ಮಕ್ಕಳ ಕೈಯಲ್ಲಿ ಸ್ಮಾರ್ಟ್ ಫೋನ್

ಬರಹ : ಶ್ರೀ ಅನಿಲ್ ಕುಮಾರ್ ಎಸ್.ಎಸ್., ಸಿ.ಒ.ಒ. ಎಸ್.ಕೆ.ಡಿ.ಆರ್.ಡಿ.ಪಿ. ಬಿ.ಸಿ. ಟ್ರಸ್ಟ್‌ (ರಿ.)


ಹಿಂದೆ ಕೆಲವೇ ವಲಯಗಳಿಗೆ ಸೀಮಿತವಾಗಿದ್ದ ಆನ್‌ಲೈನ್ ವ್ಯವಸ್ಥೆಯು ಕೋವಿಡ್‌ನ ಪ್ರಭಾವದಿಂದಾಗಿ ತನ್ನ ಆಧಿಪತ್ಯವನ್ನು ಎಲ್ಲೆಡೆ ಸ್ಥಾಪಿಸಿತು. ಆನ್‌ಲೈನ್ ಕ್ಲಾಸ್, ಆನ್‌ಲೈನ್ ಮೀಟಿಂಗ್, ಆನ್‌ಲೈನ್ ಪ್ರೋಗ್ರಾಮ್ ಹೀಗೆ ಎಲ್ಲವೂ ಆನ್‌ಲೈನ್ ಆಗತೊಡಗಿದೆ. ಈ ಆನ್‌ಲೈನ್‌ನ ಪ್ರಕ್ರಿಯೆಗಳಲ್ಲಿ ಅತೀ ಹೆಚ್ಚು ಬಳಕೆಯಾಗುತ್ತಿರುವ ಸಾಧನ ‘ಸ್ಮಾರ್ಟ್ ಫೋನ್’ ಆಗಿದೆ. ಈ ಸ್ಮಾರ್ಟ್ ಫೋನ್ ತುಂಬಾ ಸ್ಮಾರ್ಟ್ ಆಗಿದ್ದು, ಒಂದು ಹರಿತವಾದ ಸಾಧನಕ್ಕೆ ಹೋಲಿಸಬಹುದು.
ವೈದ್ಯರ ಕೈಗಳಲ್ಲಿ ಹರಿತವಾದ ಸಾಧನ ಜೀವ ಉಳಿಸುವಂತಹ ಅಮೂಲ್ಯ ದಿವ್ಯಾಸ್ಟ್ರವಾದರೆ ಕಟುಕನ ಕೈಯಲ್ಲಿ ಜೀವ ತೆಗೆಯುವ ಮಾರಕಾಸ್ತ್ರವಾಗುತ್ತಿದೆ. ಹಾಗೆಂದು ಸಾಧನವನ್ನು ದೂಷಿಸೋಣವೇ, ಖಂಡಿತ ತಪ್ಪು. ಇಲ್ಲಿ ಆ ಸಾಧನಗಳಿಂದ ಎಂತಹ ಸಾಧನೆಗಳನ್ನು ಯಾರು ಹೇಗೆ ಮಾಡುತ್ತಾರೆನ್ನುವುದೇ ಮುಖ್ಯ ವಿಷಯವಾಗಿದೆ. ಸ್ಮಾರ್ಟ್ ಫೋನ್ ಹಾಗೆಯೇ, ನಮ್ಮ ಈ ಆಧುನಿಕ ಜೀವನದಲ್ಲಿ ಬಹಳ ಯೋಗ್ಯ ರೀತಿಯಲ್ಲಿ ನಮ್ಮ ಪ್ರಗತಿಗಾಗಿ ಬಳಸಿಕೊಳ್ಳಬಹುದು. ಹಾಗೆಯೇ ಎಚ್ಚರ ತಪ್ಪಿದ್ದಲ್ಲಿ ನಮಗೆ ಅಪಾಯಕಾರಿಯೂ ಆಗಬಹುದು. ದೊಡ್ಡವರಿಗಾದರೂ ಸ್ಮಾರ್ಟ್ ಫೋನ್ ನಿಂದ ಆಗು-ಹೋಗುಗಳ, ಒಳಿತು-ಕೆಡುಕುಗಳ ಅರಿವಿರುತ್ತದೆ. ಆದರೆ ಪ್ರಬುದ್ಧತೆ ಇಲ್ಲದ ಮುಗ್ಧ ಮಕ್ಕಳ ಗತಿಯೇನು? ಹಾಗೆಂದು ಇಂದಿನ ಕಾಲದಲ್ಲಿ ಮಕ್ಕಳನ್ನು ಮೊಬೈಲ್‌ನಿಂದ ಸಂಪೂರ್ಣವಾಗಿ ದೂರವಿರಿಸಲು ಸಾಧ್ಯವೇ? ಇಲ್ಲ. ಮಕ್ಕಳ ಆನ್‌ಲೈನ್ ತರಗತಿಗಳು ಪ್ರಾರಂಭವಾದ ದಿನದಿಂದಂತೂ ಈ ಮಕ್ಕಳಿಗಾಗಿಯೇ ಎಷ್ಟೋ ಪೋಷಕರು ಸ್ಮಾರ್ಟ್ ಫೋನ್ ಖರೀದಿಸಿ ನೀಡಲೇಬೇಕಾಯಿತು. ಮಕ್ಕಳು ಸ್ಮಾರ್ಟ್ ಫೋನ್ ಮುಖವನ್ನು ನೋಡುವಂತಾಯಿತು.
ಕಳೆದ ಒಂದು ವರ್ಷದಲ್ಲಿ 3.8 ಕೋಟಿ ಸ್ಮಾರ್ಟ್ ಫೋನ್ /ಟ್ಯಾಬ್‌ಗಳು ನಮ್ಮ ದೇಶದಲ್ಲಿ ಮಾರಾಟವಾಗಿವೆ. ಇಲ್ಲಿ ಆನ್‌ಲೈನ್ ಶಿಕ್ಷಣಕ್ಕಾಗಿ ಖರೀದಿ ಪ್ರಧಾನ ಪಾತ್ರವಹಿಸಿದೆ. ಆನ್‌ಲೈನ್ ಶಿಕ್ಷಣಕ್ಕೆ ತನ್ನದೇ ಆದ ವೈಶಿಷ್ಟ್ಯ ಸಾಧಕಗಳಿವೆ. ಅತ್ಯಂತ ಪರಿಣಿತ ಶಿಕ್ಷಣ ತಜ್ಞರಿಂದ, ಸರಳವಾಗಿ ಅರ್ಥವಾಗುವಂತಹ ಶಿಕ್ಷಣವನ್ನು ಕೋಟ್ಯಾಂತರ ಗ್ರಾಮೀಣ ಮಕ್ಕಳಿಗೆ ಇಂದು ಈ ಆನ್‌ಲೈನ್ ಶಿಕ್ಷಣದ ಮೂಲಕ ತಲುಪುತ್ತಿದೆ. ಅತ್ಯುತ್ತಮ ಸ್ಮಾರ್ಟ್ ಕ್ಲಾಸ್‌ಗಳಿಂದ ರೂಪಿತಗೊಂಡ ಎಷ್ಟೋ ಎಜುಕೇಶನ್ ಕಿಟ್‌ಗಳು ಕೈಗೆಟಕುವ ದರದಲ್ಲಿ ಸಾಮಾನ್ಯರಿಗೂ ತಲುಪುತ್ತಿದೆ. ಇದು ಎಲ್ಲವೂ ಸರಿ, ಆದರೆ ಮೊಬೈಲ್‌ನ ಒಳಿತು-ಕೆಡುಕುಗಳ ಅರಿವಿಲ್ಲದ ಮಕ್ಕಳು ಸ್ಮಾರ್ಟ್ ಫೋನ್ ಅನ್ನು ಹೇಗೆ ಸದ್ವಿನಿಯೋಗ ಮಾಡುತ್ತಾರೆಂದು ಪೋಷಕರು ಬಹಳ ಗಂಭೀರವಾಗಿ ಪರಿಗಣಿಸಬೇಕಾಗಿದೆ. ಒಂದು ಅಧ್ಯಯನದ ಪ್ರಕಾರ ಶೇ. 38.09 ರಷ್ಟು ಮಕ್ಕಳು ಸ್ಮಾರ್ಟ್ ಫೋನಿಗೆ ದಾಸರಾಗಿದ್ದಾರೆ.
ಸ್ಮಾರ್ಟ್ ಫೋನ್ ಹೊಂದಿದ ಓರ್ವ ಕಾಲೇಜು ವಿದ್ಯಾರ್ಥಿ ದಿನಕ್ಕೆ ಸುಮಾರು 150 ಬಾರಿ ಸ್ಮಾರ್ಟ್ ಫೋನ್ ಅನ್ನು ನೋಡುತ್ತಾನೆ. ಸ್ಮಾರ್ಟ್ ಫೋನ್ ಗೆ ಅಡಿಕ್ಟ್ ಆದ ಮಕ್ಕಳು ದಿನದಲ್ಲಿ 4 -7 ಗಂಟೆಗಳಷ್ಟು ಮೊಬೈಲ್‌ನಲ್ಲಿ ಕಾಲ ಕಳೆಯುತ್ತಾರೆ. ಶೇಕಡಾ 68 ರಷ್ಟು ಈ ಮಕ್ಕಳಿಗೆ ಸರಿಯಾಗಿ ನಿದ್ದೆ ಮಾಡಲಾಗುತ್ತಿಲ್ಲ, ಅಲ್ಲದೇ ಹಲವಾರು ಮಕ್ಕಳು ಮಾನಸಿಕ ಖಿನ್ನತೆಗೆ ಒಳಗಾಗಿದ್ದಾರೆ. ಇನ್ನೂ ಸಾಮಾಜಿಕ ಜಾಲತಾಣಗಳಲ್ಲಿ ತನ್ನನ್ನು ಪ್ರಭಾವಿಯಾಗಿ ಬಿಂಬಿಸಲು ಏನೆಲ್ಲಾ ಕಸರತ್ತು ಮಾಡುತ್ತಾರೆ. ಹೆಚ್ಚು ಲೈಕ್ಸ್, ವೈರಲ್, ಕಮೆಂಟ್‌ಗಳನ್ನು ಜೀವನದ ಸರ್ವಸ್ವ ಎಂದು ತಿಳಿದುಕೊಂಡಿರುತ್ತಾರೆ. ತನ್ನನ್ನು ಇನ್ನೊಬ್ಬರೊಂದಿಗೆ ಹೋಲಿಕೆ ಮಾಡಿಕೊಳ್ಳುತ್ತಾ, ಆತ್ಮವಿಶ್ವಾಸವನ್ನು ಕಳೆದುಕೊಳ್ಳುತ್ತಾ, ದುರ್ಬಲವಾಗುತ್ತಾ ಹೋಗುತ್ತಾರೆ.ವೈರಲ್ ಆಗಬೇಕೆಂದು ಆತ್ಮಹತ್ಯೆಯಂತಹ ದುಸ್ಸಾಹಸಕ್ಕೂ ಕೈ ಹಾಕಿ ಅದನ್ನು ಚಿತ್ರೀಕರಿಸಿ, ಪೋಸ್ಟ್ ಮಾಡುತ್ತಾ ಪ್ರಾಣಬಿಟ್ಟ ಸಂಗತಿಗಳೂ ಇದೆ ಎಂದಾದರೆ ಇದೊಂದು ಅತ್ಯಂತ ಆಘಾತಕಾರಿ ವಿಷಯವಾಗಿದೆ. ಇಷ್ಟೇ ಅಲ್ಲದೆ ಕೆಲವು ದುರ್ಜನರು ಸಾಮಾಜಿಕ ಜಾಲತಾಣಗಳನ್ನು ತಮ್ಮ ದುಷ್ಕೃತ್ಯಗಳಿಗೆ ಬಳಸಿ ಎಷ್ಟೋ ಮುಗ್ಧ ಮಕ್ಕಳ ಬಾಳನ್ನು ಹಾಳು ಮಾಡಿದ್ದಾರೆ. ಮಕ್ಕಳು ಸ್ಮಾರ್ಟ್ ಫೋನ್ ಬಳಸುವ ಸಂದರ್ಭಗಳಲ್ಲಿ ಪೋಷಕರ ಜವಾಬ್ದಾರಿ ಅತ್ಯಂತ ಗುರುತರವಾಗಿರಲಿ. ಪೋಷಕರ ಉತ್ತಮ ಕಣ್ಗಾವಲಿನಲ್ಲಿ ಶಿಕ್ಷಣ ಹಾಗೂ ಇತರ ಒಳ್ಳೆಯ ವಿಚಾರಗಳಿಗೆ ಸ್ಮಾರ್ಟ್ ಫೋನ್ ಬಳಸುವ ಮಕ್ಕಳು ಅತ್ಯುತ್ತಮವಾದ ಜ್ಞಾನವನ್ನು ಬೆಳೆಸಿಕೊಂಡಿರುತ್ತಾರೆ ಹಾಗೂ ತಮ್ಮ ಕಲಿಕೆ, ಕೌಶಲ್ಯ, ಬುದ್ಧಿಮತ್ತೆಯನ್ನು ಪರಿಣಾಮಕಾರಿಯಾಗಿ ಉನ್ನತೀಕರಿಸಿಕೊಂಡಿದ್ದಾರೆ. ಮಕ್ಕಳಿಗೆ ಉಸಿರುಗಟ್ಟುವಂತಹ ವಾತಾವರಣ ಸೃಷ್ಟಿಸದೇ, ಮನಸ್ಸಿಗೆ ಮುದ ನೀಡುವಂತಹ ರೀತಿಯಲ್ಲಿ ಮಕ್ಕಳು ಸ್ಮಾರ್ಟ್ ಫೋನ್ ಬಳಸುವಂತೆ ಪೋಷಕರು ಕಣ್ಣಿಡಬೇಕು.
ಆನ್‌ಲೈನ್ ಮೂಲಕ ಪಠ್ಯ ವಿಷಯಗಳ ಕಲಿಕೆಯ ಬಗ್ಗೆ ಹೆಚ್ಚು ಒಲವು ಮೂಡಿಸಲು ಮಕ್ಕಳೊಂದಿಗೆ ತಾವು ಪಾಲ್ಗೊಳ್ಳುತ್ತಾ ಪ್ರೋತ್ಸಾಹ ನೀಡಬೇಕು. ಒಳ್ಳೆಯ ಹೊಸ ವಿಷಯಗಳನ್ನು ಆನ್‌ಲೈನ್‌ನಲ್ಲಿ ಹುಡುಕಾಡುವ ಅಭ್ಯಾಸವನ್ನು ಮಕ್ಕಳಲ್ಲಿ ಬೆಳೆಸಬೇಕು. ಹೀಗೆ ಕಲಿಯುವಾಗ ಶಹಬ್ಬಾಸ್‌ಗಿರಿ ಕೊಡಬೇಕು. ಆನ್‌ಲೈನ್ ಕ್ಲಾಸ್ ನಡೆಯುವಾಗ ಪೂರಕವಾಗುವ ವ್ಯವಸ್ಥೆಯೊಂದಿಗೆ ಮಕ್ಕಳು ಸ್ವತಂತ್ರವಾಗಿ ಭಾಗವಹಿಸುವಂತೆ ಮಾಡಬೇಕು. ದಿನವಿಡೀ ಮಕ್ಕಳ ಕೈಯಲ್ಲಿ ಸ್ಮಾರ್ಟ್ ಫೋನ್ ಇರಲು ಎಂದಿಗೂ ಅವಕಾಶ ನೀಡಬಾರದು. ಆನ್‌ಲೈನ್ ಕ್ಲಾಸ್ ಹೊರತುಪಡಿಸಿ ಇತರ ಸಂದರ್ಭಗಳಲ್ಲಿ ಸ್ಮಾರ್ಟ್ ಫೋನ್ ಬಳಕೆಗೆ ಒಂದು ನಿಗದಿತ ಸಮಯ ಮಾತ್ರ ಮೀಸಲಿಡಬೇಕು. ಒಟ್ಟಿನಲ್ಲಿ ಒಳಿತು, ಕೆಡುಕುಗಳನ್ನು ಸಮರ್ಥವಾಗಿ ಅರಿಯುವಂತಹ ಪ್ರಬುದ್ಧತೆಗೆ ಮಕ್ಕಳು ಬರುವವರೆಗೂ ಅವರ ಸ್ಮಾರ್ಟ್ ಫೋನ್ ನ ಪೋಷಕರ ಕಣ್ಗಾವಲಿನಲ್ಲಿಯೇ ಇರಬೇಕು.

Facebook
Twitter
WhatsApp
LinkedIn
Telegram

Leave a Reply

Your email address will not be published. Required fields are marked *

Latest Updates