ಬದುಕಿಗೆ ಖುಷಿ ನೀಡಿದ ನೈಸರ್ಗಿಕ ಕೃಷಿ

ಭೂಮಿಗೆ ಒಂಚೂರು ರಾಸಾಯನಿಕ ಹಾಕದೆ ಸರ್ವ ಹಣ್ಣುಗಳನ್ನು ಹೇಗೆ ಬೆಳೆಯಬಹುದು ಎಂಬ ಪ್ರಶ್ನೆಗೆ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ರಾಂಪುರ ಗ್ರಾಮದ ಕುಮಾರ್‌ರವರ ಪ್ರಯತ್ನ ಉತ್ತಮ ಉದಾಹರಣೆ.
ಕುಮಾರ್‌ರವರು ತನ್ನ ಭೂಮಿಗೆ ಸಾವಿರಾರು ರೂಪಾಯಿ ತೊಡಗಿಸಿ ಮೂಟೆ ಮೂಟೆ ರಸಗೊಬ್ಬರ ಸುರಿದು ಕೃಷಿ ಬೆಳೆಯುವ ಬದಲು ಶೂನ್ಯ ಬಂಡವಾಳದಲ್ಲಿ ಏನಾದರೊಂದು ಸಾಧನೆ ಮಾಡಬೇಕೆಂದುಕೊAಡಾಗ ಅವರನ್ನು ಸೆಳೆದದ್ದೆ ಈ ನೈಸರ್ಗಿಕ ಕೃಷಿ ವಿಧಾನ. ಐದು ವರ್ಷಗಳ ಹಿಂದೆ ತನ್ನ ಈ ಯೋಚನೆಗೆ ಜೀವ ತುಂಬಲು ಮೊದಲಾಗಿ ಹೈನುಗಾರಿಕೆಯನ್ನು ಆರಂಭಿಸಿ ಕೃಷಿಗಾಗಿ ಹಟ್ಟಿ ಗೊಬ್ಬರವನ್ನು ಸಿದ್ಧಗೊಳಿಸಿಕೊಂಡರು. ಖಾಲಿ ಇದ್ದ ಎರಡುವರೆ ಎಕರೆಯಲ್ಲಿ ನಿತ್ಯ ಆದಾಯ ತರುವ ಯಾವುದಾದರೂ ಕೃಷಿಯನ್ನು ಕೈಗೊಳ್ಳಬೇಕೆಂದು ಯೋಚಿಸಿ ಒಂದು ಎಕರೆಯಲ್ಲಿ ಅಡಿಕೆ, ಇನ್ನುಳಿದ ಒಂದು ಎಕರೆಯಲ್ಲಿ ಐವತ್ತು ತೆಂಗು, ತೆಂಗು ಮತ್ತು ಅಡಿಕೆ ಸಾಲುಗಳ ಮಧ್ಯೆ, ಜಮೀನಿನ ಸುತ್ತ ಮತ್ತು ಉಳಿದ ಅರ್ಧ ಎಕರೆಯಲ್ಲಿ ನಿಂಬೆ, ಸೇಬು, ಕಿತ್ತಾಳೆ, ಮಾವು, ನೋನಿ, ನುಗ್ಗೆ, ದಾಳಿಂಬೆ, ಮರಸೇಬು, ಕಾಶ್ಮೀರ ಮತ್ತು ಮಲೇಷಿಯಾ ಸೇಬು, ಮೂಸಂಬಿ, ಬಟರ್‌ಫ್ರೂಟ್, ನೇರಳೆ, ಜಂಬು ನೇರಳೆ, ಚಕ್ಕೋತ, ಸೀತಾಫಲ, ರಾಮಫಲ, ಮರಗೆಣಸು, ಸುವರ್ಣಗೆಡ್ಡೆ, ಕೋಕೋ, ಬಳ್ಳಿ ತರಕಾರಿ, ವೆಲ್‌ವೆಟ್ ಬೀನ್ಸ್, ಏಲಕ್ಕಿ, ಕಾಶಿ ಮೆಣಸು ಹೀಗೆ ಸರ್ವ ಬೆಳೆಗಳನ್ನು ಬೆಳೆದರು.
ಆಹಾರದಲ್ಲೂ ಸಾವಯವ : ತನ್ನ ಮನೆಗೆ ಬೇಕಾದ ಶೇ. 80ರಷ್ಟು ಪಾಲು ಅಂದರೆ ಮೆಣಸು, ತರಕಾರಿ, ಕಾಳು ಮೆಣಸು, ಕರಿಬೇವು, ಹಣ್ಣುಹಂಪಲು ಮುಂತಾದವುಗಳನ್ನು ತಾನೇ ಸ್ವತಹ ಬೆಳೆಯುವ ಮೂಲಕ ತಾನು ಸೇವಿಸುವ ಆಹಾರವನ್ನು ಸಾವಯವಗೊಳಿಸಿಕೊಂಡಿದ್ದಾರೆ.
ಸಾವಯವದಲ್ಲಿ ಭರ್ಜರಿ ಆದಾಯ : ಇದೀಗ ಇವರ ಭೂಮಿ ಸಾವಯವ ಕೃಷಿಗೆ ಹೊಂದಿಕೊಂಡಿದ್ದು ಯಾವುದೇ ಬೆಳೆಗಳಿಗೆ ಔಷಧ ಸಿಂಪಡಿಸುವ ಪ್ರಮೇಯವೇ ಎದುರಾಗಿಲ್ಲ. ಗೊಬ್ಬರವನ್ನು ತಾನೇ ತಯಾರಿಸಿಕೊಂಡ ಪರಿಣಾಮ ಆ ಖರ್ಚು ಇಲ್ಲ. ಇನ್ನು ಗೊಬ್ಬರವನ್ನು ನೀಡುವಾಗ ಒಂಚೂರು ಹೆಚ್ಚು ಕಡಿಮೆ ಆದರೂ ಸಮಸ್ಯೆಯಾಗಲ್ಲ. ನೀರು ಕೂಡಾ ಹೆಚ್ಚು ಬೇಕಾಗಿಲ್ಲ. ಇವರು ಹನಿ ನೀರಾವರಿ ವ್ಯವಸ್ಥೆಯನ್ನು ಕೈಗೊಂಡಿದ್ದಾರೆ. ಸಾವಯವದಲ್ಲಿ ಔಷಧ ಸಿಂಪಡಣೆಯಂತಹ ಹೆಚ್ಚಿನ ಕೃಷಿ ಕೆಲಸಗಳು ಇರುವುದಿಲ್ಲ. ಗೊಬ್ಬರ ನೀಡುವ, ಕಟಾವು ಮುಂತಾದ ಅಗತ್ಯ ಕೆಲಸಗಳಲ್ಲಿ ಪತ್ನಿ ಅನುಪಮಾರವರು ಸಾಥ್ ನೀಡುತ್ತಾರೆ.
ಐದು ವರ್ಷದ ನಂತರ ನಿತ್ಯ ಆದಾಯ : ಕುಮಾರ್ ನಿತ್ಯ ಆದಾಯ ಪಡೆಯುವ ನಿಟ್ಟಿನಲ್ಲಿ ಹೆಚ್ಚಾಗಿ ಹಣ್ಣಿನ ಗಿಡಗಳ ಮೊರೆ ಹೋದ ಪರಿಣಾಮ ಮೊದಲ ಐದು ವರ್ಷಗಳ ಕಾಲ ಯಾವುದೇ ಆದಾಯ ದೊರೆಯುವುದಿಲ್ಲ. ನಂತರ ನಿತ್ಯ ಆದಾಯ ದೊರೆಯುತ್ತದೆ. ಸಾಮಾನ್ಯವಾಗಿ ತರಕಾರಿ ಬೆಳೆಗಳನ್ನು ಹೊರತುಪಡಿಸಿ ಅಡಿಕೆ, ತೆಂಗು, ಹಣ್ಣು-ಹಂಪಲು ಮುಂತಾದ ಬೆಳೆಗಳಿಂದ ಆದಾಯ ಪಡೆಯಲು ಐದು ವರ್ಷ ಕಾಯಬೇಕಾಗುತ್ತದೆ. ಮಾತ್ರವಲ್ಲ ಲಕ್ಷಾಂತರ ರೂಪಾಯಿ ಖರ್ಚು ಕೂಡಾ ಮಾಡಬೇಕಾಗುತ್ತದೆ. ಸಾವಯವದಲ್ಲಿ ಆ ಖರ್ಚು ಉಳಿಕೆಯಾಗುತ್ತದೆ ಮತ್ತು ದೀರ್ಘ ಕಾಲದವರೆಗೆ ಫಸಲನ್ನು ಪಡೆಯಬಹುದಾಗಿದೆ.
ಇದೀಗ ಕುಮಾರ್‌ರವರಿಗೆ ನಿತ್ಯ ನೂರರಿಂದ ಎಂಟುನೂರು ನಿಂಬೆ ಮಾರಾಟಕ್ಕೆ ದೊರೆಯುತ್ತಿದೆ. ನಾಟಿ ಕೋಳಿಗಳನ್ನು ಸಾಕುತ್ತಿದ್ದು ಅವುಗಳ ಮೊಟ್ಟೆ ರೂ. 15ರಂತೆ ಮಾರಾಟವಾಗುತ್ತಿದೆ. ಅಂತೂ ಪ್ರತಿದಿನ ಸರಾಸರಿ ರೂ. 500 ರಂತೆ ಆದಾಯ ಕೈ ಸೇರುತ್ತಿದೆ. ತನ್ನ ಜಮೀನಿಗೆ ಸುತ್ತ ಬೇಲಿಗಾಗಿ ನೆಟ್ಟ ಹೆಬ್ಬೇವು, ಸಾಗುವಾನಿ ಮರಗಳು ಮುಂದೊಂದು ದಿನ ಉತ್ತಮ ಆದಾಯವನ್ನು ನೀಡುತ್ತವೆ. ಅವುಗಳಿಗೆ ನೆಟ್ಟ ಕರಿಮೆಣಸಿನ ಬಳ್ಳಿ ಈಗಾಗಲೇ ಆದಾಯವನ್ನು ನೀಡುತ್ತಿದೆ. ಒಟ್ಟಾರೆಯಾಗಿ ವರ್ಷಕ್ಕೆ ರೂ. 3 ಲಕ್ಷ ಆದಾಯ ಇವರ ಜೇಬು ಸೇರುತ್ತದೆ. ಪತ್ನಿ ಅನುಪಮಾರವರು ಗ್ರಾಮಾಭಿವೃದ್ಧಿ ಯೋಜನೆಯ ಸ್ವಸಹಾಯ ಸಂಘದ ಸದಸ್ಯರಾಗಿದ್ದಾರೆ. ಇವರ ಕೃಷಿ ಕಾಯಕಕ್ಕೆ ಯೋಜನೆಯಿಂದಲೂ ಅಗತ್ಯ ಮಾಹಿತಿ, ಮಾರ್ಗದರ್ಶನ ದೊರೆತಿದೆ.
ಕುಮಾರ್‌ರವರ ಸಾಧನೆಗೆ ಹಲವಾರು ಸನ್ಮಾನಗಳು, ಜಿಲ್ಲಾಮಟ್ಟದ ಪ್ರಶಸ್ತಿಗಳು ಸಂದಿವೆ. ಇವರ ಕೃಷಿ ವಿಧಾನವನ್ನು ಕಣ್ತುಂಬಿಕೊಳ್ಳಲು ರಾಜ್ಯದ ಬೇರೆ ಬೇರೆ ಭಾಗಗಳಿಂದ ಕೃಷಿಕರು ಬರುತ್ತಾರೆ. ಒಟ್ಟಾರೆಯಾಗಿ ಕುಮಾರ್‌ರವರ ಈ ಪ್ರಯತ್ನ ಒಂದಷ್ಟು ಮಂದಿಗೆ ಪ್ರೇರಣೆಯಾದಲ್ಲಿ ಈ ಭೂಮಿ ಮುಂದಿನ ಪೀಳಿಗೆಗೂ ಉಳಿದೀತು! ಸಂಜೆ ಗಂಟೆ 7 ರಿಂದ 8 ರೊಳಗೆ ಕುಮಾರ್‌ರವರಿಗೆ ನೀವು ಕರೆ ಮಾಡಬಹುದು. ಅವರ ದೂರವಾಣಿ ಸಂಖ್ಯೆ : 9964800224.

Facebook
Twitter
WhatsApp
LinkedIn
Telegram