ಡಾ| ಸಂದೀಪ ಹೆಚ್.ಎಸ್.
ಮಕ್ಕಳ ತಜ್ಞರು
ಅದೊಂದು ದಿನ ಎಸ್.ಡಿ.ಎಂ. ಆಸ್ಪತ್ರೆಯ ವಿಭಾಗದಲ್ಲಿ ಮಧ್ಯಾಹ್ನದ ಹೊತ್ತು. ಇನ್ನು ಊಟಕ್ಕೆ ತೆರಳುವ ಎಂದು ಕೈ ತೊಳೆದುಕೊಳ್ಳುತ್ತಿದೆ. ತುರ್ತು ಚಿಕಿತ್ಸಾ ವಿಭಾಗದಿಂದ ಒಂದು ಕರೆ ಬಂತು. 13 ವರ್ಷದ ಮಗುವೊಂದು ಪ್ರಜ್ಞಾಹೀನ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದೆ ಎಂದು! ಕೂಡಲೇ ತುರ್ತುಚಿಕಿತ್ಸಾ ವಿಭಾಗದೆಡೆ ಧಾವಿಸಿದೆ. ಮಗುವಿನ ತುಟಿಗಳು ಒಣಗಿದ್ದವು. ಕರೆದರೂ ಮಾತನಾಡಲಿಲ್ಲ. ಆದರೆ ಹೃದಯ ಬಡಿತ, ಉಸಿರಾಟ ಇನ್ನೂ ಇತ್ತು. ಆ ಮಗುವಿನ ರಕ್ತದಲ್ಲಿ ಸಕ್ಕರೆಯ ಅಂಶ ಎಷ್ಟಿದೆ ಎಂದು ಪರೀಕ್ಷಿಸಿದೆ.
ಮಗುವಿಗೆ ಸಕ್ಕರೆ ಕಾಯಿಲೆ ಉಂಟೆಂದು ಮುಂಚೆ ವೈದ್ಯರು ಹೇಳಿದ್ದಾರೆಯೇ ಎಂದು ಹೆತ್ತವರನ್ನು ಕೇಳಿದಾಗ ‘ಮಗುವಿಗೆ ಸರಿಸುಮಾರು ನಾಲ್ಕು ತಿಂಗಳುಗಳಿಂದ ತಲೆನೋವು, ತೂಕ ಇಳಿಯುವಿಕೆ, ಪದೇ ಪದೇ ಭೇದಿ, ಹಸಿವಿಲ್ಲದಿರುವುದು ಕಂಡುಬಂದಿದ್ದು ಇತ್ತೀಚಿನ ಎರಡು ದಿನಗಳಿಂದ ಆ ಎಲ್ಲ ಸಮಸ್ಯೆಗಳು ಹೆಚ್ಚಿದ್ದು ಅನೇಕ ಸಲ ವಾಂತಿಯಾಗಿ ಮಗು ಇದೀಗ ಪ್ರಜ್ಞಾಹೀನವಾಗಿದೆ’ ಎಂದು ಹೇಳಿ ಜೋರಾಗಿ ಅಳಲು ಪ್ರಾರಂಭಿಸಿದರು.
ಮಗುವಿನ ರಕ್ತ ಪರೀಕ್ಷೆ ಮಾಡಿದಾಗ ಸಕ್ಕರೆ ಕಾಯಿಲೆ ಇರುವುದು ದೃಢಪಟ್ಟಿದ್ದು ಮಾತ್ರವಲ್ಲದೇ ಕಾಯಿಲೆಯು ವಿಪರೀತವಾಗಿ ಮೆದುಳಿಗೂ ಒಂದು ಮಟ್ಟದ ಹಾನಿಯನ್ನು ಉಂಟುಮಾಡಿರುವ ಕಾರಣ ಮಗು ಪ್ರಜ್ಞಾಹೀನವಾಗಿದೆ ಎಂಬುದು ತಿಳಿದು ಬಂದಿತು. ಮೆದುಳಿನ ಸ್ಕಾನಿಂಗ್ ಮಾಡಿದಾಗ ಮೆದುಳಿನಲ್ಲಿ ಊತ ಉಂಟಾಗಿರುವುದು ಗೊತ್ತಾಯಿತು. ಕೂಡಲೇ ಮಗುವನ್ನು ಐಸಿಯುನಲ್ಲಿ ದಾಖಲಿಸಿ ಅಗತ್ಯ ಔಷಧಿಗಳು, ಆಮ್ಲಜನಕ, ಇನ್ಸುಲಿನ್ ಎಲ್ಲವನ್ನೂ ನೀಡಲು ಪ್ರಾರಂಭಿಸಿದೆವು.
ನೋಡನೋಡುತ್ತಿದ್ದಂತೆಯೇ ಒಂದೆರಡು ದಿನಗಳಲ್ಲಿ ಚೇತರಿಸಿಕೊಳ್ಳಲಾರಂಭಿಸಿತು. ಸಕ್ಕರೆಯ ಅಂಶ ‘ನಾರ್ಮಲ್’ ಆಗತೊಡಗಿತು. ಪ್ರಜ್ಞೆಯು ಮರುಕಳಿಸಿತು, ಅವನು, ಮನೆಯಲ್ಲಿ ತಾನು ಪ್ರೀತಿಯಿಂದ ಸಾಕಿ ಏಕಾಏಕಿ ಬಿಟ್ಟು ಬಂದಿದ್ದ ಕೋಳಿ ಮರಿಗಳಿಗೆ ಊಟ ಕೊಡುವವರು ಯಾರು? ಎಂದು ಮುದ್ದಾಗಿ, ತೇವವಾದ ಕಣ್ಣುಗಳಿಂದ ಕೇಳಲಾರಂಭಿಸಿದ.
ಆ ಹೆತ್ತವರಿಗೆ ಅದೊಂದೇ ಮಗು. ಅದೂ ಮದುವೆಯ 10-12 ವರ್ಷಗಳ ನಂತರ ಹುಟ್ಟಿದ್ದು. ಹೆರಿಗೆಯು ಕಷ್ಟವಾಗಿ ಮಗುವು ಹುಟ್ಟಿದಂದಿನಿಂದ ಸುಮಾರು ಒಂದೆರಡು ತಿಂಗಳು ಐಸಿಯುನಲ್ಲಿ ಇದ್ದು, ನಂತರ ಹುಷಾರಾಗಿ ಹೆತ್ತವರ ಕೈ ಸೇರಿತ್ತು. ಇದೀಗ ಎರಡನೇ ಸಲ ಆ ಮಗುವು ಗಂಡಾಂತರದಿಂದ ಪಾರಾಗಿ ಬದುಕಿ ಬಂದದ್ದು, ಹೆತ್ತವರಿಗೆ ತಮ್ಮ ಮಣ್ಣಾಗುತ್ತಿದ್ದ ಆಸೆ – ಕನಸುಗಳು ಪುನಃ ಚಿಗುರೊಡೆದಂತೆ ಭಾಸವಾಯಿತು.
ಮಗುವನ್ನು ಆಸ್ಪತ್ರೆಯಿಂದ ಮನೆಗೆ ಕಳುಹಿಸುವಾಗ ಈ ಮಗುವನ್ನು ಜೀವನಪರ್ಯಂತ ಇನ್‌ಸುಲಿನ್ ಇಂಜೆಕ್ಷನ್ ತೆಗೆದುಕೊಳ್ಳಬೇಕೆಂದು ಹೇಳಿದಾಗ ಹೆತ್ತವರಿಗೆ ಬರಸಿಡಿಲೆರಗಿದ ಭಾವನೆ. ನಮಗೂ ಅವರನ್ನು ಹೇಗೆ ಸಮಾಧಾನ ಮಾಡಿ ಆ ಪ್ರಯತ್ನಕ್ಕೆ ಹುರಿದುಂಬಿಸುವುದು ಎಂಬ ಸವಾಲು..
ಆಗಲೇ ನೆನಪಾದದ್ದು… 1996ನೇ ಇಸವಿಯಲ್ಲಿನ ನಾವು ಪರೀಕ್ಷೆಯನ್ನೂ ಮರೆತು ಟಿವಿಯ ಮುಂದೆ ಕುಳಿತು ಕಣ್ಣರಳಿಸಿ ನೋಡಿದ ಭಾರತ- ಆಸ್ಟ್ರೇಲಿಯಾ ಕ್ರಿಕೆಟ್ ಮ್ಯಾಚ್! ಕೊನೆಯ ವಿಕೆಟ್‌ಗೆ ೫೨ ರನ್ ಸೇರಿಸಿ ಭಾರತವನ್ನು ಗೆಲ್ಲಿಸಿದ ಅನಿಲ್ ಕುಂಬ್ಳೆ ಜಾವಗಲ್ ಶ್ರೀನಾಥ್ ಜೋಡಿ. ಅಂದು ಕುಂಬ್ಳೆ ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡರಲ್ಲೂ ಮಿಂಚಿಂಗ್ ! ಅನಿಲ್ ಕುಂಬ್ಳೆಗಿದ್ದದ್ದೂ ಇದೇ ಮಕ್ಕಳ ಮಧುಮೇಹ. ಆತ್ಮಸ್ಥೈರ್ಯದಿಂದ ಚಿಕಿತ್ಸೆ ಪಡೆದು ತನ್ನ ಆರೋಗ್ಯದ ಏರುಪೇರುಗಳು ತನ್ನ ಸಾಧನೆಯ ಹಾದಿಗೆ ಕಪ್ಪು ಚುಕ್ಕೆಯಾಗದಂತೆ ತನ್ನ ಭವಿಷ್ಯವನ್ನು ರೂಪಿಸಿಕೊಂಡ ಅನಿಲ್ ಕುಂಬ್ಳೆ ನಮಗೆ ಸ್ಫೂರ್ತಿಯಲ್ಲವೇ?
ನಾವೆಲ್ಲರೂ ಕಣ್ಣು ಮಿಟುಕಿಸದೇ ನೋಡಿದ ‘ಇಂಡಿಯನ್’ ಮೊದಲಾದ ಹಲವು ‘ಹಿಟ್’ ಸಿನಿಮಾಗಳ ನಾಯಕನಾಗಿರುವ, ಹಲವು ಪ್ರಶಸ್ತಿಗಳ ಸರದಾರನಾಗಿರುವ, ತನ್ನ ನಟನೆಯಿಂದಲೇ ವೀಕ್ಷಕರ ಮನಸ್ಸಿನಲ್ಲಿ ಮನೆಮಾಡಿರುವ ಕಮಲಹಾಸನ್‌ಗೂ ಇರುವುದು ಇದೇ ಮಕ್ಕಳ ಮಧುಮೇಹವೇ ತಾನೇ.. ಅವರು ಅಂದು ಕುಗ್ಗಿದರೆ ಕಮಲ ಕಮರಿ ಹೋಗಿರುತ್ತಿತ್ತಲ್ಲವೇ?
ಮಗುವಿನೊಟ್ಟಿಗೆ ಅವರ ತಂದೆ – ತಾಯಿಗಳನ್ನು ನಮ್ಮ ಮಕ್ಕಳ ವಿಭಾಗದಲ್ಲಿ ಕೂರಿಸಿ ಅವರಿಗೆ ಈ ಎಲ್ಲ ಸಾಧಕರ ಬಗೆಗೆ.. ಅವರು ಇದೇ ಮಕ್ಕಳ ಮಧುಮೇಹವನ್ನು ಮೀರಿ ನಿಂತ ಬಗೆಯನ್ನು ಬಿಡಿಸಿ ವಿವರಿಸಿ ಹೇಳಿದೆವು. ಈ ಕಾಯಿಲೆಗೆ ಬೇಕಾದದ್ದು ಬರೀ ಆಹಾರ ಪದ್ಧತಿಯಲ್ಲ.. ಆಗಾಗ ಮಾಡಬೇಕಾಗುವ ಸಕ್ಕರೆ ಅಂಶ ಪರೀಕ್ಷೆಯಷ್ಟೇ ಅಲ್ಲ.. ಬದಲಿಗೆ ಇವೆಲ್ಲವನ್ನೂ ಸಮರ್ಥವಾಗಿ ನಿಭಾಯಿಸಲು ಬೇಕಾಗುವ ಆತ್ಮಸ್ಥೈರ್ಯವೆಂದು ! ಜಾಗೃತರಾದ ಅಪ್ಪ – ಅಮ್ಮ ತಮ್ಮ ತುಂಬಿದ ಕಣ್ಣುಗಳಲ್ಲಿ ಉರುಳುತ್ತಿದ್ದ ಹನಿಗಳ ನಡುವೆ ಜಿನುಗಿದ ಆಶಾಕಿರಣವನ್ನು ಹೊರಸೂಸುತ್ತಾ ‘ನಾವೇನು ಮಾಡಬೇಕು, ಹೇಳಿ’ ಎಂದರು.
ಮಗುವಿಗೆ ಇನ್‌ಸುಲಿನ್ ನೀಡುವ ಬಗ್ಗೆ.. ಮಗುವಿನ ಆಹಾರ ಪದ್ಧತಿ ಬಗ್ಗೆ, ದೈಹಿಕ ಚಟುವಟಿಕೆಗಳ ಬಗ್ಗೆ ಮನೆಯಲ್ಲಿಯೇ ಒಂದು ಸಣ್ಣ ಸೂಜಿಯ ಮೂಲಕ ಬೆರಳಿಗೆ ಚುಚ್ಚಿಕೊಂಡು ಸಕ್ಕರೆಯ ಅಂಶ ಎಷ್ಟಿದೆ ಎಂದು ಸ್ವಯಂ ಪರೀಕ್ಷೆ ಮಾಡಿಕೊಳ್ಳುವ ಬಗ್ಗೆ, ಸಕ್ಕರೆ ಅಂಶ ಹೆಚ್ಚಾದಾಗ ಅಥವಾ ಕಡಿಮೆಯಾದಾಗ ಕಂಡುಬರುವ ತೊಡಕಿನ ಚಿಹ್ನೆಗಳಾದ ಬೆವರುವಿಕೆ, ತಲೆ ತಿರುಗುವುದು, ವಾಕರಿಕೆ, ವಾಂತಿ ಮುಂತಾದವುಗಳ ಬಗೆಗೆ ಮುಂಜಾಗ್ರತೆ, ನಿಯಮಿತ ಆಸ್ಪತ್ರೆಯ ಭೇಟಿ, ಆಗಾಗ ರಕ್ತಪರೀಕ್ಷೆಯ ಮಹತ್ವ ಎಲ್ಲವನ್ನೂ ವಿವರಿಸಿದಾಗ ಧೈರ್ಯ ಮೂಡಿತು. ಆತ್ಮಸ್ಥೈರ್ಯ ಹುಟ್ಟಿತು.
ಕಾಯಿಲೆ ಬಗೆಗಿನ ಅವರ ಆತ್ಮಸ್ಥೈರ್ಯಕ್ಕೆ ಇದೀಗ ಒಂದು ವರ್ಷ ತುಂಬಿದೆ. ಇಂದು ಆ ಹೆತ್ತವರು ಹಾಗೂ ಆ ಮಗು ಮಧುಮೇಹ ಕಾಯಿಲೆ ಇರುವವರಿಗೆ ಆತ್ಮಸ್ಥೈರ್ಯಕ್ಕೊಂದು ಆದರ್ಶವಾಗಿದ್ದಾರೆ.
ಮಕ್ಕಳ ಬಗ್ಗೆ ಗಮನ ಹರಿಸಬೇಕಾದ ಅಂಶಗಳು
• ಮಕ್ಕಳ ಸಕ್ಕರೆ ಕಾಯಿಲೆಗೆ ‘ಇನ್ಸುಲಿನ್’ ಚಿಕಿತ್ಸೆ ರಾಮಬಾಣ.
• ಗರ್ಭಾವಸ್ಥೆಯಲ್ಲಿ ತಾಯಿಗೆ ಸಕ್ಕರೆ ಕಾಯಿಲೆ ಬಂದಿದ್ದರೆ ಜನಿಸುವ ಮಗುವಿಗೂ ಈ ಕಾಯಿಲೆ ಬರಲೇ ಬೇಕೆಂದೇನು ಇಲ್ಲ.
• ಉತ್ತಮ ಆಹಾರ ಪದ್ಧತಿ, ಸಕ್ಕರೆಯ ಅಂಶದಲ್ಲಿ ಹಿಡಿತ, ಕ್ಯಾಲೋರಿ ಪ್ರಮಾಣದ ನಿಗ್ರಹಣೆ ಅತ್ಯಗತ್ಯ.
• ಸಕ್ಕರೆ ಕಾಯಿಲೆ ಉಳ್ಳ ಮಕ್ಕಳ ಬೆಳವಣಿಗೆ, ತೂಕ, ಉದ್ದ, ಇತ್ಯಾದಿ ಮಾಪನಗಳು, ಅವರಿಗೆ ಉಂಟಾಗುವ ಸೋಂಕುಗಳ ಬಗ್ಗೆ ವಿಶೇಷ ಗಮನ ಅತ್ಯಗತ್ಯ.
• ತೊಡಕಿನ ಚಿಹ್ನೆಗಳಾದ ಪ್ರಜ್ಞಾಹೀನತೆ, ಅತಿಯಾದ ಬೆವರುವಿಕೆ, ಸೋಂಕುಗಳು, ಕುಂಠಿತಗೊಳ್ಳುವ ಬೆಳವಣಿಗೆ, ಅತಿಯಾದ ವಾಂತಿ – ಭೇದಿ, ಹೊಟ್ಟೆ ನೋವು, ಉಸಿರಾಟದ ತೊಂದರೆಗಳ ಬಗ್ಗೆ ಗಮನವಿರಲಿ.