ಅಕ್ಕಿ ರೊಟ್ಟಿ ಮಾರಿ ಮನೆ ಕಟ್ಟಿದರು

ರಾಮಚಂದ್ರರಿಗೆ ಬೆಳಿಗ್ಗೆಯಿಂದ ಸಂಜೆಯವರೆಗೆ ಅಡಕೆ ಮರವೇರಿದರೆ ಸಿಗುತ್ತಿದ್ದುದು 300 ರೂಪಾಯಿ ಸಂಬಳ. ತನ್ನ ಕೆಲಸಗಳು ಹೆಚ್ಚಿನ ದೈಹಿಕ ಸಾಮರ್ಥ್ಯವನ್ನು ಬಯಸುವ ಕಾರಣ 30 ದಿನಗಳಲ್ಲೂ ಕೆಲಸ ಮಾಡುವುದು ಅಸಾಧ್ಯವಾದ ಮಾತೇ ಸರಿ. ಹಾಗೆಂದು ಮೂರನೇ ತರಗತಿ ಮುಗಿಸಿ ಹೋಟೆಲ್‌ನತ್ತ ಮುಖ ಮಾಡಿದ ರಾಮಚಂದ್ರರವರಿಗೆ ಹೋಟೆಲ್ ಕೆಲಸವು ನೆಮ್ಮದಿಯನ್ನು ನೀಡಿರಲಿಲ್ಲ. ತನ್ನ ಅತ್ತೆ ಮಂಗಳೂರಿನ ರೊಟ್ಟಿ ಫ್ಯಾಕ್ಟರಿವೊಂದರಲ್ಲಿ ಕೆಲಸ ಮಾಡುತ್ತಿದ್ದರು. ರೊಟ್ಟಿ ತಯಾರಿ ಘಟಕವನ್ನು ಆರಂಭಿಸುವ ಬಗ್ಗೆ ರಾಮಚಂದ್ರರವರಿಗೆ ಧೈರ್ಯ ತುಂಬಿದರು. ಆಗ ರಾಮಚಂದ್ರರವರು ಸ್ವ ಉದ್ಯೋಗದ ಕುರಿತ ಹೆಚ್ಚಿನ ಮಾರ್ಗದರ್ಶನಗಳಿಗಾಗಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೊರೆ ಹೋದರು. ‘ಅನುಗ್ರಹ’ ಸ್ವಸಹಾಯ ಸಂಘದ ಸದಸ್ಯರಾದರು. ಯೋಜನೆಯ ಅನುದಾನವನ್ನು ಪಡೆದರು. ರೊಟ್ಟಿ ತಯಾರಿಯನ್ನು ಆರಂಭಿಸಿದರು.
ಆರ0ಭದಲ್ಲಿ ಅನುಭವ ಇಲ್ಲದ ಉದ್ಯಮ ಸಾಕಷ್ಟು ನಷ್ಟವನ್ನು ನೀಡಿತು. ತಾನು ತಯಾರಿಸಿದ ರೊಟ್ಟಿಗೆ ಮಾರುಕಟ್ಟೆಯನ್ನು ಹುಡುಕುತ್ತಾ ನಿತ್ಯ ಹತ್ತಾರು ಕಿ.ಮೀ. ದೂರ ಸೈಕಲ್ ಪೆಡಲ್ ತುಳಿದರು. ಕೆಲವು ತಿಂಗಳವರೆಗೆ ರೊಟ್ಟಿ ತಯಾರಿಯಿಂದ ಬರುವ ಆದಾಯ ಮನೆಯ ಬಾಡಿಗೆಯನ್ನು ಕಟ್ಟಲು ಸಾಕಾಗುತ್ತಿರಲಿಲ್ಲ. ಕೈ ಸೇರುವ ಆದಾಯ ಮದ್ಯಬಕಾಸುರನ ಪಾಲಾಗುವುದನ್ನು ತಡೆಯುವ ನಿಟ್ಟಿನಲ್ಲಿ ತಾನು ಸ್ವ ಆಸಕ್ತಿಯಿಂದ 12 ವರ್ಷಗಳ ಹಿಂದೆ ಕಡಬದಲ್ಲಿ ನಡೆದ ಗ್ರಾಮಾಭಿವೃದ್ಧಿ ಯೋಜನೆಯ 175ನೇ ಮದ್ಯವರ್ಜನ ಶಿಬಿರಕ್ಕೆ ಸೇರಿ ಮದ್ಯಮುಕ್ತರಾದರು.
ಹಂತ ಹಂತವಾಗಿ ಯೋಜನೆಯ ಮೂಲಕ ಸಾಲ ಪಡೆದು ರೊಟ್ಟಿ ಘಟಕಕ್ಕೆ ಯಂತ್ರಗಳನ್ನು ಖರೀದಿಸಿದರು. ಅವರು, ಮನೆಯವರೆಲ್ಲ ಸೇರಿ ಅವಿರತವಾಗಿ ದುಡಿದರು. ದಿನಕಳೆದಂತೆ ರಾಮಚಂದ್ರರು ತಯಾರಿಸುವ ರೊಟ್ಟಿಗೆ ಬೇಡಿಕೆ ಬರತೊಡಗಿತು. ಕೆಲವೇ ದಿನಗಳಲ್ಲಿ ಕಡಬ ಗ್ರಾಮದ ಕಾಲರ ಪಿಲತ್ತೋಡಿಯ ‘ನಂಬರ್ ಒನ್ ರೊಟ್ಟಿ ಮೇಕರ್’ ಎಂಬ ಪ್ರಸಿದ್ಧಿಯನ್ನು ಪಡೆದರು. ಬೇರೆ ಬೇರೆ ತಾಲೂಕುಗಳಿಗೆ ಇಲ್ಲಿಂದ ನಿತ್ಯ ರೊಟ್ಟಿ ಸಾಗಾಟವಾಗ ತೊಡಗಿತು.
ಬಾಡಿಗೆ ಮನೆಯಿಂದ ಸ್ವಂತ ಮನೆಗೆ : ರಾಮಚಂದ್ರರವರು ಹದಿನಾಲ್ಕು ವರ್ಷಗಳ ಹಿಂದೆ ಕಾಲರ ಪಿಲತ್ತೋಡಿ ಎಂಬಲ್ಲಿ 40 ಸೆನ್ಸ್ ಜಮೀನನ್ನು ಖರೀದಿಸಿದರು. ಅದರಲ್ಲಿ ಒಂಭತ್ತು ವರ್ಷಗಳ ಹಿಂದೆ ಸುಂದರವಾದ ಮನೆಯೊಂದನ್ನು ಕಟ್ಟಿದ್ದಾರೆ. 100 ಅಡಕೆ ಗಿಡಗಳನ್ನು ನೆಟ್ಟಿದ್ದಾರೆ. ನೀರಿಗಾಗಿ ಬೋರ್‌ವೆಲ್ ಅನ್ನು ತೋಡಿದ್ದಾರೆ. ಅಕ್ಕಿ ರೊಟ್ಟಿ ಇವರ ಬದುಕನ್ನು ಗಟ್ಟಿಗೊಳಿಸಿದೆ.
ಕಡಬದ ರೊಟ್ಟಿಗೆ ವಿದೇಶಗಳಲ್ಲಿ ಡಿಮ್ಯಾಂಡ್ : ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಹಳ್ಳಿಯೊಂದರಲ್ಲಿ ತಯಾರಾಗುವ ರೊಟ್ಟಿ ವಿದೇಶಗಳಿಗೂ ಮಾರಾಟವಾಗುತ್ತಿರುವುದು ಇವರ ಪ್ರಯತ್ನಕ್ಕೆ ಸಂದ ಫಲ ಎಂದರೆ ತಪ್ಪಾಗಲಾರದು. ಹೆಂಡತಿ, ಮಗ ಸ್ವತಃ ದುಡಿಯುವುದರಿಂದ ಗುಣಮಟ್ಟಕ್ಕೆ ಹೆಚ್ಚಿನ ಮಹತ್ವವನ್ನು ನೀಡಲಾಗುತ್ತಿದೆ. ವಿಶೇಷವೆಂದರೆ ಇಲ್ಲಿ ತಯಾರಿಸಿದ ರೊಟ್ಟಿಗಳು ಮೂರರಿಂದ ಒಂಭತ್ತು ತಿಂಗಳವರೆಗೂ ಹಾಳಾಗುವುದಿಲ್ಲ. ಯಾವುದೇ ರಾಸಾಯನಿಕವನ್ನು ಬಳಸದೇ ಪಕ್ಕಾ ಸೋನಾಮಸೂರಿ ಮತ್ತು ಬೆಳ್ತಿಗೆ ಅಕ್ಕಿಯಿಂದ ತಯಾರಿಸಲಾಗುತ್ತದೆ. ಇದೀಗ ಪ್ರತಿನಿತ್ಯ ಒಂದು ಕ್ವಿಂಟಾಲ್ ರೊಟ್ಟಿ ಮಾರಾಟವಾಗುತ್ತದೆ. ಬೇರೆ ಬೇರೆ ಜಿಲ್ಲೆಗಳಿಂದ ರೊಟ್ಟಿ ಖರೀದಿಸಲು ಜನ ಬರುತ್ತಾರೆ. ಮನೆಯವರೊಂದಿಗೆ ಇಬ್ಬರು ಕೂಲಿಯಾಳುಗಳಿಗೂ ಕೆಲಸ ನೀಡಿದ್ದಾರೆ. ಕೊರೊನಾದಂತಹ ಸಮಯದಲ್ಲೂ ರೊಟ್ಟಿಗೆ ಬಹುಬೇಡಿಕೆಯಿತ್ತು. ಇದೀಗ ರೊಟ್ಟಿ ಉದ್ಯಮ ರಾಮಚಂದ್ರರ ಕೈಹಿಡಿದಿದೆ. ರಾಮಚಂದ್ರರವರ ಸಂಪರ್ಕ ಸಂಖ್ಯೆ : 9449922257.

‘ರೊಟ್ಟಿ ಉದ್ಯಮ ಸಾಕಷ್ಟು ಶ್ರಮವನ್ನು ಬಯಸುತ್ತದೆ. ಬೆಳಿಗ್ಗೆಯಿಂದ ಸಂಜೆಯವರೆಗೂ ಬೆಂಕಿಯ ತಾಪವನ್ನು ತಡೆದುಕೊಳ್ಳುವ ಶಕ್ತಿ ನಮ್ಮಲ್ಲಿರಬೇಕು. ಇಲ್ಲಿ ಬಂಡವಾಳ ಇದ್ದರೆ ಸಾಲುವುದಿಲ್ಲ. ತಾವಾಗಿಯೇ ಸ್ವತಃ ದುಡಿಯುವ ಮನಸ್ಸು ಬೇಕು. ಕೆಲಸದವರನ್ನು ನಂಬಿ ಕುಳಿತರೆ ನಷ್ಟವಾದೀತು.’

ಟಿ ರಾಮಚಂದ್ರ, ಕಾಲರ ಪಿಲತ್ತೋಡಿ, ಕಡಬ

Facebook
Twitter
WhatsApp
LinkedIn
Telegram

Leave a Reply

Your email address will not be published. Required fields are marked *