ರೊಟ್ಟಿ ತಯಾರಿಸಿ ಸ್ವಾವಲಂಬಿಯಾದರು

ರೊಟ್ಟಿಗೂ ಉತ್ತರ ಕರ್ನಾಟಕದ ಜನರಿಗೂ ಸಾಂಪ್ರದಾಯಿಕ ನಂಟು. ರೊಟ್ಟಿ ಇಲ್ಲಿನ ಜನರ ನಿತ್ಯದ ಆಹಾರ. ರೊಟ್ಟಿಯಿದ್ದರಷ್ಟೆ ಇವರ ಊಟ ಪರಿಪೂರ್ಣವಾಗುತ್ತದೆ. ಈ ಭಾಗಗಳಲ್ಲಿ ಮುಂಜಾನೆ ಹೆಚ್ಚಿನ ಮನೆಗಳಲ್ಲಿ ಕೈಯಲ್ಲೆ ಬಡಿದು ರೊಟ್ಟಿ ತಯಾರಿಸುವ ಸದ್ದು ಕೇಳಿ ಬರುವುದು ಸರ್ವೇಸಾಮಾನ್ಯ. ಕೈಯಿಂದ ರೊಟ್ಟಿ ತಯಾರಿಗೆ ಹೆಚ್ಚು ಸಮಯ ತಗಲುವುದರಿಂದ ಅನೇಕರು ರೊಟ್ಟಿ ಮಾರಾಟಗಾರರಿಂದ ಖರೀದಿಸುತ್ತಾರೆ. ರೊಟ್ಟಿ ತಯಾರಕರು ಯಂತ್ರಗಳ ಮೊರೆ ಹೋಗುತ್ತಾರೆ. ಸಮಾರಂಭಗಳಲ್ಲಿ, ಹೊಟೇಲ್‍ಗಳಿಗೆ ಪೂರೈಸಲು ಹೆಚ್ಚು ರೊಟ್ಟಿಗಳು ಅಗತ್ಯವಿರುವುದರಿಂದ ರೊಟ್ಟಿ ತಯಾರಿಗೆ ಇತ್ತೀಚಿನ ವರ್ಷಗಳಲ್ಲಿ ಯಾಂತ್ರಿಕತೆಯ ಸ್ಪರ್ಶ ಹೆಚ್ಚೆಚ್ಚು ಸಿಗುತ್ತಿದೆ. ಗೃಹಿಣಿಯರು, ಮನೆಯಲ್ಲೆ ಇರುವ ಮಹಿಳೆಯರು ಯಂತ್ರಗಳನ್ನು ಖರೀದಿಸಿ ರೊಟ್ಟಿ ಮಾರಾಟ ಮಾಡಿ ಸ್ವಾವಲಂಬಿ ಬದುಕನ್ನು ನಡೆಸುತ್ತಿದ್ದಾರೆ.
ಧಾರವಾಡದ ತಾರಿಹಾಳದಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ‘ಅಂಬಾ ಭವಾನಿ’ ಸ್ವಸಹಾಯ ಸಂಘದ ಸದಸ್ಯರಾದ ಜಯಶ್ರೀ ಆನಂದ ವಿರಕ್ತಮಠ, ಅನಿತಾ ವಿರೂಪಾಕ್ಷಯ್ಯ ವಿರಕ್ತಮಠ ಮತ್ತು ವಜ್ರೇಶ್ವರಿ ವೀರಯ್ಯ ವಸ್ತ್ರದ ಈ ಮೂವರು ಹತ್ತಿರದ ಸಂಬಂಧಿಗಳು ಮತ್ತು ಒಂದೇ ವಠಾರದಲ್ಲಿ ವಾಸವಿದ್ದಾರೆ. ಗೃಹಿಣಿಯರಾಗಿರುವ ಇವರು ತಮ್ಮ ತಮ್ಮ ಮನೆಗಳಲ್ಲಿ ಕೈಯಲ್ಲೆ ರೊಟ್ಟಿಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದರು. ಒಟ್ಟಿಗೆ ಒಂದೇ ಕಡೆ ರೊಟ್ಟಿ ತಯಾರಿಸಿದರೆ ಕೆಲಸವನ್ನು ಹಂಚಿಕೊಂಡು ಕಡಿಮೆ ಸಮಯದಲ್ಲಿ ಹೆಚ್ಚು ರೊಟ್ಟಿ ತಯಾರಿಸಬಹುದೆಂಬ ಯೋಜನೆಯ ಕಾರ್ಯಕರ್ತರ ಸಲಹೆಯಂತೆ ಯೋಜನೆಯ ಸಹಾಯದಿಂದ ಮೂರು ಮಂದಿಯೂ ಎರಡುವರೆ ಲಕ್ಷ ರೂಪಾಯಿ ಪ್ರಗತಿನಿಧಿಯನ್ನು ಪಡೆದರು. ರೊಟ್ಟಿ ತಯಾರಿ ಯಂತ್ರವನ್ನು ಖರೀದಿಸಿದರು. ರೊಟ್ಟಿ ತಯಾರಿಯ ಮುಖ್ಯ ಜವಾಬ್ದಾರಿಯನ್ನು ಜಯಶ್ರೀ ವಹಿಸಿಕೊಂಡರು. ಇವರ ಮನೆಯ ತಾರಸಿಯ ಮೇಲೆ ರೊಟ್ಟಿ ತಯಾರಿಯ ಘಟಕವನ್ನು ಆರಂಭಿಸಿದರು. ಕಳೆದ ನಾಲ್ಕು ವರ್ಷಗಳಿಂದ ಯಂತ್ರದ ಮೂಲಕ ರೊಟ್ಟಿ ತಯಾರಿಸುತ್ತಾರೆ. ವಿದ್ಯುತ್ ಚಾಲಿತ ಈ ಯಂತ್ರದಲ್ಲಿ ಒಂದು ಕೆ.ಜಿ. ಹಿಟ್ಟಿನಿಂದ ಸುಮಾರು 28 ರೊಟ್ಟಿಗಳನ್ನು ತಯಾರಿಸಬಹುದಾಗಿದೆ.
ಕೈಯ್ಯಲೇ ತಯಾರಿಸುವುದಾದರೆ ದಿನಕ್ಕೆ ನೂರರಷ್ಟು ರೊಟ್ಟಿಗಳನ್ನು ತಯಾರಿಸಬಹುದು. ಯಂತ್ರದ ಮೂಲಕ ಎರಡು ಸಾವಿರ ರೊಟ್ಟಿಗಳನ್ನು ತಯಾರಿಸಬಹುದು ಎಂಬುದು ಇವರ ಅನುಭವದ ಮಾತು. ಇಲ್ಲಿ ಹಿಟ್ಟು ಯಂತ್ರಕ್ಕೆ ಹಾಕುವ, ರೊಟ್ಟಿ ತೆಗೆಯುವ ಮತ್ತು ಅವುಗಳನ್ನು ಬೇಯಿಸುವ ಕೆಲಸವನ್ನು ಏಕಕಾಲದಲ್ಲಿ ಮಾಡಬೇಕಾಗುತ್ತದೆ. ಮೂವರಿಂದಲೆ ಮಾಡುವುದು ಕಷ್ಟಸಾಧ್ಯ. ಹೀಗಾಗಿ ಮೂವರು ಕೂಲಿಯಾಳುಗಳನ್ನು ನೇಮಿಸಿಕೊಂಡಿದ್ದಾರೆ. ಸಿಲಿಂಡರ್, ಜೋಳದ ಹಿಟ್ಟು, ವಿದ್ಯುತ್ ಬಿಲ್‍ಗಳ ಖರ್ಚನ್ನು ಸಮನಾಗಿ ಪಾವತಿಸಿಕೊಂಡು ಆದಾಯವನ್ನು ಹಂಚಿಕೊಳ್ಳುತ್ತಾರೆ.
ಯಂತ್ರ ಖರೀದಿಸಿದ ಒಂದು ವರ್ಷದಲ್ಲಿ ರೊಟ್ಟಿ ಮಾರಾಟದಿಂದ ಯಂತ್ರದ ವೆಚ್ಚ ಇವರ ಕೈಸೇರಿದೆ. ನಂತರದಲ್ಲಿ ಆದಾಯವನ್ನು ಪಾತ್ರೆ ಖರೀದಿಗೆ ಬಳಸಿದ್ದಾರೆ. ಪ್ರತಿದಿನ ಹಾಸ್ಟೆಲ್, ಹೋಟೆಲ್ ಹಾಗೂ ಡಾಭಾಗಳಿಗೆ ರೊಟ್ಟಿಗಳನ್ನು ಪೂರೈಸುತ್ತಾರೆ. ಮದುವೆ ಮೊದಲಾದ ಕಾರ್ಯಕ್ರಮಗಳ ಸೀಸನ್‍ನಲ್ಲಿ ಹೆಚ್ಚಿನ ಬೇಡಿಕೆ ಇದ್ದು ಮಳೆಗಾಲದಲ್ಲಿ ರೊಟ್ಟಿಯನ್ನು ಒಣಗಿಸುವುದು ಕಷ್ಟಸಾಧ್ಯವಾಗಿರುವುದರಿಂದ ರೊಟ್ಟಿಗಳನ್ನು ತಯಾರಿಸುವುದಿಲ್ಲ. ಸಾಮಾನ್ಯವಾಗಿ ಖಡಕ್ ರೊಟ್ಟಿಗಳಿಗೆ ಬೇಡಿಕೆ ಹೆಚ್ಚಾಗಿರುತ್ತದೆ ಎನ್ನುತ್ತಾರೆ ಇವರು. ಜಯಶ್ರೀಯವರು ರೊಟ್ಟಿ ಮಾರಾಟದಿಂದ ಬಂದ ಆದಾಯದಿಂದ ಇಬ್ಬರು ಮಕ್ಕಳಿಗೆ ಇಂಜಿನಿಯರಿಂಗ್ ಓದಿಸಿದ್ದಾರೆ. ಅನಿತಾ ಮತ್ತು ವಜ್ರೇಶ್ವರಿಯವರು ತಮ್ಮ ಮನೆಯ ಅಭಿವೃದ್ಧಿಯಲ್ಲಿ ಹಣವನ್ನು ಬಳಕೆ ಮಾಡಿದ್ದಾರೆ. ಬೇರೆ ಬೇರೆ ಕಡೆಗಳಿಂದ ಸ್ವಉದ್ಯೋಗ ಆಸಕ್ತರು ಇವರ ರೊಟ್ಟಿ ತಯಾರಿ ಘಟಕಕ್ಕೆ ಭೇಟಿ ನೀಡಿ ಮಾಹಿತಿಯನ್ನು ಪಡೆದಿದ್ದಾರೆ.
ರಾಜ್ಯದ ಇತರೆಡೆಗಳಲ್ಲಿರುವ ಗ್ರಾಮಾಭಿವೃದ್ಧಿ ಯೋಜನೆಯ ಸ್ವಸಹಾಯ ಸಂಘಗಳಲ್ಲಿರುವ ಸದಸ್ಯರು ತಾವು ಕೂಡಾ ಸಮರ್ಪಕ ಮಾಹಿತಿಯನ್ನು ಪಡೆದು ಸೂಕ್ತವೆನಿಸುವ ಸ್ವಉದ್ಯೋಗದತ್ತ ಗಮನಹರಿಸಬಹುದಾಗಿದೆ.

Facebook
Twitter
WhatsApp
LinkedIn
Telegram

Leave a Reply

Your email address will not be published. Required fields are marked *