ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು
‘ಗೆಳತಿ’ ಅಂಕಣದಲ್ಲಿ ಪ್ರಕಟಗೊಂಡ ಮಾತೃಶ್ರೀ ಹೇಮಾವತಿ ವೀ. ಹೆಗ್ಗಡೆಯವರ ಲೇಖನಗಳನ್ನು ಒಟ್ಟುಗೂಡಿಸಿ ಮೂರು ಭಾಗಗಳಾಗಿ ವಿಂಗಡಿಸಿ ‘ಗೆಳತಿ’ ಎಂಬ ಪುಸ್ತಕಗಳನ್ನು ಹೊರತರಲಾಗಿದೆ. ಮಾರ್ಚ್ ೮ರಂದು ತರಂಗ ವಾರಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ|| ಸಂಧ್ಯಾ ಎಸ್. ಪೈಯವರು ಪುಸ್ತಕಗಳನ್ನು ಲೋಕಾರ್ಪಣೆಗೊಳಿಸಿದರು. ಈ ಸಂದರ್ಭದಲ್ಲಿ ಮಾತೃಶ್ರೀಯವರು ತಮ್ಮ ಬರಹ ಆರಂಭಕ್ಕೆ ಪ್ರೇರಣೆ, ಬರಹದಲ್ಲಿ ಒತ್ತು ನೀಡುವ ವಿಷಯಗಳು, ತಾವು ಬರವಣಿಗೆ ಆರಂಭಿಸಿದ ಬಗೆ ಹೀಗೆ ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಅಭಿಮಾನಿಗಳೊಂದಿಗೆ ಹಂಚಿಕೊ0ಡರು. ಅವರ ಮಾತಿನ ಸಾರವನ್ನು ಓದುಗರಿಗೆ ನೀಡುವ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ.
ಸಾಹಿತ್ಯ ಎನ್ನುವುದು ಘಟ ದೀಪದಂತೆ. ಒಂದು ಪಾತ್ರೆಯೊಳಗೆ ದೀಪವನ್ನು ಇಟ್ಟರೆ ಹೊರಗೆ ಕಾಣುವುದಿಲ್ಲ. ಹಾಗೆಯೇ ಸಾಹಿತ್ಯ ನಮ್ಮೊಳಗನ್ನು ತಿದ್ದುವ, ಮೌಲ್ಯ ತುಂಬುವ ಕೆಲಸವನ್ನು ಮಾಡುತ್ತದೆ. ನಮ್ಮ ದೇಶ ಕಥೆ, ಕಾವ್ಯ, ಪುರಾಣಗಳ ದೇಶ. ಇಲ್ಲಿನ ರಾಮಾಯಣ, ಮಹಾಭಾರತವನ್ನು ತೆಗೆದುಕೊಂಡರೆ ಅದರಲ್ಲಿ ಸಾವಿರಾರು ಉಪಕಥೆಗಳಿವೆ. ಜೈನ, ಬೌದ್ಧ ಮತ್ತು ಯಾವುದೋ ಧರ್ಮದ ಅನೇಕ ಕಥೆಗಳು, ಜಾತಕ ಕಥೆಗಳು, ವಡ್ಡಾರಾಧನೆ ಕಥೆಗಳು ತನ್ನದೆ ಆದ ವಿಶೇಷತೆಯನ್ನು ಹೊಂದಿವೆ. ಜೊತೆಗೆ ಸಂಸ್ಕೃತ ಸೂಕ್ತಿಗಳು, ವಚನಗಳು, ಡಿವಿಜಿಯವರ ಕಗ್ಗಗಳು, ಬುದ್ಧಿಗೆ ಮೇವು ನೀಡುವ ಅಕ್ಬರ್ ಬೀರ್‌ಬಲ್ಲನ ಕಥೆಗಳು, ಸೂಫಿ, ಝೆನ್, ಮುಲ್ಲಾನ್ ಕಥೆಗಳು ಕೂಡಾ ಬಹಳ ರೋಚಕವಾಗಿರುತ್ತದೆ. ಹೊಸ ಕಥೆಗಳನ್ನು ರಚಿಸುವುದು ಕಷ್ಟ ಆದರೂ ಈಗಿನ ಕಾಲದಲ್ಲಿ ಹಳೆ ಕಥೆಗಳನ್ನು ಹೊಸ ರೂಪದಲ್ಲಿ ರೂಪಾಂತರ ಮಾಡಿಕೊಂಡು ಕಾರ್ಪೊರೇಟ್ ಜಗತ್ತಿಗೆ ಬೇಕಾದ ಹಾಗೆ ಕಥೆಗಳನ್ನು ಪುನರ್ ನಿರ್ಮಿಸುವ ಕೆಲಸ ಕೂಡಾ ಆಗುತ್ತಿದೆ.
2003ರಲ್ಲಿ ಆರಂಭವಾದ ನನ್ನ ಬರವಣಿಗೆ ಇಂದು ಪುಸ್ತಕ ರೂಪದಲ್ಲಿ ಪ್ರಕಟಗೊಳ್ಳುವ ಹಂತಕ್ಕೆ ತಲುಪಿದೆ. ಆರಂಭದ ದಿನಗಳಲ್ಲಿ ಜ್ಞಾನವಿಕಾಸ ಕೇಂದ್ರಗಳಿಗೆ ಒಂದು ತಿಂಗಳಿಗೆ ಬೇಕಾಗುವಷ್ಟು ಮಾಹಿತಿಗಳನ್ನು ಬರೆದು ಕಳುಹಿಸಿಕೊಡುತ್ತಿದ್ದೆ. ನಂತರ ‘ನಿರಂತರ ಪತ್ರಿಕೆ’ ಆರಂಭವಾಯಿತು. ಪತ್ರಿಕೆಯಲ್ಲಿ ‘ಗೆಳತಿ’ ಎಂಬ ಅಂಕಣ ಬರೆಯಲಾರಂಭಿಸಿದೆ. ಲೇಖನಗಳನ್ನು ಬರೆಯುವುದು ಅಷ್ಟು ಸುಲಭವಲ್ಲ. ಲೇಖನವನ್ನು ಬರೆಯುವ ಮೊದಲೇ ನಾನು ಯಾಕಾಗಿ ಬರೆಯುತ್ತೇನೆ ಮತ್ತು ಯಾರಿಗಾಗಿ ಬರೆಯುತ್ತೇನೆ ಎಂದು ಯೋಚಿಸಬೇಕು. ನಮ್ಮ ಗ್ರಾಮೀಣ ಮಹಿಳೆಯರಿಗಾಗಿ ನಾನು ಲೇಖನಗಳನ್ನು ಬರೆಯುವುದರಿಂದ ಅದರಲ್ಲಿ ಯಾವುದೇ ಸಾಹಿತ್ಯಿಕ ವಿಚಾರಗಳು ಇರುವುದಿಲ್ಲ. ಅತ್ಯಂತ ಸರಳವಾಗಿ, ಕಥೆಗಳ ರೂಪದಲ್ಲಿ ಇರುತ್ತವೆ. ನನ್ನ ಬರಹಗಳಲ್ಲಿ ಮಹಿಳೆ, ಮಕ್ಕಳು, ಪರಿಸರ, ಪೌಷ್ಠಿಕ ಆಹಾರ ಮತ್ತು ಸಾಮಾಜಿಕ ವಿಚಾರಗಳು, ಕೌಟುಂಬಿಕ ಮೌಲ್ಯಗಳು ಹೆಚ್ಚಾಗಿ ಇರುತ್ತವೆ. ನನ್ನ ಅತ್ತೆ ರತ್ನಮ್ಮ ಹೆಗ್ಗಡೆಯವರು ಮಂಜುವಾಣಿಗೆ ಬರೆಯುತ್ತಿದ್ದ ‘ಮಗಳಿಗೊಂದು ಪತ್ರ’ ಅಂಕಣವನ್ನು ಮುಂದುವರಿಸುವ ಹೊಣೆ ನನ್ನ ಮೇಲೆ ಬಿತ್ತು. ಆಗ ಅದನ್ನು ಧೈರ್ಯವಾಗಿ ವಹಿಸಿಕೊಂಡು ಲೇಖನಗಳನ್ನು ಬರೆಯಲು ಆರಂಭಿಸಿದೆ. ತಿಂಗಳಿಗೆ ಎರಡು ಲೇಖನಗಳನ್ನು ಬರೆಯುವುದೆಂದರೆ ಅನೇಕ ಸಲ ವಿಷಯದ ಕೊರತೆ ಅಥವಾ ಏನು ಬರೆಯಬೇಕು? ಎನ್ನುವುದು ಸಮಸ್ಯೆಯಾಗುತ್ತದೆ. ಯಾವುದೇ ಒಂದು ಕಥೆ, ಘಟನೆ, ಕವನ, ಒಂದು ವಾಕ್ಯ ಸಿಕ್ಕಿದರೂ ಕೆಲವೊಮ್ಮೆ ಅದು ಬರವಣಿಗೆಗೆ ಪ್ರೇರಣೆಯಾಗುತ್ತದೆ.
ನಾನು ನನ್ನ ಮಗಳು ಶ್ರದ್ಧಾಳಲ್ಲಿ ಮಾತನಾಡಬೇಕಾದರೆ ಏನಾದರೊಂದು ವಿಷಯ, ನಿದಾಫಾಝ್ಲಿಯ ಕವನಗಳನ್ನು, ಕಬೀರ್ ಅವರ ದೋಹಾಗಳನ್ನು ಹೇಳುತ್ತಾಳೆ. ನನ್ನ ತಮ್ಮ ಯಶೋವರ್ಮ ಅವರಲ್ಲಿ ಮಾತನಾಡಬೇಕಾದರೆ ಇಂಥದ್ದೊ0ದು ಪುಸ್ತಕ ಓದಿದೆ. ಅದರಲ್ಲಿ ಈ ವಿಚಾರ ಚೆನ್ನಾಗಿತ್ತು ಎಂದು ಹೇಳುತ್ತಾರೆ. ಕೆಲವು ಸಲ ಅದರಿಂದ ಪ್ರೇರಣೆ ಪಡೆದು ನಾನು ಲೇಖನಗಳನ್ನು ಬರೆಯುತ್ತೇನೆ.
ಕೆಲಸದ ಒತ್ತಡದ ನಡುವೆ ‘ಮಂಜುವಾಣಿ’ ಮತ್ತು ‘ನಿರಂತರ’ ಪತ್ರಿಕೆ ಮುದ್ರಣಕ್ಕೆ ಹೋಗುವ ಮೊದಲು ಪುಸ್ತಕವನ್ನು ಪೂರ್ತಿಯಾಗಿ ಓದಿ, ಗುಣಮಟ್ಟದ ಬಗ್ಗೆ ಚಿಂತಿಸಿ ಅದನ್ನು ಮಾರ್ಗದರ್ಶನ ಮಾಡುವವರು ಹೆಗ್ಗಡೆಯವರು. ಅದರಿಂದ ನನ್ನ ಎಲ್ಲಾ ಲೇಖನಗಳ ಮೊದಲ ಓದುಗರು ಅವರೇ ಎಂದು ಹೇಳಬಹುದು.
ಮೊಬೈಲ್‌ನಲ್ಲಿದ್ದರೆ ಕೆಲವು ವಿಷಯಗಳು ಡಿಲೀಟ್ ಆಗಬಹುದು. ಆದರೆ ಪುಸ್ತಕದಲ್ಲಿ ಇದ್ದರೆ ಅದು ಡಿಲೀಟ್ ಆಗುವ ಭಯವಿಲ್ಲ. ಅದು ಯಾವಾಗಲೂ ನಮ್ಮ ಜೊತೆ ಇರುತ್ತದೆ. ಯಾವಾಗ ಬೇಕಾದರೂ ಪುಸ್ತಕದ ಜೊತೆಗೆ ನಾವು ಸಂವಾದವನ್ನು ಮಾಡಬಹುದು. ವಿಚಾರಗಳನ್ನು ತಿಳಿಯಬಹುದು.
‘ತನ್ನದೇ ನೆಲ, ನೀರು, ಗಾಳಿ, ಗೊಬ್ಬರ ಬೇಕು ಭತ್ತಕ್ಕೆ ತುಡಿವ ಚಿತ್ತಕ್ಕೆ’ ಎಂಬ ಮಾತಿದೆ. ಹಾಗೆಯೆ ತಮ್ಮ ಭಾಷೆಯ ಸಾಹಿತ್ಯ, ಸಂಸ್ಕೃತಿಗಳು ನಮ್ಮ ಮಕ್ಕಳಿಗೆ ಬೇಕಾಗಿದೆ. ಅವರನ್ನು ಬೆಳೆಸುವುದು, ಅವರ ಅಂತರ0ಗವನ್ನು ಮೌಲ್ಯಗಳಲ್ಲಿ ತುಂಬಿಸುವ ಕೆಲಸ ನಮ್ಮ ಸಾಹಿತ್ಯಕ್ಕೆ ಇದೆ. ಆದರೆ ಇತ್ತೀಚೆಗೆ ನಮ್ಮ ಮಕ್ಕಳು ನಮ್ಮ ಸಾಹಿತ್ಯದಿಂದ ದೂರವಾಗುತ್ತಿರುವುದು ಬಹಳ ದೊಡ್ಡ ಕೊರತೆ ಎಂದು ನಾನು ಭಾವಿಸುತ್ತೇನೆ. ಮಕ್ಕಳಿಗೆ ಬೇಂದ್ರೆಯವರು, ಕಾರಂತರು, ಕುವೆಂಪು ಅವರು ಯಾರೆಂದು ಗೊತ್ತಿಲ್ಲ. ಯಾಕೆಂದರೆ ಇಂಗ್ಲೀಷ್ ಮಾಧ್ಯಮದಿಂದ ನಮ್ಮ ಕನ್ನಡದ ಕವಿಗಳು ದೂರವಾಗುತ್ತಿದ್ದಾರೆ.
ಬೆಳಿಗ್ಗೆ ‘ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರ ಮಹಿಳಾಪರ ನಿಲುವುಗಳು’ ಎಂಬ ಎರಡು ವಿಚಾರಗೋಷ್ಠಿಗಳು ನಡೆದಿತ್ತು. ಆ ಗೋಷ್ಠಿಗಳಲ್ಲಿ ನನ್ನ ಮಹಿಳಾಪರ ನಿಲುವುಗಳ ಬಗ್ಗೆ ಸಾಕಷ್ಟು ವಿಚಾರಗಳನ್ನು ಪ್ರಸ್ತಾಪಿಸಲಾಯಿತು. ದಕ್ಷಿಣ ಕನ್ನಡದಿಂದ ಹಿಡಿದು ಕುಂದಾಪುರದವರೆಗೆ ನೋಡಿದರೂ ನಮ್ಮಲ್ಲಿ ಅಳಿಯಕಟ್ಟು ಪದ್ಧತಿ ಇದೆ. ಹಾಗಾಗಿ ಮಹಿಳೆಯರಿಗೆ ಬಹಳಷ್ಟು ಸ್ವಾತಂತ್ರö್ಯವಿದೆ ಮತ್ತು ನಾನು ಅದನ್ನು ಅನುಭವಿಸಿ ಬಲ್ಲವಳು. ನಮ್ಮ ಹಳ್ಳಿಯಲ್ಲಿ ಅಜ್ಜಿ, ಅಮ್ಮ, ದೊಡ್ಡಮ್ಮ ಇವರೆಲ್ಲ ತಮ್ಮ ತಮ್ಮ ಮನೆತನಗಳಲ್ಲಿದ್ದು ಅದನ್ನು ಹೇಗೆ ನಿಭಾಯಿಸಿಕೊಂಡು ಹೋಗುತ್ತಿದ್ದರು ಎಂಬುದನ್ನು ನಾವು ನೋಡಿದ್ದೇವೆ. ಆದರೆ ಇದು ಎಲ್ಲಾ ಮಹಿಳೆಯರ ಪಾಲಿಗೆ ದೊರೆಯಲಿಲ್ಲ. ಅವರು ಬೀಡಿ ಕಟ್ಟಿ, ಕೂಲಿ ಕೆಲಸಕ್ಕೆ ಹೋಗಿ ದುಡ್ಡು ಸಂಪಾದನೆ ಮಾಡಿ ಮನೆಯಲ್ಲಿರುವ ಆರೆಂಟು ಜನರ ಹೊಟ್ಟೆ ತುಂಬಿಸುವುದು ಬಹಳ ಕಷ್ಟದ ಕೆಲಸ ಆಗಿತ್ತು. ಹಳ್ಳಿ ಭಾಗಗಳಲ್ಲಿನ ಅಸಹಾಯಕತೆಯನ್ನು ನಾನು ಕಣ್ಣಾರೆ ಕಂಡಿದ್ದೇನೆ. ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಹೊಸ ಪ್ರಯೋಗ, ಹೊಸ ಚಿಂತನೆಗಳ ಮೂಲಕ ನಾವು ಮಹಿಳಾ ಅಭಿವೃದ್ಧಿಯ ಹೊಸ ಕಾರ್ಯಗಳನ್ನು ರೂಪಿಸುತ್ತಾ ಹೋದೆವು. ಅಂದು ಕಿಟಕಿಯ ಒಳಗಿನಿಂದ ನೋಡುತ್ತಿದ್ದ ಮಹಿಳೆಯರನ್ನು ಮನವೊಲಿಸಿ ಮನೆಯಿಂದ ಹೊರಗೆ ತರಬೇಕಾದರೆ ಜ್ಞಾನವಿಕಾಸ ಸಮನ್ವಯಾಧಿಕಾರಿಗಳು ಬಹಳಷ್ಟು ಶ್ರಮ ವಹಿಸಿದ್ದಾರೆ. ಆಗ ಕೆಲವು ತಾಲೂಕುಗಳಿಗೆ ಮಾತ್ರ ಜ್ಞಾನವಿಕಾಸ ಕೇಂದ್ರಗಳು ಸೀಮಿತವಾಗಿದ್ದವು. ಈಗ ರಾಜ್ಯದಾದ್ಯಂತ 4,700ಕ್ಕೂ ಅಧಿಕ ಜ್ಞಾನವಿಕಾಸ ಕೇಂದ್ರಗಳಿವೆ.
ಹಳೆಯ ಕಂದಾಚಾರಗಳನ್ನು ಬಿಟ್ಟು ಹೊಸ ಬದುಕಿಗೆ ಪೂರಕವಾಗಿ ಮಹಿಳೆಯರನ್ನು ತಯಾರು ಮಾಡುವುದಕ್ಕಾಗಿ ಸುಮಾರು 300ಕ್ಕೂ ಹೆಚ್ಚು ಪುಸ್ತಕಗಳಿರುವ 2,200 ಗ್ರಂಥಾಲಯಗಳನ್ನು ಸ್ಥಾಪಿಸಲಾಗಿದೆ. ಇದರ ಪ್ರಯೋಜನವನ್ನು ನಮ್ಮ ಸದಸ್ಯರು ಪಡೆದುಕೊಳ್ಳುತ್ತಿದ್ದಾರೆ. ಜೊತೆಗೆ ಅವರ ನೆಲದ ಹಾಡು, ಹಸೆ, ಹಬ್ಬ ಹರಿದಿನ ಮತ್ತು ನೃತ್ಯ, ನಾಟಕ, ಪ್ರವಾಸ ಹೀಗೆ ಒಂದಲ್ಲ, ಎರಡಲ್ಲ ಹತ್ತು ಹಲವು ಕಾರ್ಯಕ್ರಮಗಳ ಮೂಲಕ ಅವಳಲ್ಲಿ ಜೀವಂತಿಕೆಯನ್ನು ಮತ್ತು ಉತ್ಸಾಹವನ್ನು ತುಂಬುವ ಕೆಲಸವನ್ನು ಮಾಡುತ್ತಿದ್ದೇವೆ. ಇದರಿಂದಾಗಿ ಅವಳಲ್ಲಿ ನಾಯಕತ್ವ ಗುಣ ಬೆಳೆದಿದೆ. ಮಾತನಾಡುವ ಶಕ್ತಿ ಬಂದಿದೆ. ನಮ್ಮ ಯೋಜನೆ ಅವಳಿಗೆ ಬಾಯಿ ಕೊಟ್ಟಿದೆ ಎಂದು ನಾನು ಹೇಳುತ್ತೇನೆ.
ಭಾರತೀಯ ನೆಲೆಯಲ್ಲಿ ಸಬಲೀಕರಣ ಅಂದರೆ ಗಂಡ, ಮನೆಮಂದಿಯಿ0ದ ದೂರ ನಿಂತು ಮಾಡುವ ಹೋರಾಟ ಅಲ್ಲ. ಇದು ತಾನು ಬೆಳೆದು, ಮನೆಮಂದಿಯ ಆರೋಗ್ಯ, ಶಿಕ್ಷಣದ ಜೊತೆಗೆ ತನ್ನ ಕಾಲ ಮೇಲೆ ತಾನು ನಿಂತು ಸಂಸಾರವನ್ನು ನಿಭಾಯಿಸುವ ಕಲೆ.
ಇಂದು ಸುಮಾರು 50,000ಕ್ಕೂ ಅಧಿಕ ಮಹಿಳೆಯರು ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಸ್ವ ಉದ್ಯೋಗಿಗಳಾಗಿ ಕೆಲಸ ಮಾಡುತ್ತಿದ್ದಾರೆ. ಜೊತೆಗೆ ಸಿರಿ ಸಂಸ್ಥೆಯಲ್ಲಿ ಅನೇಕ ಮಹಿಳೆಯರು ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ. ಇದು ಬಹಳ ಸಂತಸ ಪಡುವ ವಿಚಾರವಾಗಿದೆ.
ಸ್ವಾಮಿ ವಿವೇಕಾನಂದರು ‘ಮಹಿಳೆಯರ ಬೆಳವಣಿಗೆಗೆ ನೀವು ಏನೂ ಮಾಡಬೇಕೆಂದಿಲ್ಲ. ಅವಳ ಬೆಳವಣಿಗೆಗೆ ಅಡ್ಡ ಬರಬೇಡಿ. ಅಷ್ಟು ಮಾತ್ರವಲ್ಲ ನೀವೇ ಹಾಕಿದ ಬೇಲಿಗಳನ್ನು ನಿವಾರಿಸಿ’ ಎಂದು ಹೇಳುತ್ತಾರೆ. ಹಾಗೆ ಶತಮಾನಗಳಿಂದ ಹಾಕಿದ ಬೇಲಿಗಳನ್ನು ಒಮ್ಮೆಲೆ ದಾಟಿ ಬರುವುದು ಕಷ್ಟದ ಕೆಲಸ. ಮಹಿಳೆಯರ ಓಟ ಅಂದರೆ ಅದು ಹರ್ಡಲ್ಸ್ ಇದ್ದ ಹಾಗೆ. ಅವಳು ಸಮಾಜ, ಗಂಡ, ಮನೆ, ಮಕ್ಕಳು ಎಲ್ಲ ಹಂತಗಳನ್ನು ದಾಟಿ ಸಾಧನೆಯನ್ನು ಮಾಡಬೇಕಾಗುತ್ತದೆ. ಆ ಕೆಲಸವನ್ನು ನಮ್ಮ ಯೋಜನೆಯ ಸದಸ್ಯರು ಮಾಡಿದ್ದಾರೆ.
ಯೋಜನೆಯ ಮಹಿಳೆಯರು ಸಿಕ್ಕಿದರೆ ಅವರ ಉಡುಪು, ನಡೆ ನುಡಿ, ಮಾತನಾಡುವ ಶೈಲಿ, ಆತ್ಮವಿಶ್ವಾಸವನ್ನು ನೋಡುವಾಗ ನಮಗೆ ಬಹಳ ಸಂತೋಷವಾಗುತ್ತದೆ. ನಾನು ಮಗಳಿಗೆ ಮದುವೆ ಮಾಡಿಸಿದೆ, ಮಗನಿಗೆ ಇಂಜಿನಿಯರಿ0ಗ್ ಓದಿಸಿದೆ, ನಾನು ಚಿನ್ನ ಮಾಡಿಸಿಕೊಂಡೆ, ಮನೆ ಕಟ್ಟಿದೆ ಎಂದು ಹೇಳುತ್ತಾರೆ. ಇವರ ಆತ್ಮವಿಶ್ವಾಸವನ್ನು ಕಂಡಾಗ ನಾವು ಮಾಡಿದ ಕೆಲಸ ಸಾರ್ಥಕವೆಂದೆನಿಸುತ್ತದೆ.
ಯೋಜನೆಯ ಆರಂಭದ ದಿನಗಳಲ್ಲಿ ಯೋಜನೆಯಲ್ಲಿ ಕಾರ್ಯನಿರ್ವಹಿಸಲು ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ. ಆದ ಹುಡುಗಿಯರೇ ಸಿಗುತ್ತಿರಲಿಲ್ಲ. ಈಗ ೨೫ ಸಾವಿರ ಕಾರ್ಯಕರ್ತರಲ್ಲಿ 19,000 ಮಂದಿ ಮಹಿಳೆಯರೇ ಇದ್ದಾರೆ.
ಕ್ಷೇತ್ರದಲ್ಲಿ ಪ್ರತೀ ನಿಮಿಷವೂ ವ್ಯರ್ಥವಾಗದ ಹಾಗೆ ಕಳೆಯಲು ಬೇಕಾದಷ್ಟು ಅವಕಾಶಗಳಿವೆ. ನಾನು ಯೋಜನೆಯ ಕಾರ್ಯಕ್ರಮಗಳಿಂದ ಸ್ವಲ್ಪ ದೂರವಾದರೆ ಅಲ್ಲಿ ಏನೆಲ್ಲ ಹೊಸಪ್ರಯೋಗಗಳು, ಚಿಂತನೆಗಳು ಆಗುತ್ತವೆ ಎಂಬುದು ನನಗೆ ಗೊತ್ತಾಗುವುದಿಲ್ಲ. ಶೌರ್ಯ, ವಾತ್ಸಲ್ಯ ಮುಂತಾದ ಕಾರ್ಯಕ್ರಮಗಳು ನೋಡನೋಡುತ್ತಿದ್ದಂತೆಯೇ ಒಂದು ಜಿಲ್ಲೆಯಲ್ಲಿ ಇದ್ದದ್ದು ಎಲ್ಲಾ ಜಿಲ್ಲೆಗಳಿಗೆ ಹರಡಿ ಇತರ ಜಿಲ್ಲೆಗಳ ಮೂಲಕ ಇಡೀ ರಾಜ್ಯಕ್ಕೆ ಹರಡಿದೆ. ಹೀಗೆ ಅಷ್ಟು ವೇಗವಾಗಿ ಕಾರ್ಯಕ್ರಮಗಳು ನಡೆಯುತ್ತಿದೆ. ಅದರ ಬಾಲವನ್ನು ಹಿಡಿದುಕೊಂಡು ಹೋಗುವುದೇ ನಮಗೆ ಬಹಳ ಕಷ್ಟದ ಕೆಲಸ.
ಯೋಜನೆಯಿಂದಾಗಿ ನನ್ನ ಬದುಕಿಗೂ ಒಂದು ಗುರಿ, ಪರಿಪೂರ್ಣತೆ ಮತ್ತು ಸಾರ್ಥಕತೆ ಬಂದಿದೆ. ನಮ್ಮ ಅತ್ತೆಯವರು ಮದುವೆಯಾದ ಪ್ರಾರಂಭದಲ್ಲಿ ನನ್ನಲ್ಲಿ ಯುವತಿ ಮಂಡಲ ಮಾಡಲು ಮಾರ್ಗದರ್ಶನವನ್ನು ನೀಡಿದ್ದರು. ಅದರಂತೆ ‘ಕನ್ಯಾಕುಮಾರಿ ಯುವತಿ ಮಂಡಲ’ವನ್ನು ಆರಂಭಿಸಿದೆವು. ಅದು ನನ್ನ ಸಾಮಾಜಿಕ ಬದುಕಿಗೆ ನಾಂದಿಯಾಯಿತು. ಇಲ್ಲಿನ ಮಹಿಳೆಯರ ಕಷ್ಟ – ಸುಖಗಳನ್ನು ಹತ್ತಿರದಿಂದ ಕಾಣಲು, ಅವರ ನೋವಿಗೆ ಸ್ಪಂದಿಸಲು ಸಹಾಯವಾಯಿತು. ಮಹಿಳೆಯರ ಬದುಕಿನಲ್ಲಿ ಇಂದು ಸಾಕಷ್ಟು ಬದಲಾವಣೆಗಳಾಗಿವೆ. ಮಹಿಳಾ ಸಬಲೀಕರಣವಾಗಿದೆ. ಎಲ್ಲಾ ಕ್ಷೇತ್ರಗಳಲ್ಲೂ ಅವಳು ಮಿಂಚಿದ್ದಾಳೆ, ಮಿಂಚುತ್ತಿದ್ದಾಳೆ.