ಕೆಲಸಗಳಲ್ಲಿ ಸಮಾನತೆ

ನಾವು ಮಾಡುವ ಯಾವುದೇ ಕೆಲಸಗಳನ್ನು ದೊಡ್ಡ ಕೆಲಸ, ಸಣ್ಣ ಕೆಲಸ ಎಂಬ ವ್ಯತ್ಯಾಸದಿಂದ ಕಾಣಬಾರದು. ಕೆಲಸ ಯಾವುದೇ ಇರಲಿ, ಅದಕ್ಕೆ ಅದರದ್ದೇ ಆದ ಮಹತ್ವವಿದೆ. ಒಂದು ಕಚೇರಿಯಲ್ಲಿ ಯಾರಾದರೂ ಒಬ್ಬರು ತನ್ನ ಕೆಲಸವನ್ನು ಸರಿಯಾಗಿ ನಿರ್ವಹಿಸದಿದ್ದರೆ ಮುಂದಿನ ಎಲ್ಲ ಕೆಲಸಗಳಿಗೂ ಸಮಸ್ಯೆಯಾಗುತ್ತದೆ. ಉದಾಹರಣೆಗೆ ಒಬ್ಬ ಅಟೆಂಡರ್ ಒಂದು ದಿನ ಕಚೇರಿಯನ್ನು ಸ್ವಚ್ಛಗೊಳಿಸದಿದ್ದರೆ ಕಚೇರಿಯಲ್ಲಿರುವ ಕಚೇರಿ ಸಹಾಯಕರಿಂದ ಹಿಡಿದು ಮೇಲಾಧಿಕಾರಿಯವರೆಗೆ ಯಾರೊಬ್ಬರಿಗೂ ಸರಿಯಾಗಿ ಕೆಲಸ ಮಾಡಲು ಆಗುವುದಿಲ್ಲ. ಅನಿವಾರ್ಯ ಸಂದರ್ಭಗಳಲ್ಲಿ ಕೆಲಸ ಮಾಡಿದರೂ ಅಲ್ಲಿನ ವಾತಾವರಣವೇ ಸರಿಯಿಲ್ಲದ ಕಾರಣ ಕೆಲಸ ಮಾಡಿದವರಿಗೂ ಸಮಾಧಾನ ಆಗಿರುವುದಿಲ್ಲ. ಆದ್ದರಿಂದ ನಮಗೆ ದೊರೆತ ಕೆಲಸ ಎಷ್ಟೇ ಸಣ್ಣದಾಗಿರಲಿ, ದೊಡ್ಡದಾಗಿರಲಿ ಪ್ರಾಮಾಣಿಕತೆ, ನಿಷ್ಠೆಯಿಂದ ಸಮಯಕ್ಕೆ ಸರಿಯಾಗಿ ಮಾಡಬೇಕಿದೆ. ಆಗ ನಮಗೆ ದೊರೆಯುವ ಸಂತೋಷಕ್ಕೆ ಬೆಲೆ ಕಟ್ಟಲಾಗದು.
ಸಣ್ಣಪುಟ್ಟ ಕೆಲಸಗಳನ್ನು ಇತರರಿಗೆ ವಹಿಸುವ ಬದಲು ತಾವೇ ನೇರವಾಗಿ ಮಾಡುವ ಕೆಲವೊಂದು ನಿದರ್ಶನಗಳು ನಮಗೆ ಮಾದರಿಯಾಗಬಲ್ಲವು. ಮಹಾತ್ಮ ಗಾಂಧೀಜಿಯವರಿಗೆ ಜನಸಾಮಾನ್ಯರಿಂದ ನಿತ್ಯ ನೂರಾರು ಪತ್ರಗಳು ಬರುತ್ತಿದ್ದವು. ಪ್ರತಿ ಪತ್ರವನ್ನು ಓದಿ ಉತ್ತರಿಸಲು ಇತರರಿಗೆ ನೀಡುವ ಬದಲು ತಾವೇ ಕೂಲಂಕುಷವಾಗಿ ಓದಿ ರೈಲಿನಲ್ಲಿ ಪ್ರಯಾಣಿಸುವಾಗ ಅವುಗಳಿಗೆ ಮರು ಉತ್ತರವನ್ನು ಬರೆಯುತ್ತಿದ್ದರು. ಹಾಗೆಯೇ ಶಿವರಾಮ ಕಾರಂತರ ಜುಬ್ಬಾದ ಜೇಬಿನಲ್ಲಿ ಯಾವಾಗಲೂ ಒಂದಷ್ಟು ಕಾರ್ಡ್‍ಗಳು ಇರುತ್ತಿದ್ದವಂತೆ. ಎಲ್ಲಾದರೂ ಪೋಸ್ಟ್ ಬಾಕ್ಸ್ ಕಂಡರೆ ತಕ್ಷಣ ಅಲ್ಲಿ ಪೋಸ್ಟ್ ಮಾಡಿಬಿಡುತ್ತಿದ್ದರಂತೆ. ಅಂದರೆ ಅವರು ಪ್ರತಿ ಕೆಲಸಗಳಿಗೂ ವಿಶೇಷ ಮಹತ್ವವನ್ನು ನೀಡುತ್ತಿದ್ದರು ಮತ್ತು ಹೆಚ್ಚಿನ ಕೆಲಸಗಳಿಗೆ ಇತರರನ್ನು ಅವಲಂಬಿಸುವ ಬದಲು ತಾವೇ ಮಾಡಿ ಮುಗಿಸುತ್ತಿದ್ದರು. ಕೆಲಸ ಯಾವುದೇ ಇರಲಿ ಆ ಕೆಲಸಗಳನ್ನು ಸಮಾನವಾಗಿ ಕಾಣುವ ಇಂತಹ ಹಲವಾರು ನಿದರ್ಶನಗಳು ಇಂದಿಗೂ ನಮ್ಮ ಮುಂದಿವೆ.
ನಾನು ಸಣ್ಣ ವ್ಯಕ್ತಿ, ನಾನೇನು ಮಾಡಬಲ್ಲೆ? ಎಂದು ಭಾವಿಸುವವರಿಗೆ ಜೇನುನೊಣಗಳು ಉತ್ತಮ ಉದಾಹರಣೆ. ಅವುಗಳಲ್ಲಿ ನಾವು ತಿಳಿದುಕೊಳ್ಳಬೇಕಾದ ಬಹಳಷ್ಟು ಜೀವನ ಪಾಠಗಳಿವೆ. ಜೇನು ನೊಣಗಳಿಗೆ ತಲೆ ನೋವು, ಜ್ವರ, ವಿಶ್ರಾಂತಿ, ಗಂಟುನೋವುಗಳಿಲ್ಲ. ಗಡಿಯಾರ ನೋಡಿ ಅವು ಕೆಲಸ ಮಾಡುವುದಿಲ್ಲ. ಒಂದು ತಂಡವಾಗಿ ಕೆಲಸ ಮಾಡುವುದನ್ನು ನೋಡಬೇಕಾದರೆ ನಾವು ಜೇನಿನ ಕೆಲಸಗಳನ್ನು ನೋಡಬೇಕಾಗುತ್ತದೆ. ರಾಣಿಜೇನಿನ ಮಾತನ್ನು ಯಾವುದೇ ಜೇನುನೊಣಗಳು ಮೀರುವುದಿಲ್ಲ. ಜೊತೆಗಿರುವ 40 ರಿಂದ 50 ಸಾವಿರ ಹುಳಗಳು ಯಾವತ್ತೂ ಬಂಡಾಯವೆದ್ದಿಲ್ಲ. ಪ್ರತಿಭಟನೆ ಮಾಡಿಲ್ಲ. ಅವುಗಳ ಗೂಡು ಯಾವಾಗಲೂ ಸ್ವಚ್ಛವಾಗಿರುತ್ತದೆ. ಗೂಡು ಮತ್ತು ರಾಣಿಯನ್ನು ರಕ್ಷಿಸುವುದಕ್ಕಾಗಿ ಒಬ್ಬರಿಗೆ ಕಚ್ಚಿ ಅವು ಪ್ರಾಣವನ್ನು ಕಳೆದುಕೊಳ್ಳಲು ಕೂಡಾ ತಯಾರಾಗಿರುತ್ತವೆ.
ಕೆಲವೊಮ್ಮೆ ಸಣ್ಣಪುಟ್ಟ ಕೆಲಸ ಮಾಡುವವರಿಗೆ ‘ಅವನು ನಿಷ್ಪ್ರಯೋಜಕ, ಏನೂ ಪ್ರಯೋಜನವಿಲ್ಲ’ ಎಂದು ಹೇಳುತ್ತೇವೆ. ಆದರೆ ಮುಂದೊಂದು ದಿನ ಅವರು ಒಂದಲ್ಲ ಒಂದು ರೀತಿಯಲ್ಲಿ ಉಪಯುಕ್ತರೇ ಆಗಿರುತ್ತಾರೆ. ಒಬ್ಬ ಐಸ್ ಫ್ಯಾಕ್ಟರಿಯ ಮ್ಯಾನೇಜರ್ ಕಚೇರಿಯಿಂದ ಮನೆಗೆ ತೆರಳಬೇಕಾದರೆ ದಿನಾಲೂ ವಾಚ್‍ಮ್ಯಾನ್‍ಗೆ ‘ಏನಪ್ಪಾ.. ಚೆನ್ನಾಗಿದ್ದೀಯಾ..?’ ಎಂದು ವಿಚಾರಿಸಿ, ‘ಗುಡ್‍ನೈಟ್’ ಎಂದು ಹೇಳಿ ಹೋಗುತ್ತಿದ್ದನಂತೆ. ಒಂದು ದಿನ ಅವನು ಲೈಟ್ ಕಂಡಿತು ಎಂದು ಐಸ್ ಫ್ಯಾಕ್ಟರಿಯ ಒಳಗೆ ಹೋಗುತ್ತಾನೆ. ಹೋದ ಕೂಡಲೇ ತನ್ನಿಂತಾನೆ ಬಾಗಿಲು ಮುಚ್ಚುತ್ತದೆ. ಅವನ ಬಳಿ ಕೀಲಿ ಕೈ ಇರುವುದಿಲ್ಲ. ಎಷ್ಟೇ ಬಡಿದರೂ ಬಾಗಿಲು ತೆರೆದುಕೊಳ್ಳುವುದಿಲ್ಲ. ಸಾವು – ಬದುಕಿನ ನಡುವೆ ಹೋರಾಡುತ್ತಿರುವಾಗ ವಾಚ್‍ಮ್ಯಾನ್ ಬಂದು ಬಾಗಿಲು ತೆರೆಯುತ್ತಾನೆ. ಆಗ ಮ್ಯಾನೇಜರ್‍ಗೆ ಆಶ್ಚರ್ಯವಾಗಿ ‘ನಿನಗೆ ಯಾರು ಹೇಳಿದ್ದು ನಾನು ಇಲ್ಲಿ ಸಿಲುಕಿಕೊಂಡಿದ್ದೇನೆ ಎಂದು?’ ಎಂಬುದಾಗಿ ಕೇಳಿದನಂತೆ. ಅದಕ್ಕೆ ‘ಇಲ್ಲ ಸಾರ್, ನೀವು ಯಾವಾಗಲೂ ಹೋಗುವಾಗ ನನಗೆ ಗುಡ್‍ನೈಟ್ ಹೇಳಿ ಹೋಗುತ್ತೀರಿ. ಇವತ್ತು ನೀವು ಹೇಳಲಿಲ್ಲ. ಹಾಗಾಗಿ ನೀವು ಇಲ್ಲೇ ಎಲ್ಲೋ ಇರಬೇಕು ಎಂದು ನೋಡುತ್ತಿದ್ದೆ. ಇಲ್ಲಿ ಲೈಟ್ ಕಂಡಿತು. ಅದಕ್ಕೆ ಬಂದು ಬಾಗಿಲು ತೆಗೆದೆ’ ಎಂದನಂತೆ. ನಿಕೃಷ್ಟ ವ್ಯಕ್ತಿ ಎಂದು ನಾವು ಯಾರನ್ನು ಭಾವಿಸುತ್ತೇವೆಯೋ ಅವರು ನಮಗೆ ಜೀವ ಉಳಿಸುವ ಕೆಲಸ ಮಾಡುತ್ತಾರೆ ಎಂಬುವುದಕ್ಕೆ ಈ ಘಟನೆ ಉತ್ತಮ ಉದಾಹರಣೆಯಾಗಬಲ್ಲದು.
ನಾವು ಮನೆಯಲ್ಲಿ ಕಾಲು ಒರೆಸುವ ಬಟ್ಟೆ ಮತ್ತು ಮನೆ ಒರೆಸುವ ಬಟ್ಟೆಯನ್ನು ಇಟ್ಟುಕೊಳ್ಳುತ್ತೇವೆ. ಅದರಲ್ಲಿ ಎರಡೂ ಬೇಕು. ಇಲ್ಲವಾದರೆ ಇಡೀ ಮನೆ ಗಲೀಜು ಆಗುತ್ತದೆ. ಹಾಗಾಗಿ ಆ ಬಟ್ಟೆಗಳಿಗೂ ಅದರದ್ದೇ ಆದ ಸ್ಥಾನಮಾನ ಇರುತ್ತದೆ. ಅದನ್ನು ನಾವು ಯಾವಾಗಲೂ ಯೋಚನೆ ಮಾಡಬೇಕಾಗುತ್ತದೆ.
ನಮ್ಮ ಕರ್ತವ್ಯವನ್ನು ನಿರ್ವಹಿಸುವಾಗ ಶ್ರೇಷ್ಠ ಕೆಲಸ, ಸಾಮಾನ್ಯ ಕೆಲಸ ಎಂಬ ಭೇದಭಾವ ಕೆಲಸ ಮಾಡುವವರಲ್ಲೂ ಇರಬಾರದು, ಅದನ್ನು ನೋಡುವವರಲ್ಲೂ ಇರಬಾರದು. ಪ್ರತಿಯೊಂದು ಕೆಲಸಕ್ಕೂ, ಕೆಲಸಗಾರನಿಗೂ ಅವನದ್ದೇ ಆದ ಮಹತ್ವ, ಆತ್ಮಗೌರವ ಇದೆ. ಅದನ್ನು ಅರಿತು ಬದುಕುವ ಕಲೆಯನ್ನು ರೂಢಿಸಿಕೊಳ್ಳೋಣ.

Facebook
Twitter
WhatsApp
LinkedIn
Telegram

Leave a Reply

Your email address will not be published. Required fields are marked *