ಡಾ| ಎಲ್. ಎಚ್. ಮಂಜುನಾಥ್, ಕಾರ್ಯನಿರ್ವಾಹಕ ನಿರ್ದೇಶಕರು
ನೀರು ಬದುಕಿನ ಜೀವಾಳ. ಅನ್ಯಗ್ರಹಗಳ ಅನ್ವೇಷಣೆಗೆ ಹೊರಡುವ ಮಾನವ ಮೊದಲು ಹುಡುಕುವುದು ನೀರನ್ನೇ. ಅನಾದಿ ಕಾಲದಿಂದ ನೀರಿನ ಪ್ರಾಮುಖ್ಯತೆ ಕುರಿತಂತೆ ಎಲ್ಲ ಧರ್ಮಗಳಲ್ಲಿಯೂ ವಿವರಿಸಲಾಗಿದೆ. ಪ್ರಾಕೃತಿಕವಾಗಿ ದೊರೆಯುವ ನೀರು ಒಂದು ಕಾಲದಲ್ಲಿ ಯಥೇಚ್ಛವಾಗಿ ಇದ್ದರೂ ಈ ಶತಮಾನದಲ್ಲಿ ನೀರಿನ ಕೊರತೆ ಹೆಚ್ಚಾಗಿ ಕಾಣುತ್ತಿದೆ. ಉಚಿತವಾಗಿ ದೊರೆಯುತ್ತಿದ್ದ ನೀರಿಗೆ ಜನರು ಹಣ ಪಾವತಿಸತೊಡಗಿ ದಶಕಗಳೇ ಕಳೆದಿವೆ. ಶಹರಗಳಲ್ಲಿ ಬಡವರು ಒಂದು ಬಕೆಟ್ ನೀರಿಗಾಗಿ ರೂ.10ರವರೆಗೆ ಪಾವತಿಸುತ್ತಾರೆಂದರೆ ಅದನ್ನು ನಂಬಲೇಬೇಕು.
ಕರ್ನಾಟಕ ರಾಜ್ಯ ದೇಶದಲ್ಲಿಯೇ ಅತೀ ಹೆಚ್ಚು ಬರಡು ಪ್ರದೇಶವನ್ನು ಹೊಂದಿರುವ ರಾಜ್ಯಗಳಲ್ಲಿ ಎರಡನೆಯ ಸ್ಥಾನವನ್ನು ಪಡೆದಿದೆ. ಕೃಷಿಭೂಮಿಯ ಹೆಚ್ಚಳ, ಏರುತ್ತಿರುವ ಜನಸಂಖ್ಯೆ ನಿರ್ವಹಣೆ ಇದಕ್ಕಾಗಿ ನಾವು ನೀರನ್ನು ಹೆಚ್ಚಿಸುವ ಮತ್ತು ರಕ್ಷಿಸುವ ಕೆಲಸಕ್ಕೆ ಕೈಹಾಕಲೇಬೇಕಿದೆ. ಗ್ರಾಮೀಣ ಪ್ರದೇಶಗಳಲ್ಲಿ ನೀರನ್ನು ಹಿಡಿದಿಟ್ಟುಕೊಳ್ಳುವ ಕೆರೆಗಳೇ ನೀರನ್ನು ರಕ್ಷಿಸುವ ಸಾಧನಗಳಾಗಿವೆ. ಸುತ್ತಮುತ್ತಲಿನಿಂದ ಮಳೆಗಾಲದಲ್ಲಿ ನೀರು ಕೆರೆಗಳಿಗೆ ಸುಲಲಿತವಾಗಿ ಹರಿಯುವಂತೆ ನೂರಾರು ವರ್ಷಗಳ ಹಿಂದಿನಿಂದ ರಾಜಕಾಲುವೆಗಳನ್ನು ನಿರ್ಮಿಸಿಕೊಂಡು ಬರಲಾಗಿದೆ. ಅಂದಿನ ಕಾಲದ ನಿಯಮಗಳನ್ನು ಧಿಕ್ಕರಿಸಿರುವ ಇಂದಿನ ನಾಗರಿಕ ಸಮಾಜ ರಾಜಕಾಲುವೆ ಮತ್ತು ಕೆರೆಗಳನ್ನು ಅತಿಕ್ರಮಣ ಮಾಡಿ ನೀರಿಗೊಂದು ಜಾಗವಿಲ್ಲದಂತೆ ಮಾಡಿರುವುದರಿಂದ ನಮ್ಮ ರಾಜ್ಯ ವರ್ಷದಿಂದ ವರ್ಷಕ್ಕೆ ಹೆಚ್ಚು ಹೆಚ್ಚು ಬರಗಾಲ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಇನ್ನು ಗ್ರಾಮಗಳಲ್ಲಿ ನಿರ್ಮಿಸಲಾದ ಊರ ಕೆರೆಗಳು, ಪುಷ್ಕರಣಿಗಳು ಜನರ ಉಪೇಕ್ಷೆಯಿಂದ ಕೊಳಚೆಗುಂಡಿಗಳಾಗಿರುವ ಉದಾಹರಣೆಗಳಿವೆ.
ಇವೆಲ್ಲವನ್ನೂ ಮನಗಂಡ ಮಾತೃಶ್ರೀ ಹೇಮಾವತಿ ವೀ. ಹೆಗ್ಗಡೆಯವರ ಆಶಯದಂತೆ ಜನರ ಸಹಭಾಗಿತ್ವದಲ್ಲಿ ಊರ ಕೆರೆಗಳನ್ನು ಪುನಶ್ಚೇತನಗೊಳಿಸುವ ಕಾರ್ಯಕ್ರಮವನ್ನು ಯೋಜನೆಯು ಕಳೆದ ಐದು ವರ್ಷಗಳಿಂದ ನಡೆಸಿಕೊಂಡು ಬಂದಿದೆ. ಆದರೆ ರಾಜಕಾಲುವೆಗಳು ಅತಿಕ್ರಮಣವಾಗಿರುವುದರಿಂದ ಕೆರೆಗಳನ್ನು ದುರಸ್ತಿಗೊಳಿಸಿದರೂ ಕೆರೆಗೇ ನೀರೇ ಬಾರದಂತಹ ದುಸ್ಥಿತಿ ಹಲವಾರು ಕಡೆಗಳಲ್ಲಿ ಕಂಡುಬರುತ್ತದೆ.
‘ಈ ಭೂಮಿಯನ್ನು ನಾವು ನಮ್ಮ ಮೊಮ್ಮಕ್ಕಳಿಂದ ಎರವಲು ಪಡೆದಿದ್ದೇವೆ. ಅದನ್ನು ಮೊಮ್ಮಕ್ಕಳಿಗೆ ವರ್ಗಾಯಿಸುವಾಗ ಸಮೃದ್ಧಿಯನ್ನಾಗಿಸಿ ವರ್ಗಾಯಿಸಬೇಕೆಂದು’ ಶ್ರೀ ಹೆಗ್ಗಡೆಯವರು ಆಗಾಗ್ಗೆ ನುಡಿಯುತ್ತಿರುತ್ತಾರೆ. ಈ ಹಿನ್ನೆಲೆಯಲ್ಲಿ ಸಾಮಾನ್ಯ ಜನರು ತಮ್ಮ ಊರ ಕೆರೆ – ಕಾಲುವೆಗಳನ್ನು ಪುನಶ್ಚೇತನಗೊಳಿಸಿ ರಕ್ಷಿಸಬೇಕಾದ ಅಗತ್ಯ ಬಹಳವಾಗಿದೆ. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಈ ಕಾರ್ಯಕ್ರಮಕ್ಕೆ ವಿಶೇಷ ಪ್ರಾಧಾನ್ಯತೆಯನ್ನು ನೀಡಿ ಈ ವರ್ಷ ಜನಸಹಭಾಗಿತ್ವದಲ್ಲಿ 120 ಕೆರೆಗಳನ್ನು ಪುನಶ್ಚೇತನಗೊಳಿಸಲು ಪಣ ತೊಟ್ಟಿದೆ. ಕೆರೆ ವಿಷಯದಲ್ಲಿ ರಾಜಿಯೂ ಮಾಡಿಕೊಳ್ಳಬಾರದು, ರಾಜಕೀಯವೂ ಇರಬಾರದು. ಅತಿಕ್ರಮಣ ಮಾಡಿಕೊಂಡವರಿದ್ದರೆ ಅವರಿಗೆ ಕೆರೆ ಕೈಂಕರ್ಯದ ಮಹತ್ವವನ್ನು ತಿಳಿಸಿ ತೆರವುಗೊಳಿಸುವುದು ಊರಿನವರ ಜವಾಬ್ದಾರಿಯಾಗಿದೆ. ಕೆರೆಗಳನ್ನು ಕೊಳಚೆಗುಂಡಿಗಳಾಗದಂತೆ ನೋಡಿಕೊಳ್ಳುವುದೂ ಊರಿನ ಜವಾಬ್ದಾರಿಯೇ ಆಗಿದೆ. ಕಳೆದ ವರ್ಷ ಉತ್ತಮ ಮಳೆಯಾಗಿದ್ದರೂ ಕೆರೆಗಳು ಭದ್ರವಾಗಿದ್ದರೆ ಮಾತ್ರ ಈ ನೀರನ್ನು ರಕ್ಷಿಸಿಕೊಳ್ಳಲು ಸಾಧ್ಯ ಎಂಬುದನ್ನು ನಾವಿಂದು ಮನಗಾಣಬೇಕಿದೆ. ಆದುದರಿಂದ ಮಿತ್ರರೇ, ಕೆರೆ ಕೆಲಸವನ್ನು ಯಾರೇ ಮಾಡಲಿ ಅವರನ್ನು ಬೆಂಬಲಿಸೋಣ. ಕೆರೆಗೆ ಮೀಸಲಿಟ್ಟ ಹಣ ದುರುಪಯೋಗವಾಗದಂತೆ ನೋಡಿಕೊಳ್ಳೋಣ. ಕೆರೆ ಭೂಮಿಯನ್ನು ರಕ್ಷಿಸುವತ್ತ ಜನರ ಮನವೊಲಿಸೋಣ. ಕರ್ನಾಟಕ ರಾಜ್ಯವನ್ನು ಸಮೃದ್ಧಿಗೊಳಿಸೋಣ.