ಒಕ್ಕಣೆಯ ಕೆಲಸವನ್ನು ಸರಳವಾಗಿಸುವ ‘ಒಕ್ಕಣೆ ಯಂತ್ರಗಳು’

ರಾಜ್ಯ ಸರಕಾರ ಮತ್ತು ಗ್ರಾಮಾಭಿವೃದ್ಧಿ ಯೋಜನೆಯ ಸಹಭಾಗಿತ್ವದಲ್ಲಿ ರಾಜ್ಯದಾದ್ಯಂತ 164 ಕೃಷಿಯಂತ್ರಧಾರೆ ಕೇಂದ್ರಗಳು ರೈತರ ಸೇವೆಯಲ್ಲಿ ತೊಡಗಿವೆ. ಸಕಾಲದಲ್ಲಿ ಕಡಿಮೆ ದರದಲ್ಲಿ ಉಪಯುಕ್ತ ಯಂತ್ರಗಳನ್ನು ಒದಗಿಸುವ ಮೂಲಕ ಕೃಷಿಯಂತ್ರಧಾರೆ ಈಗಾಗಲೆ ಮನೆಮಾತಾಗಿದೆ. ಈ ಬಾರಿಯ ಭತ್ತ ಕಟಾವಿಗೆ ಹೆಚ್ಚಿನ ಕಡೆಗಳಲ್ಲಿ ರೈತರು ಕಟಾವು ಯಂತ್ರಗಳನ್ನು ಮುಂಗಡವಾಗಿ ಕಾಯ್ದಿರಿಸಿಕೊಂಡಿದ್ದರು. ಆದರೆ ಅಕಾಲಿಕವಾಗಿ ಎಡೆಬಿಡದೆ ಸುರಿದ ಮಳೆಯಿಂದಾಗಿ ರೈತರು ಬೆಳೆದ ಬೆಳೆಗಳು ನೀರಪಾಲಾದುವು. ಇದರಿಂದಾಗಿ ಕೃಷಿಯಂತ್ರಧಾರಾ ಕಾರ್ಯಕ್ರಮಕ್ಕೂ ಬಹುದೊಡ್ಡ ಹೊಡೆತ ಬಿದ್ದಿದೆ.
ಮಳೆ ಅವಾಂತರದಿಂದ ವ್ಯಾಪಕ ನಷ್ಟ
ರಾಜ್ಯದಲ್ಲಿ ಈ ಬಾರಿ ಜುಲೈಯಿಂದ ನವೆಂಬರ್ ತಿಂಗಳವರೆಗೆ ಸುರಿದ ಮಳೆಯಿಂದ 11 ಲಕ್ಷ ಹೆಕ್ಟೇರ್ ಕೃಷಿ ಮತ್ತು ತೋಟಗಾರಿಕೆ ಬೆಳೆ ನಾಶವಾಗಿದೆ. ನವೆಂಬರ್ ತಿಂಗಳೊಂದರಲ್ಲೆ ದಾಖಲೆಯ ಐದು ಲಕ್ಷ ಹೆಕ್ಟೇರ್ ಬೆಳೆ ನಾಶವಾಗಿದೆ ಎಂದು ಕಂದಾಯ ಇಲಾಖೆ ನಷ್ಟದ ಅಂದಾಜು ಮಾಡಿದೆ. ಬೆಳೆಕೊಯ್ಲು ಸಂದರ್ಭದಲ್ಲಿ ಅಂದರೆ ಅಕ್ಟೋಬರ್, ನವೆಂಬರ್ ತಿಂಗಳಲ್ಲಿ ರಾಜ್ಯದ ಬಹುತೇಕ ಕಡೆಗಳಲ್ಲಿ ಮಳೆಯ ಅವಾಂತರದಿಂದಾಗಿ ಕೃಷಿಯಂತ್ರಧಾರೆಯ ಚಟುವಟಿಕೆಗಳಿಗೂ ತೀವ್ರ ಅಡ್ಡಿ ಆತಂಕಗಳು ಎದುರಾದವು. ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ 9,000 ಗಂಟೆಗಳ ಕಾಲ ಈ ಯಂತ್ರಗಳ ಸೇವೆಯನ್ನು ನೀಡುವ ಗುರಿಯನ್ನು ಹೊಂದಲಾಗಿತ್ತು. ಆದರೆ ಈವರೆಗೆ ಕೇವಲ 3,280 ಗಂಟೆಗಳ ಸೇವೆಯನ್ನಷ್ಟೆ ರೈತರಿಗೆ ಒದಗಿಸಲು ಸಾಧ್ಯವಾಯಿತು. ಇದರಿಂದಾಗಿ ಕೃಷಿಯಂತ್ರಧಾರೆಗೆ ಸುಮಾರು ರೂ. 1.25 ಕೋಟಿ ನಷ್ಟವಾಗಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಸೇವೆಯನ್ನು ನೀಡಲು ಕೃಷಿಯಂತ್ರಧಾರೆ ಕೇಂದ್ರಗಳು ಸಿದ್ಧತೆ ನಡೆಸಿವೆ.
ಬಹುಬೆಳೆ ಒಕ್ಕಣೆ ಯಂತ್ರಗಳು
ಒಕ್ಕಣೆ ಎಂದರೆ ಪೈರಿನಿಂದ ಕಾಳು ಬೇರ್ಪಡಿಸುವ ವಿಧಾನ. ಸಾಮಾನ್ಯವಾಗಿ ಅಕ್ಟೋಬರ್ ತಿಂಗಳಿನಿಂದ ಪ್ರಾರಂಭಿಸಿ ಏಪ್ರಿಲ್ ತಿಂಗಳವರೆಗೂ ವಿವಿಧ ಬೆಳೆಗಳ ಒಕ್ಕಣೆಯ ಕೆಲಸಗಳಿರುತ್ತವೆ. ಕಟಾವು ಕೆಲಸಗಳು ಮುಗಿದು ಪೈರು ಚೆನ್ನಾಗಿ ಒಣಗಿದ ನಂತರ ಬಣವೆ ಮಾಡಿಟ್ಟುಕೊಳ್ಳುವ ರೈತರು ನಂತರ ಅವರಿಗೆ ಅನುಕೂಲವಾಗುವ ಸಂದರ್ಭಗಳಲ್ಲಿ ಒಕ್ಕಣೆ ಮಾಡುತ್ತಾರೆ. ಸಾಂಪ್ರದಾಯಿಕ ವಿಧಾನದಲ್ಲಿ ಒಕ್ಕಣೆ ಮಾಡುವುದು ಹೆಚ್ಚು ಶ್ರಮದಾಯಕ ಮತ್ತು ಸಾಕಷ್ಟು ಕೂಲಿಯಾಳುಗಳ ಅಗತ್ಯವಿದೆ. ‘ಕೃಷಿಯಂತ್ರಧಾರೆ’ ಕೇಂದ್ರಗಳಲ್ಲಿ ಇಂಜಿನ್ ಚಾಲಿತ ಮತ್ತು ಟ್ರ್ಯಾಕ್ಟರ್ ಚಾಲಿತ ಎಂಬ ಎರಡು ಮಾದರಿಯ ಒಕ್ಕಣೆ ಯಂತ್ರಗಳು ಲಭ್ಯವಿವೆ. ಮುಖ್ಯವಾಗಿ ರಾಗಿ, ಜೋಳ, ಭತ್ತ, ಸೂರ್ಯಕಾಂತಿ, ಶೇಂಗಾ, ಕಡಲೆ, ಸಿರಿಧಾನ್ಯಗಳು ಸೇರಿದಂತೆ 16 ವಿಧದ ಬೆಳೆಗಳ ಒಕ್ಕಣೆಗೆ ಈ ಯಂತ್ರಗಳು ಬಳಕೆಯಾಗುತವೆÉ. ಹುಲ್ಲು ಹಾಳಾಗುವುದಿಲ್ಲ. ಧಾನ್ಯಗಳನ್ನು ಹೊಟ್ಟುರಹಿತವಾಗಿ ಸ್ವಚ್ಛವಾಗಿ ಪಡೆಯಬಹುದಾಗಿದೆ. ಪ್ರಸ್ತುತ 113 ಇಂಜಿನ್ ಚಾಲಿತ ಮತ್ತು 57 ಟ್ರ್ಯಾಕ್ಟರ್ ಚಾಲಿತ ಯಂತ್ರಗಳು ವಿವಿಧ ಕೃಷಿ ಯಂತ್ರಧಾರೆ ಕೇಂದ್ರಗಳಲ್ಲಿ ಸೇವೆಗೆ ಲಭ್ಯವಿದೆ. ಒಕ್ಕಣೆ ಯಂತ್ರ ಒಂದು ಗಂಟೆಗೆ ಸರಾಸರಿ ಒಂದು ಎಕರೆ ಪ್ರದೇಶದ ಪೈರನ್ನು ಒಕ್ಕಣೆ ಮಾಡುತ್ತದೆ. ಫಸಲಿನ ಗುಣಮಟ್ಟದ ಆಧಾರದಲ್ಲಿ ಒಂದು ಗಂಟೆಗೆ ಸರಾಸರಿ 10 ಕ್ವಿಂಟಾಲ್‍ವರೆಗೆ ಒಕ್ಕಣೆ ಮಾಡಬಹುದಾಗಿದೆ.
ರೈತರು ಒಕ್ಕಣೆಯಂತ್ರಗಳು ಬಾಡಿಗೆಗೆ ಬೇಕಾದಲ್ಲಿ ಮುಂಗಡ ಬುಕ್ಕಿಂಗ್ ಮಾಡಬೇಕು. ಕೆಲವೊಂದು ಪ್ರದೇಶಗಳಲ್ಲಿ ಕ್ವಿಂಟಾಲ್ ಆಧಾರದಲ್ಲಿ ಬಾಡಿಗೆ ದರ ನಿಗದಿಪಡಿಸಲಾಗಿದ್ದು ಪ್ರತಿ ಕ್ವಿಂಟಾಲ್‍ಗೆ ರೂ.60ರಿಂದ ರೂ.90. ಬಾಡಿಗೆ ಇದೆ. ಹಾಗೂ ಕೆಲವೊಂದು ಪ್ರದೇಶಗಳಲ್ಲಿ ಗಂಟೆಯ ಆಧಾರದಲ್ಲಿ ಯಂತ್ರದ ಸಾಮಥ್ರ್ಯಕ್ಕನುಗುಣವಾಗಿ ರೂ.800ರಿಂದ ರೂ. 1,200ರವರೆಗೆ ಬಾಡಿಗೆ ಪಡೆಯಲಾಗುತ್ತದೆ. ಈ ದರವು ಸ್ಥಳೀಯ ಬಾಡಿಗೆ ದರಕ್ಕಿಂತ ಸುಮಾರು ಶೇ.20ರಷ್ಟು ಕಡಿಮೆ ಎನ್ನಬಹುದು.
ಲಾಭದಾಯಕ ಹೇಗೆ?
ಕೂಲಿಯಾಳುಗಳ ವಿಧಾನದಲ್ಲಿ ಲೆಕ್ಕಾಚಾರ ಮಾಡುವುದಿದ್ದಲ್ಲಿ ಒಂದು ಎಕರೆ ಕಟಾವು ಮಾಡಿ ಒಕ್ಕಣೆ ಮಾಡಲು ಸುಮಾರು 5 ಸಾವಿರ ರೂಪಾಯಿಗಳವರೆಗೆ ಖರ್ಚಾಗುತ್ತಿದ್ದು ಈ ಯಂತ್ರ ಬಳಕೆ ಮಾಡಿದ್ದಲ್ಲಿ ಗಂಟೆಗೆ ಕೂಲಿ ಆಳಿನ ದಿನಗೂಲಿ ಸೇರಿಸಿ ರೂ.1,500ಕ್ಕಿಂತ ಕಡಿಮೆ ಮೊತ್ತದಲ್ಲಿ ಒಕ್ಕಣೆ ಕೆಲಸಗಳನ್ನು ಮುಗಿಸಬಹುದಾಗಿದೆ.
ಬೆಳೆ ಕೊಯ್ಲು ಯಂತ್ರಗಳು
ತಿಂಗಳುಗಟ್ಟಲೆ ಬೆಳೆಗಳ ಪೋಷಣೆ ಮಾಡಿದ ನಂತರ ಕಟಾವು ಅಥವಾ ಕೊಯ್ಲು ಬಹುಮುಖ್ಯ ಹಂತ. ಬೆಳೆ ಕೊಯ್ಲಿಗೆ ‘ಕೃಷಿಯಂತ್ರಧಾರೆ’ಯಲ್ಲಿ ಎರಡು ವಿಧದ ಯಂತ್ರಗಳು ಲಭ್ಯವಿವೆ. ಟಯರ್ (ಚಕ್ರ ಆಧಾರಿತ) ಮತ್ತು ಟ್ರ್ಯಾಕ್ ಆಧಾರಿತ ಯಂತ್ರಗಳು. ಟ್ರ್ಯಾಕ್ ಆಧಾರಿತ ಯಂತ್ರಗಳು ನೀರು ಅಧಿಕವಿರುವ, ಕೆಸರುಮಣ್ಣಿನ ಗದ್ದೆಗಳಲ್ಲಿ ಕಟಾವಿನಲ್ಲಿ ಬಳಕೆಗೆ ಸೂಕ್ತವಾಗಿವೆ. ಚಕ್ರ ಆಧಾರಿತ ಯಂತ್ರಗಳು ಒಣ ಭೂಮಿಯಲ್ಲಿ ಬಳಕೆಗೆ ಯೋಗ್ಯವಾಗಿವೆ. ಈ ಎರಡೂ ಯಂತ್ರಗಳು ಪ್ರತಿ ಗಂಟೆಗೆ ಒಂದು ಎಕರೆಯಷ್ಟು ಬೆಳೆಗಳನ್ನು ಕಟಾವು ಮಾಡುವ ಸಾಮಥ್ರ್ಯವನ್ನು ಹೊಂದಿವೆ. ಭತ್ತ, ರಾಗಿ, ಜೋಳ ಮೊದಲಾದ ಎಲ್ಲಾ ತರಹದ ಬೆಳೆಗಳನ್ನು ಕಟಾವು ಮಾಡಬಹುದು.

ಯಂತ್ರಗಳು ಬೇಕಿದ್ದರೆ ಸಂಪರ್ಕಿಸಿ
ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದಲೆ ರೈತರಿಗೆ ಅನುಕೂಲವಾಗುವಂತೆ ಎರಡು ಪ್ರತ್ಯೇಕ ಕಟಾವು ಮತ್ತು ಕೃಷಿ ಯಂತ್ರ ಬಾಡಿಗೆ ಸೇವಾ ಕೇಂದ್ರಗಳನ್ನು ಶ್ರೀರಂಗಪಟ್ಟಣದ ಕಳಸ್ತವಾಡಿ ಮತ್ತು ದಾವಣಗೆರೆ ಆನಗೋಡುವಿನಲ್ಲಿ ಸ್ಥಾಪಿಸಲಾಗಿದೆ. ಈ ಕೇಂದ್ರಗಳಲ್ಲಿ ತಲಾ 20 ಕಟಾವು ಯಂತ್ರಗಳು ಲಭ್ಯ. ಆನಗೋಡು ಯಂತ್ರಕೇಂದ್ರದ ಸೇವೆಯನ್ನು ಪಡೆಯಬಯಸುವವರು ಸುಭಾಷ್ (ಮೊ.ಸಂ. 9591420870), ಮತ್ತು ಕಳಸ್ತವಾಡಿಯ ಯಂತ್ರಕೇಂದ್ರದ ಸೇವೆ ಪಡೆಯಬಯಸುವವರು ರವಿಮಣಿ (8749033034) ಇವರನ್ನು ಸಂಪರ್ಕಿಸಬಹುದಾಗಿದೆ.
ಕುಂದಾಪುರ ತಾಲೂಕಿನ ಕಾಳಾವರದಲ್ಲಿ 2 ಟ್ರ್ಯಾಕ್ ಆಧಾರಿತ ಭತ್ತ ಕಟಾವು ಯಂತ್ರಗಳು ಸೇರಿದಂತೆ ಟ್ರ್ಯಾಕ್ಟರ್‍ಗಳು, ಬೈಹುಲ್ಲು ಕಟ್ಟುವ ಯಂತ್ರಗಳು, ಭತ್ತ ನಾಟಿ ಯಂತ್ರಗಳು ಹಾಗೂ ಬಹುಬೆಳೆ ಒಕ್ಕಣೆ ಯಂತ್ರ, ವಿಶೇಷವಾಗಿ ನೆಲಗಡಲೆ ಒಕ್ಕಣೆ ಯಂತ್ರ ಲಭ್ಯವಿದೆ. ಈ ಕೇಂದ್ರದ ಸೇವೆ ಪಡೆಯಲು ಜಯಂತ್ (9008891594) ಇವರನ್ನು ಸಂಪರ್ಕಿಸಬಹುದು.

ಅತಿವೃಷ್ಟಿಗೆ ಎದೆಗುಂದದ ಯೋಜನೆಯ ಫಲಾನುಭವಿಗಳು
ಈ ಬಾರಿ ಮಾನ್ಸೂನ್ ನಂತರವೂ ಬಂಗಾಳಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತದಿಂದ ಸುರಿದ ಮಳೆಗೆ ಉತ್ತರ ಕರ್ನಾಟಕದ ಹೆಚ್ಚಿನ ಭಾಗಗಳು ಜಲಾವೃತವಾಗಿವೆ. ಬಯಲುಸೀಮೆಯಲ್ಲಿ ಬೆಳೆದ ರಾಗಿ, ಭತ್ತ, ಜೋಳ, ಹಣ್ಣುಹಂಪಲುಗಳು ನಾಶವಾಗಿವೆ. ಮಲೆನಾಡಿನ ಕಾಫಿ, ಭತ್ತ, ತರಕಾರಿ ಬೆಳೆಗಳು ಕಟಾವಿಗೆ ಬಾರದೆ ಗಿಡದಲ್ಲೇ ಕೊಳೆತು ಹೋಗಿವೆ. ರೈತರು ಬೆಳೆದ ಎಕರೆಗಟ್ಟಲೆ ಟೊಮೆಟೊ, ಈರುಳ್ಳಿ, ಮೆಣಸು ನೀರುಪಾಲಾಗಿದೆ. ಇಷ್ಟೆಲ್ಲ ಕಷ್ಟಗಳು ಎದುರಾದರೂ ಅವ್ಯಾವುದಕ್ಕೂ ಗ್ರಾಮಾಭಿವೃದ್ಧಿ ಯೋಜನೆಯ ಫಲಾನುಭವಿಗಳು ಎದೆಗುಂದಲಿಲ್ಲ. ಕಷ್ಟಗಳಿಗೆ ಹಿಂಜರಿಯದೆ ಯೋಜನೆಯ ವ್ಯವಹಾರಗಳನ್ನು ಯಥಾಸ್ಥಿತಿಯಲ್ಲಿ ಮುಂದುವರಿಸಿಕೊಂಡು ಹೋಗಿದ್ದಾರೆ. ವಾರದ ಉಳಿತಾಯ, ಸಾಲದ ಕಂತುಗಳನ್ನು ಸಮರ್ಪಕವಾಗಿ ಪಾವತಿಸಿದ್ದಾರೆ ಎಂದು ಸೇವಾಪ್ರತಿನಿಧಿಗಳು ಶ್ರೀ ಹೆಗ್ಗಡೆಯವರಿಗೆ ನೀಡಿದ ವರದಿಯಲ್ಲಿ ಉಲ್ಲೇಖಿಸಿದ್ದಾರೆ.
ಅತಿವೃಷ್ಟಿಯಂತಹ ಕಷ್ಟದ ದಿನಗಳಲ್ಲೂ ಯೋಜನೆಯ ಸದಸ್ಯರು ತೋರಿದ ಧೈರ್ಯಕ್ಕೆ ಶ್ರೀ ಹೆಗ್ಗಡೆಯವರು ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ. ಯಾವುದೇ ಮುನ್ಸೂಚನೆ ಇಲ್ಲದೆ ಬರುವ ಪ್ರಾಕೃತಿಕ ವಿಕೋಪಗಳನ್ನು ಧೈರ್ಯವಾಗಿ ಎದುರಿಸಬೇಕು. ಯಾವುದೇ ಕಾರಣಕ್ಕೂ ಎದೆಗುಂದದೆ ತಮ್ಮ ನಿತ್ಯ ವ್ಯವಹಾರಗಳನ್ನು ಮುಂದುವರಿಸಿಕೊಂಡು ಹೋದಲ್ಲಿ ಮುಂದಿನ ದಿನಗಳಲ್ಲಿ ಕಷ್ಟದ ದಿನಗಳು ಕಳೆದು ಸುಖದ ಬದುಕು ನಮ್ಮೆಲ್ಲರದ್ದಾಗಲಿದೆ.

Facebook
Twitter
WhatsApp
LinkedIn
Telegram

Leave a Reply

Your email address will not be published. Required fields are marked *

Latest Updates