ಆತ್ಮನಿರ್ಭರ ಭಾರತ

ಬರಹ : ಶ್ರೀ ಅನಿಲ್ ಕುಮಾರ್ ಎಸ್.ಎಸ್., ಸಿ.ಒ.ಒ. ಎಸ್.ಕೆ.ಡಿ.ಆರ್.ಡಿ.ಪಿ. ಬಿ.ಸಿ. ಟ್ರಸ್ಟ್‌ (ರಿ.)

ಮಧ್ಯಪ್ರದೇಶದಲ್ಲಿ ಪಾಠಲ್‌ಕೊಟ್ ಎಂಬ ಪ್ರದೇಶ ಇದೆ. 79 ಚದರ ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಸುಮಾರು 12 ಗ್ರಾಮಗಳು ಇದ್ದು, ಸಹಾಸ್ರಾರು ಸಂಖ್ಯೆಯ ಬುಡಕಟ್ಟು ಜನಾಂಗದವರು ವಾಸಿಸುತ್ತಿದ್ದಾರೆ. ಇಲ್ಲಿಯ ಜನರು ಪಟ್ಟಣ ಅಥವಾ ಅರೆ ಪಟ್ಟಣದ ಸಂಪರ್ಕದಿ0ದ ಹೆಚ್ಚು ಕಡಿಮೆ ಹೊರಗಿದ್ದು, ಸ್ವಾವಲಂಬನೆಯಿ0ದ ಜೀವನ ನಡೆಸುತ್ತಿದ್ದಾರೆ. ಒಂದು ರೀತಿಯಲ್ಲಿ ಹೇಳುದಾದರೆ ಇದೊಂದು ಆತ್ಮನಿರ್ಭರ ಗ್ರಾಮ. ಇವರು ಕೇವಲ ಉಪ್ಪು ಮತ್ತು ಬೆಂಕಿ ಪೊಟ್ಟಣವನ್ನು ಕೊಂಡುಕೊಳ್ಳಲು ಮಾತ್ರ ದೂರದ ಪಟ್ಟಣ ಅಥವಾ ಅರೆ ಪಟ್ಟಣಕ್ಕೆ ಹೋಗುತ್ತಾರೆ. ತಮ್ಮ ಜೀವನಕ್ಕೆ ಬೇಕಾಗುವ ಇತರ ಎಲ್ಲಾ ಸಾಮಾಗ್ರಿಗಳನ್ನು ತಮ್ಮ ಗ್ರಾಮದಲ್ಲಿಯೇ ಪಡೆದುಕೊಳ್ಳುತ್ತಿದ್ದಾರೆ. ಅತ್ಯಂತ ಆರೋಗ್ಯವಂತರಾಗಿ ಪ್ರಕೃತಿಯ ಮಡಿಲಲ್ಲಿ ಇಂದಿಗೂ ಸಂತೃಷ್ಟರಾಗಿ ಜೀವನ ನಡೆಸುತ್ತಿದ್ದಾರೆ. ಬಹುಶಃ ನಮ್ಮ ಭಾರತ ದೇಶದಲ್ಲಿ ಇಂದು ಪಾಠಲ್‌ಕೊಟ್ ಮಾತ್ರ ‘ಆತ್ಮನಿರ್ಭರ ಗ್ರಾಮ’ವಾಗಿ ಉಳಿದುಕೊಂಡಿದೆ.
ಏಳು-ಎಂಟು ದಶಕಗಳ ಹಿಂದೆ ಒಂದು ರಾಜ್ಯದಲ್ಲಿಯೇ ಇಂತಹ ನೂರಾರು ಗ್ರಾಮಗಳು ಇದ್ದವು. ಇವತ್ತಿಗೂ ತುಂಬಾ ಹಿರಿಯರಲ್ಲಿ ನಾವು ಅವರ ಜೀವನಶೈಲಿ ಕೇಳಿದರೆ ಅವರು ಇದೇ ರೀತಿ ಹೇಳುತ್ತಾರೆ. ಮೂರು ತಿಂಗಳಿಗೊ, ಆರು ತಿಂಗಳಿಗೊ ಒಮ್ಮೆ ಪಟ್ಟಣ ಅಥವಾ ಅರೆಪಟ್ಟಣಕ್ಕೆ ಹೋಗುತ್ತಿದ್ದರು. ಅದು ಕೇವಲ ಉಪ್ಪು ಮತ್ತು ಬೆಂಕಿ ಪೊಟ್ಟಣ ಕೊಂಡು ಕೊಳ್ಳಲು. ಇನ್ನು ಹೆಚ್ಚೆಂದರೆ ಚಾಹುಡಿ ಅಥವಾ ಕಾಫಿ ಹುಡಿ ತರಲು. ಇನ್ನುಳಿದ ಎಲ್ಲಾ ಜೀವನ ಅವಶ್ಯಕ ವಸ್ತುಗಳನ್ನು ತಮ್ಮ ಮನೆಯಿಂದ ಅಥವಾ ಗ್ರಾಮದಿಂದಲೇ ಪಡೆಯುತ್ತಿದ್ದರು. ಬೆಳಿಗ್ಗೆ ಎದ್ದು ಹಲ್ಲುಜ್ಜಲು ಮನೆಯಲ್ಲಿಯೇ ತಯಾರಿಸಿದ ಉಪ್ಪು ಮಿಶ್ರಿತ ಔಷಧಿ ಗುಣಯುಳ್ಳ ಹುಡಿ, ಸ್ನಾನಕ್ಕೆ ಅಂಟುವಾಳ ಅಥವಾ ಶೀಗೆ ಹುಡಿ, ಮನೆಯಲ್ಲಿಯೇ ಬೆಳೆದ ಧಾನ್ಯಗಳಿಂದ ತಯಾರಾಗುತ್ತಿದ್ದ ಸ್ವಾದಿಷ್ಟ ಬೆಳಗ್ಗಿನ ಉಪಹಾರ, ಮನೆಯ ಸೊಪ್ಪು ತರಕಾರಿಯಿಂದ ಸಹಪದಾರ್ಥಗಳು, ಮಧ್ಯಾಹ್ನ ಸೊಗಸಾದ ಊಟ, ಸಂಜೆಯ ರುಚಿಯಾದ ಸಂಡಿಗೆ ಹಪ್ಪಳ, ರಾತ್ರಿಯ ಭೋಜನ ಎಲ್ಲವೂ ಮನೆಯಲ್ಲೇ ಬೆಳೆದ ದವಸಧಾನ್ಯ ತರಕಾರಿಗಳಿಂದ ಆಗುತ್ತಿದ್ದು. ಮನೆಯ ಹಾಲು, ತುಪ್ಪ, ಮೊಸರು ನಿತ್ಯವು ಬಳಕೆಯಲ್ಲಿತ್ತು. ಅಡುಗೆಯ ತೈಲಗಳನ್ನು ಕೂಡ ಅದೇ ಗ್ರಾಮದಲ್ಲಿ ತಯಾರಿಸಿಕೊಡುತ್ತಿದ್ದರು. ನೆಂಟರಿಷ್ಟರು ಬಂದಾಗ ಅವರ ಸತ್ಕಾರ ಮನೆ ಅಥವಾ ಗ್ರಾಮದಲ್ಲಿ ಸಿಗುವ ವಸ್ತುಗಳಿಂದ ಆಗಬೇಕಿತ್ತು. ಹೊರಗಿನ ತಿನಿಸುಗಳನ್ನು ನೀಡಿದ್ದಲ್ಲಿ ಅದು ಒಂದು ರೀತಿಯ ಅಗೌರವ ಆಗುತ್ತಿತ್ತು. ಇಷ್ಟೇ ಏಕೆ ಶುಭ ಕಾರ್ಯಗಳ ಸಂದÀರ್ಭಗಳಲ್ಲಿ ನೂರಾರು ಜನರಿಗೆ ಹೀಗೆ ಮನೆಯ ಊಟವನ್ನೇ ಬಡಿಸುತ್ತಿದ್ದರು. ಇನ್ನು ಆರೋಗ್ಯದಲ್ಲಿ ಏರುಪೇರಾದಲ್ಲಿ ಮನೆಯದ್ದೇ ಮದ್ದು, ಸ್ವಲ್ಪ ಉಲ್ಬಣಗೊಂಡರೆ ನಾಟಿ ವೈದ್ಯರು. ಆದರೂ ಸಾಮಾನ್ಯವಾಗಿ ಎಲ್ಲರೂ ಉತ್ತಮ ಆರೋಗ್ಯದೊಂದಿಗೆ ಗಟ್ಟಿಮುಟ್ಟಾಗಿದ್ದರು. ತುಂಬಾ ಲವಲವಿಕೆಯಿಂದ ಜೀವನವನ್ನು ಆಸ್ವಾದಿಸುತ್ತಾ ಸಂತೃಪ್ತರಾಗಿದ್ದರು. ಅಂದಿನ ಆರ್ಥಿಕ ಪರಿಸ್ಥಿಯಲ್ಲಿ ಅದು ಅನಿವರ‍್ಯವು ಆಗಿತ್ತು. ಆದರೂ ಅವರ ಜೀವನದಲ್ಲಿ ಜೀವಂತಿಕೆ ಇದ್ದು ಎಲ್ಲವನ್ನು ವೈವಿಧ್ಯಮಯವಾಗಿ ಆಸ್ವಾದಿಸುತ್ತಿದ್ದರು.
ಇಂದು ನಮ್ಮ ಈ ಹಳ್ಳಿಗಳ ಕಥೆ ಏನಾಗಿದೆ? ಅರಣ್ಯದ ಅಂಚಿನಲ್ಲಿಯೇ ಇರುವ ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಖಾಲಿಯಾದರೂ ಕೂಡ ಆ ದಿನ ಆ ಮನೆಯಲ್ಲಿ ಅಡುಗೆ ಇಲ್ಲ. ಎಲ್ಲವೂ ಹೋಟೆಲ್‌ನಿಂದ ಪಾರ್ಸಲ್. ಮೊದಲು ಪಟ್ಟಣಗಳಲ್ಲಿ ಇದ್ದಂತೆ ಈಗ ಹಳ್ಳಿಯ ಮನೆಯ ಸ್ನಾನಗೃಹದಲ್ಲಿ ಎರಡೆರಡು ಕಂಪನಿಯ ಟೂತ್ ಪೆಸ್ಟ್, ಸೋಪ್, ಶ್ಯಾಂಪೂಗಳು ಇನ್ನೂ ಅನೇಕ ಬಾಟಲಿಗಳ ರಾಶಿಗಳೇ ಹರಡಿಕೊಂಡಿರುತ್ತವೆ. ಬೆಳಿಗ್ಗೆ ಫಲಾಹಾರದಿಂದ ರಾತ್ರಿ ಊಟದವರೆಗೂ ಮನೆಯಲ್ಲಿಯೇ ಬೆಳೆದ ಯಾವ ಸಾಮಾಗ್ರಿಗಳು ಇಲ್ಲ, ಎಲ್ಲವೂ ಪಟ್ಟಣದಿಂದ ಹಣ ಕೊಟ್ಟು ಕೊಂಡುಕೊAಡದಾಗಿದೆ. ಮನೆಯದ್ದೆಂದರೆ ಬಾವಿಯ ನೀರು ಮಾತ್ರ. ನೆಂಟರು ಬಂದರೆ ಬೇಕರಿಗಳಿಂದ ತರುವುದು, ಹೆಚ್ಚು ಜನ ಸೇರುವ ಶುಭಕಾರ್ಯಗಳಾದರೆ ಕ್ಯಾಟರಿಂಗ್‌ಗಳಿ0ದ ಊಟ ಹಾಕಿಸುವುದು ಹಳ್ಳಿಗಳಲ್ಲಿ ಇಂದು ಬಹಳ ಸಹಜ ಪ್ರಕ್ರಿಯೆಯಾಗಿದೆ.
ಹಳ್ಳಿಗಳಲ್ಲಿ ವೇಗವಾಗಿ ಜೀವನಶೈಲಿಗಳು ಬದಲಾಗುತ್ತಿದೆ. ದುರದೃಷ್ಟವೆಂದರೆ ಅದೇ ವೇಗದಲ್ಲಿ ಜೀವನ ದುಬಾರಿಯೂ ಆಗುತ್ತಿದೆ. ನೀರು ಗಾಳಿಯನ್ನು ಬಿಟ್ಟು ಎಲ್ಲದಕ್ಕೂ ಬೆಲೆ ತೆರುತ್ತಿದ್ದಾರೆ. ತಾವು ಗಳಿಸಿದೆಲ್ಲವು ಕೇವಲ ದಿನನಿತ್ಯದ ಜೀವನ ನಿರ್ವಹಣೆಗೆ ಕಳೆಯುವುದು ಸಾಮಾನ್ಯವಾಗಿದೆ. ಭವಿಷ್ಯದ ಬಗ್ಗೆ ಚಿಂತನೆಯೇ ಇಲ್ಲ. ನಮ್ಮ ದೇಶದಲ್ಲಿ ಹಳ್ಳಿಯ ಜೀವನ ಎಂದಿಗೂ ದುಬಾರಿ ಆಗಬಾರದು. ಎಲ್ಲವನ್ನೂ ಹಣದಿಂದ ಕೊಂಡು ಜೀವಿಸುವುದು ಪಟ್ಟಣದಲ್ಲಿ ಅನಿವಾರ್ಯ. ಆದರೆ ಹಳ್ಳಿಯವರಿಗೆ ಇಷ್ಟೊಂದು ಅನಿವಾರ್ಯತೆ ಇಲ್ಲ. ಅದ್ದರಿಂದ ತಮ್ಮ ದೈನಂದಿನ ಜೀವನ ನಿರ್ವಹಣೆಯ ವೆಚ್ಚಗಳ ಬಗ್ಗೆ ಹೆಚ್ಚು ಅವಲೋಕಿಸಬೇಕಾಗಿದೆ. ದಿನದ ಒಟ್ಟು ಖರ್ಚನ್ನು ಕಂಡು ಹಿಡಿಯಬೇಕು. ಹಾಗೆಯೇ ತಮ್ಮ ದಿನದ ಆದಾಯಕ್ಕೆ ದಿನದ ಖರ್ಚನ್ನು ತುಲನೆ ಮಾಡಬೇಕು. ಯಾವ ಕಾರಣಕ್ಕೂ ದೈನಂದಿನ ಜೀವನ ನಿರ್ವಹಣಾ ವೆಚ್ಚವು ತಮ್ಮ ದೈನಂದಿನ ಆದಾಯದ ಅರ್ಧ ಭಾಗಕ್ಕಿಂತ ಎಂದಿಗೂ ಮೀರಲೇಬಾರದು. ಏಕೆಂದರೆ ಜೀವನದಲ್ಲಿ ಕೇವಲ ದಿನದ ಖರ್ಚುಗಳು ಮಾತ್ರ ಇರುವುದಿಲ್ಲ, ಮಕ್ಕಳ ವಿದ್ಯಾಭ್ಯಾಸ, ಆಸ್ಪತ್ರೆ ಖರ್ಚು, ಮೂಲಭೂತ ಸೌಕರ್ಯಗಳ ಅಭಿವೃದ್ಧಿ, ಮದುವೆ ಹಾಗೂ ಇತರ ಕಾರ್ಯಗಳಿಗೂ ಬಹಳಷ್ಟು ಖರ್ಚುಗಳಿರುತ್ತವೆ. ಇವುಗಳನ್ನು ಭರಿಸಲು ಗಳಿಕೆಯಲ್ಲಿ ಉಳಿಕೆ ಮಾಡಲೇಬೇಕಾಗಿರುತ್ತದೆ. ಅನಗತ್ಯ ವೆಚ್ಚಗಳನ್ನು ನಿಲ್ಲಿಸಲೇಬೇಕು. ಜೊತೆಗೆ ಸಾಧ್ಯವಾಗುವಂತಹ ಕೆಲವು ಜೀವನ ನಿರ್ವಹಣೆಯ ವಸ್ತುಗಳನ್ನು ಮನೆಯ ಪರಿಸರದಲ್ಲಿಯೇ ಪಡೆಯಬೇಕು. ಈ ವೆಚ್ಚ ನಿಯಂತ್ರಣಗಳೇ ಉಳಿತಾಯವಾಗಿ ಮುಂದಿನ ಭವಿಷ್ಯಕ್ಕೆ ಭದ್ರತೆಯಾಗಿರುತ್ತದೆ. ಹೀಗೆ ಪ್ರತಿ ಮನೆಗಳು, ಮನೆಗಳಿಂದ ಪ್ರತಿ ಗ್ರಾಮಗಳು ಸಾಧ್ಯವಾದಷ್ಟೂ ಆತ್ಮನಿರ್ಭರ್ ಆದಲ್ಲಿ ಮಾತ್ರ ‘ಆತ್ಮನಿರ್ಭರ್ ಭಾರತ’ ಕನಸು ನನಸಾಗುತ್ತದೆ.

Facebook
Twitter
WhatsApp
LinkedIn
Telegram

Leave a Reply

Your email address will not be published. Required fields are marked *

Latest Updates