ರೇಬೀಸ್ ರೋಗ ಮುಂಜಾಗ್ರತೆಯೇ ಪರಿಹಾರ

ಯಾರಿಗೆ, ಹೇಗೆ ಬರುತ್ತದೆ?
ರೇಬೀಸ್ ಕಾಯಿಲೆಯು ಒಂದು ವೈರಸ್ ಜೀವಿಯಿಂದ ಬರುತ್ತದೆ. ಬರಿಗಣ್ಣಿಗೆ ಕಾಣಿಸದಷ್ಟು ಸೂಕ್ಷö್ಮ. ಅದರ ಹೆಸರು ‘ಲಿಸ್ಸಾ.’ ರೋಗಪೀಡಿತ ಪ್ರಾಣಿಯ ಅಥವಾ ಮಾನವರ ಜೊಲ್ಲಿನಿಂದ ಲಿಸ್ಸಾ ವೈರಸ್ ವಿಸರ್ಜಿಸಲ್ಪಡುತ್ತದೆ. ಎಂದರೆ, ರೋಗ ಹರಡಬೇಕೆಂದರೆ ರೋಗಗ್ರಸ್ಥ ಪ್ರಾಣಿಯು ಕಚ್ಚಬೇಕು. ಕಚ್ಚಿದಾಗ ಆ ಪ್ರಾಣಿಯ ಅಥವಾ ಮನುಷ್ಯನ ದೇಹವನ್ನು ವೈರಸ್ ಸೇರುತ್ತದೆ. ನಂತರ ರಕ್ತಮಾರ್ಗದಲ್ಲಿ ಹೋಗದೇ, ನರಗಳ ಮೂಲಕ ದಿನಕ್ಕೆ ಸುಮಾರು 6 ಸೆಂ.ಮೀ. ವೇಗದಲ್ಲಿ 1-2 ದಿನಗಳಲ್ಲಿ ಕೇಂದ್ರ ನರಮಂಡಲದತ್ತ ಪ್ರಯಾಣ ಬೆಳೆಸುತ್ತದೆ. ಒಮ್ಮೆ ಮಿದುಳನ್ನು ಸೇರಿ ಅಲ್ಲಿನ ನರಕೋಶಗಳ ಮೇಲೆ ನಿಯಂತ್ರಣವನ್ನು ಸಾಧಿಸಿತೆಂದರೆ ಕಚ್ಚಿಸಿಕೊಂಡ ಪ್ರಾಣಿಯು ವೈರಸ್‌ನ ಆಜ್ಞಾಧಾರಕ ಸೇವಕ ಮಾತ್ರ. ಇದರ ನಂತರ ಯಾವುದೇ ಚಿಕಿತ್ಸೆಯು ಫಲಕಾರಿಯಾಗದು.
ಹುಚ್ಚು ನಾಯಿ ಕಚ್ಚಿದಾಗ ಏನು ಮಾಡಬೇಕು?
ನಾಯಿ ಕಚ್ಚಿದಾಗ ಗಾಯವನ್ನು ಕೂಡಲೇ ಯಥೇಚ್ಛ ನೀರಿನಿಂದ (ಬಿಸಿ ನೀರು ಒಳ್ಳೆಯದು) ತೊಳೆಯಬೇಕು. ಇಷ್ಟು ಪ್ರಥಮ ಚಿಕಿತ್ಸೆ ಮಾಡಿದ ನಂತರ ವೈದ್ಯರ ಸಲಹೆಯಂತೆ ರೋಗ ನಿರೋಧಕ ಲಸಿಕೆಯನ್ನು ಪಡೆಯಬೇಕು.
ರೇಬೀಸ್ ರೋಗದ ಬಗ್ಗೆ ಕೆಲವು ಪ್ರಮುಖ ಅಂಶಗಳು :
ರೋಗಪೀಡಿತ ಪ್ರಾಣಿ ವಿಸರ್ಜಿಸಿದ ಹಾಗೂ ಸ್ರವಿಸಿದ ವಸ್ತುಗಳಲ್ಲಿ ಮಾತ್ರ ಲಿಸ್ಸಾ ಇರುತ್ತದೆ. ಇವುಗಳು ನಮ್ಮ ಮೈ ಮೇಲಿನ ಗಾಯದ ಮೇಲೆ ಸಂಪರ್ಕಕ್ಕೆ ಬಂದಾಗ ಅಥವಾ ಆ ಪ್ರಾಣಿಯು ನಮಗೆ ಕಚ್ಚಿದಾಗ ಕಾಯಿಲೆ ಬರಬಹುದು. ಬರೀ ಉಗುರುಗಳಿಂದ ಪರಚಿದಾಗ ಅಥವಾ ಕೊಂಬುಗಳಿ0ದ ತಿವಿದರೆ ರೇಬೀಸ್ ರೋಗ ಪ್ರಸಾರವಾಗುವುದಿಲ್ಲ. ರೇಬೀಸ್ ಹರಡಲು ಗಾಯದ ಗಾತ್ರಕ್ಕಿಂತ ಗಾಯದಲ್ಲಿ ಬೆರೆತ ಜೊಲ್ಲಿನ ಪ್ರಮಾಣ ಪ್ರಮುಖ ಪಾತ್ರ ವಹಿಸುತ್ತದೆ. ಗಾಯಗಳು ಆಳವಾಗಿದ್ದರೆ ರೋಗ ಬೇಗನೆ ಬರುವುದು.

ಲಿಸ್ಸಾ ವೈರಸ್ ನರಗಳ ಮೂಲಕ ಮಿದುಳನ್ನು ತಲುಪುವುದರಿಂದ, ಅದು ಗಾಯವಾದ ಭಾಗದಲ್ಲಿರುವ ನರಾಗ್ರಗಳು ಅಥವಾ ತುದಿಗಳನ್ನು ಅವಲಂಬಿಸಿದೆ. ಮುಖದ ಭಾಗಕ್ಕೆ ನರಗಳ ಸಂಪರ್ಕ ಜಾಸ್ತಿ. ಆದ್ದರಿಂದ ಮುಖಕ್ಕೆ ಕಚ್ಚಿದಾಗ ರೇಬೀಸ್ ಲಕ್ಷಣಗಳು ಬೇಗ ಕಾಣಿಸಬಹುದು.

ರೇಬೀಸ್ ಪೀಡಿತ ಮನುಷ್ಯನಲ್ಲಿ ಕಂಡು ಬರುವ ‘ಜಲಭಯ’ ಪ್ರಾಣಿಗಳಲ್ಲಿ ಕಾಣಬೇಕೆಂದಿಲ್ಲ. ನೀರು ಕುಡಿಯಲು ಬೇಕಾದ ಗಂಟಲಿನ ಅಥವಾ ಫ್ಯಾರಿಂಕ್ಸ್ನ ಸ್ನಾಯುಗಳು ರೇಬೀಸ್ ಪೀಡಿತರಲ್ಲಿ ನಿಶ್ಚಲವಾಗುತ್ತದೆ. ಆಗ ನೀರು ಕುಡಿಯಲು ಸಾಧ್ಯವಾಗುವುದಿಲ್ಲ. ನುಂಗುವ ಸ್ನಾಯುಗಳಲ್ಲಿ ಸೆಟೆತ ಉಂಟಾಗಿ ನೋಡುವವರಿಗೆ ಜಲಭಯದ ಭ್ರಮೆ ಮೂಡಿಸುತ್ತದೆ.

ರೇಬೀಸ್ ಪೀಡಿತ ಹಸುವಿನ ಹಾಲಿನಲ್ಲಿ ರೋಗಕಾರಕ ಲಿಸ್ಸಾ ವೈರಸ್ ಕಣಗಳು ಇದ್ದರೂ, ಹಾಲನ್ನು ಕುದಿಸಿದಾಗ/ಪಾಶ್ಚರೀಕರಿಸಿದಾಗ ಅವು ನಾಶವಾಗುತ್ತದೆ. ಹೀಗಾಗಿ ರೋಗ ಬರುವ ಸಾಧ್ಯತೆ ಇಲ್ಲ. ಆದರೆ ರೇಬೀಸ್ ಪೀಡಿತ ಹಸುವಿನ ಹಸಿ ಹಾಲು ಕುಡಿದರೆ ರೇಬೀಸ್ ಬರುವ ಸಾಧ್ಯತೆ ಇದೆ.

ರೇಬೀಸ್ ವಿರುದ್ಧದ ಲಸಿಕೆಯನ್ನು ನಾಯಿಗೆ ಹಾಕಿಸಿದಾಗ, ಆ ನಾಯಿಗೆ ರೇಬೀಸ್ ವಿರುದ್ಧ ಮಾತ್ರ ರಕ್ಷಣೆ ಒದಗಿಸಿದಂತೆ, ಇತರ ಕಾಯಿಲೆಗಳಿಗಲ್ಲ.

ನಮ್ಮ ನಾಯಿಗೆ ರೇಬೀಸ್ ವಿರುದ್ಧದ ಲಸಿಕೆ ಹಾಕಿಸಿದ ನಂತರ, ಇನ್ನು ಏನೂ ಆಗುವುದಿಲ್ಲ ಎಂದು ರಸ್ತೆಗೆ ಬಿಡುವುದು ಉತ್ತಮ ಶ್ವಾನಪಾಲಕರ ಲಕ್ಷಣವಲ್ಲ. ಲಸಿಕೆಯಿಂದ ಪ್ರಾಣಿಯ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಪೂರ್ಣ ಪ್ರಮಾಣದಲ್ಲಿ ಬೆಳೆಯಲು ಸುಮಾರು 21 ದಿನಗಳು ಬೇಕು ಎಂಬುದನ್ನು ಎಲ್ಲ ಶ್ವಾನಪಾಲಕರು ಅರಿತುಕೊಳ್ಳಬೇಕು.
ನಾಟಿ ಮದ್ದಿನಿಂದ ರೇಬೀಸ್ ರೋಗವನ್ನು ತಡೆಗಟ್ಟಲು ಅಥವಾ ಗುಣಪಡಿಸಲು ಸಾಧ್ಯವಿಲ್ಲ. ಸೋಂಕು ತಗಲಿದ ನಂತರ ರೋಗ ಬರುವುದನ್ನು ತಡೆಯಲು ಲಸಿಕೆ ಹಾಕಿಸಿಕೊಳ್ಳುವುದೊಂದೇ ಮಾರ್ಗ. ಚಿಕಿತ್ಸೆಗಿಂತ ತಡೆಗಟ್ಟುವುದು ಉತ್ತಮ. ಮಾಟ, ಮಂತ್ರ, ಇತರ ಮೂಢÀಂಬಿಕೆಗಳಿಗೆ ಮೊರೆ ಹೋಗಬೇಡಿ.
ರೇಬೀಸ್ ನಿಯಂತ್ರಣ ಹೇಗೆ ಸಾಧ್ಯ?
ನಮ್ಮ ದೇಶದಲ್ಲಿ ನಾಯಿ ಕಡಿತದಿಂದಲೇ ಹೆಚ್ಚು ರೇಬೀಸ್ ಪ್ರಕರಣಗಳು ಆಗುವುದರಿಂದ ಸಾಕು ಪ್ರಾಣಿಗಳಿಗೆ ರೇಬೀಸ್ ನಿರೋಧಕ ಲಸಿಕೆಯನ್ನು ಕಡ್ಡಾಯವಾಗಿ ಹಾಕಿಸಬೇಕು. ಮೊದಲ ಬಾರಿಗೆ ಒಂದು ತಿಂಗಳ ಅಂತರದಲ್ಲಿ ಎರಡು ಲಸಿಕೆಗಳು, ಅನಂತರ ಪ್ರತಿ ವರ್ಷ ಒಂದು ಲಸಿಕೆ ಹಾಕಿಸಿದ್ದಲ್ಲಿ ನಿಮ್ಮ ಸಾಕು ನಾಯಿಗೆ, ನಿಮಗೆ ಹಾಗೂ ಸಮಾಜಕ್ಕೆ ಕ್ಷೇಮ.

ಒಂದು ವೇಳೆ ರೇಬೀಸ್ ಸೋಂಕು ತಗುಲಿದ ಅನಂತರವಾದರೆ ಒಟ್ಟು ಆರು ಬಾರಿ (0, 3, 7, 14, 28 ಮತ್ತು 90 ನೇ ದಿನಗಳಂದು) ಲಸಿಕೆಯನ್ನು ಹಾಕಿಸಬೇಕು. ಇಲ್ಲಿ ‘0’ ದಿನವೆಂದರೆ ಮೊದಲ ಲಸಿಕೆ ನೀಡಿದ ದಿನ ಮತ್ತು ಮೊದಲ ದಿನವನ್ನು ಸೋಂಕು ತಗುಲಿದ 24ಗಂಟೆಗಳಲ್ಲಿ ಹಾಕಿಸಿದ್ದಲ್ಲಿ ಉತ್ತಮ. ತಡವಾದಷ್ಟೂ ರಕ್ಷಣೆಯ ಖಾತರಿ ಕಡಿಮೆಯಾಗುತ್ತದೆ.

Facebook
Twitter
WhatsApp
LinkedIn
Telegram

One Response

Leave a Reply

Your email address will not be published. Required fields are marked *