ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು
ಭಾರತೀಯರಿಗೆ `ಮದುವೆ’ ಎಂಬುದೊಂದು ದೊಡ್ಡ ಸಂಭ್ರಮದ ವಿಚಾರ. ಮನೆಯಲ್ಲಿ ಮದುವೆ ಇದೆ ಅಂದ್ರೆ ಒಂದೆರಡು ತಿಂಗಳ ಮೊದಲೇ ತಯಾರಿ ಆರಂಭವಾಗುತ್ತದೆ. ಕಲ್ಯಾಣ ಮಂಟಪವನ್ನು ಕಾಯ್ದಿರಿಸುವುದರಿಂದ ಹಿಡಿದು ಮಂಟಪದ ಅಲಂಕಾರ, ಅಡುಗೆಯವರು, ವಾದ್ಯದವರು, ಆಮಂತ್ರಣ ಪತ್ರಿಕೆ ತಯಾರಿ ಹೀಗೆ ಮನೆ ಯಜಮಾನನಿಗೆ ಪುರುಸೊತ್ತಿಲ್ಲದಂತೆ ತಯಾರಿ ಕಾರ್ಯ ನಡೆಯಬೇಕು. ಹೆಂಗಸರಂತೂ ವಧು – ವರರ ಬಟ್ಟೆ, ಚಿನ್ನ, ಉಡುಗೊರೆಗಳ ಖರೀದಿ, ಆಹ್ವಾನಿಸಬೇಕಾದ ಅತಿಥಿಗಳ ಪಟ್ಟಿ, ಜೊತೆಗೆ ಮೂರು ಹೊತ್ತಿನ ಊಟ – ತಿಂಡಿಗಳ ಮೆನುವನ್ನು ತಯಾರಿ ಮಾಡಬೇಕಾಗುತ್ತದೆ. ಅಷ್ಟಲ್ಲದೆ ಹೆಣ್ಣು ನೋಡುವ ಕ್ರಮ, ಮದುವೆ ಮೊದಲು ಮೆಹೆಂದಿ ಇತ್ಯಾದಿ ಕಾರ್ಯಕ್ರಮಗಳ ಸಂಯೋಜನೆಯನ್ನೂ ಮಾಡಬೇಕಾಗುತ್ತದೆ.
ಆದರೆ ಮದುವೆ ಆದ ಬಳಿಕ ಹೋದ ಮನೆಯಲ್ಲಿ ಹೆಣ್ಣು ಏನೇನು ಕರ್ತವ್ಯಗಳನ್ನು ನಿಭಾಯಿಸಬೇಕು. ಅಲ್ಲಿ ಅವಳು ಹೇಗಿರಬೇಕು ಎಂಬ ಬಗೆಗಿನ ಮಾನಸಿಕ ತಯಾರಿ ಬಗ್ಗೆ ಯಾರೂ ಯೋಚಿಸುವುದಿಲ್ಲ. ಅದು ಮನೆಯವರೇ ಮಾಡಿದ ಮದುವೆ ಆಗಲಿ, ಪ್ರೀತಿಸಿ ಆದ ಮದುವೆ ಆಗಲಿ, ಅತ್ತೆ – ಸೊಸೆಯರ ಮಧುರ ಬಾಂಧವ್ಯ ಅಷ್ಟು ಸುಲಭದಲ್ಲಿ ಸಾಧ್ಯವಾಗುವುದಿಲ್ಲ.
ಅನೇಕ ಸಲ ಸೊಸೆ ಬಂದಾಗ ಅತ್ತೆಗೆ ತಾನು ಮದುವೆ ಆಗಿ ಬಂದಾಗಿನ ಮನೆ ಸನ್ನಿವೇಶ ನೆನಪಾಗುತ್ತದೆ. ಆಗ ತನ್ನ ಅತ್ತೆ ಹೇಗೆ ತನ್ನನ್ನು ಕೆಟ್ಟದಾಗಿ ನಡೆಸಿಕೊಂಡರು, ಮನೆಯಲ್ಲಿ ನಾನು ಎಷ್ಟು ದುಡಿಯಬೇಕಾಗಿತ್ತು, ಗಂಡ ಹೇಗೆ ನನ್ನ ಕಷ್ಟ ಸುಖಕ್ಕೆ ಕಿವಿಗೊಡುತ್ತಿರಲಿಲ್ಲ, ಹೀಗೆ ತನ್ನ ಹಿಂದಿನ ದಿನಗಳನ್ನು ನೆನಪಿಸಿಕೊಳ್ಳುತ್ತಾಳೆ. ಸೊಸೆಗೆ ದೊರೆಯುವ ಇಂದಿನ ಅಡುಗೆ ಮನೆಯ ಸವಲತ್ತು, ಗಂಡನೊಂದಿಗೆ ಮುಕ್ತವಾಗಿ ಮಾತನಾಡುವ ಅವಕಾಶ, ಹೊರಗೆ ಕೆಲಸಕ್ಕೆ ಹೋಗುವ ಗಡಿಬಿಡಿಯಲ್ಲಿ ಪೂರ್ಣ ರೀತಿಯಲ್ಲಿ ಮನೆ ಕೆಲಸ, ಅಡುಗೆ ಕೆಲಸದಲ್ಲಿ ಭಾಗಿ ಆಗದೆ ಇರುವುದು ಇತ್ಯಾದಿಗಳನ್ನು ಗಮನಿಸಿದಾಗ ಅತ್ತೆಗೆ ಕಿರಿಕಿರಿ ಆಗುತ್ತದೆ.
ಇಲ್ಲಿ ಎಲ್ಲಾ ವಿಚಾರದಲ್ಲೂ ಒಬ್ಬಳೇ ಹೊಂದಾಣಿಕೆ ಮಾಡುವುದಕ್ಕೆ ಆಗುವುದಿಲ್ಲ. ಎಷ್ಟೇ ತಾಳ್ಮೆಯಿಂದ ಇದ್ದರೂ ಒಂದಲ್ಲ ಒಂದು ದಿನ ಅಸಹನೆಯ ಕಟ್ಟೆ ಒಡೆದು ಹೋಗುತ್ತದೆ. ಆದ್ದರಿಂದ ಯಾರ ಸಂಬಂಧದಲ್ಲಿ ಹೊಂದಾಣಿಕೆ ಆಗುವುದಿಲ್ಲವೋ ಅವರಿಬ್ಬರೂ ಕುಳಿತು ಆಗಾಗ ಮಾತನಾಡಬೇಕು. ಇಬ್ಬರಲ್ಲೂ ಲೋಪದೋಷಗಳು ಸಹಜವಾಗಿ ಇರುತ್ತದೆ. ತಾಯಿ – ಹೆಂಡತಿ ಮಧ್ಯೆ ಮಗ ಮಾತನಾಡಿದರೂ ತಪ್ಪು ತಿಳುವಳಿಕೆ ಬರುವುದಲ್ಲದೆ ಆತನ ಮಧ್ಯಸ್ಥಿಕೆ ಇಬ್ಬರಿಗೂ ಸರಿ ಅನಿಸುವುದಿಲ್ಲ. ಸೊಸೆ ಬೆಳೆದು ಬಂದ ಮನೆಯ ಪದ್ಧತಿ, ಸಂಸ್ಕಾರ ಮಾತ್ರವಲ್ಲ, ಊಟ – ತಿಂಡಿ ವಿಚಾರಗಳಲ್ಲೂ ವ್ಯತ್ಯಾಸ ಇರುತ್ತದೆ. ಹಾಗಾಗಿ ಕೆಲವೊಂದು ವಿಚಾರಗಳನ್ನು ಇಬ್ಬರೂ ಒಪ್ಪಿಕೊಂಡು ಒಗ್ಗಿಕೊಳ್ಳಲು ಪ್ರಯತ್ನಿಸಬೇಕು. ಅತ್ತೆ ಬುದ್ಧಿ ಹೇಳಬೇಕಾದಾಗಲೂ ಭಾಷೆಯ ಮೇಲೆ ಹಿಡಿತ ಇರಬೇಕು. ಟೀಕೆ, ಬೈಯುವ ಭಾಷೆಯಿಂದ ಕೆಲವೊಮ್ಮೆ ಸಂಬಂಧ ಕೆಡುತ್ತದೆ.
ಸೊಸೆ ಪ್ರತಿ ಕ್ಷಣ ತನ್ನ ಕಣ್ಣೆದುರಿಗೆ ಇರಬೇಕು, ಅಡುಗೆ ಮನೆಯಲ್ಲೆ ಇರಬೇಕು, ಏನಾದರೂ ಕೆಲಸ ಮಾಡುತ್ತಿರಬೇಕು ಎಂದು ಬಯಸುವುದು ತಪ್ಪು. ತನ್ನ ಕೆಲಸ ಆದ ಬಳಿಕ ಒಬ್ಬಳೇ ಕುಳಿತು ಟಿ.ವಿ. ನೋಡುವುದು, ಸಂಗೀತ ಕೇಳುವುದು, ಪುಸ್ತಕ ಓದುವುದು, ಮೊಬೈಲ್‍ನಲ್ಲಿ ಸಂಭಾಷಣೆ ಇತ್ಯಾದಿ ಏನಾದರೂ ತನ್ನದೇ ಆದ ಸ್ವಂತ ವಿಚಾರ, ಹವ್ಯಾಸಗಳಲ್ಲಿ ತೊಡಗಿಸಿಕೊಳ್ಳುವಲ್ಲಿ ಸ್ವಲ್ಪ ವೈಯಕ್ತಿಕ ಸಮಯ ಅವಳಿಗೂ ಬೇಕು.
ಅನೇಕ ಸಲ ಮನೆಯಲ್ಲಿ ಸೊಸೆಯ ಸಣ್ಣ ಪುಟ್ಟ ತಪ್ಪುಗಳನ್ನು, ವೈಯಕ್ತಿಕ ವಿಚಾರಗಳನ್ನು ಅತ್ತೆ ತನ್ನ ಮಗಳ ಜೊತೆ ಹೇಳಿಕೊಳ್ಳುತ್ತಿರುತ್ತಾಳೆ. ಹಾಗಂತ ಸೊಸೆ ಅತ್ತೆ ಮನೆ ಬಗ್ಗೆ ತನ್ನ ತಾಯಿಯ ಜೊತೆ ಮಾತನಾಡಿದರೆ ಅದು ದೊಡ್ಡ ತಪ್ಪು ಅನಿಸಿಕೊಳ್ಳುತ್ತದೆ. ಕೆಲವೊಮ್ಮೆ ಅತ್ತೆ ಮನೆಯಲ್ಲಿ ಸ್ವಲ್ಪ ಕಷ್ಟ ಆದರೂ ಸುಧಾರಿಸಿಕೊಂಡು ಹೋಗುವ ಉಪಾಯ ಹೇಳುವುದನ್ನು ಬಿಟ್ಟು ‘ಗಂಡನನ್ನು ಬಿಟ್ಟೇ ಬಾ. ನಾವು ನೋಡಿಕೊಳ್ಳುತ್ತೇವೆ’ ಎನ್ನುವ ತಾಯಂದಿರೂ ಇರುತ್ತಾರೆ.
ಅತ್ತೆ – ಸೊಸೆ ಇಬ್ಬರಿಗೂ ಪರಸ್ಪರ ಒಬ್ಬರಿಗೊಬ್ಬರ ಸಹಕಾರ ಬೇಕೇ ಬೇಕು. ಸಣ್ಣ ಮಕ್ಕಳಿರುವಾಗ ಅತ್ತೆ ಇದ್ದರೆ ಸೊಸೆಯ ಕೆಲಸ ಎಷ್ಟೋ ಹಗುರವಾಗುತ್ತದೆ. ವೃದ್ಧಾಪ್ಯದ ಹೊಸ್ತಿಲಲ್ಲಿರುವ ಅಜ್ಜ – ಅಜ್ಜಿಗೂ ಮೊಮ್ಮಕ್ಕಳೆಂದರೆ ಸಹಜವಾಗಿ ಪ್ರೀತಿ ಇರುತ್ತದೆ. ಇದೊಂದು ಜವಾಬ್ದಾರಿ ಇಲ್ಲದೆ ಬರೀ ಪ್ರೀತಿ ಹಂಚಿಕೊಳ್ಳುವ ಸಮಯ. ಆದ್ದರಿಂದ ತಮ್ಮ ಮಕ್ಕಳಿಗಿಂತಲೂ ಮೊಮ್ಮಕ್ಕಳನ್ನು ಜಾಸ್ತಿ ಪ್ರೀತಿಸುತ್ತಾರೆ. ಅವರು ಹಳೆ ಮತ್ತು ಹೊಸ ಕಾಲದ ಮಧ್ಯದ ಕೊಂಡಿ ಆಗುತ್ತಾರೆ.
ಒಂದು ರೀತಿಯಲ್ಲಿ ಮಗನನ್ನು ಬೆಳೆಸಿ ಭವಿಷ್ಯ ರೂಪಿಸಿದವಳು ತಾಯಿ. ಹಾಗೆಯೇ ಹೆಂಡತಿಯಾದವಳು ತನ್ನ ಜೀವನವನ್ನು ಈ ಮನೆಯಲ್ಲಿ ಕಳೆಯಲು ಗಂಡನನ್ನು ನಂಬಿ ಬಂದಿರುತ್ತಾಳೆ.
ಎಂದಿಗೂ ಮಹಿಳೆ ಮಹಿಳೆಗೆ ಶತ್ರುವಾಗಬಾರದು. ಬದಲು ಮಿತ್ರರಾದಾಗ ಅವಳ ಮತ್ತು ಅವಳ ಕುಟುಂಬ, ಸಮಾಜದ ಅಭಿವೃದ್ಧಿಗೂ ಸಾಧ್ಯವಾಗುತ್ತದೆ. ವಿಶ್ವ ಮಹಿಳಾ ದಿನಾಚರಣೆಯ ಈ ಸಂದರ್ಭದಲ್ಲಿ ಮಹಿಳೆಯರೆಲ್ಲ ಒಗ್ಗಟ್ಟಾಗಿರುವ ಸಂಕಲ್ಪ ಮಾಡಿಕೊಳ್ಳೋಣ.