ಯೋಜನೆಯ ಸೇವೆ ಎಂಬ ಪುಣ್ಯ ಕಾರ್ಯ

ಶ್ರೀ ಡಿ. ವೀರೇಂದ್ರ ‌ಹೆಗ್ಗಡೆಯವರು

ಶ್ರೀ ಹೆಗ್ಗಡೆಯವರು ರಾಜ್ಯದಾದ್ಯಂತ ಪ್ರವಾಸವನ್ನು ಕೈಗೊಂಡು ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕರ್ತರಿಗೆ ಮಾರ್ಗದರ್ಶನವನ್ನು ನೀಡುತ್ತಿರುತ್ತಾರೆ. ಶ್ರೀಕ್ಷೇತ್ರದಲ್ಲೆ ಇರುವ ಗ್ರಾಮಾಭಿವೃದ್ಧಿ ಯೋಜನೆಯ ಕೇಂದ್ರ ಕಚೇರಿಗೂ ಆಗಾಗ ಭೇಟಿ ನೀಡಿ ವಿಭಾಗಗಳ ಕಾರ್ಯ ಚಟುವಟಿಕೆಗಳನ್ನು ಪರಿಶೀಲಿಸುತ್ತಿರುತ್ತಾರೆ. ಇದರೊಂದಿಗೆ ಹೊಸ ವರುಷದ ಆರಂಭದ ದಿನ ಎಷ್ಟೇ ಕೆಲಸಗಳಿದ್ದರೂ ಶ್ರೀ ಹೆಗ್ಗಡೆ ದಂಪತಿಗಳು ಗ್ರಾಮಾಭಿವೃದ್ಧಿ ಯೋಜನೆಯ ಕೇಂದ್ರ ಕಚೇರಿಗೆ ಬಂದು ಇಲ್ಲಿನ ಕಾರ್ಯಕರ್ತರಿಗೆ ಹೊಸ ವರುಷದ ಶುಭಾಶೀರ್ವಾದಗಳೊಂದಿಗೆ ಮುಂದಿನ ದಿನಗಳಲ್ಲಿ ಯೋಜನೆಯ ಕಾರ್ಯಕರ್ತರು ಹೇಗೆ ಕರ್ತವ್ಯ ನಿರ್ವಹಿಸಬೇಕೆಂದು ಮಾರ್ಗದರ್ಶನವನ್ನು ನೀಡುತ್ತಾರೆ. ಅವರ ಮಾತುಗಳು ಕಾರ್ಯಕರ್ತರ ಹುರುಪು, ಉತ್ಸಾಹವನ್ನು ಇಮ್ಮಡಿಗೊಳಿಸುತ್ತವೆ. ಈ ಬಾರಿ ಶ್ರೀ ಹೆಗ್ಗಡೆಯವರು ಕಾರ್ಯಕರ್ತರಿಗೆ ನೀಡಿದ ಶುಭ ಸಂದೇಶವನ್ನು ಯೋಜನೆಯ ಎಲ್ಲ ಕಾರ್ಯಕರ್ತರಿಗೆ ನೀಡುವ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ.


ಬಾಲ್ಯ, ಯೌವ್ವನ, ವೃದ್ಧಾಪ್ಯ ಹೀಗೆ ನಮ್ಮನ್ನು ನಾವು ಬೇರೆ ಬೇರೆ ಹಂತಗಳಲ್ಲಿ ಗುರುತಿಸಿಕೊಳ್ಳುತ್ತೇವೆ. ಬಾಲ್ಯದಲ್ಲಿ ಬಹಳ ಉತ್ಸಾಹವಿರುತ್ತದೆ. ಶಾಲೆಗೆ ಹೋಗುವುದು, ಅಧ್ಯಯನ ಮಾಡುವುದು, ಆಟ ಆಡುವುದು, ಸ್ನೇಹಿತರ ಜೊತೆಗಿರುವುದು ಹೀಗೆ ಬಾಲ್ಯ ನಮಗೆ ಗೊತ್ತಿಲ್ಲದಂತೆ ಬಹಳ ಬೇಗನೆ ಕಳೆದು ಹೋಗುತ್ತದೆ. ಕಾಲೇಜಿನಿಂದ ಹೊರಗೆ ಬಂದ ತಕ್ಷಣ ಉದ್ಯೋಗ ಬೇಕು, ಸಂಪಾದನೆ ಬೇಕು, ಹುದ್ದೆ ಬೇಕು ಎಂಬ ಯೋಚನೆ ಶುರುವಾಗುತ್ತದೆ. ಹುದ್ದೆ ಇದ್ದರೆ ಮಾತ್ರ ಸಮಾಜದಲ್ಲಿ ಗೌರವ ಸಿಗುತ್ತದೆ, ಗಂಡಿಗೆ ಒಳ್ಳೆಯ ಹೆಣ್ಣು ಸಿಗುತ್ತದೆ. ಹೆಣ್ಣಿಗೆ ಒಳ್ಳೆಯ ಗಂಡು ಸಿಗಬೇಕಾದರೆ ‘ಯಾರವರು?’ ಎಂದು ಕೇಳುತ್ತಾರೆ. ‘ಯಾರವರು’ ಎಂದಾಗ ಯಾರು ಎಂದು ಹೇಳಬೇಕು. ಅವನಿಗೆ ಒಂದು ಲಕ್ಷ ರೂಪಾಯಿ ಸಂಪಾದನೆ ಇರಲಿ, ಅವನು ಯಾರು ಎನ್ನುವುದರ ಮೇಲೆ ಅವನಿಗೆ ಹೆಣ್ಣು ಕೊಡುತ್ತಾರೆ. ಗಂಡು ಕೂಡಾ ಹೆಣ್ಣನ್ನು ಹುಡುಕುವಾಗ ಅವಳು ಏನು ಉದ್ಯೋಗ ಮಾಡುತ್ತಾಳೆ ಎನ್ನುವುದರ ಮೇಲೆ ಅವನ ನಿರ್ಧಾರಗಳು ನಿಂತಿರುತ್ತವೆ. ಮೊದಲೆಲ್ಲ ಆಕೆ ಸುಶೀಲವಂತೆ, ಸುಂದರವಾಗಿರುವವಳು, ಲಕ್ಷಣವಾಗಿರುವವಳು ಎಂದು ಅವಳನ್ನು ಮದುವೆಯಾಗಿಬಿಡುತ್ತಿದ್ದರು. ಆದರೆ ಈಗ ಹಾಗಲ್ಲ. ‘ಏನು ಓದಿದ್ದಾಳೆ’, ‘ಉದ್ಯೋಗ ಏನು’? ಎಂದು ಕೇಳುತ್ತಾರೆ. ಇಂದು ಸಂಸಾರದ ಖರ್ಚು ವೆಚ್ಚಗಳು ಹೆಚ್ಚಾಗಿರುವುದರಿಂದ ಗಂಡ – ಹೆಂಡತಿ ಇಬ್ಬರೂ ದುಡಿಮೆ ಮಾಡುವುದು ಅನಿವಾರ್ಯವಾಗಿದೆ. ಆಗ ಮಾತ್ರ ನೆಮ್ಮದಿಯ ಜೀವನ ನಡೆಸಬಹುದಾಗಿದೆ.
ಯೌವನ ಅಂದರೆ ಪ್ರಬುದ್ಧತೆಯ ಕಾಲ. ದುಡಿಮೆಗೆ ಸಿಗುವ ಅವಕಾಶ ಅದು. ಆ ಬಳಿಕ ವೃದ್ಧಾಪ್ಯ ಬರುತ್ತದೆ. ಆ ಸಂದರ್ಭದಲ್ಲಿ ನಾವು ನಮ್ಮ ಸಂಸಾರದ ಎಲ್ಲ ಜವಾಬ್ದಾರಿಗಳನ್ನು ನಿರ್ವಹಿಸಿ ಧನ್ಯತೆಯನ್ನು ಪಡೆದುಕೊಳ್ಳಬೇಕು. ನಿಮ್ಮ ಜೀವನದಲ್ಲಿ ದೇವರು ನಿಮಗೆಲ್ಲರಿಗೂ ಕೂಡಾ ‘ಗ್ರಾಮಾಭಿವೃದ್ಧಿ ಯೋಜನೆ’ಯಲ್ಲಿ ಕಾರ್ಯನಿರ್ವಹಿಸುವ ಒಂದು ಉತ್ತಮ ಅವಕಾಶವನ್ನು ಕೊಟ್ಟಿದ್ದಾನೆ. ಇದು ಬಹಳ ಪುಣ್ಯದ ಕೆಲಸ. ಈ ಕೆಲಸ ನಿಮಗೆ ದೊರಕಿದೆ.
ಸುಭಾಷಿತವೊಂದರಲ್ಲಿ ‘ವಿದ್ಯಾರ್ಥೀ ಸೇವಕಃ ಪಾಂಥಃ ಕ್ಷುಧಾರ್ತೋ ಭಯಕಾತರಃI ಭಂಡಾರೀ ಪ್ರತಿಹಾರಶ್ಚ ಸಪ್ತ ಸುಪ್ತಾನ್ ಪ್ರಬೋಧಯೇತ್II
ಎಂಬ ಮಾತಿದೆ. ವಿದ್ಯಾರ್ಥಿ, ಸೇವಕ, ಪ್ರಯಾಣಿಕ, ಹಸಿದವನು, ಭಯದಿಂದ ಅಂಜಿದವನು, ಧನರಕ್ಷಕ ಮತ್ತು ದ್ವಾರಪಾಲಕ ಈ ಏಳೂ ಜನ ಅಕಾಲದಲ್ಲಿ ಮಲಗಿಕೊಂಡು ನಿದ್ರೆ ಮಾಡುತ್ತಿದ್ದರೆ ಅಂಥÀವರನ್ನು ಎಬ್ಬಿಸಬೇಕು ಎಂದು ಹೇಳಿದ್ದಾರೆ. ‘ವಿದ್ಯಾರ್ಥಿ’ ಎಂದರೆ ವಿದ್ಯೆಯನ್ನು ಶ್ರದ್ಧೆಯಿಂದ ಕಲಿಯಬೇಕಾದ ಹುಡುಗರು. ಪರೀಕ್ಷೆ ಹತ್ತಿರ ಬಂದಾಗ ಅವರು ಚೆನ್ನಾಗಿ ಓದಬೇಕಲ್ಲವೇ? ಪರೀಕ್ಷೆಯು ಹತ್ತಿರ ಬಂದಾಗ ಮಲಗಿಕೊಂಡು ನಿದ್ರಿಸುತ್ತಿದ್ದರೆ ಅಂಥವರನ್ನು ಎಬ್ಬಿಸಬೇಕು. ಆಮೇಲೆ ‘ಸೇವಕ’. ಇವನು ಶ್ರದ್ಧೆಯಿಂದ ಯಜಮಾನ ಹೇಳಿದ ಕೆಲಸ ಕಾರ್ಯಗಳನ್ನು ಮಾಡುವವನು. ಅವನು ನಿದ್ದೆಗೆ ಜಾರಬಾರದು.
‘ಪ್ರಯಾಣಿಕ’ ಇವನು ಎಚ್ಚರಿಕೆಯಿಂದ ಊರಿಂದ ಊರಿಗೆ ಪ್ರಯಾಣ ಮಾಡುತ್ತಾನೆ. ಮಾರ್ಗ ಮಧ್ಯೆ ಮಲಗಿಬಿಟ್ಟರೆ ಕಳ್ಳಕಾಕರಿಂದ ತೊಂದರೆಗಳಾಗಬಹುದು. ‘ಕ್ಷುಧಾರ್ತ’ ಎಂದರೆ ಹಸಿದಿರುವವನು. ಹಸಿವಿನಿಂದ, ಸಂಕಟದಿಂದ ಮಲಗಿದ್ದರೆ ಅಂತಹವನನ್ನು ಎಬ್ಬಿಸಿ ಅವನಿಗೆ ಊಟ ಹಾಕಬೇಕು. ಆಮೇಲೆ ‘ಭಯಕಾತರಃ’ ಅಂದರೆ ಭಯದಿಂದ ಹೇಡಿಯಾದವನು ನಿದ್ರೆ ಮಾಡುತ್ತಿದ್ದರೆ ಅಂಥವನನ್ನು ಎಬ್ಬಿಸಿ ಅವನಿಗೆ ಧೈರ್ಯವನ್ನು ತುಂಬಬೇಕು. ‘ಭಂಡಾರೀ’ ಅಂದರೆ ಹಣಕಾಸು ವ್ಯವಸ್ಥೆಯನ್ನು ನೋಡಿಕೊಳ್ಳುವವರು. ಇವನು ನಿದ್ರೆ ಮಾಡುತ್ತಿದ್ದರೆ ಹಣವು ಕಳವಾಗಿಬಿಡುತ್ತದೆಯಲ್ಲವೇ? ‘ಪ್ರತಿಹಾರ’ ಎಂದರೆ ಬಾಗಿಲನ್ನು ಕಾಯುವವನೂ ನಿದ್ರಿಸಬಾರದಲ್ಲವೇ? ನಾವೆಲ್ಲರೂ ಭಗವಂತನ ಆಳುಗಳು.
ನಾವು ಮಾಡುವ ಕೆಲಸವನ್ನು ಎಚ್ಚರಿಕೆ, ಪ್ರಜ್ಞಾವಂತಿಕೆಯಿಂದ ಮಾಡಬೇಕು. ಅದರಲ್ಲಿ ಯಾವುದೇ ನಿದ್ದೆ, ಆಲಸ್ಯ ಇರಬಾರದು. ನಿದ್ದೆ ಎನ್ನುವುದು ಕಣ್ಣು ಮುಚ್ಚಿ ಮಲಗುವುದು ಮಾತ್ರವಲ್ಲ. ಆಲಸ್ಯವೂ ನಿದ್ದೆಯೇ. ಆಲಸಿಗಳಾಗಬಾರದು ಎಂದು ಈ ಸುಭಾಷಿತ ಹೇಳುತ್ತದೆ.
ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ನೂರಾರು ಕಾರ್ಯಕ್ರಮಗಳಿವೆ. ಜನರು ಮತ್ತು ಸಮಾಜದ ಪರಿವರ್ತನೆ ಮಾಡುವುದೇ ನಮ್ಮ ಉದ್ದೇಶ. ಈ ಪರಿವರ್ತನೆ ಆಗಬೇಕಾದರೆ ಬಹಳ ಕಷ್ಟವಿದೆ. ಈಗ ನಮ್ಮ ದೇಶದಲ್ಲಿ ಅನೇಕ ಪರಿವರ್ತನೆಗಳಾಗಿವೆ. ನಮ್ಮಲ್ಲಿ ಕಳೆದ 75 ವರ್ಷಗಳಲ್ಲಿ ಆಗಿರುವ ಪ್ರಗತಿ ಅದ್ಭುತವಾದುದು. ನಾನು 1968ಕ್ಕೆ 20ನೇ ವಯಸ್ಸಿಗೆ ಬಂದಾಗಲೇ ಪ್ರಬುದ್ಧನಾಗಿದ್ದೇನೆ. 1968ರಿಂದೀಚೆಗಿನ ಎಲ್ಲ ಪರಿಣಾಮಗಳನ್ನು ನಾನು ಕಂಡಿದ್ದೇನೆ. ದೇಶದಲ್ಲಿ ಎಷ್ಟೊಂದು ಬದಲಾವಣೆಯಾಗಿದೆ, ಎಷ್ಟೊಂದು ಪ್ರಗತಿಯಾಗಿದೆ. ಅವಕಾಶಗಳು ನಿರ್ಮಾಣ ಆಗಿದೆ. ಅವಕಾಶಗಳ ನಿರ್ಮಾಣವಾದರೆ ಬಾಕಿ ಎಲ್ಲ ಅದರಷ್ಟಕ್ಕೆ ಅದು ನಡೆದುಕೊಂಡು ಹೋಗುತ್ತದೆ. ಈ ಅವಕಾಶಗಳ ನಿರ್ಮಾಣವೇ ನಮ್ಮ ದೇಶದ ದೊಡ್ಡ ಸಾಧನೆ. ಈಗ ವಿದ್ಯೆ, ಉದ್ಯೋಗ, ಅವಕಾಶಗಳಲ್ಲಿ ಗಂಡು – ಹೆಣ್ಣೆಂಬ ತಾರತಮ್ಯವಿಲ್ಲ. ಐವತ್ತು ವರ್ಷದ ಹಿಂದೆ ಹೀಗೆ ಇರಲಿಲ್ಲ. ನಮ್ಮ ಮ್ಯೂಸಿಯಂನಲ್ಲಿ ‘ಪ್ರಥಮ ಮಹಿಳಾ ಡ್ರೈವರ್’ ಎಂದು ಒಂದು ಬೋರ್ಡ್ ಇದೆ. ಅವರು ಉದ್ಯಮಿಯಾಗಿದ್ದ ಟಾಟಾರ ಪತ್ನಿ. ಅಷ್ಟು ದೊಡ್ಡ ಶ್ರೀಮಂತರ ಪತ್ನಿ ‘ಫಸ್ಟ್ ಡ್ರೈವರ್ ಆಫ್ ದಿ ಕಾರ್’ ಎಂದು ನಿಮಗೆ ಅಚ್ಚರಿಯಾಗಬಹುದು. ಅಂದರೆ ಆಗ ಸಾಮಾನ್ಯರು ವಾಹನವನ್ನೇ ಚಲಾಯಿಸುತ್ತಿರಲಿಲ್ಲ. ಹೆಣ್ಮಕ್ಕಳಲ್ಲಿ ಕೀಳರಿಮೆ ಇತ್ತು. ಆದರೆ ಇಂದು ಹೆಣ್ಮಕ್ಕಳು ವಾಹನ, ರೈಲು, ವಿಮಾನ ಎಲ್ಲವನ್ನು ಚಲಾಯಿಸುತ್ತಿದ್ದಾರೆ. ಇಂದು ಎಲ್ಲರಿಗೂ ಅವಕಾಶ ಇದೆ. ಯಾರೂ ಕೂಡಾ ಕೀಳರಿಮೆ ಮಾಡಬೇಕಿಲ್ಲ. ‘ನನಗೆ ಆಗಲ್ಲ’, ‘ನನ್ನಿಂದ ಅಸಾಧ್ಯ’ ಎನ್ನುವ ಪ್ರಶ್ನೆಯೇ ಇಲ್ಲ. ‘ಎಲ್ಲರಿಗೂ ಸಾಧ್ಯವಿದೆ.’ ಎಲ್ಲರಿಗೂ ಸಾಧನೆ ಮಾಡಲು ಅವಕಾಶವಿದೆ. ಅವಕಾಶಗಳನ್ನು ರೂಪಿಸುವುದು ತುಂಬಾ ಅಗತ್ಯ. ಗ್ರಾಮಾಭಿವೃದ್ಧಿ ಯೋಜನೆಯು ಹಳ್ಳಿಗಳಲ್ಲಿ ‘ಸ್ವಸಹಾಯ ಸಂಘ’ದ ಮೂಲಕ ಅವಕಾಶಗಳನ್ನು ನಿರ್ಮಾಣ ಮಾಡಿದೆ. ಪರಿವರ್ತನೆಯನ್ನು ತಂದಿದೆ. ಯಾವಾಗಲೂ ಪರಿವರ್ತನೆ ಪ್ರಬುದ್ಧತೆಯಿಂದ ಕೂಡಿರಬೇಕು. ಹಾಗಾಗಿ ನಾವೊಂದು ದಾರಿ ಹಿಡಿದು ನೀವು ಈ ದಾರಿಯಲ್ಲಿ ಹೋಗಿ ನಿಮಗೆ ಸುಭಿಕ್ಷೆ, ನೆಮ್ಮದಿ ಇದೆ. ನೀವು ಗುರಿ ಮುಟ್ಟುತ್ತೀರಿ ಎನ್ನುವ ಮಾರ್ಗದರ್ಶನವನ್ನು ಕೊಡುತ್ತೇವೆ. ಇದಕ್ಕಾಗಿ ಸಂಘದ ಸಭೆ, ಜ್ಞಾನವಿಕಾಸ ಕಾರ್ಯಕ್ರಮ, ‘ನಿರಂತರ’ ಪತ್ರಿಕೆ ಹೀಗೆ ಅನೇಕ ತಂತ್ರಗಳನ್ನು ಬಳಸುತ್ತೇವೆ. ಕಾರ್ಯಕ್ಷೇತ್ರದಲ್ಲಿ ಕಾರ್ಯಕರ್ತರು ಮಾಡುವ ಕೆಲಸ ಅಪಾರವಾದುದು. ತಮ್ಮ ಸಮಸ್ಯೆಗಳನ್ನು ಬದಿಗಿಟ್ಟು ಯೋಜನೆಯ ಕೆಲಸವನ್ನೇ ಪ್ರಧಾನವಾಗಿ ನೋಡುವಂತಹ ಸಾವಿರಾರು ಕಾರ್ಯಕರ್ತರು ನಮ್ಮ ಯೋಜನೆಯಲ್ಲಿದ್ದಾರೆ. ಅವರಿಗೆ ಕೇಂದ್ರ ಕಚೇರಿಯಿಂದ ಆಗಾಗ ಮಾರ್ಗದರ್ಶನವನ್ನು ನೀಡುತ್ತಿರುತ್ತೇವೆ.
ಎಲ್ಲದಕ್ಕೂ ಒಂದು ಹೊಣೆಗಾರಿಕೆ, ಲೆಕ್ಕಾಚಾರ ಬೇಕು. ಗುರಿ ನಿರ್ದಿಷ್ಟವಾಗಿರಬೇಕು. ಭಗವಾನ್ ಶ್ರೀಕೃಷ್ಣ ನಾಲ್ಕೂ ಕುದುರೆಗಳ ಲಗಾಮು ಹಿಡಿದುಕೊಂಡಿದ್ದಾನೆ. ಅವನು ಏಕಕಾಲದಲ್ಲಿ ನಾಲ್ಕೂ ಕುದುರೆಗಳನ್ನು ಹತೋಟಿಗೆ ತೆಗೆದುಕೊಳ್ಳುತ್ತಿದ್ದ. ಬಸ್ಸನ್ನು ಒಬ್ಬ ಚಲಾಯಿಸುತ್ತಿದ್ದರೂ ಬಸ್ಸಿನಲ್ಲಿರುವ ನೂರಾರು ಜನ ಪ್ರಯಾಣಿಕರ ಪ್ರಾಣ ಆ ಓರ್ವ ಚಾಲಕನ ಕೈಯಲ್ಲಿರುತ್ತದೆ. ಅವನು ಸ್ವಲ್ಪ ಆಲಸ್ಯ ಮಾಡಿದರೆ ನೂರು ಜನರ ಪ್ರಾಣವೂ ಕೂಡಾ ಹೋಗಿಬಿಡಬಹುದು. ಹಾಗೆಯೇ ಗ್ರಾಮಾಭಿವೃದ್ಧಿ ಯೋಜನೆಯ ಕೇಂದ್ರ ಕಚೇರಿಯ ಪ್ರತಿ ಸಿಬ್ಬಂದಿಯೂ ಚಾಲಕನ ರೀತಿಯಲ್ಲಿ ಹೊಣೆಗಾರಿಕೆಯಿಂದ ಕರ್ತವ್ಯ ನಿರ್ವಹಿಸಬೇಕು.
ಇಂದು ಯೋಜನೆಯ ಕಾರ್ಯಕ್ಷೇತ್ರ, ಕಾರ್ಯಕ್ರಮಗಳು ವಿಸ್ತಾರವಾಗುತ್ತಿವೆ. ಇದನ್ನು ತಡೆದುಕೊಳ್ಳುವ ಧೀಶಕ್ತಿ ನಮಗಿರಬೇಕು. ಕಾರ್ಯಕ್ರಮಗಳನ್ನು ಮಾಡುವಾಗ ‘ನಾನು’ ಎನ್ನುವ ಅಹಂಕಾರ ಬಂದರೆ ಕೆಲಸ ಆಗುವುದಿಲ್ಲ. ಬದಲಾಗಿ ನಾನು ಸಂಸ್ಥೆಯ ಒಂದು ಆಯುಧ, ಅಸ್ತ್ರ ಎಂದು ತಿಳಿದು ಕೆಲಸ ಮಾಡಿದರೆ ಸಂಸ್ಥೆ ಯಶಸ್ಸನ್ನು ಪಡೆಯುತ್ತದೆ. ಪ್ರತಿಯೊಂದು ವಿಭಾಗದಲ್ಲಿಯೂ ಶ್ರದ್ಧೆ ಇರಬೇಕು. ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕರ್ತರಿಗೆ ಎಲ್ಲೆಡೆ ಧರ್ಮಸ್ಥಳದ ಪ್ರತಿನಿಧಿಗಳೆಂದು ಗೌರವ ದೊರೆಯುತ್ತದೆ. ಆಗ ‘ನಾನು’ ಎನ್ನುವ ಅಹಂಕಾರ ಬಿಟ್ಟು ‘ನಾವು’ ಎನ್ನುವ ಸೇವಾಭಾವವಿದ್ದರೆ ಕಾರ್ಯಗಳಲ್ಲಿ ಯಶಸ್ಸು ದೊರೆಯುತ್ತದೆ.
ನಾವೆಲ್ಲರೂ ಹೆಮ್ಮೆಪಡಬೇಕು. ಇದು ನಮ್ಮ ಒಂದು ಸಂಘಟನೆ. ನೀವು ಕೂಡಾ ದೊಡ್ಡ ಸಂಸ್ಥೆಯ ಸಣ್ಣ ಪಾಲುದಾರರು. ನೀವೂ ಕೂಡಾ ರೆಂಬೆ ಇದ್ದ ಹಾಗೆ. ಎಲ್ಲ ರೆಂಬೆಗಳೂ ಬಲಿಷ್ಠವಾಗಿರಬೇಕು. ಎಲ್ಲ ರೆಂಬೆಗಳಲ್ಲಿಯೂ ಹೂಬಿಡಬೇಕು, ಫಲ ಬಿಡಬೇಕು. ಅದರ ಉಪಯೋಗ ಜನರಿಗೆ ಆಗಬೇಕು ಅದುವೇ ನಮ್ಮ ಉದ್ದೇಶ. ನನ್ನ ಮತ್ತು ನನ್ನ ಸಹೋದರರಾದ ಸುರೇಂದ್ರ ಕುಮಾರ್, ಹರ್ಷೇಂದ್ರ ಕುಮಾರ್, ಶ್ರೀಮತಿ ಹೇಮಾವತಿಯವರು ಇವರೆಲ್ಲರ ಪ್ರಯತ್ನದ ಫಲವಾಗಿ ಗ್ರಾಮಾಭಿವೃದ್ಧಿ ಯೋಜನೆ ಇಂದು ರಾಷ್ಟ್ರ ಮಟ್ಟದಲ್ಲಿ ಬೆಳೆದು ನಿಂತಿದೆ. ಎಲ್ಲ ದಿಕ್ಕಿನಲ್ಲಿಯೂ ನೋಡಿ ನಾವು ಉತ್ಕøಷ್ಟತೆಗೆ ಪ್ರಯತ್ನಪಡುತ್ತೇವೆ. ಯೋಜನೆಯ ಕಾರ್ಯಕ್ರಮಕ್ಕೆ ಸಹಕಾರ, ಪಾಲುದಾರಿಕೆ, ಭಾಗವಹಿಸುವಿಕೆ ಬೇಕು. ನೀವೆಲ್ಲರೂ ಉತ್ಸಾಹ ತೋರಿದರೆ, ನಿಮ್ಮ ನಿಮ್ಮ ಕರ್ತವ್ಯವನ್ನು ನೀವು ಮಾಡಿದರೆ, ವರದಿಗಳನ್ನು ಸರಿಯಾಗಿ ಗಮನಿಸಿದರೆ, ಇಲ್ಲಿಂದ ಹೋಗುವಂತಹ ವ್ಯವಹಾರಗಳೆಲ್ಲ ಸರಿಯಾಗಿ ಆದರೆ ಗ್ರಾಮಾಭಿವೃದ್ಧಿ ಯೋಜನೆ ನಿಜವಾಗಿ ಒಂದು ಮಾದರಿ ಸಂಸ್ಥೆ ಆಗುತ್ತದೆ. ಯಾರೇ ಆದರೂ ಬ್ಯಾಂಕ್ ಅನ್ನು ಮಾದರಿ ಮಾಡಬಹುದು. ಆದರೆ ಗ್ರಾಮಾಭಿವೃದ್ಧಿ ಯೋಜನೆಯ ಸೇವೆಯನ್ನು ಮಾದರಿ ಮಾಡಲು ಸಾಧ್ಯವಿಲ್ಲ. ಹಾಗಾಗಿ ನೀವೆಲ್ಲರೂ ಶ್ರದ್ಧೆಯಿಂದ ಕೆಲಸ ಮಾಡಿ. 2022 ನಿಮಗೆಲ್ಲರಿಗೂ ಯಶಸ್ಸಿನ ವರ್ಷವಾಗಲಿ.

Facebook
Twitter
WhatsApp
LinkedIn
Telegram

Leave a Reply

Your email address will not be published. Required fields are marked *