ ಅವಕಾಶ ಕಲ್ಪಿಸಬೇಕೆಂಬ ನಿಯಮ ಇಲ್ಲಿದೆ. ಆಶ್ರಮವಾಸಿಗಳ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲೀರಿಸುವುದು ಒಂದು ಪುಣ್ಯದ ಕೆಲಸವೆಂದುಕೊಂಡು ಇಲ್ಲಿ ವಿವಾಹವಾಗುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ.
ಶಿಕ್ಷಣಕ್ಕೆ ಪ್ರೋತ್ಸಾಹ : ಆಶ್ರಮದಲ್ಲಿರುವ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡಲಾಗುತ್ತದೆ. ಈಗಾಗಲೇ ಐದು ಮಂದಿ ಉದ್ಯೋಗದಲ್ಲಿದ್ದಾರೆ. ಹದಿಮೂರು ಮಂದಿ ನರ್ಸಿಂಗ್, ಪಿಯುಸಿ ಹೀಗೆ ಶಿಕ್ಷಣವನ್ನು ಪಡೆಯುತ್ತಿದ್ದಾರೆ. ಪ್ರತಿವರ್ಷ ನಾಲ್ಕು ಶಾಲೆಗಳ ಒಂದನೆಯಿಂದ ಹತ್ತನೇ ತರಗತಿಯವರೆಗಿನ ಸುಮಾರು 500 ಮಂದಿ ವಿದ್ಯಾರ್ಥಿಗಳಿಗೆ ಬ್ಯಾಗ್ ಮತ್ತು ಪುಸ್ತಕಗಳನ್ನು ವಿತರಿಸಲಾಗುತ್ತಿದೆ. 150 ಮಂದಿ ಬಡ ಮಕ್ಕಳಿಗೆ ಶಿಷ್ಯವೇತನವನ್ನು ನೀಡಲಾಗುತ್ತಿದೆ.
65 ವರ್ಷ ದಾಟಿದ ಹದಿನೈದು ಮಂದಿಗೆ ತಿಂಗಳಿಗೆ ರೂ. 500ರಂತೆ ವೃದ್ಧಾಪ್ಯವೇತನವನ್ನು ನೀಡಲಾಗುತ್ತಿದೆ. ಪ್ರತಿ ವರ್ಷ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಹೀಗೆ ಮೂರು ಧರ್ಮಗಳ ಹಿರಿಯ ಮೂರು ಮಂದಿಯನ್ನು ಗುರುತಿಸಿ, ಗೌರವಿಸಲಾಗುತ್ತಿದೆ.
ಕಳೆದ ಹದಿಮೂರು ವರ್ಷಗಳಿಂದ ಪ್ರತಿ ತಿಂಗಳ ಕೊನೆಯ ಭಾನುವಾರದಂದು ಉಜಿರೆಯಲ್ಲಿ ಮಾನಸಿಕ ಆರೋಗ್ಯ ತಪಾಸಣಾ ಶಿಬಿರವನ್ನು ನಡೆಸಲಾಗುತ್ತಿದ್ದು ಇದುವರೆಗೆ ಸುಮಾರು 10 ಸಾವಿರ ಮಂದಿ ಇದರ ಪ್ರಯೋಜನವನ್ನು ಪಡೆದಿದ್ದಾರೆ. ಪುತ್ತೂರಿನ ಕೊೈಲದಲ್ಲಿರುವ ಎಂಡೋಸಲ್ಫಾನ್ ಡೇ ಕೇರ್ ಅನ್ನು ಸರಕಾರದ ಸಹಯೋಗದೊಂದಿಗೆ ಆಶ್ರಮದಿಂದ ನಿರ್ವಹಿಸಲಾಗುತ್ತಿದೆ. ಇದನ್ನು ಮಗಳು ಮತ್ತು ಅಳಿಯ ನೋಡಿಕೊಳ್ಳುತ್ತಿದ್ದಾರೆ. ಇನ್ನು ಸ್ಥಳೀಯರಿಗೆ ಏನೇ ಸಮಸ್ಯೆಗಳಾದರೂ ಉಚಿತವಾಗಿ ಅಂಬ್ಯುಲೆನ್ಸ್ ಸೇವೆಯನ್ನು ಒದಗಿಸಲಾಗುತ್ತಿದೆ.
ಆಶ್ರಮದಲ್ಲಿ ಹತ್ತು ವರ್ಷದಿಂದ ತೊಂಭತ್ತೈದು ವರ್ಷದೊಳಗಿನವರು ಇದ್ದಾರೆ. ಕೆಲವೊಮ್ಮೆ ಮನೆಯವರೇ ಇಲ್ಲಿಗೆ ಕರೆತಂದು ಬಿಟ್ಟು ಅವರ ಆರೋಗ್ಯ ಸುಧಾರಿಸಿದ ನಂತರ ಕರೆದುಕೊಂಡು ಹೋಗುತ್ತಾರೆ. ಬೀದಿಯಿಂದ ಕರೆತಂದವರ ಆರೋಗ್ಯ ಸುಧಾರಣೆ ಆದ ನಂತರ ಅವರ ವಿಳಾಸವನ್ನು ಪತ್ತೆ ಹಚ್ಚಿ ಅವರ ಮನೆಯವರಿಗೆ ಕರೆ ಮಾಡಿದರೆ ಎಷ್ಟೋ ಮಂದಿಗೆ ತಮ್ಮವರೆಂದು ಗೊತ್ತಾದರೂ ‘ಮತ್ತೆ ಮನೆಗೆ ಕಳುಹಿಸುವುದೇ ಬೇಡ. ಆಶ್ರಮದಲ್ಲೇ ಇರಲಿ’ ಎನ್ನುವವರು ಇದ್ದಾರೆ. ತಮ್ಮವರು ಸಿಕ್ಕಿದರೆಂದು ಖುಷಿಯಲ್ಲಿ ಆಶ್ರಮಕ್ಕೆ ತಮ್ಮ ಕೈಲಾದ ಸಹಾಯ ಮಾಡುವವರೂ ಇದ್ದಾರೆ. ಯಾರಿಗೂ ಇಂತಿಷ್ಟು ಶುಲ್ಕವೆಂದು ನಿಗದಿಪಡಿಸಿಲ್ಲ. ಆದರೆ ಆಶ್ರಮದ ನಿರ್ವಹಣೆಗೆ ದಾಣಿಗಳ ಸಹಕಾರದ ಅಗತ್ಯವಿದೆ. ಮುಂದಿನ ದಿನಗಳಲ್ಲಿ ಐಸೋಲೇಷನ್ ಕೊಠಡಿ, ಎಲ್ಲ ಸೌಲಭ್ಯಗಳಿರುವ ಆಸ್ಪತ್ರೆಯೊಂದನ್ನು ನಿರ್ಮಿಸಬೇಕೆಂಬ ಕನಸು ನಮ್ಮದು. ಈ ನಿಟ್ಟಿನಲ್ಲಿ ಕಟ್ಟಡ ನಿರ್ಮಾಣದ ಅರ್ಧಂಬರ್ಧ ಕಾಮಗಾರಿಯೂ ನಡೆದಿದೆ. ಸಹೃದಯರು ಕೈಜೋಡಿಸಿದರೆ ಗಂಡಿಬಾಗಿಲಿನಂತಹ ಹಳ್ಳಿ ಪ್ರದೇಶದಲ್ಲಿ ಅನಾಥರಿಗೆ ವೈದ್ಯಕೀಯ ಸೇವೆಗಾಗಿ ಆಸ್ಪತ್ರೆಯೊಂದು ತಲೆಯೆತ್ತಲಿದೆ.”
ಮನೆಯ ಪ್ರತಿ ಸದಸ್ಯರು ಆಶ್ರಮವಾಸಿಗಳನ್ನು ತಮ್ಮ ಮನೆಯವರಂತೆ ಕಾಣುತ್ತಾರೆ. ಯು.ಸಿ. ಪೌಲೋಸ್, ಪತ್ನಿ ಶ್ರೀಮತಿ ಮೇರಿ ಯು.ಪಿ., ಮಗ ಸುಭಾಷ್ ಯು.ಪಿ., ಸೊಸೆ ಸಂಧ್ಯಾ ಸುಭಾಷ್ ಆಶ್ರಮದ ಕೆಲಸದಲ್ಲಿ ಹಗಲು ರಾತ್ರಿ ಶ್ರಮಿಸುತ್ತಿದ್ದಾರೆ. ತೋಮಸ್ ಎಂ.ಪಿ., ಶ್ರೀಮತಿ ಶೋಭಾ ಯು.ಪಿ., ಶ್ರೀಮತಿ ಸೌಮ್ಯ ಯು.ಪಿ., ಶ್ರೀಮತಿ ಶೈನಿ ಯು.ಪಿ., ಜಾಕ್ಸನ್ ಚೆರಿಯನ್, ರಾಬಿನ್ ಮಾಥ್ಯು ಇವರುಗಳ ಪರಿಶ್ರಮ ಕೂಡಾ ಇಲ್ಲಿ ಉಲ್ಲೇಖನೀಯ.
ಬೆಳ್ಳಿ ಹಬ್ಬದ ಸಂಭ್ರಮ : ಇದೀಗ ಪೌಲೋಸ್‍ರವರಿಗೆ 72 ವರ್ಷ. ಆಶ್ರಮಕ್ಕೆ 25 ವರ್ಷ. ಈ ನಿಟ್ಟಿನಲ್ಲಿ ರಾಜ್ಯದಲ್ಲಿರುವ ಎಲ್ಲಾ ಆಶ್ರಮಗಳ ಮುಖ್ಯಸ್ಥರನ್ನು ಒಂದೇ ವೇದಿಕೆಯಡಿ ಒಟ್ಟು ಸೇರಿಸಿ ವಿಚಾರ ಸಂಕಿರಣವೊಂದರ ಮೂಲಕ ತಮ್ಮ ಬೇಡಿಕೆಗಳನ್ನು ಸರಕಾರಕ್ಕೆ ಸಲ್ಲಿಸುವ ಜೊತೆಗೆ ಆಶ್ರಮದ 25ರ ನೆನಪನ್ನು ಚಿರವಾಗಿಸುವ ನಿಟ್ಟಿನಲ್ಲಿ ಮಾರ್ಚ್22 ಆಶ್ರಮದ ಬೆಳ್ಳಿಹಬ್ಬದ ಸಂಭ್ರಮಕ್ಕೆ ಸಾಕ್ಷಿಯಾಗುತ್ತಿದೆ.
ಆಶ್ರಮಕ್ಕೆ ನೀವು ಸಹಾಯಹಸ್ತವನ್ನು ಚಾಚಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಕ್ಕೆ : 9740181028.

Facebook
Twitter
WhatsApp
LinkedIn
Telegram

Leave a Reply

Your email address will not be published. Required fields are marked *