ಡಾ| ಎಲ್. ಎಚ್. ಮಂಜುನಾಥ್, ಕಾರ್ಯನಿರ್ವಾಹಕ ನಿರ್ದೇಶಕರು
ನಮ್ಮ ಸಂಸ್ಥೆಯ ನೆಚ್ಚಿನ ಅಧ್ಯಕ್ಷರು, ಧರ್ಮಸ್ಥಳದ ಪೂಜ್ಯ ವೀರೇಂದ್ರ ಹೆಗ್ಗಡೆಯವರು, ಪರಿಸರ ಪ್ರೇಮಿಗಳೆಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಪಶ್ಚಿಮಘಟ್ಟದ ತಪ್ಪಲಿನ ಧರ್ಮಸ್ಥಳದಲ್ಲಿ ಹುಟ್ಟಿ ಬೆಳೆದರೂ, ವರ್ಷಕ್ಕೆ ಒಂದೆರಡು ಬಾರಿಯಾದರೂ ಜನರಿಂದ ದೂರವಾಗಿ, ಪ್ರಕೃತಿಯ ಮಡಿಲಲ್ಲಿ ಕಳಸದ ಹತ್ತಿರದ ತಮ್ಮ ತೋಟದಲ್ಲಿ ಹಲವು ಸಮಯ ಕಳೆಯುವುದು ಪೂಜ್ಯರ ವಾಡಿಕೆ. ಅಲ್ಲದೆ ಜಾಗತಿಕ ಪ್ರವಾಸದ ಸಮಯದಲ್ಲಿ ಪ್ರಪಂಚದ ವಿವಿಧ ಪ್ರಾಕೃತಿಕ ಸ್ಥಳಗಳಲ್ಲಿ ಅವರು ಹೆಚ್ಚ್ಚಿನ ಸಮಯವನ್ನು ಕಳೆಯಲು ಇಚ್ಛಿಸುತ್ತಾರೆ. ಉತ್ತಮ ಛಾಯಾಗ್ರಾಹಕರಾಗಿರುವ ಅವರು ತೆಗೆದಿರುವ ಹೆಚ್ಚಿನ ಚಿತ್ರಗಳು ಪ್ರಕೃತಿ, ಪರಿಸರ, ವನ್ಯ ಜೀವಿಗಳ ಕುರಿತೇ ಆಗಿವೆ. ಪ್ರಕೃತಿ ಚಿಕಿತ್ಸಾ ಪ್ರಿಯರೂ ಆಗಿರುವ ಪೂಜ್ಯರು, ಇದಕ್ಕಾಗಿಯೇ ರಾಜ್ಯದಲ್ಲಿ ಮೂರು ಆಸ್ಪತ್ರೆಗಳನ್ನು ಕಟ್ಟಿಸಿದ್ದಾರೆ. ಅಲ್ಲದೆ ಕರ್ನಾಟಕ ಸರಕಾರವು ನಡೆಸುತ್ತಿರುವ ವಿವಿಧ ಸರಕಾರಿ ಆಸ್ಪತ್ರೆಗಳಲ್ಲಿ ಪ್ರಕೃತಿ ಚಿಕಿತ್ಸಾ ಕೇಂದ್ರಗಳನ್ನು ಅವರು ಸ್ಥಾಪಿಸಿರುತ್ತಾರೆ. ಅವರು ನಡೆಸುತ್ತಿರುವ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿಯೂ ಅರಣ್ಯ ಸಂವರ್ಧನೆಗೆ, ನೆಲಜಲ ರಕ್ಷಣೆಗೆ ವಿಶೇಷ ಕಾರ್ಯಕ್ರಮಗಳನ್ನು ರೂಪಿಸಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಯೋಜನೆಯ ಪ್ರಯತ್ನದಿಂದ ಸಾವಿರಾರು ಎಕರೆ ಬಂಜರು ಭೂಮಿಯು ಇಂದು ಹಸಿರಿನಿಂದ ನಳನಳಿಸುತ್ತಿದೆ. ಅದೇ ರೀತಿ ನಮ್ಮೂರು ನಮ್ಮ ಕೆರೆ ಕಾರ್ಯಕ್ರಮದನ್ವಯ 300 ಕ್ಕೂ ಮಿಕ್ಕಿದ ಕೆರೆಗಳನ್ನು ದುರಸ್ತಿಗೊಳಿಸಿ ಅಂತರ್ಜಲ ಹೆಚ್ಚಿಸುವಲ್ಲಿ ಕಾರ್ಯಕ್ರಮಗಳನ್ನು ಅನುಷ್ಠಾನಿಸಲಾಗಿದೆ.
ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿಯೂ ಪರಿಸರ ಸ್ನೇಹಿ ಕಾರ್ಯಕ್ರಮಗಳಿಗೆ ಪೂಜ್ಯರು ಹೆಚ್ಚಿನ ಮನ್ನಣೆಯನ್ನು ನೀಡಿರುತ್ತಾರೆ. ಪೂಜ್ಯರ ಬೀಡಿನ ಅಡುಗೆ ಮನೆಗೆ ಗೋಬರ್‌ಗ್ಯಾಸ್‌ನಿಂದ ಉತ್ಪಾದಿಸಲಾಗುವ ಅನಿಲವು ಇಂಧನವನ್ನು ಒದಗಿಸುತ್ತದೆ. ಧರ್ಮಸ್ಥಳದ ಸಮೀಪದ ತೋಟಗಳು ಸಂಪೂರ್ಣ ಸಾವಯವ ತೋಟಗಳಾಗಿ ಮಾರ್ಪಟ್ಟಿವೆ. ಧರ್ಮಸ್ಥಳದಲ್ಲಿ ಸೌರವಿದ್ಯುತ್ ಆಧಾರಿತ ದಾರಿ ದೀಪಗಳನ್ನೂ, ಬಿಸಿನೀರು ಉತ್ಪಾದನಾ ಘಟಕಗಳನ್ನೂ ಸ್ಥಾಪಿಸಲಾಗಿದೆ. ದೇವಸ್ಥಾನದಿಂದ ಅನತಿ ದೂರದಲ್ಲಿ ಹಣ್ಣಿನ ತೋಟವೊಂದನ್ನು ಪೂಜ್ಯರು ನಿರ್ಮಿಸಿದ್ದಾರೆ. ದೇವಸ್ಥಾನದ ಎದುರು ಭಾಗದಲ್ಲಿ ಉದ್ಯಾನವನವೊಂದನ್ನು ನಿರ್ಮಿಸಿ ತಮ್ಮ ಪರಿಸರ ಪ್ರೇಮವನ್ನು ಮೆರೆದಿದ್ದಾರೆ.
ಸುಮಾರು ಒಂದು ದಶಕದ ಹಿಂದೆ ರಾಜ್ಯಾದ್ಯಂತ ಸ್ವಚ್ಛತಾ ಅಭಿಯಾನಕ್ಕೆ ಪ್ರೇರಣೆ ನೀಡಿರುವ ಪೂಜ್ಯರು ಸ್ವಚ್ಛ ಶ್ರದ್ಧಾ ಕೇಂದ್ರವೆಂಬ ಪರಿಕಲ್ಪನೆಯಲ್ಲಿ ಸಾವಿರಾರು ಶ್ರದ್ಧಾ ಕೇಂದ್ರಗಳ ಸ್ವಚ್ಛತೆಗೆ ಕಾರಣೀಭೂತರಾಗಿದ್ದಾರೆ. ಸುಮಾರು ಐದು ವರ್ಷಗಳ ಹಿಂದೆ ಭೂಮಿ ತಾಯಿಯನ್ನು ರಕ್ಷಿಸುವ “ಭೂಮಿ ತಾಯಿ ರಕ್ಷಿಸಿ, ಮುಂದಿನ ಪೀಳಿಗೆಗೆ ವರ್ಗಾಯಿಸಿ” ಎಂಬ ಅಭಿಯಾನಕ್ಕೆ ಪೂಜ್ಯರು ಚಾಲನೆಯನ್ನು ಇತ್ತಿದ್ದಾರೆ. ಇದರನ್ವಯ ರಾಜ್ಯದ ವಿವಿದೆಡೆಗಳಲ್ಲಿ ಪರಿಸರ ಸ್ನೇಹಿ ಕೃಷಿ ಬದುಕಿಗೆ ಆದ್ಯತೆ ನೀಡುವ ಅನೇಕ ಪ್ರೇರಣಾ ಶಿಬಿರಗಳನ್ನೂ, ಕಾರ್ಯಕ್ರಮಗಳನ್ನೂ ನಡೆಸಿಕೊಡಲಾಗಿದೆ.
ಅರಣ್ಯಗಳಲ್ಲಿ ಹಣ್ಣಿನ ಗಿಡಗಳನ್ನು ಬೆಳೆಸುವುದು : ಹೆಚ್ಚುತ್ತಿರುವ ಜನಸಂಖ್ಯೆಯ ಹಿನ್ನಲೆಯಲ್ಲಿ ಮಾನವ, ಪರಿಸರ ಮತ್ತು ವನ್ಯಜೀವಿಗಳ ನಡುವೆ ಸಂಘರ್ಷಗಳು ಹೆಚ್ಚುತ್ತಿರುವುದನ್ನು ಗಮನಿಸಿದ ಪೂಜ್ಯರು ಈ ಅಸಮತೋಲನವನ್ನು ಸರಿಪಡಿಸಲು ನೂತನ ಕಾರ್ಯಕ್ರಮವೊಂದಕ್ಕೆ ಚಾಲನೆಯಿತ್ತಿದ್ದಾರೆ. ‘ಬದುಕಿರಿ ಮತ್ತು ಬದುಕಲು ಬಿಡಿ’ ಎಂಬ ಧ್ಯೇಯ ವಾಕ್ಯವುಳ್ಳ ಈ ಕಾರ್ಯಕ್ರಮದಲ್ಲಿ ಪೂಜ್ಯರು ಜನರಲ್ಲಿ ವನ್ಯಜೀವಿಗಳಿಗೆ ಅನುಕೂಲವಾಗುವ ಗಿಡಮರಗಳನ್ನು ಬೆಳೆಸುವರೇ ಮನವರಿಕೆ ಮಾಡಿಕೊಡುತ್ತಿದ್ದಾರೆ. ಇತ್ತೀಚೆಗಷ್ಟೆ ಈ ಸಂಬಂಧ ಕರ್ನಾಟಕ ಸರಕಾರದ ಅರಣ್ಯ ಸಚಿವರಿಗೆ ದೀರ್ಘ ಪತ್ರವೊಂದನ್ನು ಬರೆದ ಪೂಜ್ಯರು, ಈ ವರ್ಷದ ಮಳೆಗಾಲದ ಸಮಯದಲ್ಲಿ, ಅರಣ್ಯ ಪ್ರದೇಶಗಳಲ್ಲಿ ಹಣ್ಣಿನ ಗಿಡಗಳನ್ನು ಬೆಳೆಸಬೇಕೆಂಬ ಕೋರಿಕೆಯನ್ನು ಸಲ್ಲಿಸಿದ್ದರು. ಇದನ್ನು ಒಪ್ಪಿಕೊಂಡ ಅರಣ್ಯ ಸಚಿವ ಶ್ರೀ ಅರವಿಂದ ಲಿಂಬಾವಳಿಯವರು, ಅರಣ್ಯ ಇಲಾಖಾಧಿಕಾರಿಗಳ ಸಭೆಯನ್ನು ಧರ್ಮಸ್ಥಳದಲ್ಲಿಯೇ ಕರೆದು, ಅವರೊಡನೆ ಚರ್ಚಿಸಿ, ಅರಣ್ಯ ಪ್ರದೇಶಗಳಲ್ಲಿ ಹಣ್ಣಿನ ಗಿಡಗಳನ್ನು ನಾಟಿ ಮಾಡುವರೇ ಕ್ರಮಕೈಗೊಂಡಿರುತ್ತಾರೆ. ಅದರನ್ವಯ ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಈಗಾಗಲೇ ಸುಮಾರು 250 ಎಕ್ರೆಗೂ ಮಿಕ್ಕಿದ ಪ್ರದೇಶದಲ್ಲಿ ಹಣ್ಣಿನ ಸಸಿಗಳನ್ನು ಅಲ್ಲಲ್ಲಿ ನಾಟಿ ಮಾಡಲಾಗಿದೆ. ಸರಕಾರದ ಈ ಕಾರ್ಯಕ್ರಮಕ್ಕೆ ಪೂಜ್ಯರು ಪ್ರಾಯೋಜಿಸಿರುವ “ಶೌರ್ಯ” ವಿಪತ್ತು ಪಡೆಯ ಪದಾಧಿಕಾರಿಗಳು ಕೈಜೋಡಿಸಿದ್ದಾರೆ. ಅರಣ್ಯ ಪ್ರದೇಶಗಳಲ್ಲಿ ಸಣ್ಣಪುಟ್ಟ ಪ್ರಾಣಿಗಳಾದ ಮೊಲ, ಮಂಗ, ಕಡವೆ, ಜಿಂಕೆ ಮುಂತಾದವುಗಳಿಗೆ ಆಹಾರ ಒದಗಿಸಲು ಅನುಕೂಲವಾಗುವಂತೆ ನೇರಳೆ ಹಣ್ಣು, ಪುನರ್ಪುಳಿ ಮತ್ತಿತರ ಅರಣ್ಯ ಫಲಗಳ ಸಸಿಗಳನ್ನು ನಾಟಿ ಮಾಡಲಾಗಿದೆ. ಜೊತೆಯಲ್ಲಿಯೇ ಸೌತೆಕಾಯಿ, ಕುಂಬಳಕಾಯಿ ಮತ್ತಿತರ ಬಳ್ಳಿಯ ಬೀಜಗಳನ್ನೂ ನಾಟಿ ಮಾಡಿ ಇವುಗಳಿಂದ ಬರುವ ಫಲಗಳು ವನ್ಯಜೀವಿಗಳಿಗೆ ಅನುಕೂಲವಾಗಲೆಂದು ಸಂಕಲ್ಪಿಸಲಾಗಿದೆ. ಅದೇ ರೀತಿ ದೊಡ್ಡ ದೊಡ್ಡ ಪ್ರಾಣಿಗಳಾದ ಆನೆ, ಕಾಡಮ್ಮೆ ಮುಂತಾದವುಗಳಿಗೆ ಅನುಕೂಲವಾಗುವಂತೆ ಹಸಿರು ಸಂಪತ್ತಿರುವ ವೃಕ್ಷಗಳ ಸಸಿಗಳನ್ನು ನಾಟಿ ಮಾಡಲು ಪೂಜ್ಯರು ಕರೆ ಇತ್ತಿದ್ದಾರೆ. ಮಾತ್ರವಲ್ಲದೆ ತಾವೇ ಖುದ್ದಾಗಿ ಚಾರ್ಮಾಡಿ ಮತ್ತು ಕೊಟ್ಟಿಗೆಹಾರದ ಕಾಡುಗಳಿಗೆ ತೆರಳಿ ಸಸಿ ನಾಟಿ ಮಾಡಿದ್ದಾರೆ. ಅಲ್ಪ ಸಮಯದಲ್ಲಿಯೇ ಪೂಜ್ಯರ ಈ ಪ್ರಯತ್ನಗಳು ಜನಪ್ರತಿನಿಧಿಗಳ, ಅರಣ್ಯ ಇಲಾಖೆಯ, ಯೋಜನೆಯ ಕಾರ್ಯಕರ್ತರ, ಫಲಾನುಭವಿಗಳ, ಮತ್ತಿತರ ಸ್ವಯಂಸೇವಾ ಸಂಸ್ಥೆಗಳ ಗಮನ ಸೆಳೆದಿವೆ.
ಇಷ್ಟಕ್ಕೇ ಸುಮ್ಮನಾಗದೇ ಪೂಜ್ಯರು, ದೇಶದ ವಿವಿಧ ರಾಜ್ಯಗಳ ಅರಣ್ಯ ಸಚಿವರುಗಳಿಗೆ ಪತ್ರವನ್ನು ಬರೆದಿದ್ದು, ಮಾನವ, ಪ್ರಕೃತಿ ಹಾಗೂ ಪ್ರಾಣಿಗಳ ನಡುವೆ ಉಂಟಾಗಿರುವ ಸಂಘರ್ಷಗಳ ಬಗ್ಗೆ ಮನೋಜ್ಞವಾಗಿ ವಿವರಿಸಿರುವುದಲ್ಲದೆ, ಕೈಗೊಳ್ಳಬೇಕಾದ ನಿವಾರಣೋಪಾಯಗಳ ಬಗ್ಗೆ ದೀರ್ಘವಾಗಿ ಚರ್ಚಿಸಿರುತ್ತಾರೆ. ಭಾರತ ದೇಶದ ಸುಂದರ ಪರಿಸರವನ್ನೂ, ಪ್ರಾಣಿಗಳನ್ನೂ, ಉಳಿಸಿ ಬೆಳೆಸಬೇಕೆಂಬ ಪೂಜ್ಯರ ಕಳಕಳಿಯು ಈ ಪ್ರಯತ್ನಗಳಲ್ಲಿ ಎದ್ದು ಕಾಣುತ್ತದೆ. ಮನುಷ್ಯರೆಲ್ಲರೂ ಉತ್ತಮ ಜೀವನ ನಡೆಸಬೇಕೆಂದು ಬಯಸುವಂತೆಯೇ ವನ್ಯಜೀವಿಗಳನ್ನೂ ಮತ್ತು ಪರಿಸರವನ್ನೂ ಉಳಿಸಿ ಬೆಳೆಸಬೇಕೆಂಬುದೇ ಪೂಜ್ಯರ ಘೋಷವಾಕ್ಯದ ಆಶಯ. ನಾಗರಿಕ ಸಮಾಜವು ಪ್ರಗತಿ ಹೊಂದುವುದರ ಜೊತೆಯಲ್ಲಿಯೇ ಅರಣ್ಯವನ್ನು ರಕ್ಷಿಸಬೇಕು. ಅರಣ್ಯದಲ್ಲಿರುವ ಪಕ್ಷಿ, ಪ್ರಾಣಿಗಳ ಕನಿಷ್ಠ ಅಗತ್ಯತೆಗಳನ್ನಾದರೂ ಪೂರೈಸುವಲ್ಲಿ ನಾವೆಲ್ಲರೂ ಶ್ರಮಿಸಬೇಕೆಂದು ಪೂಜ್ಯರು ನಿರೀಕ್ಷಿಸಿರುತ್ತಾರೆ.
ಆದುದರಿಂದ ನನ್ನೆಲ್ಲ ಸಹೋದರ ಸಹೋದರಿಯರೆ, ಪೂಜ್ಯರ ಈ ನೂತನ ಕಾರ್ಯಕ್ರಮದಲ್ಲಿ ನಾವೆಲ್ಲರೂ ಕೈಜೋಡಿಸೋಣ. ನಮ್ಮ ಕೃಷಿ ಭೂಮಿಯ ಸುತ್ತಮುತ್ತಲಿನಲ್ಲಿ ವನ್ಯಜೀವಿಗಳಿಗೆ ಅನುಕೂಲವಾಗುವ ಹಣ್ಣಿನ ಗಿಡಗಳನ್ನು ಬೆಳೆಸಲು ಸಂಕಲ್ಪಿಸೋಣ. ಇದರಿಂದಾಗಿ ವನ್ಯಜೀವಿಗಳು ನಮ್ಮ ಕೃಷಿಯ ಮೇಲೆ ಆಕ್ರಮಣ ಮಾಡುವುದು ನಿಲ್ಲುತ್ತದೆಯಲ್ಲದೆ, ವನ್ಯಜೀವಿಗಳಿಗೆ ಉತ್ತಮ ಆಹಾರವು ಲಭ್ಯವಾಗುತ್ತದೆ. ‘ಬದುಕಿರಿ ಮತ್ತು ಬದುಕಲು ಬಿಡಿ’ ಇದು ಮಾನವರ ಕುರಿತಾಗಿ ಮಾತ್ರವಲ್ಲ, ಪರಿಸರ ಮತ್ತು ವನ್ಯಜೀವಿಗಳಿಗೂ ಅನ್ವಯವಾಗುತ್ತದೆ ಎಂಬುದನ್ನು ನಾವೆಲ್ಲರೂ ಅರ್ಥ ಮಾಡಿಕೊಳ್ಳೋಣ ಮತ್ತು ಪೂಜ್ಯರ ಮಾರ್ಗದರ್ಶನದಂತೆ ಮುಂಬರುವ ದಿನಗಳಲ್ಲಿ ಮಾನವ, ಪ್ರಕೃತಿ ಮತ್ತು ವನ್ಯಜೀವಿಗಳ ಸಂಘರ್ಷಗಳನ್ನು ತಗ್ಗಿಸುವಲ್ಲಿ ಕಾರ್ಯಕ್ರಮಗಳನ್ನು ಅನುಷ್ಠಾನಿಸೋಣ.