ಚೆಲುವಮ್ಮ ಮೂಲತಃ ತಮಿಳುನಾಡಿನವರು. ಬಡತನದಲ್ಲೆ ಬೆಳೆದವರು. ತಂದೆ – ತಾಯಿ ಕೂಲಿ ಕೆಲಸಕ್ಕೆ ಹೋಗಿ ಬಂದ ಆದಾಯದಲ್ಲಿ ಜೀವನ ನಡೆಸುತ್ತಿದ್ದರು. ಮನೆಮಂದಿಯ ಹೊಟ್ಟೆ ತುಂಬಿಸುವುದೇ ಸವಾಲಾಗಿದ್ದರಿಂದ ಚೆಲುವಮ್ಮನೂ ಶಾಲೆಗೆ ಹೋಗದೆ ಮನೆಯ ಕೆಲಸಗಳನ್ನು ನೋಡಿಕೊಂಡಿರುತ್ತಿದ್ದರು.
ವಿವಾಹದ ನಂತರ ಕೆಲವು ವರ್ಷಗಳ ಹಿಂದೆ ಚೆಲುವಮ್ಮ ದಂಪತಿಗಳು ತಿ. ನರಸೀಪುರಕ್ಕೆ ವಲಸೆ ಬಂದರು. ಗಂಡ ಕೂಲಿ ಕೆಲಸ ಮಾಡುತ್ತಿದ್ದರು. ಆದರೆ ಬಡತನ ಇವರ ಬೆನ್ನುಬಿಡಲಿಲ್ಲ. ಕೂಲಿ ಕೆಲಸದಿಂದ ಸಿಗುತ್ತಿದ್ದ ಆದಾಯ ಕುಟುಂಬ ನಿರ್ವಹಣೆಗೆ ಸಾಲದಾಯಿತು. ತಾನು ಯಾವುದಾದರೂ ಸ್ವಉದ್ಯೋಗ ಮಾಡಿ ಆದಾಯ ಗಳಿಸಿ ಗಂಡನಿಗೆ ನೆರವಾಗಬೇಕೆಂದು ಚಕ್ಕುಲಿ, ನಿಪ್ಪಟ್ಟುಗಳನ್ನು ಮನೆಯಲ್ಲೆ ತಯಾರಿಸಿ ಮಾರಾಟ ಮಾಡತೊಡಗಿದರು. ಬೇಡಿಕೆಯೇನೋ ಬರತೊಡಗಿತು. ಆದರೆ ಕೈಗಳಿಂದಲೆ ಮಾಡುತ್ತಿದ್ದುದರಿಂದ ರಾತ್ರಿ ಹಗಲೆನ್ನದೆ ದುಡಿದರೂ ಹೆಚ್ಚು ತಯಾರಿಸಲು ಸಾಧ್ಯವಾಗುತ್ತಿರಲಿಲ್ಲ. ಹಿಟ್ಟು, ಎಣ್ಣೆ ಮೊದಲಾದ ಅಗತ್ಯ ಸಾಮಗ್ರಿಗಳನ್ನು ತರಲು ಹಣಕಾಸಿನ ಸಮಸ್ಯೆಯೂ ಎದುರಾಯಿತು. ಸ್ವಉದ್ಯೋಗ ಮುಂದುವರೆಸುವ ಇವರ ಶ್ರದ್ಧೆ, ಛಲವನ್ನು ಗಮನಿಸಿದ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕರ್ತರು ಯೋಜನೆಯನ್ನು ಸೇರುವಂತೆ ಪ್ರೇರಣೆ ನೀಡಿದರು.
ಮೂರು ವರ್ಷಗಳ ಹಿಂದೆ ಚೆಲುವಮ್ಮ ಯೋಜನೆಯ ‘ಅರುಣಾದೇವಿ’ ಸ್ವಸಹಾಯ ಸಂಘದ ಸದಸ್ಯರಾದರು. ಯೋಜನೆಯ ವಾರದ ಸಭೆಗಳಲ್ಲಿ ಹತ್ತಾರು ಮಹಿಳೆಯರೊಂದಿಗಿನ ಒಡನಾಟದಿಂದಾಗಿ ಇವರಲ್ಲಿ ಆತ್ಮವಿಶ್ವಾಸ ಹೆಚ್ಚಿತು. ಆರಂಭದ ದಿನಗಳಲ್ಲಿ ಯೋಜನೆಯ ನೆರವಿನಿಂದ ಬ್ಯಾಂಕ್ ಮೂಲಕ ಸಾಲ ಪಡೆದು ಅಗತ್ಯ ಸಾಮಗ್ರಿಗಳನ್ನು ಖರೀದಿಸಿದರು. ನಂತರ ಮೂರುವರೆ ಲಕ್ಷ ರೂಪಾಯಿ ವೆಚ್ಚದ ಚಕ್ಕುಲಿ, ಮಿಕ್ಸರ್, ನಿಪ್ಪಟ್ಟು ತಯಾರಿಯ ಯಂತ್ರವನ್ನು ಖರೀದಿಸಿದರು. ಯಂತ್ರ ಖರೀದಿಯಿಂದಾಗಿ ಸೀಮಿತ ಅವಧಿಯಲ್ಲಿ ಬೇಡಿಕೆಗೆ ತಕ್ಕಂತೆ ತಿಂಡಿಗಳನ್ನು ತಯಾರಿಸಲೂ ಸಾಧ್ಯವಾಯಿತು. ತಿಂಡಿ ತಯಾರಿ, ಪ್ಯಾಕಿಂಗ್‌ನ ಕೆಲಸಗಳಲ್ಲಿ ಪತಿ ನೆರವಾಗುತ್ತಾರೆ. ಚಕ್ಕುಲಿ ಮಾರಾಟಕ್ಕೆ ವಾಹನವೊಂದನ್ನು ಖರೀದಿಸಿದ್ದು ಬೇಕರಿ, ಹೊಟೇಲ್‌ಗಳಿಗೆ ಮಾರಾಟ ಮಾಡುವ ಜವಾಬ್ದಾರಿ ಮಗನದ್ದು.
ಕುರುಕಲು ತಿಂಡಿಗಳ ಮಾರಾಟದಿಂದ ತಿಂಗಳಿಗೆ ಸುಮಾರು ರೂ.೨೫ ಸಾವಿರ ಆದಾಯವನ್ನು ಗಳಿಸುತ್ತಿದ್ದಾರೆ. ಮನೆಯ ಖರ್ಚುವೆಚ್ಚುಗಳನ್ನು ನೋಡಿಕೊಳ್ಳುವುದರೊಂದಿಗೆ ಮಗನಿಗೂ ಶಿಕ್ಷಣವನ್ನು ಕೊಡಿಸುತ್ತಿದ್ದಾರೆ. ಚೆಲುವಮ್ಮನ ಬದುಕಿನಲ್ಲೀಗ ಬಡತನ ದೂರವಾಗಿದೆ. ‘ಗ್ರಾಮಾಭಿವೃದ್ಧಿ ಯೋಜನೆಯು ನನ್ನ ಬದುಕು ಸುಂದರಗೊಳಿಸಿದೆ’ ಎನ್ನುತ್ತಾರೆ ಇವರು.
ಶಶಿಪ್ರಭಾ, ತಿ.ನರಸೀಪುರ