ಎಲ್ಲರ ಮನ್ನಣೆಗೂ ಪಾತ್ರರಾಗುವ ಯೋಜನೆಯ ಸದಸ್ಯರು

ಆರ್ಥಿಕ ಸಬಲೀಕರಣದ ಜೊತೆಯಲ್ಲಿಯೇ ಸಾಮಾಜಿಕ ಸಬಲೀಕರಣವನ್ನು ಸಾಧಿಸಲು ಯೋಜನೆಯು ಹೇಗೆ ಸಹಕಾರಿಯಾಗಿದೆ ಎಂಬುದನ್ನು ಸಂಕ್ಷಿಪ್ತವಾಗಿ ಹಿಂದಿನ ಸಂಚಿಕೆಯಲ್ಲಿ ತಿಳಿಸಲಾಗಿದೆ. ಸ್ವಸಹಾಯ ಸಂಘ ವ್ಯವಸ್ಥೆಯಲ್ಲಿ ಸಾಮಾನ್ಯ ಮಹಿಳೆಯಲ್ಲಿ ಉತ್ತಮ ಸಂಸ್ಕಾರ ಮತ್ತು ನಾಯಕತ್ವ ಗುಣಗಳನ್ನು ಯಾವ ರೀತಿ ಬೆಳೆಸಲಾಗುತ್ತದೆ ಎಂಬುವುದನ್ನು ಹಿಂದಿನ ಸಂಚಿಕೆಯಲ್ಲಿ ಚರ್ಚಿಸಿದ್ದೆವು. ಅವುಗಳ ಬಗ್ಗೆ ಇನ್ನೊಂದಿಷ್ಟು ಮಾಹಿತಿಗಳನ್ನು ತಿಳಿಯೋಣ.
ಯೋಜನೆಯ ಸ್ವಸಹಾಯ ಸಂಘದಲ್ಲಿರುವ ಮಹಿಳೆಯರು ಸಮಾಜದಲ್ಲಿ ಸಹಜವಾಗಿ ವಿಶೇಷವಾಗಿ ಗುರುತಿಸಲ್ಪಡುತ್ತಾರೆ. ಅವರಲ್ಲಿರುವ ಶಿಸ್ತು, ಸಂಸ್ಕಾರ, ಮಾತನಾಡುವ ಶೈಲಿ, ಇತರರಿಗೆ ನೀಡುವ ಗೌರವ ಇತ್ಯಾದಿಗಳಿಂದ ಅವರು ಸಮಾಜದಲ್ಲಿ ವಿಶೇಷ ಸ್ಥಾನವನ್ನು ಸಹಜವಾಗಿಯೇ ಪಡೆಯುತ್ತಾರೆ. ಅವರ ಮನೆಯಲ್ಲಿಯೂ ಕೂಡಾ ಎಲ್ಲರಿಗೂ ಅವರು ಇಷ್ಟವಾಗುತ್ತಾರೆ. ಮಕ್ಕಳಿಗೆ ಅಕ್ಕರೆಯ ತಾಯಿಯಾಗಿ, ಪತಿಗೆ ಜವಾಬ್ದಾರಿಯುತ ಗೃಹಿಣಿಯಾಗಿ, ಗುರುಹಿರಿಯರಿಗೆ ಪ್ರೀತಿಯ ಮಗಳು, ಅತ್ತೆಗೆ ನೆಚ್ಚಿನ ಸೊಸೆಯಾಗಿ ಎಲ್ಲರಿಗೂ ಬೇಕಾದವರಾಗಿರುತ್ತಾರೆ. ಮನೆಯ ಒಳಗಿನ ಹಾಗೂ ಹೊರಗಿನ ಸ್ವಚ್ಛತೆ ಮತ್ತು ಸುಂದರತೆಗೆ ಇವರೇ ಕಾರಣರಾಗುತ್ತಾರೆ. ಕುಟುಂಬದವರ ಆರೋಗ್ಯವನ್ನು ಕಾಪಾಡಲು ಇವರೇ ಮಹತ್ವದ ಪಾತ್ರವನ್ನು ವಹಿಸುತ್ತಾರೆ. ಶುಚಿತ್ವ ಮತ್ತು ಸ್ವಚ್ಛತೆಯ ವಾತಾವರಣ ಅಷ್ಟೇ ಅಲ್ಲದೇ ಮಾತೃಶ್ರೀ ಅಮ್ಮನವರು ತಿಳಿಸಿಕೊಟ್ಟ ಪೌಷ್ಟಿಕ ಆಹಾರಗಳನ್ನು ಕುಟುಂಬದ ಸದಸ್ಯರಿಗೆ ಉಣಬಡಿಸಿ ಅವರ ಆರೋಗ್ಯವನ್ನು ಕಾಪಾಡುತ್ತಾರೆ. ಮಿತವ್ಯಯದೊಂದಿಗೆ ಸುಂದರ ಹಾಗೂ ಸುಖೀ ಸಂಸಾರವನ್ನು ನಡೆಸಬಹುದು ಎಂದು ಸಾಧಿಸಿ ತೋರಿಸಿದವರು ಇವರಾಗಿದ್ದಾರೆ. ಯೋಜನೆಯಿಂದ ಉಳಿತಾಯದ ಮಹತ್ವವನ್ನು ತಿಳಿದುಕೊಂಡ ಸದಸ್ಯರು ತಾವು ಉಳಿಸುವುದಲ್ಲದೇ ಕುಟುಂಬದ ಸದಸ್ಯರಿಗೂ ಉಳಿಸಿ, ಗಳಿಸುವ ಅಭ್ಯಾಸವನ್ನು ಕಲಿಸಿಕೊಟ್ಟಿದ್ದಾರೆ. ಎಷ್ಟೋ ಮನೆಗಳಲ್ಲಿ ಪ್ರಥಮವಾಗಿ ಬ್ಯಾಂಕಿನಲ್ಲಿ ಖಾತೆ ತೆರೆದದ್ದು ಯೋಜನೆಯ ಸಂಘದಲ್ಲಿರುವ ಮಹಿಳೆಯರೇ ಆಗಿದ್ದಾರೆ. ತಾನು ಬ್ಯಾಂಕಿಗೆ ಕಾಲಿಟ್ಟ ನಂತರ ತನ್ನ ಗಂಡನ ಹಾಗೂ ಇತರ ಸದಸ್ಯರ ಹೆಸರಿನಲ್ಲಿ ಖಾತೆಯನ್ನು ತೆರೆಸಿ, ಬ್ಯಾಂಕ್ ಮತ್ತು ಬ್ಯಾಂಕ್ ವ್ಯವಹಾರವನ್ನು ಅವರಿಗೆ ಪರಿಚಯಿಸಿದ್ದಾರೆ.
ಸಮಾಜದ ಆಗುಹೋಗುಗಳು, ಸರಕಾರದ ಸವಲತ್ತುಗಳು, ಹೊಸ ವಿಷಯಗಳನ್ನು ಯೋಜನೆಯ ಮೂಲಕ ನಿರಂತರವಾಗಿ ತಿಳಿಯುವುದರ ಮೂಲಕ ಮನೆಯ ಮಾರ್ಗದರ್ಶಿ ಇವರೇ ಆಗಿದ್ದಾರೆ. ‘ತಾಯಿಯೇ ಮೊದಲ ಗುರು’ ಎಂಬ ಗಾದೆ ಇದ್ದರೆ ನಮ್ಮ ಯೋಜನೆಯಲ್ಲಿರುವ ಮಹಿಳಾ ಸದಸ್ಯರು ಅವರ ಮನೆಯ ‘ಸರ್ವಕಾಲೀನ ಗುರು’ ಆಗಿದ್ದಾರೆ. ಗಂಡನ ಕೃಷಿ ಕೆಲಸಕ್ಕಿರಲಿ, ಸ್ವಉದ್ಯೋಗಕ್ಕಿರಲಿ ಇವರೇ ವಿತ್ತ ಸಚಿವರು (ಫೈನಾನ್ಸ್ ಮಿನಿಸ್ಟರ್). ಇವರು ಸಂಘದ ಮೂಲಕ ಅತೀ ಕಡಿಮೆ ಬಡ್ಡಿದರದಲ್ಲಿ ಯೋಜನೆಯ ವ್ಯವಸ್ಥೆಯಲ್ಲಿ ಬ್ಯಾಂಕ್‌ನ ಸಾಲ ಪಡೆದು ಗಂಡನಿಗೆ ನೀಡಿದರೆ ಮಾತ್ರ ಪತಿರಾಯನು ಕೈಗೊಳ್ಳುವ ಕೆಲಸ ಕಾರ್ಯಗಳು ನಡೆಯಲು ಸಾಧ್ಯ. ಆ ಸಾಲದ ವಿನಿಯೋಗ, ಸದ್ಬಳಕೆ ಆಗುವಂತೆ ಸದಾ ಕಟ್ಟೆಚ್ಚರ ವಹಿಸುವುದಲ್ಲದೇ ಉತ್ತಮ ಆದಾಯ ಪಡೆದು ಆರ್ಥಿಕವಾಗಿ ಅಭಿವೃದ್ಧಿ ಹೊಂದಿ ಸುಲಭವಾಗಿ ಸಾಲವನ್ನು ತೀರಿಸುವಂತೆ ಎಲ್ಲಾ ರೀತಿಯಿಂದ ಜಾಗ್ರತೆ ವಹಿಸುವವರು ಇವರೇ ಆಗಿದ್ದಾರೆ. ಯೋಜನೆಯ ವ್ಯವಸ್ಥೆಯಲ್ಲಿನ ಸುರಕ್ಷಾ ವಿಮೆಯನ್ನು ಮಾಡಿ, ಕುಟುಂಬದ ಸದಸ್ಯರ ಆರೋಗ್ಯವನ್ನು ಕಾಪಾಡುತ್ತಾರೆ. ‘ನಿರಂತರ’ ಪುಸ್ತಕವನ್ನು ನೀಡಿ ಜ್ಞಾನವನ್ನು ಹೆಚ್ಚಿಸುತ್ತಾರೆ.
ಮನೆಯ ಹೊರಗೂ ಎಲ್ಲರ ಗೌರವಕ್ಕೆ ಇವರು ಪಾತ್ರರಾಗುತ್ತಾರೆ. ಜವಾಬ್ದಾರಿಯುತವಾಗಿ ಮಾತನಾಡುತ್ತಾ, ಇತರರಿಗೆ ಕೈಲಾದ ಸಹಕಾರ, ಪ್ರೋತ್ಸಾಹವನ್ನು ನೀಡುತ್ತಾರೆ. ಇತರರ ಸಮಸ್ಯೆಗಳಿಗೆ ಸ್ಪಂದಿಸಿ, ಪರಿಹಾರವನ್ನು ಸೂಚಿಸುವ ದೊಡ್ಡ ಗುಣ ಇವರಲ್ಲಿದೆ. ಇಂದು ಎಷ್ಟೋ ಗ್ರಾಮ ಪಂಚಾಯತ್‌ಗಳ ಚುನಾವಣೆಯಲ್ಲಿ ಯೋಜನೆಯ ಮಹಿಳಾ ಸದಸ್ಯರು ಅತ್ಯಂತ ಹೆಚ್ಚು ಮತಗಳಿಂದ ಗೆದ್ದು ಬಂದಿದ್ದಾರೆ. ಅವರ ಆ ಗೆಲುವು ಕೇವಲ ಚುನಾವಣೆಗೆ ಮಾತ್ರ ಸೀಮಿತವಾಗಲಿಲ್ಲ. ಚುನಾವಣೆಯ ನಂತರ ಸದಾ ಜನರ ಮನಸ್ಸನ್ನು ಗೆದ್ದಿದ್ದಾರೆ. ಯೋಜನೆಯ ಗರಡಿಯಲ್ಲಿ ಪಕ್ವವಾಗಿ ಪಳಗಿದ್ದರಿಂದ ತಮ್ಮ ವ್ಯಾಪ್ತಿಯಲ್ಲಿ ಬರುವ ಎಲ್ಲ ಅವಕಾಶಗಳನ್ನು ಅತ್ಯುತ್ತಮವಾಗಿ ಬಳಕೆ ಮಾಡಿಕೊಂಡು ತಮ್ಮ ಊರಿನ ಜನರಿಗೆ ಅನೇಕ ಸವಲತ್ತುಗಳನ್ನು ದೊರಕಿಸಿಕೊಡುತ್ತಾರೆ. ಸರಕಾರದ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನವಾಗುವಂತೆ ತಾವೂ ಶ್ರಮ ವಹಿಸುವುದಲ್ಲದೇ, ಸಂಬAಧಪಟ್ಟ ಅಧಿಕಾರಿಗಳೂ ವಹಿಸುವಂತೆ ನೋಡಿಕೊಳ್ಳುತ್ತಾರೆ. ಯೋಜನೆಯ ಸದಸ್ಯರನ್ನು ಊರಿನ ಎಷ್ಟೋ ಸಮಿತಿಗಳಿಗೆ ಅಧ್ಯಕ್ಷ, ಕಾರ್ಯದರ್ಶಿ, ಸದಸ್ಯರನ್ನಾಗಿಯೋ ಆಯ್ಕೆ ಮಾಡುತ್ತಾರೆ. ಅಲ್ಲೂ ಕೂಡಾ ಅದ್ವಿತೀಯ ಸಾಧನೆಯನ್ನು ಯೋಜನೆಯ ಮಹಿಳಾ ಸದಸ್ಯರು ಮಾಡಿದ್ದಾರೆ.
ಮತ್ತಷ್ಟು ವಿಚಾರಗಳು ಮುಂದಿನ ಸಂಚಿಕೆಯಲ್ಲಿ.

Facebook
Twitter
WhatsApp
LinkedIn
Telegram