ಅರ್ಧ ‘ಹಾಲಿನ ಚಹಾ’

ಬರಹ : ಶ್ರೀ ಅನಿಲ್ ಕುಮಾರ್ ಎಸ್.ಎಸ್., ಸಿ.ಒ.ಒ. ಎಸ್.ಕೆ.ಡಿ.ಆರ್.ಡಿ.ಪಿ. ಬಿ.ಸಿ. ಟ್ರಸ್ಟ್‌ (ರಿ.)

ನಾನು ಬ್ಯಾಂಕಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಒಂದು ದಿನ ಇಳಿ ವಯಸ್ಸಿನ ವೃದ್ಧರು ಬಹಳ ಆತಂಕದಿಂದ ನನ್ನಲ್ಲಿ ಬಂದು ‘ನನ್ನ ಖಾತೆಗೆ ಇನ್ನೂ ಪಿಂಚಣಿ ಬಿದ್ದಿಲ್ಲ, ಏನಾದರೂ ಮಾಡಿ ಪಿಂಚಣಿ ಕೊಟ್ಟು ನನ್ನನ್ನು ಉಳಿಸಿ’ ಎಂದು ಉದ್ವೇಗದಿಂದ ಕೇಳಿದರು. ನಡುಗುತ್ತಿರುವ ಅವರ ಕೈಯನ್ನು ಹಿಡಿದು ಸಾಂತ್ವನ ಹೇಳುತ್ತಾ, ಪಕ್ಕದಲ್ಲಿರುವ ಚೇರ್‍ನಲ್ಲಿ ಅವರನ್ನು ಕುಳ್ಳರಿಸಿ ಅವರ ಪಕ್ಕದಲ್ಲಿಯೇ ನಾನು ಕುಳಿತುಕೊಂಡು, ಯಾಕೆ ಏನಾಯಿತು ಎಂದು ಕೇಳಿದೆನು. ಅವರ ತಿಂಗಳ ಬಿ.ಪಿ. ಹಾಗೂ ಇತರೆ ಮಾತ್ರೆಗಳು ಆ ದಿನ ಬೆಳಗ್ಗೆಗೆ ಮುಗಿದಿತ್ತು. ಯಾವಾಗಲೂ ತಿಂಗಳ ಮೊದಲ ದಿನವೇ ಸಿಗುತ್ತಿದ್ದ ಪಿಂಚಣಿಯಿಂದ ಒಂದು ತಿಂಗಳಿಗಾಗುವಷ್ಟು ಮಾತ್ರೆಗಳನ್ನು ಕೊಂಡುಕೊಂಡು, ದಿನವೂ ಸೇವಿಸುತ್ತಾ ಆ ಬಡ ಜೀವ ಬದುಕುತ್ತಿತ್ತು. ಪಿಂಚಣಿ ಬೀಳುವುದು ಒಂದು ದಿನ ತಡವಾದರೂ ಕೂಡ ಅವರ ಜೀವನದಲ್ಲಿ ಅಲ್ಲೋಲ ಕಲ್ಲೋಲವಾಗುತ್ತಿತ್ತು. ಒಂದು ತಾಂತ್ರಿಕ ದೋಷದಿಂದ ಆ ತಿಂಗಳ ಪಿಂಚಣಿ ಖಾತೆಗೆ ಬಿದ್ದಿರಲಿಲ್ಲ. ಇವರ ಆತಂಕದ ತೀವ್ರತೆಯನ್ನು ಗಮನಿಸಿ ಮೇಲಾಧಿಕಾರಿಗಳಿಂದ ವಿಶೇಷ ಅನುಮತಿ ಪಡೆದು ಎಂದಿನಂತೆ ಅವರ ಕೈಗೆ ಪಿಂಚಣಿ ಹಣ ಸಿಗುವಂತೆ ಮಾಡಿದೆವು. ಜೀವವೇ ಕೈಗೆ ಬಂದಂತೆ ಆ ಹಣವನ್ನು ಜೋಪಾನವಾಗಿ ತೆಗೆದುಕೊಂಡರು. ಹಾಗೆಯೇ ಅವರನ್ನು ಕ್ಯಾಬಿನ್‍ಗೆ ಕರೆಯಿಸಿ ಕುಳ್ಳರಿಸಿ ಚಹಾವನ್ನು ನೀಡಿ ಸ್ವೀಕರಿಸುವಂತೆ ಕೇಳಿದೆನು. ಚಹಾವನ್ನು ಸಂತೋಷದಿಂದ ಹೀರುತ್ತಾ ‘ಈ ತಿಂಗಳ ಹಾಲಿನ ಚಹಾ ಇಲ್ಲಿಯೇ ಆಯಿತು’ ಎಂದರು. ಅರ್ಥ ಆಗದ ನಾನು ಸ್ವಲ್ಪ ವಿವರಿಸಿ ಎಂದು ಕೇಳಿದೆ. ಆಗ ತನ್ನ ಎಲ್ಲಾ ವಯೋವ್ಯಥೆಯ ಕಥೆಯನ್ನು ಹೇಳಲಾರಂಭಿಸಿದರು. ತಿಂಗಳ ಮೊದಲ ದಿನದಲ್ಲಿ ಸಿಗುವ ರೂ. 750/- ಪಿಂಚಣಿ ಮೊತ್ತದಲ್ಲಿ ಒಂದು ತಿಂಗಳಿಗೆ ಆಗುವಷ್ಟು ಎಲ್ಲಾ ಮಾತ್ರೆಗಳು, 150 ಗ್ರಾಂ. ಚಹಾಹುಡಿ ಹಾಗೂ ಇತರೇ ಸಣ್ಣಪುಟ್ಟ ದಿನಸಿ ಸಾಮಾಗ್ರಿಗಳನ್ನು ಕೊಳ್ಳುತ್ತಿದ್ದರು. ಆ ವಸ್ತುಗಳೊಂದಿಗೆ ಮನೆಗೆ ಹಿಂದಿರುಗಿ ಹೋಗುವಾಗ ಹೋಟೇಲ್‍ನಲ್ಲಿ ರೂ. 5/- ನ್ನು ಕೊಟ್ಟು ಅರ್ಧ ಚಹಾ (ಹಾಲಿನ) ಕುಡಿಯುತ್ತಿದ್ದರು. ಇನ್ನು ಹಾಲಿನ ಚಹಾದ ಮುಖ ನೋಡುವುದು ಮುಂದಿನ ತಿಂಗಳ ಪಿಂಚಣಿ ಹಣ ಬಂದ ಮೇಲೆ, ಅಲ್ಲಿಯವರೆಗೆ ಬಿಸಿ ನೀರಿಗೆ ಚಿಟಿಕೆಯಷ್ಟು ಚಹಾಹುಡಿ ಹಾಕಿ ಹಾಗೆಯೇ ಕೆಲವು ದಿನ ಕುಡಿಯುತ್ತಿದ್ದರು. ಪಡಿತರ ಚೀಟಿಯಲ್ಲಿ ಒಂದಿಷ್ಟು ಅಕ್ಕಿ-ಸಕ್ಕರೆ ಪಡೆದು ಕಾಲಿಗಿಂತ ಯಾವಾಗಲೂ ಗಿಡ್ಡದಾದ ಹಾಸಿಗೆಯಲ್ಲಿ ಜೀವನ ನಡೆಸುತ್ತಿದ್ದರು. ಇಡೀ ತಿಂಗಳ ಬದುಕನ್ನು ಕಷ್ಟಪಟ್ಟು ರೂ.750 ರ ಒಳಗೆ ನಡೆಸಬೇಕಾಗಿತ್ತು. ಬೇರೆ ಆದಾಯದ ಮೂಲವೂ ಇಲ್ಲ, ದುಡಿಯಲು ಶಕ್ತಿಯೂ ಇಲ್ಲ. ಜೀವಕ್ಕೂ, ಜೀವನಕ್ಕೂ ಪಿಂಚಣಿಯೇ ಜೀವನಾಧಾರವಾಗಿತ್ತು. ಇನ್ನೂ ಅವರ ಹಿನ್ನೆಲೆ ನೋಡಿದರೆ ಮತ್ತೂ ಆಶ್ಚರ್ಯ. ಅವರು ಓರ್ವ ಪ್ರಸಿದ್ಧ ಯಕ್ಷಗಾನ ಕಲಾವಿದರಾಗಿದ್ದರು. ಗಳಿಕೆ ಏನೋ ಉತ್ತಮವಾಗಿತ್ತು, ಆದರೆ ಗಳಿಸುವ ಸಮಯದಲ್ಲಿ ಉಳಿಸುವ ಸಂಯಮ ತೋರಲಿಲ್ಲ. ಹೇಗೋ ಸಣ್ಣ ಸೂರನ್ನು ಮಾಡಿದ್ದರು. ಇದ್ದ ಮಗಳನ್ನು ಹೇಗೋ ಮದುವೆ ಮಾಡಿ ಕಳುಹಿಸಿದ್ದರು. ಅಲ್ಲಿ ಮಗಳು ಕಷ್ಟದಲ್ಲೆ ಕೈತೊಳೆಯುತ್ತಿರುವುದರಿಂದ ಇವರನ್ನು ನೋಡಿಕೊಳ್ಳಲಾಗಲಿಲ್ಲ. ಇನ್ನು ಇವರ ವಯಸ್ಸಾದಂತೆ ಮುಪ್ಪಿನ ಸುಕ್ಕು ಚರ್ಮದ ಮುಖಕ್ಕೆ ಬಣ್ಣಗಳು ನಿಲ್ಲುತ್ತಿರಲಿಲ್ಲ. ರಂಗಸ್ಥಳದಿಂದ ಹೊರಬಿದ್ದಾಗಲೇ ಅವರಿಗೆ ನಿಜಜೀವನದ ಅರಿವಾಗತೊಡಗಿತು. ಕೈಯಲ್ಲಿದ್ದ ಪುಡಿಗಾಸು ಬರಿದಾದಾಗ ಸರ್ಕಾರಿ ಕಛೇರಿಗಳಿಗೆ ಪಿಂಚಣಿಗಾಗಿ ಅಲೆಯಲಾರಂಭಿಸಿದರು. ಅಂತೂ ಹೇಗೋ ವೃದ್ಧಾಪ್ಯದ ಪಿಂಚಣಿ ಸಿಗಲಾರಂಭಿಸಿತು. ಅಂದಿನಿಂದ ಪಿಂಚಣಿಯಿಂದಲೇ ಬದುಕಿತು ಆ ಬಡಜೀವ. ಅಂದು ಪ್ರಸಿದ್ಧ ಯಕ್ಷಗಾನ ಕಲಾವಿದನಾಗಿ ಒಂದು ರಾತ್ರಿಯಲ್ಲೇ ಹತ್ತಾರು ಬಾರಿ ಹಾಲಿನ ಚಹಾ ಹೀರುತ್ತಿದ್ದ ಆ ಜೀವಕ್ಕೆ ಇಂದು ತಿಂಗಳಿಗೊಮ್ಮೆ ಮಾತ್ರ ಹಾಲಿನ ಚಹಾ ಅದೂ ಕೇವಲ ಅರ್ಧ ಚಹಾ. ಇದು ನನಗೆ ಸಿಕ್ಕ ಒಂದು ನಿದರ್ಶನ, ಆದರೆ ಇಂತಹ ಲಕ್ಷಾಂತರ ವಯೋವ್ಯಥೆಯ ನೈಜ ಕತೆಗಳು ನಮ್ಮ ದೇಶದಲ್ಲಿ ನಡೆಯುತ್ತಿವೆ.
ಕರ್ನಾಟಕ ರಾಜ್ಯದಲ್ಲಿನ ಅತ್ಯಂತ ದುಸ್ಥಿತಿಯಲ್ಲಿರುವ ಅಸಹಾಯಕ ವ್ಯಕ್ತಿಗಳನ್ನು ಯೋಜನೆಯ ಮೂಲಕ ಗುರುತಿಸಿ ಪೂಜ್ಯ ಶ್ರೀ ಹೆಗ್ಗಡೆಯವರು ಮಾಸಾಶನ ನೀಡುತ್ತಿದ್ದಾರೆ. ಪ್ರತಿ ತಿಂಗಳು ಸುಮಾರು 12,800 ಕುಟುಂಬಗಳು ಪೂಜ್ಯರು ನೀಡುತ್ತಿರುವ ಮಾಸಾಶನದಿಂದ ತಮ್ಮ ಬದುಕನ್ನು ನಡೆಸುತ್ತಿದ್ದಾರೆ. ಅವರ ಜೀವನದ ದುಸ್ಥಿತಿಯ ತೀವ್ರತೆಯ ಆಧಾರದ ಮೇಲೆ ಮಾಸಾಶನ ಸಿಗುತ್ತಿದ್ದು, ಕೆಲವು ಕುಟುಂಬಗಳು ಗರಿಷ್ಠ ಮಾಸಾಶನ ಮೊತ್ತವಾದ ರೂ.3,000/- ವನ್ನು ಪ್ರತಿ ತಿಂಗಳು ಪಡೆಯುತ್ತಿದ್ದಾರೆ. ವಾರ್ಷಿಕ ರೂ.10.50 ಕೋಟಿಗಳನ್ನು ಈ ಮಾಸಾಶನಕ್ಕೆ ವಿನಿಯೋಗವಾಗುತ್ತಿದೆ. ಮಾಸಾಶನದಿಂದ ಬದುಕುತ್ತಿರುವ ಆ ಜೀವಗಳಿಗೆ ಜೀವನ ಕಲ್ಪಿಸಲು ವಾತ್ಸಲ್ಯಮಯಿ ಹೇಮಾವತಿ ಅಮ್ಮನವರು ‘ವಾತ್ಸಲ್ಯ ಕಾರ್ಯಕ್ರಮ’ಕ್ಕೆ ಚಾಲನೆಯಿತ್ತರು. ಮೂಲಭೂತ ಅವಶ್ಯಕತೆಗಳನ್ನು ಪೂರೈಸುವ ವಾತ್ಸಲ್ಯಕಿಟ್ ಈಗಾಗಲೇ 10,000 ಕುಟುಂಬಗಳಿಗೆ ತಲುಪಿದೆ. ಅತ್ಯಂತ ಮೂಲಭೂತ ಸೌಕರ್ಯದಿಂದ ವಂಚಿತರಾದವರಿಗೆ ಶೌಚಾಲಯ, ಸ್ನಾನಗೃಹ, ಮನೆ ರಿಪೇರಿಯಂತಹ ಕೆಲಸ ಕಾರ್ಯಗಳು ಈ ಕಾರ್ಯಕ್ರಮದಡಿ ನಡೆಯುತ್ತಿದೆ. ಕೆಲವು ಮೂಲ ದಾಖಲಾತಿಗಳು ಇಲ್ಲದೇ ಇರುವ ವೃದ್ಧರು ಸರ್ಕಾರದ ಮಾಸಾಶನ ಪಡೆಯಲು ಸಾಧ್ಯವಾಗುತ್ತಿಲ್ಲ. ಅಂತಹ ಸಹಸ್ರಾರು ಮಂದಿಗೆ ಪೂಜ್ಯರು ನೀಡುತ್ತಿರುವ ಮಾಸಾಶನವೇ ಜೀವನಾಧಾರವಾಗಿದೆ.
ನಿರ್ಲಕ್ಷಕ್ಕೆ ಒಳಪಡುತ್ತಿರುವ ವೃದ್ಧರ ಸಂಖ್ಯೆ ವರ್ಷದಿಂದ ವರ್ಷಕ್ಕೆ ನಮ್ಮ ದೇಶದಲ್ಲಿ ಜಾಸ್ತಿಯಗುತ್ತಿದೆ. ಇನ್ನು ನಮ್ಮ ದೇಶದ ಕೊರತೆ ಬಜೆಟ್‍ನಲ್ಲಿ ವೃದ್ಧಾಪ್ಯದ ಪಿಂಚಣಿಗಾಗಿ ಸರ್ಕಾರ ಸಾವಿರಾರು ಕೋಟಿಗಳನ್ನು ಹೆಚ್ಚುವರಿಯಾಗಿ ಇಡುವುದು ಒಂದು ಸವಾಲೇ ಸರಿ. ಆದ್ದರಿಂದ ಮುಂದಿನ ಸುಭದ್ರ ಹಾಗೂ ಖಚಿತ ಪಿಂಚಣಿಗಾಗಿ ಸಾಮಾನ್ಯ ವರ್ಗದ ಜನರಿಗಾಗಿ ಸನ್ಮಾನ್ಯ ಪ್ರಧಾನ ಮಂತ್ರಿಗಳು ಪ್ರಮುಖ ಮೂರು ನೂತನ ಪಿಂಚಣಿ ಯೋಜನೆಗಳನ್ನು ಪ್ರಾರಂಭಿಸಿದ್ದಾರೆ. ಇದರ ವಿವರಗಳನ್ನು ಈ ಸಂಚಿಕೆಯಲ್ಲಿಯೆ ನೀಡಲಾಗಿದೆ. ನಮ್ಮ ಪಾಲುದಾರ ಸದಸ್ಯ ಕುಟುಂಬಗಳು ನಮ್ಮ ಯೋಜನೆಯ ಸಿ.ಎಸ್.ಸಿ. ಕೇಂದ್ರಗಳಿಗೆ ಭೇಟಿ ನೀಡಿ ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದಾಗಿದೆ.

Facebook
Twitter
WhatsApp
LinkedIn
Telegram

Leave a Reply

Your email address will not be published. Required fields are marked *

Latest Updates