ವಿಶೇಷಚೇತನರ ಪಾಲಿನ ಭಾಗ್ಯದ ಬಾಗಿಲು ಸೇವಾ ಅಂಧರ ಸಂಸ್ಥೆ

ಪ್ರತಿ ವರ್ಷ ರಾಜ್ಯಾದಾದ್ಯಂತ ಸುತ್ತಾಡಿ ಬೇರೆ ಬೇರೆ ಕಡೆಗಳಲ್ಲಿರುವ ಕಿವುಡ, ಮೂಕ, ಅಂಧ ಮಕ್ಕಳನ್ನು ಗುರುತಿಸಿ ಅವರನ್ನು ಕರೆತಂದು ಅವರಿಗೆ ವಸತಿ ವ್ಯವಸ್ಥೆಯೊಂದಿಗೆ ವಿದ್ಯಾಭ್ಯಾಸವನ್ನು ಕಲ್ಪಿಸಿ, ಉದ್ಯೋಗವಕಾಶವನ್ನು ಒದಗಿಸಿಕೊಡುವ ಸಂಸ್ಥೆಯೊಂದು ರಾಣೇಬೆನ್ನೂರು ತಾಲೂಕಿನ ಮಾರುತಿ ನಗರದಲ್ಲಿದೆ.
ಸೇವೆಯ ಆರಂಭದ ಕಥೆ
‘ಸೇವಾ ಅಂಧರ ಸಂಸ್ಥೆ’ಯ ಸ್ಥಾಪಕರಾದ ಎಚ್.ಆರ್. ಶಿವಕುಮಾರ್ ಹುಟ್ಟಿದ್ದು ತುಮಕೂರು ಜಿಲ್ಲೆಯ ತುರುವೇಕೆರೆಯಲ್ಲಿ. ಸಿದ್ಧಗಂಗಾ ಮಠದಲ್ಲಿ ಆಶ್ರಯ ಪಡೆದ ಅವರು ಬಾಲ್ಯದಲ್ಲೇ ಮುಂದೆ ತಾನು ಕೂಡಾ ಸಮಾಜಕ್ಕೆ ಉಪಯೋಗವಾಗುವ ನಿಟ್ಟಿನಲ್ಲಿ ಏನಾದರೊಂದು ಕೆಲಸ ಮಾಡಬೇಕೆಂದು ನಿರ್ಧರಿಸಿದರು. ಶಾಲಾ ದಿನಗಳಲ್ಲೆ ಮೈಸೂರಿನ ಜೆ.ಎಸ್.ಎಸ್. ಕಾಲೇಜಿನ ಆವರಣದಲ್ಲಿದ್ದ ಅಂಧ ಮಕ್ಕಳ ವಸತಿ ಶಾಲೆಗೆ ಆಗಾಗ ಭೇಟಿ ನೀಡುತ್ತಿದ್ದರು. ಬಿ.ಎಡ್. ಮುಗಿಸಿ ರಾಜ್ಯ ಪೊಲೀಸ್ ಇಲಾಖೆಗೆ ಆಯ್ಕೆಯಾದರು. ತರಬೇತಿಯನ್ನು ಮುಗಿಸುವ ಹೊತ್ತಿಗೆ ಪೊಲೀಸ್ ಹುದ್ದೆಯಲ್ಲಿ ಮುಂದುವರೆದರೆ ವಿಶೇಷ ಚೇತನರಿಗಾಗಿ ಶಾಲೆಯನ್ನು ತೆರೆಯುವ ಕನಸು ನನಸಾಗಲಾರದು. ಒಂದು ವೇಳೆ ತೆರೆದರೂ ಆ ಮಕ್ಕಳೊಂದಿಗೆ ತನ್ನ ಪೂರ್ಣ ಸಮಯವನ್ನು ಕಳೆಯಲು ಸಾಧ್ಯವಾಗುವುದಿಲ್ಲ ಎಂದು ಆ ಹುದ್ದೆಯನ್ನು ತ್ಯಜಿಸಿದರು. ಮುಂದಕ್ಕೆ ಇವರನ್ನರಸುತ್ತಾ ಬಂದ ಟ್ಯಾಕ್ಸ್ ಕಮಿಷನರ್ ಇನ್ಸ್‍ಪೆಕ್ಟರ್, ಸಾಮಾನ್ಯ ಮಕ್ಕಳ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಹುದ್ದೆಯನ್ನು ಬಿಟ್ಟು 1991-92 ರಲ್ಲಿ ರಾಣೇಬೆನ್ನೂರಿನಲ್ಲಿ “ಸೇವಾ ಅಂಧರ ಸಂಸ್ಥೆ”ಯನ್ನು ಆರಂಭಿಸಿದರು.
ವಿಶೇಷತೆ
ಕಿವುಡರಿಗೆ, ಮೂಕರಿಗೆ ಹೀಗೆ ಪ್ರತ್ಯೇಕ ಶಾಲೆಗಳಿರುವುದನ್ನು ಕೇಳಿದ್ದೇವೆ. ಆದರೆ ‘ಸೇವಾ ಅಂಧರ ಸಂಸ್ಥೆ’ಯಡಿ ಶ್ರೀ ರೇಣುಕಾ ಎಲ್ಲಮ್ಮ ಕಿವುಡ ಹಾಗೂ ಮೂಕ ಮಕ್ಕಳ ವಸತಿಶಾಲೆ, ಶ್ರೀ ರೇಣುಕಾ ಎಲ್ಲಮ್ಮ ಅಂಧ ಮಕ್ಕಳ ವಸತಿಶಾಲೆ, ಶ್ರವಣನ್ಯೂನತೆಯುಳ್ಳ ಮಕ್ಕಳಿಗೆ ಬೋಧಿಸುವ ವಿಶೇಷ ಶಿಕ್ಷಕರ ತರಬೇತಿ ಕೇಂದ್ರಗಳು ವಿಶೇಷಚೇತನರ ಬದುಕಿಗೆ ಹೊಸ ಬೆಳಕನ್ನು ನೀಡುತ್ತಿವೆ.
ಕಿವುಡ ಹಾಗೂ ಮೂಕ ಮಕ್ಕಳ ವಸತಿ ಶಾಲೆ
1998-99ರಲ್ಲಿ ಶ್ರವಣನ್ಯೂನತೆಯುಳ್ಳ ಮಕ್ಕಳಿಗಾಗಿ ವಿಶೇಷ ವಸತಿಯುತ ಶಾಲೆಯನ್ನು ಪ್ರಾರಂಭಿಸಿದ್ದು 1 ರಿಂದ 10ನೇ ತರಗತಿಯವರೆಗೆ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಇಲ್ಲಿ ಅವಕಾಶವಿದೆ. ತುಟಿ ಚಲನೆ, ಸಂಜ್ಞೆ, ಭಾಷೆ, ಶ್ರವಣೋಪಕರಣಗಳ ಬಳಕೆ ಹಾಗೂ ಬೋಧನಾ ಕಲಿಕಾ ಸಾಮಗ್ರಿಗಳು, ಪಾತ್ರಾಭಿನಯವನ್ನು ಬಳಸಿಕೊಂಡು ವಿದ್ಯಾರ್ಥಿಗಳಿಗೆ ಒಟ್ಟು ಸಂವಹನದ ಮೂಲಕ ಕಲಿಕೆಯನ್ನು ಬೋಧಿಸಲಾಗುತ್ತದೆ. ಇಲ್ಲಿ ಪ್ರಸ್ತುತ 84 ಹುಡುಗರು, 51 ಹುಡುಗಿಯರು ಹೀಗೆ ಒಟ್ಟು 135 ವಿದ್ಯಾರ್ಥಿಗಳಿದ್ದಾರೆ. ಇವರಿಗೆ ಕಲಿಸುವುದಕ್ಕಾಗಿ ವಿಶೇಷÀಚೇತನ ಕಲಿಕೆ ಬಗ್ಗೆ ತರಬೇತಿ ಪಡೆದ ನುರಿತ ಹದಿನೈದು ಮಂದಿ ಶಿಕ್ಷಕ/ಕಿಯರಿದ್ದಾರೆ. ಪ್ರತಿ ವರ್ಷ ಈ ಸಂಸ್ಥೆ ಶೇ.100 ಫಲಿತಾಂಶವನ್ನು ಪಡೆಯುತ್ತಿದೆ. ಊಟ, ವಸತಿ, ಶಿಕ್ಷಣ ಎಲ್ಲವು ಇಲ್ಲಿ ಸಂಪೂರ್ಣ ಉಚಿತವಾಗಿರುತ್ತದೆ. ನೇತ್ರಾವತಿ ಮಗ್ಗದ ಎಂಬ ಅಂಗವಿಕಲೆಗೆ ಮುಖ್ಯೋಪಾಧ್ಯಾಯ ಹುದ್ದೆ, ಮೂರು ಮಂದಿ ಕಿವುಡ, ಮೂಗ ಯುವಕ – ಯುವತಿಯರಿಗೆ ಉದ್ಯೋಗವನ್ನು ಕಲ್ಪಿಸಿಕೊಟ್ಟಿರುತ್ತಾರೆ.
ಅಂಧ ಮಕ್ಕಳ ವಸತಿಶಾಲೆ
ಪಿಯುಸಿಯಿಂದ ಪದವಿಯವರೆಗೆ ವ್ಯಾಸಂಗ ಮಾಡುವ ವಿಶೇಷಚೇತನ ಮಕ್ಕಳಿಗೆ ಇಲ್ಲಿ ಉಚಿತವಾಗಿ ವಸತಿ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದೆ. ಪ್ರಸ್ತುತ 30 ಮಕ್ಕಳು ಇದರ ಪ್ರಯೋಜನವನ್ನು ಪಡೆಯುತ್ತಿದ್ದಾರೆ.
ಅಸಹಾಯಕ ಹೆಣ್ಣುಮಕ್ಕಳಿಗೆ ನೆಲೆ ಕಲ್ಪಿಸುವ – ಉಜ್ವಲ
ಸಮಾಜದ ಅಸಹಾಯಕ ಹೆಣ್ಮಕ್ಕಳಿಗೆ ನೆಲೆ ಕಲ್ಪಿಸುವ ಕೆಲಸವನ್ನು 2009 ರಿಂದ ಈ ಸಂಸ್ಥೆ ‘ಉಜ್ವಲ’ ಎಂಬ ಹೆಸರಿನಿಂದ ಮಾಡುತ್ತಿದೆ. ಈವರೆಗೆ 31 ಮಂದಿ ಇದರ ಪ್ರಯೋಜನವನ್ನು ಪಡೆದಿದ್ದಾರೆ. ಈ ಯೋಜನೆಯು ಮಹಿಳೆ ಮತ್ತು ಮಕ್ಕಳ ಮಾರಾಟ, ನೊಂದ ಮಹಿಳೆಯರಿಗೆ ಆಶ್ರಯ ನೀಡಿ ಸ್ವಯಂ ಬದುಕು ಕಟ್ಟಿಕೊಳ್ಳಲು ನೆರವು ನೀಡಿದೆ.
ವಿಶೇಷಚೇತನ ಶಿಕ್ಷಕರ ತರಬೇತಿ ಸಂಸ್ಥೆ
ವಿಶೇಷಚೇತನರಿಗೆ ಶಿಕ್ಷಣ ನೀಡಲು ಬೇಕಾದ ವಿಶೇಷ ಕೌಶಲವನ್ನು ಕಲ್ಪಿಸಿಕೊಡುವ ತರಬೇತಿ ಕೇಂದ್ರಗಳು ರಾಜ್ಯದ ಬೆಂಗಳೂರು, ಮೈಸೂರು, ರಾಣೇಬೆನ್ನೂರಿನಲ್ಲಿ ಮಾತ್ರ ಇದೆ. 2010 ರಿಂದ ಈವರೆಗೆ ಸುಮಾರು 135 ಮಂದಿ ಡಿ.ಎಡ್. ಮುಗಿಸಿದ ಶಿಕ್ಷಕರು ಇದರ ಪ್ರಯೋಜವನ್ನು ಪಡೆದಿದ್ದಾರೆ.
ಎಚ್.ಆರ್. ಶಿವಕುಮಾರ್‍ರವರಿಗೆ ಅವರ ಧರ್ಮಪತ್ನಿ ರೇಣುಕಾ ಶಿವಕುಮಾರ್‍ರವರು ಕೂಡಾ ಉತ್ತಮ ಸಾಥ್ ನೀಡುತ್ತಿದ್ದಾರೆ. ಅಂಧ ಮಕ್ಕಳಿಗಾಗಿ ಸ್ವಂತ ಶಾಲಾ ಕಟ್ಟಡ ನಿರ್ಮಾಣ ಮಾಡಬೇಕು, ವಿಕಲಚೇತನ ಮಕ್ಕಳಿಗಾಗಿ ತರಬೇತಿ ಕೇಂದ್ರ, ವೃದ್ಧಾಶ್ರಮ ಸ್ಥಾಪನೆ ಮಾಡಬೇಕೆಂಬುದು ಇವರ ಮುಂದಿನ ಯೋಜನೆಗಳು. ಸಹೃದಯಿಗಳು ಇವರ ಈ ಕೆಲಸದಲ್ಲಿ ಕೈಜೋಡಿಸಬಹುದಾಗಿದೆ. ಇವರ ಪ್ರಯತ್ನದ ಫಲವಾಗಿ ಇದೀಗ ಸಾವಿರಾರು ವಿಶೇಷಚೇತನರ ಬದುಕು ಬೆಳಗಿದೆ. ಇವರ ದೃಢ ಸಂಕಲ್ಪ, ಪ್ರತಿಫಲಾಪೇಕ್ಷೆ ಇಲ್ಲದ ಈ ಸಮಾಜಸೇವೆಯನ್ನು ಪ್ರೋತ್ಸಾಹಿಸಲು ನೀವೂ ಎಚ್.ಆರ್. ಶಿವಕುಮಾರ್‍ರವರ 7899690437 / 9945380626 ಈ ಮೊಬೈಲ್ ಸಂಖ್ಯೆಗೆ ಕರೆ ಮಾಡಬಹುದು.

ವಿಶೇಷಚೇತನ ಶಾಲೆಯ ವಿದ್ಯಾರ್ಥಿಗಳು ಪಠ್ಯದೊಂದಿಗೆ ಕ್ರೀಡೆ, ಸಾಂಸ್ಕøತಿಕ ಕಾರ್ಯಕ್ರಮದಲ್ಲೂ ಸಾಮಾನ್ಯ ಮಕ್ಕಳಿಗಿಂತ ನಾವು ಕಡಿಮೆಯೇನಿಲ್ಲ ಎಂಬುವುದನ್ನು ತೋರಿಸಿಕೊಟ್ಟಿದ್ದಾರೆ. ಮುಂಬೈನಲ್ಲಿ ನಡೆದ ರಾಷ್ಟ್ರಮಟ್ಟದ ಸೈಲೆಂಟ್ ಒಲಿಂಪಿಕ್ಸ್‍ನಲ್ಲಿ ಭಾಗವಹಿಸಿ ಚಿನ್ನ, ಬೆಳ್ಳಿಯ ಪದಕಗಳನ್ನು ಗೆದ್ದುಕೊಂಡಿದ್ದಾರೆ. ಸಂಸ್ಥೆಯ ಸೇವೆಗೆ ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಕಲ್ಯಾಣ ಇಲಾಖೆ ವಿಶೇಷ ಚೇತನ ಶ್ರೇಯೋಭಿವೃದ್ಧಿಗೆ ಶ್ರಮಿಸಿದ ‘ಉತ್ತಮ ಸೇವಾ ಸಂಸ್ಥೆ’ ಎಂಬ ರಾಜ್ಯ ಪ್ರಶಸ್ತಿ, ‘ಉತ್ತಮ ಶಿಕ್ಷಕ ರಾಜ್ಯ ಪ್ರಶಸ್ತಿ’, ಬಿಹಾರ ರಾಜ್ಯದ ಪಾಟ್ನಾದ ಸಮರ್ಪಣಾ ಸಂಸ್ಥೆಯವರು ನೀಡುವ ‘ಚಾಣಕ್ಯ’ ಪ್ರಶಸ್ತಿಯು ಭಾಜನವಾಗಿದೆ.

ವಿಶೇಷಚೇತನರಿಗೆ ಸ್ವಉದ್ಯೋಗ ನೀಡಿದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ
ಎಸ್ಸೆಸೆಲ್ಸಿ ನಂತರ ಶಿಕ್ಷಣವನ್ನು ಮುಂದುವರಿಸದ ವಿದ್ಯಾರ್ಥಿಗಳು ಕೆಲಸವಿಲ್ಲದೆ ಮನೆಯಲ್ಲೆ ಇರಬಾರದೆಂಬ ನಿಟ್ಟಿನಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನೆರವಿನಿಂದ ಸಂಸ್ಥೆಯಿಂದ ಅಡಿಕೆ ಹಾಳೆತಟ್ಟೆ ತಯಾರಿ ಘಟಕವನ್ನು ತೆರೆಯಲಾಗಿದೆ. ಈಗಾಗಲೆ ಎಂಟು ಮಂದಿ ಹಾಳೆ ತಟ್ಟೆ ತಯಾರಿಯಲ್ಲಿ ತೊಡಗುವ ಮೂಲಕ ಇದರ ಪ್ರಯೋಜನವನ್ನು ಪಡೆಯುತ್ತಿದ್ದಾರೆ.

ಚಂದ್ರಹಾಸ ಚಾರ್ಮಾಡಿ

Facebook
Twitter
WhatsApp
LinkedIn
Telegram

Leave a Reply

Your email address will not be published. Required fields are marked *