ಅನಿಲ್ ಕುಮಾರ್ ಎಸ್.ಎಸ್.
ಭಾರತೀಯ ರಿಸರ್ವ್ ಬ್ಯಾಂಕ್ ಅನುವು ಮಾಡಿಕೊಟ್ಟಿರುವಂತೆ ‘ಬ್ಯಾಂಕ್ಗಳ ವ್ಯವಹಾರ ಪ್ರತಿನಿಧಿ’ (Business Correspondence) ಆಗಿ ಸೇವೆಗೈಯುತ್ತಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ.) ದೇಶದ ಬ್ಯಾಂಕಿoಗ್ ಸೇವಾ ಕ್ಷೇತ್ರದಲ್ಲಿ ಮಾಡಿದ ಸಾಧನೆಗೆ ‘ಭಾರತೀಯ ಅತೀ ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಂಘಟನೆ (Chamber Of MSME)’ ಕೊಡಮಾಡುವ ಅತ್ಯುನ್ನತ ಪ್ರಶಸ್ತಿಯಾದ ‘ಬಿ.ಸಿ. ಮಾದರಿಯ ಶ್ರೇಷ್ಠ ಎಂ.ಎಸ್.ಎo.ಇ. ಪೋಷಕ ಸಂಸ್ಥೆ-2025 ಪ್ರಶಸ್ತಿ’ ಲಭಿಸಿದೆ. ಇದೊಂದು ರಾಷ್ಟ್ರೀಯ ಪ್ರತಿಷ್ಠಿತ ಪ್ರಶಸ್ತಿಯಾಗಿದ್ದು ದೇಶದಲ್ಲಿ ಬಿ.ಸಿ.ಯಾಗಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಗಳ ಪೈಕಿ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಮಾತ್ರ ಈ ಪ್ರಶಸ್ತಿಗೆ ಭಾಜನವಾಗಿದೆ.
ಇತ್ತೀಚೆಗೆ ನವದೆಹಲಿಯಲ್ಲಿ ಕೇಂದ್ರ ಸರಕಾರದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವರಾದ ಪಿಯೂಷ್ ಗೋಯಲ್ರವರು ಪ್ರಶಸ್ತಿ ಪ್ರಧಾನ ಮಾಡಿದರು. ಈ ಸಂದರ್ಭದಲ್ಲಿ ಡಾ|| ಡಿ. ವೀರೇಂದ್ರ ಹೆಗ್ಗಡೆಯವರು ಪ್ರಾರಂಭಿಸಿದ ಈ ಬಿ.ಸಿ. ಕಾರ್ಯಚಟುವಟಿಕೆಯ ಕೊಡುಗೆಗಳನ್ನು ಮಾನ್ಯ ಸಚಿವರು ಶ್ಲಾಘಿಸಿದರು.
ದೇಶದ ಎಲ್ಲಾ ಗ್ರಾಮ ಗ್ರಾಮಗಳಲ್ಲಿ ಬ್ಯಾಂಕ್ಗಳು ತಮ್ಮ ಶಾಖೆಗಳನ್ನು ತೆರೆದು ಬ್ಯಾಂಕಿoಗ್ ಸೇವೆ ನೀಡುವುದು ಅಸಾಧ್ಯವೆಂಬುದನ್ನು ಪರಿಗಣಿಸಿದ ವಿತ್ತ ಸಚಿವಾಲಯ ಹಾಗೂ ದೇಶದ ಆರ್ಥಿಕ ನಿಯಂತ್ರಕ ಸಂಸ್ಥೆಗಳು ಆರ್ಥಿಕ ಸೇರ್ಪಡೆ (Financial Inclusion) ಕಾರ್ಯಕ್ರಮದಡಿ ಬಿ.ಸಿ. Business Correspondence-ಬ್ಯಾಂಕ್ಗಳ ವ್ಯವಹಾರ ಪ್ರತಿನಿಧಿ) ಸೇವೆಗಳಿಗೆ ಅವಕಾಶ ಕಲ್ಪಿಸಿಕೊಟ್ಟಿದೆ. ಇದರನ್ವಯ ‘ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್’ ಅನ್ನು ಬ್ಯಾಂಕ್ಗಳು ‘ಎಸ್.ಹೆಚ್.ಜಿ. ಬ್ಯಾಂಕ್ ಕ್ರೆಡಿಟ್ ಲಿಂಕೆಜ್ ಪ್ರೋಗ್ರಾಮ್ (ಸ್ವಸಹಾಯ ಸಂಘಗಳ ಬ್ಯಾಂಕ್ ಸಾಲ ಸೌಲಭ್ಯ ಒದಗಣೆ)’ ಸೇವೆಗಳನ್ನು ಒದಗಿಸಲು ತನ್ನ ಬ್ಯಾಂಕ್ನ ವ್ಯವಹಾರ ಪ್ರತಿನಿಧಿ ಅಂದರೆ ‘ಬಿ.ಸಿ.’ಯಾಗಿ ನಿಯೋಜಿಸಿಕೊಂಡಿವೆ. ತನ್ಮೂಲಕ ಗ್ರಾಮ ಗ್ರಾಮಗಳಲ್ಲಿ ಸ್ವಸಹಾಯ ಸಂಘಗಳಿಗೆ ಬ್ಯಾಂಕ್ಗಳಿoದ ನೇರವಾಗಿ ಅತೀ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯವನ್ನು ಒದಗಿಸುತ್ತಿವೆ. ಈ ಮೂಲಕ ಬ್ಯಾಂಕ್ನ ಸಾಲ ಸೌಲಭ್ಯಗಳನ್ನು ಗ್ರಾಮ ಗ್ರಾಮಗಳಿಗೆ ತಲುಪಿಸುವ ಕೆಲಸವನ್ನು ಗ್ರಾಮಾಭಿವೃದ್ಧಿ ಯೋಜನೆ ಮಾಡುತ್ತಿದೆ.
ಗ್ರಾಮಾಭಿವೃದ್ಧಿ ಯೋಜನೆಯು ಸ್ವಸಹಾಯ ಸಂಘಗಳಿಗೆ ಬ್ಯಾಂಕ್ಗಳಿoದ ಅತೀ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯಗಳನ್ನು ಒದಗಿಸುವ ಮೂಲಕ ಇಂದು ಲಕ್ಷಾಂತರ ಕುಟುಂಬಗಳಲ್ಲಿ ಕೃಷಿ, ಸ್ವಉದ್ಯೋಗ ಚಟುವಟಿಕೆಗಳನ್ನು ಸೃಷ್ಟಿಸಿ ಗ್ರಾಮೀಣ ಪ್ರದೇಶದ ರೈತರು, ಬಡವರು, ಮಹಿಳೆಯರ ಸ್ವಾವಲಂಬಿ ಬದುಕಿಗೆ ನೆರವಾಗಿದೆ. ಇದರ ಜೊತೆಗೆ ಗ್ರಾಮೀಣ ಪ್ರದೇಶದ ಯುವಕ ಯುವತಿಯರಿಗೆ ಬ್ಯಾಂಕ್ನಿoದ ಸ್ವಸಹಾಯ ಸಂಘ ವ್ಯವಸ್ಥೆಯಲ್ಲಿ ಶೇ. 14ರ (ಬ್ಯಾಂಕ್ ಬಡ್ಡಿದರ ಹಾಗೂ ಬ್ಯಾಂಕ್ ನೀಡುವ ಬಿ.ಸಿ. ಸೇವಾ ಶುಲ್ಕ ಸೇರಿ) ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯಗಳನ್ನು, ತರಬೇತಿಗಳನ್ನು ಒದಗಿಸುವ ಮೂಲಕ ಲಕ್ಷಾಂತರ ಮಂದಿಗೆ ಗುಡಿ ಕೈಗಾರಿಕೆಗಳು, ಕಿರು ಉದ್ಯಮ, ವ್ಯಾಪಾರ, ಆರ್ಥಿಕ ಚಟುವಟಿಕೆಗಳನ್ನು ನಡೆಸಲು ನೆರವಾಗಿದೆ. ಸ್ವ ಉದ್ಯೋಗವನ್ನು ಸೃಷ್ಟಿಸುವ ಮತ್ತು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈವರೆಗೆ ಬ್ಯಾಂಕಿನ ಮೂಲಕ ರೂ. 33,678 ಕೋಟಿ ಮೊತ್ತದ ಆರ್ಥಿಕ ಸೌಲಭ್ಯವನ್ನು ಒದಗಿಸಲಾಗಿದೆ. ತನ್ಮೂಲಕ ಲಕ್ಷಾಂತರ ಯುವಕ-ಯುವತಿಯರು ಸ್ವಉದ್ಯೋಗಿಗಳಾಗಲು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರಣೀಭೂತವಾಗಿದೆ. ಕಳೆದ ಆರ್ಥಿಕ ವರ್ಷದಲ್ಲಿ ಸುಮಾರು 4,41,000 ಮಂದಿಗೆ ಸ್ವ ಉದ್ಯೋಗ, ಆರ್ಥಿಕ ಚಟುವಟಿಕೆಗಳನ್ನು ಕೈಗೊಳ್ಳಲು ಬ್ಯಾಂಕಿನಿoದ ಸಾಲ ಸೌಲಭ್ಯಗಳನ್ನು ಒದಗಿಸಿ ಎಂ.ಎಸ್.ಎo.ಇ. ಕ್ಷೇತ್ರದ ಅಭಿವೃದ್ಧಿಗೆ ಗಣನೀಯ ಕೊಡುಗೆಯನ್ನು ನೀಡಿದೆ.
ಗ್ರಾಮಾಭಿವೃದ್ಧಿ ಯೋಜನೆಯು ದೇಶದ ಅತ್ಯಂತ ಪ್ರಮುಖ ಬ್ಯಾಂಕ್ ಆದ ‘ಸಿಡ್ಬಿ’ ( ಬ್ಯಾಂಕ್ನ ‘ಪ್ರಯಾಸ್’ ಕಾರ್ಯಕ್ರಮವನ್ನು ಅನುಷ್ಠಾನ ಮಾಡುತ್ತಿದ್ದು ಪ್ರಸ್ತುತ ಶೇ. 13.50 ಬಡ್ಡಿದರದಲ್ಲಿ ಕಿರು ಉದ್ಯಮವನ್ನು ಆರಂಭಿಸಲು ಗರಿಷ್ಠ ರೂ. ೫ ಲಕ್ಷ ಮೊತ್ತದ ಸಾಲವನ್ನು ಸಿಡ್ಬಿಯಿಂದ ನೇರವಾಗಿ ಸ್ವ ಉದ್ಯೋಗ ಘಟಕ ಪ್ರಾರಂಭಿಸುವ ಸದಸ್ಯರಿಗೆ ದೊರಕಿಸಿಕೊಡುತ್ತಿದೆ. ಸಿಡ್ಬಿ ಪ್ರಯಾಸ್ ಕಾರ್ಯಕ್ರಮದ ಮೂಲಕ 68,,457 ಸದಸ್ಯರಿಗೆ ರೂ. 2,460 ಕೋಟಿ ಮೊತ್ತದ ಸಾಲ ಸೌಲಭ್ಯಗಳನ್ನು ಒದಗಿಸಿ ಎಂ.ಎಸ್.ಎo.ಇ. ಕ್ಷೇತ್ರದ ಅಭಿವೃದ್ಧಿಗೆ ವಿಶೇಷ ಕೊಡುಗೆಯನ್ನು ನೀಡಿರುತ್ತದೆ. ಆ ಮೂಲಕ ಇಂದು ಸಾವಿರಾರು ಮಂದಿ ಗ್ರಾಮೀಣ ಪ್ರದೇಶದ ಯುವಕ-ಯುವತಿಯರು ವ್ಯಾಪಾರ, ಕಿರು ಉದ್ಯಮಗಳನ್ನು ಆರಂಭಿಸುವ ಮೂಲಕ ಸ್ವಾವಲಂಬಿ ಬದುಕನ್ನು ಸಾಗಿಸುತ್ತಿದ್ದಾರೆ.
