ಹಾಲು ಉತ್ಪಾದನೆಯಲ್ಲಿ ವ್ಯತ್ಯಯವಾಗುತ್ತಿದೆಯೇ?

ಹೈನುಗಾರರು ಎದುರಿಸುತ್ತಿರುವ ಹಲವಾರು ಸಮಸ್ಯೆಗಳಲ್ಲಿ ಹಾಲು ಉತ್ಪಾದನೆಯಲ್ಲಿನ ವ್ಯತ್ಯಯ ಕೂಡಾ ಬಹುಮುಖ್ಯವಾದುದು.
ಕಾರಣ ಮತ್ತು ಪರಿಹಾರ
ಆಹಾರ : ದಿನನಿತ್ಯ ಪಶು ಆಹಾರ ಕೊಡುವ ಪ್ರಮಾಣ ಅಥವಾ ಸಮಯದಲ್ಲಿ ವ್ಯತ್ಯಾಸವಾದರೂ ಕೂಡಾ ಹಾಲು ಉತ್ಪಾದನೆಯ ಮೇಲೆ ಪರಿಣಾಮ ಬೀರುತ್ತದೆ. ಗರ್ಭದ ಅವಧಿಯಲ್ಲಿ ಆರೈಕೆ ಸರಿಯಾಗದಿದ್ದರೆ, ಆಹಾರದ ಕೊರತೆಯಾದರೆ, ಅಗತ್ಯವಿರುವ ಪೋಷಕಾಂಶಗಳು ಸಿಗದಿದ್ದಲ್ಲಿ ಹಾಲು ಉತ್ಪಾದನೆಯಲ್ಲಿ ವ್ಯತ್ಯಯಗಳಾಗುತ್ತವೆ. ದಿನನಿತ್ಯ ನೀಡುವ ಹಸಿರು ಮೇವಿನ ಪ್ರಮಾಣ ಕಡಿಮೆಯಾದರೂ ಹಾಲು ಉತ್ಪಾದನೆಯಲ್ಲಿ ವ್ಯತ್ಯಾಸ ಕಾಣಬಹುದು. ಆದ್ದರಿಂದ ದಿನನಿತ್ಯ ಲವಣ ಮಿಶ್ರಣ ನೀಡುವುದೊಳಿತು. ಆಹಾರದಲ್ಲಿ ಎಣ್ಣೆಕಾಳು ಹಿಂಡಿಗಳ ಪ್ರಮಾಣ ಸ್ವಲ್ಪ ಜಾಸ್ತಿ ಮಾಡಿ ನಿರಂತರವಾಗಿ ನೀಡುತ್ತಿದ್ದರೆ ಹಾಲು ಉತ್ಪಾದನೆಯಲ್ಲಿ ಸ್ಥಿರತೆ ಕಾಣಬಹುದು.
ಆರೈಕೆ
ಹೆಚ್ಚು ಹಾಲು ಉತ್ಪಾದಿಸುವ ಮಿಶ್ರ ತಳಿ ಹಸುಗಳ ಆರೈಕೆ ಬಗ್ಗೆ ವಿಶೇಷ ಕಾಳಜಿ ವಹಿಸಬೇಕಾಗುತ್ತದೆ. ಸ್ವಚ್ಛತೆಗೆ ಹೆಚ್ಚು ಒತ್ತು ಕೊಡಬೇಕಾಗುತ್ತದೆ. ದೈನಂದಿನ ಕಾರ್ಯಗಳ ಬಗ್ಗೆ ಯಾವುದೇ ರೀತಿಯ ಅಸಡ್ಡೆ, ಆಲಸ್ಯ ತೋರಬಾರದು. ಯಾವಾಗಲೂ ನೆಲ ಒಣಗಿರಬೇಕು. ನಿರಂತರವಾಗಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸಬೇಕು. ಉಣ್ಣೆ, ಹೇನು, ನೊಣಗಳ ಕಾಟದಿಂದ ಮುಕ್ತವಾಗಿರಬೇಕು. ಇಲ್ಲದಿದ್ದರೆ ತುಂಬಾ ಕಿರಿಕಿರಿ ಅನುಭವಿಸಿ, ಸೊರಗಿ, ಹಾಲು ಉತ್ಪಾದನೆ ಕುಂಠಿತವಾಗುತ್ತದೆ. ಕೆಚ್ಚಲು ಬಾವು ಬಾರದಂತೆ ಮುಂಜಾಗ್ರತಾ ಕ್ರಮಗಳನ್ನು ಪಾಲಿಸುತ್ತಿರಬೇಕು. ಹಾಲು ಹಿಂಡುವ ವ್ಯಕ್ತಿ ಅಥವಾ ಸಮಯದಲ್ಲಿ ಬದಲಾವಣೆಯಾದರೆ ಹಾಲು ಉತ್ಪಾದನೆಯಲ್ಲಿ ವ್ಯತ್ಯಾಸ ಕಂಡುಬರುತ್ತದೆ.
ಗಬ್ಬದ ಹಸುಗಳ ಪಾಲನೆ
ಗಬ್ಬದ ಹಸುಗಳ ಪಾಲನೆ ವಿಶೇಷವಾಗಿ ಕೊನೆಯ ಎರಡರಿಂದ ಎರಡೂವರೆ ತಿಂಗಳು ಉತ್ತಮ ರೀತಿಯಲ್ಲಿರಬೇಕಾಗುತ್ತದೆ. ದಿನಂಪ್ರತಿ ಕೊಡುವ ಪಶು ಆಹಾರಕ್ಕಿಂತ ಸ್ವಲ್ಪ ಹೆಚ್ಚು ಕೊಡಬೇಕಾಗುತ್ತದೆ. ಆದರೆ ಕೆಲವು ರೈತರು ಕರು ದೊಡ್ಡದಾಗಿ ಬೆಳೆದು ಪ್ರಸವದ ಸಮಯದಲ್ಲಿ ತೊಂದರೆಯಾಗುತ್ತದೆAದು ತಿಳಿದು ಪಶು ಆಹಾರದ ಪ್ರಮಾಣ ಕಡಿಮೆಗೊಳಿಸುತ್ತಾರೆ. ಇದು ಶುದ್ಧ ತಪ್ಪು ಗ್ರಹಿಕೆ. ಗಬ್ಬದ ಅವಧಿಯ ಕೊನೆಯಲ್ಲಿನ ಉತ್ತಮ ಆರೈಕೆಯಿಂದ ಕರು ಹಾಕಿದ ೧೦-೨೦ ದಿನಗಳೊಳಗೆ ಹಸುವಿನ ಹಾಲಿನ ಉತ್ಪಾದನೆ ಗರಿಷ್ಠ ಪ್ರಮಾಣ ತಲುಪುತ್ತದೆ. ಅದೇ ಪ್ರಮಾಣದಲ್ಲಿ ಇನ್ನೂ ಕೆಲ ತಿಂಗಳು ಹಾಲು ಕೊಡುತ್ತದೆ. ಇಂಥ ಸಂದರ್ಭದಲ್ಲಿ ಪೌಷ್ಠಿಕ ಆಹಾರ ನೀಡದಿದ್ದರೆ ಅಥವಾ ಅನಾರೋಗ್ಯ ಕಾಡಿದರೆ ಮುಂದಿನ ಸಾಲಿನಲ್ಲಿ ಉತ್ಪಾದನೆ ಸ್ಥಿರತೆಯನ್ನು ತಲುಪಲು ದೀರ್ಘಕಾಲ ತೆಗೆದುಕೊಳ್ಳುವುದು. ಕರು ಹಾಕುವ ಮುಂಚಿನ ಎರಡು ತಿಂಗಳು ಬತ್ತಿಸುವ ಕ್ರಮದಿಂದ ಕೆಚ್ಚಲಿಗೆ ವಿಶ್ರಾಂತಿ ಸಿಗುವುದರಿಂದ ಮುಂದಿನ ಸಾಲಿನಲ್ಲಿ ಉತ್ಪಾದನೆಯಲ್ಲಿ ಸ್ಥಿರತೆ ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ.
ಹವಾಮಾನದಲ್ಲಿನ ವ್ಯತ್ಯಾಸ
ಉತ್ಪಾದನೆಯ ಏರಿಳಿತಕ್ಕೆ ಆಹಾರ, ಆರೈಕೆ, ಆರೋಗ್ಯದ ಜೊತೆಗೆ ಹವಾಮಾನದಲ್ಲಿನ ವ್ಯತ್ಯಾಸ ಕೂಡಾ ಪ್ರಮುಖ ಕಾರಣವಾಗಿರುತ್ತದೆ. ವಿಪರೀತ ಚಳಿಯಲ್ಲೂ ಕೂಡಾ ಹಾಲು ಉತ್ಪಾದನೆ ಕಡಿಮೆಯಾಗುವ ಸಾಧ್ಯತೆ ಇರುವುದರಿಂದ ಹಾಲಿನ ಜಿಡ್ಡಿನಂಶದಲ್ಲಿ ವ್ಯತ್ಯಾಸವಾಗಬಹುದು.
ಮಾನಸಿಕ ನೆಮ್ಮದಿ : ಜಾನುವಾರುಗಳು ಕೂಡಾ ಮಾನಸಿಕ ನೆಮ್ಮದಿ ಬಯಸುತ್ತವೆ. ಹಸು/ಎಮ್ಮೆಗಳು ತುಂಬಾ ಸೂಕ್ಷö್ಮ ಜೀವಿಗಳು. ಜೋರಾದ ಶಬ್ದ, ಗದ್ದಲ, ಗದರಿಸುವುದು, ಹೊಡೆಯುವುದು ಇತ್ಯಾದಿ ಕ್ರಿಯೆಗಳು ಹಾಲು ಉತ್ಪಾದನೆಯ ಮೇಲೆ ತುಂಬಾ ಪರಿಣಾಮ ಬೀರುತ್ತದೆ. ಮಾನಸಿಕ ನೆಮ್ಮದಿ ಇಲ್ಲದಿದ್ದರೆ ಸಾಮರ್ಥ್ಯಕ್ಕೆ ತಕ್ಕಂತೆ ಉತ್ಪಾದನೆ ಇರದು.
ದಿನನಿತ್ಯದ ಕಾರ್ಯಗಳಲ್ಲಿ ವ್ಯತ್ಯಾಸ : ಉದಾಹರಣೆಗೆ ಹಾಲು ಹಿಂಡುವ ಸಮಯದಲ್ಲಿ ಅಥವಾ ವ್ಯಕ್ತಿಯ ಬದಲಾವಣೆ, ಆಹಾರ ನೀಡುವ ಸಮಯ/ಪ್ರಮಾಣದಲ್ಲಿ ಬದಲಾವಣೆ ಇತ್ಯಾದಿ. ಜಾನುವಾರುಗಳು ತುಂಬಾ ಸೂಕ್ಷö್ಮ ಜೀವಿಗಳಾದ್ದರಿಂದ ಈ ರೀತಿಯ ಬದಲಾವಣೆಗಳಾದಲ್ಲಿ ಹಾಲು ಉತ್ಪಾದನೆಯಲ್ಲಿ ವ್ಯತ್ಯಾಸ ಕಾಣಬಹುದು.

ಡಾ| ಸಿದ್ಧಲಿಂಗಸ್ವಾಮಿ ಹಿರೇಮಠ

Facebook
Twitter
WhatsApp
LinkedIn
Telegram

Leave a Reply

Your email address will not be published. Required fields are marked *