ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪರಮಪೂಜ್ಯ ಡಾ|| ಡಿ. ವೀರೇಂದ್ರ ಹೆಗ್ಗಡೆಯವರ ಧರ್ಮಪತ್ನಿ ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರಿಗೆ, ದಿನಾಂಕ 08-03-2022 ರಂದು ಮಂಗಳವಾರ ಶ್ರೀ ಕ್ಷೇತ್ರ ಧರ್ಮಸ್ಥಳದ ಮಹೋತ್ಸವ ಸಭಾಂಗಣದಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಟ್ರಸ್ಟಿಗಳೂ, ನೌಕರವೃಂದದವರು ಮತ್ತು ಪಾಲುದಾರ ಸದಸ್ಯರ ಪರವಾಗಿ ಅರ್ಪಿಸಿದ ಸನ್ಮಾನ ಪತ್ರ.
ಸರ್ವಾದರಣೀಯರೇ, : ಬೆಳ್ತಂಗಡಿ ತಾಲೂಕಿನ ಸುಸಂಸ್ಕೃತ ಮನೆತನ ಪೆರಾಡಿ ಬೀಡಿನ ಸಜ್ಜನ ಶ್ರೀ ರಘುಚಂದ್ರ ಶೆಟ್ಟಿ ಮತ್ತು ಶ್ರೀಮತಿ ಪುಷ್ಪಾವತಿ ಅಮ್ಮನವರ ತೃತೀಯ ಕುಸುಮವಾಗಿ ತಾವು ಜನಿಸಿದಿರಿ. ಬಹುಭಾಷಾ ಪರಿಣತ ತಂದೆಯವರಿAದ ಸಾಹಿತ್ಯಾಸಕ್ತಿಯನ್ನು, ಪೂಜ್ಯ ತಾಯಿಯವರಿಂದ ಧಾರ್ಮಿಕ ಪ್ರವೃತ್ತಿಯನ್ನು ಬೆಳೆಸಿಕೊಂಡು ಗ್ರಾಮದ ಸರ್ವಸಾಮಾನ್ಯರೊಡನೆ ಸಂವೇದನೆಯನ್ನು ಬೆಳೆಸಿಕೊಂಡು ತುಂಬು ಕುಟುಂಬದಲ್ಲಿ ತಾವು ಬೆಳೆದಿರಿ. ಎಳವೆಯಲ್ಲಿಯೇ ಸಬಲೀಕರಣದ ಮೌಲ್ಯಗಳನ್ನು ಬೆಳೆಸಿಕೊಂಡಿರಿ.
ವಾತ್ಸಲ್ಯಮಯಿಯೇ, : ಉಜಿರೆ ಎಸ್.ಡಿ.ಎಮ್ ಕಾಲೇಜಿನಲ್ಲಿ ಉನ್ನತ ಶಿಕ್ಷಣವನ್ನು ಪಡೆದು ಇಪ್ಪತ್ತೊಂದರ ಎಳೆವಯಸ್ಸಿನಲ್ಲಿಯೇ ಧರ್ಮಸ್ಥಳದ ಪಟ್ಟಾಧಿಕಾರಿ ಪೂಜ್ಯ ವೀರೇಂದ್ರ ಹೆಗ್ಗಡೆಯವರ ಸಹಧರ್ಮಿಣಿಯಾಗಿ ಧರ್ಮಸ್ಥಳ ಹೆಗ್ಗಡೆ ಬೀಡನ್ನು ಪ್ರವೇಶಿಸಿದಿರಿ. ಅನುನಯದಿಂದ, ಸ್ನೇಹಭಾವದಿಂದ, ಬಂಧುಬಾAಧವರನ್ನು ತನ್ನವರನ್ನಾಗಿ ಮಾಡಿಕೊಂಡಿರಿ. ಹೆಗ್ಗಡೆ ಪೀಠದ ಜವಾಬ್ದಾರಿಯನ್ನರಿತು ಪೂಜ್ಯರೊಡನೆ ಶಿವಪಾರ್ವತಿಯರಂತೆ ಕಂಗೊಳಿಸಿದಿರಿ. ಕ್ಷೇತ್ರದ ನಿತ್ಯನೇಮೇತ್ಯಗಳಲ್ಲಿ ಪೂಜ್ಯರೊಡನೆ ಪಾಲ್ಗೊಂಡಿರಿ. ಬಾಹುಬಲಿಯ ಪ್ರತಿಷ್ಠಾಪನೆಯಲ್ಲಿ ಪೂಜ್ಯರಿಗೆ ಸಹಭಾಗಿಯಾಗಿ ಧರ್ಮರಕ್ಷಣೆಯನ್ನು ಕೈಗೊಂಡಿರಿ.
ಸಬಲೀಕರಣದ ರೂವಾರಿಯೇ, : ಸಾಮಾನ್ಯರ ಬಾಳು ಬಂಗಾರವಾಗಲೆAದು ಕನಸು ಕಂಡ ತಾವು ಮಹಿಳಾ ಸಂಘಟನೆಗಳನ್ನು ಸ್ಥಾಪಿಸಿದಿರಿ. ಸ್ವಾಮಿಯ ಪ್ರೇರಣೆಯಂತೆ ಪೂಜ್ಯರನ್ನೊಡಗೂಡಿ ದುರ್ಬಲರಲ್ಲಿ ಸ್ವಾಭಿಮಾನದ ಬೀಜಗಳನ್ನು ಬಿತ್ತಿದಿರಿ. ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಣೆಯನ್ನು ಗೈಯ್ಯುತ್ತಾ ಕಾರ್ಯಕರ್ತರಿಗೆ ಅಭಿವೃದ್ಧಿಯ ಮಂತ್ರವನ್ನು ಬೋಧಿಸಿದಿರಿ. ಅವರನ್ನು ತಮ್ಮ ಕುಟುಂಬದವರAತೆ ಕಂಡು ಸಲಹಿದಿರಿ. ಜ್ಞಾನವಿಕಾಸ ಸ್ವಸಹಾಯ ಚಳುವಳಿಯನ್ನು ರೂಪಿಸಿ ಮಹಿಳೆಯರ ಸಾಮಾಜಿಕ ಪರಿವರ್ತನೆಯ ರೂವಾರಿಗಳಾದಿರಿ. ಅವರಲ್ಲಿ ಆರ್ಥಿಕ ಚೈತನ್ಯವನ್ನು ತುಂಬಿ, ಸಬಲೀಕರಣಕ್ಕೊಂದು ನೂತನ ಭಾಷ್ಯವನ್ನು ಬರೆದಿರಿ.
ಕಲೆ ಸಾಹಿತ್ಯಗಳ ಪೋಷಕರೇ, : ನಾಟಕ, ನೃತ್ಯ, ಕಲೆಗಳ ರಕ್ಷಣೆಗಾಗಿ ಸಮೂಹ ಸಂಸ್ಥೆಯನ್ನು ಸ್ಥಾಪಿಸಿದಿರಿ, ಪೋಷಿಸಿದಿರಿ, ಬೆಳೆಸಿದಿರಿ. ವನರಂಗವನ್ನು ನಿರ್ಮಿಸಿದಿರಿ. ರಂಗಶಿವ ತಂಡವನ್ನು ಕಟ್ಟಿದಿರಿ. ಅಬಾಲವೃದ್ಧರಿಗೆ ಬಣ್ಣದ ಬೆಳಕನ್ನು ತೋರಿಸಿದಿರಿ. ಹೆಗ್ಗಡೆ ಕುಟುಂಬದ ಸಾಹಿತ್ಯ ಕುಡಿಯಾಗಿ ಎಲ್ಲರಲ್ಲಿಯೂ ಸಾಹಿತ್ಯಾಭಿಮಾನವನ್ನು ಮೂಡಿಸಿದಿರಿ. ಓದುವುದನ್ನು ಕಲಿಸಿದಿರಿ. ಸ್ವಯಂ ಕವಿಯಿತ್ರಿಯಾಗಿ ನಿರ್ಮಲ ಮನಸ್ಸುಗಳಿಗೆ ಮುದವನ್ನು ನೀಡಿದಿರಿ. ತುಳುಗ್ರಾಮವನ್ನು ನಿರ್ಮಿಸಿ ತುಳುವರ ಹೆಮ್ಮೆಯ ಚರಿತ್ರೆಯನ್ನು ಕಣ್ಮುಂದೆ ತಂದಿರಿ.
ಸರ್ವರನ್ನೂ ತಿದ್ದುವ ಶ್ರುತಾಮಾತೆಯೇ, : ಜ್ಞಾನಭಂಡಾರವನ್ನು ನಾಡಿನಲ್ಲಿ ತೆರೆದಿಟ್ಟು ಸಾಮಾನ್ಯರಲ್ಲಿ ಅಜ್ಞಾನವನ್ನು ಹೋಗಲಾಡಿಸುವ ಜ್ಞಾನದೀವಿಗೆಯಾದಿರಿ. ಜ್ಞಾನವಿಕಾಸ ಗ್ರಂಥ ಭಂಡಾರಗಳನ್ನು ಸ್ಥಾಪಿಸಿ ಮಹಿಳೆಯರಲ್ಲಿ ತಿಳುವಳಿಕೆಯ ಮಟ್ಟವನ್ನು ಹೆಚ್ಚಿಸಿದಿರಿ. ಸಮುದಾಯ ಮಾಧ್ಯಮಗಳನ್ನು ಬಳಸಿ, ಸಾಮಾನ್ಯರಿಗೆ ಭಾರತೀಯ ಬದುಕಿನ ನಿಜಾರ್ಥವನ್ನು ಬೋಧಿಸಿದಿರಿ. ಸಣ್ಣವರನ್ನು ದೊಡ್ಡವರನ್ನು ತಿದ್ದಿತೀಡಿದಿರಿ. ಗೆಳತಿ ಕಾರ್ಯಕ್ರಮ ರೂಪಿಸಿ ನೊಂದವರಿಗೆ ಚೈತನ್ಯ ತುಂಬಿದಿರಿ.
ಮಾತೃಶ್ರೀಯವರೇ, : ಪೂಜ್ಯರೊಡನೆ ದೈವೀಕ ಬದುಕನ್ನು ನಡೆಸಿ, ಹೆಗ್ಗಡೆ ಕುಟುಂಬಕ್ಕೆ ಅಮ್ಮನಾದಿರಿ. ಶ್ರದ್ಧೆಯ ಬಾಲಕಿಗೆ ತಾಯಿಯಾದಿರಿ. ಮಹಿಳಾ ಸಬಲೀಕರಣದ ಕುಡಿಯೊಂದನ್ನು ಜಗತ್ತಿಗೇ ಅರ್ಪಿಸಿದಿರಿ. ತಾಯಿ ಮಗಳು ಜೊತೆ ಸೇರಿ ಪರಿಸರ ಸಂರಕ್ಷಣೆಯ ಕನಸು ಕಂಡಿರಿ. ಸ್ವಚ್ಛತೆ, ಪ್ಲಾಸ್ಟಿಕ್ ರಹಿತ ಜೀವನವನ್ನು ಸಾಧಿಸಿ ತೋರಿಸಿದಿರಿ. ಸರ್ವರಿಗೂ ಮಾರ್ಗದರ್ಶಿಯಾದಿರಿ.
ಅಪ್ರತಿಮ ಸಾಧಕರೇ, : ಏಳು ದಶಕಗಳ ಸಾಧಕ ಜೀವನದಲ್ಲಿ ಕುಟುಂಬ ನಿರ್ವಹಣೆ, ಧರ್ಮ, ಮಾನವ ಸಂಪನ್ಮೂಲ ಅಭಿವೃದ್ಧಿ, ಮಹಿಳಾ ಸಬಲೀಕರಣ, ಸಮಾಜ ಸೇವೆಗಳಲ್ಲಿ ತೊಡಗಿಸಿಕೊಂಡಿರಿ. ಜ್ಞಾನವಿಕಾಸ ಮಾದರಿಯನ್ನು ನಾಡಿಗೆ ನೀಡಿದಿರಿ. ‘ನಿರಂತರ ಪತ್ರಿಕೆ’ಯ ಮಾರ್ಗದರ್ಶಿಗಳಾಗಿ ಲಕ್ಷಾಂತರ ಮಹಿಳೆಯರ ಪಾಲಿಗೆ ಚೈತನ್ಯದ ಚಿಲುಮೆಯಾದಿರಿ.
ಅನುಗ್ರಹಿತ ಸಾಧಕರೇ, : ಭಗವಾನ್ ಶ್ರೀ ಮಂಜುನಾಥ ಸ್ವಾಮಿ, ಭಗವಾನ್ ಶ್ರೀ ಚಂದ್ರನಾಥ ಸ್ವಾಮಿ ಮತ್ತು ಧರ್ಮದೇವತೆಗಳ ಅನುಗ್ರಹದಿಂದ ಪೂಜ್ಯ ವೀರೇಂದ್ರ ಹೆಗ್ಗಡೆಯವರ ಆಶೀರ್ವಾದಗಳಿಂದ ಹೆಗ್ಗಡೆ ಕುಟುಂಬದ ಸರ್ವರ ಪ್ರೋತ್ಸಾಹ ಆದರಗಳಿಂದ ಸಹಸ್ರಾರು ಬಂಧುಮಿತ್ರರ ಶುಭ ಹಾರೈಕೆಗಳಿಂದ, ಗ್ರಾಮಾಭಿವೃದ್ಧಿ ಯೋಜನೆಯ ಕುಟುಂಬ ವರ್ಗದವರ ಪ್ರಾರ್ಥನೆಗಳಿಂದ ಪ್ರಿಯ ಪತಿ, ಪುತ್ರಿ ಮತ್ತು ಪೌತ್ರಿ ಸಹಿತರಾಗಿ ಸಂಭ್ರಮಿಸಿ ಮುನ್ನಡೆಯುತ್ತಿರುವ ಈ ಅಮೃತಘಳಿಗೆಯಲ್ಲಿ ತಾವೇ ರಚಿಸಿದ ಕೃತಿಗಳ ಸಾರ್ವಜನಿಕ ಸಮರ್ಪಣೆಯ ಸಮಯದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಮತ್ತು ಇಡೀ ನಾಡಿಗೆ ತಾವು ನೀಡಿರುವ ಅವಿಶ್ರಾಂತ, ಅನುಪಮ ಸೇವೆಯನ್ನು ಸದಾ ಸ್ಮರಿಸಿಕೊಳ್ಳುತ್ತಾ ತಮ್ಮ ಸಾಧನೆಗಳಿಗನುಗುಣವಾಗಿ ತಾವು ಪರಿವರ್ತನೆಯ ಪ್ರವರ್ತಕರು ಎಂಬ ಬಿರುದಾಂಕಿತವನ್ನು ಪ್ರೀತಿಯಿಂದ ಸ್ವೀಕರಿಸಬೇಕೆಂದು ಅಂತೆಯೇ ಭಗವಂತನ ಕೃಪೆಯಿಂದ ತಾವು ಮತ್ತು ತಮ್ಮ ಕುಟುಂಬ ವರ್ಗದವರು ದೀರ್ಘಕಾಲ ನಾಡಿನಲ್ಲಿ ಮತ್ತು ಶ್ರೀ ಸನ್ನಿಧಿಯಲ್ಲಿ ಸೇವೆ ಸಲ್ಲಿಸುವಂತೆ ಆಯಸ್ಸು, ಆರೋಗ್ಯ ಭಾಗ್ಯಗಳನ್ನಿತ್ತು ಅನುಗ್ರಹಿಸಬೇಕೆಂದು ಭಗವಾನ್ ಶ್ರೀ ಮಂಜುನಾಥ ಸ್ವಾಮಿಯಲ್ಲಿ ಪ್ರಾರ್ಥಿಸುತ್ತಾ ಧರ್ಮಸ್ಥಳ ಧರ್ಮಾಧಿಕಾರಿ ಪೂಜ್ಯ ವೀರೇಂದ್ರ ಹೆಗ್ಗಡೆಯವರು, ತರಂಗ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕರಾದ ಡಾ|| ಸಂಧ್ಯಾ ಎಸ್. ಪೈಗಳವರು, ಹೆಗ್ಗಡೆ ಕುಟುಂಬಸ್ಥರು ಮತ್ತು ಸಾರ್ವಜನಿಕರ ಸಮ್ಮುಖದಲ್ಲಿ ಸಲ್ಲಿಸಿದ ಸನ್ಮಾನ ಪತ್ರ.