ಆರೋಗ್ಯವೇ ಭಾಗ್ಯ

ಡಾ| ಎಲ್. ಎಚ್. ಮಂಜುನಾಥ್, ಕಾರ್ಯನಿರ್ವಾಹಕ ನಿರ್ದೇಶಕರು

ಇತ್ತೀಚಿನ ದಿನಗಳಲ್ಲಿ ಆಸ್ಪತ್ರೆಯ ವೆಚ್ಚಗಳು ಬಹಳಷ್ಟು ಹೆಚ್ಚಾಗುತ್ತಿವೆ. ಅನಾರೋಗ್ಯ ಪೀಡಿತರಾಗಿ ಅಥವಾ ಅಪಘಾತಕ್ಕೊಳಗಾಗಿ ಖಾಸಗಿ ಆಸ್ಪತ್ರೆಗಳಿಗೆ ದಾಖಲಾದರೆ ಗುಣಮುಖರಾದರೂ ಆಸ್ಪತ್ರೆಯ ಬಿಲ್ಲುಗಳು ನಮ್ಮನ್ನು ಮತ್ತೊಮ್ಮೆ ಬಡವರನ್ನಾಗಿಸುತ್ತದೆ. ಇತ್ತೀಚಿನ ದಿನಗಳಲ್ಲಿ ವೈದ್ಯಕೀಯ ಚಿಕಿತ್ಸೆಯಲ್ಲಿ ತಂತ್ರಜ್ಞಾನಗಳು ಹೆಚ್ಚಾಗಿರುವುದರಿಂದ ಗಂಭೀರ ಕಾಯಿಲೆಗಳಿಗೂ ಚಿಕಿತ್ಸೆ ದೊರೆಯುತ್ತದೆ. ಆದರೆ ಈ ಚಿಕಿತ್ಸೆ ವೆಚ್ಚಗಳನ್ನು ಭರಿಸಲು ಸಾಮಾನ್ಯರಿಗೆ ಸಾಧ್ಯವಿಲ್ಲ. ಇತ್ತೀಚೆಗಷ್ಟೇ ಒಬ್ಬ ರೋಗಿಯ ಆಸ್ಪತ್ರೆಯ ಚಿಕಿತ್ಸಾ ಎಸ್ಟಿಮೇಟ್ ರೂ. 55 ಲಕ್ಷ ಮೊತ್ತ ಆದ ಬಗ್ಗೆ ವರದಿಯನ್ನು ನಮ್ಮ ಫಲಾನುಭವಿಯೊಬ್ಬರು ಕಳುಹಿಸಿಕೊಟ್ಟಿದ್ದರು. ದುಡಿಯುವ ಅಧಿಕಾರಿಯೊಬ್ಬನ ಜೀವಮಾನದ ಆದಾಯವೇ ಇಷ್ಟಿಲ್ಲದಿರುವಾಗ ಈ ಮೊತ್ತವನ್ನು ಪಾವತಿಸಿ ಯಾರಿಗಾದರೂ ಹೀಗೆ ಚಿಕಿತ್ಸೆ ಕೊಡಿಸಲು ಸಾಧ್ಯವೇ? ಇನ್ನು ಅನೇಕರಿಗೆ ಸರಕಾರಿ ಆಸ್ಪತ್ರೆಗಳಲ್ಲಿ ಸೌಲಭ್ಯ ದೊರೆಯುತ್ತಿದ್ದರೂ ಖಾಸಗಿ ಆಸ್ಪತ್ರೆಗಳ ವ್ಯಾಮೋಹ. ಒಂದು ಸಾಮಾನ್ಯ ಹೆರಿಗೆ ಸರಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ಆಗುತ್ತದೆಯಾದರೆ ಖಾಸಗಿ ಆಸ್ಪತ್ರೆಯಲ್ಲಿ ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡಬೇಕಾಗುತ್ತದೆ. ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮಾಡಿಸುವುದೆಂದರೆ ಅವಮಾನ ಎಂದು ತಿಳಿದಿರಬಹುದು. ಆದರೆ ಸರಕಾರಿ ಆಸ್ಪತ್ರೆಗಳಲ್ಲಿಯೂ ಉತ್ತಮ ಸೌಲಭ್ಯಗಳಿದ್ದು, ಸ್ವಲ್ಪ ತಾಳ್ಮೆಯಿದ್ದರೆ ಉತ್ತಮ ಚಿಕಿತ್ಸೆಯನ್ನು ಪಡೆಯಬಹುದಾಗಿದೆ. ಇನ್ನೂ ಕೆಲವರಿಗೆ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳುಂಟಾದರೂ ದೊಡ್ಡ ದೊಡ್ಡ ಪರೀಕ್ಷೆಗಳನ್ನು ಮಾಡಿಸುವ ಹುಚ್ಚು. ಇನ್ನು ಕೆಲವರಿಗೆ ಸಣ್ಣಪುಟ್ಟ ಕಾಯಿಲೆಗಳುಂಟಾದರೂ ಗ್ಲೂಕೋಸ್ ಹಾಕಿಸಬೇಕು, ಇಂಜೆಕ್ಷನ್ ಕೊಡಿಸಿಕೊಳ್ಳಬೇಕೆಂಬ ಹಂಬಲ.
ಇವೆಲ್ಲದರ ನಡುವೆ ತಮಗೆ ಬಂದಿರುವ ರೋಗದ ಕುರಿತಂತೆ ಮೊಬೈಲ್‍ನ ಗೂಗಲ್‍ನಲ್ಲಿ ಕೇಳಿ ಈ ಕುರಿತಂತೆ ಡಾಕ್ಟರಿಗೆ ಸಲಹೆ ನೀಡುವ ಅನೇಕರು ನಮ್ಮ ನಡುವೆ ಇದ್ದಾರೆ.
ಆರೋಗ್ಯವಂತ ಸಮಾಜ ನಿರ್ಮಾಣವಾಗಬೇಕೆಂದರೆ ನಾವು ಈ ರೀತಿಯ ತಪ್ಪು ಕಲ್ಪನೆಗಳಿಂದ ಹೊರಗೆ ಬರಬೇಕಾಗಿದೆ. ಮೊದಲಾಗಿ ನಮ್ಮ ಆರೋಗ್ಯದ ಬಗ್ಗೆ ಎಚ್ಚರ ಇಟ್ಟುಕೊಳ್ಳಬೇಕು. ಯೋಜನೆಯ ಅನೇಕ ಕಾರ್ಯಕರ್ತರು ಸಣ್ಣ ವಯಸ್ಸಿನಲ್ಲಿಯೇ ಬಿ.ಪಿ., ಶುಗರ್, ಹೈಪರ್ ಅಸಿಡಿಟಿ ಮುಂತಾದ ಗಂಭೀರ ಕಾಯಿಲೆಗಳಿಗೆ ಒಳಗಾಗುತ್ತಿದ್ದಾರೆ. ನಿಯಮಿತವಾದ ಆಹಾರ ಸೇವನೆ, ಸಮಯಕ್ಕೆ ಸರಿಯಾಗಿ ಊಟ, ನಿದ್ದೆ ಮಾಡುವುದು, 30 ವರ್ಷದ ಬಳಿಕ ಕಾಲಕಾಲಕ್ಕೆ (ಮನೆಯಲ್ಲಿಯೇ) ಬಿ.ಪಿ., ಶುಗರ್ ಪರೀಕ್ಷೆ ಮಾಡಿಕೊಳ್ಳುವುದು, ದಿನನಿತ್ಯ ನಿಯಮಿತ ವ್ಯಾಯಾಮ ಇವುಗಳಿಂದ ಗಂಭೀರ ಕಾಯಿಲೆಗಳಾಗದಂತೆ ರಕ್ಷಿಸಿಕೊಳ್ಳಬಹುದು. ಕೆಲಸ ಮಾಡುವಾಗ ಅನಗತ್ಯವಾಗಿ ಉದ್ರೇಕಗೊಳ್ಳುವುದು, ಸಿಟ್ಟು ಮಾಡಿಕೊಳ್ಳುವುದು, ಸಣ್ಣ ಸಮಸ್ಯೆಗೆ ಹೈಪರಾಗಿ ವರ್ತಿಸುವುದು ಇವುಗಳನ್ನು ನಿಯಂತ್ರಿಸಬೇಕಾಗಿದೆ.
ವಾಹನ ಚಾಲನೆ ಸಮಯದಲ್ಲಿ ನಿಯಮ ಪ್ರಕಾರ ವಾಹನವನ್ನು ಚಲಾಯಿಸುವುದು, ರಸ್ತೆಯ ಮೇಲೆ ಗಮನವಿಡುವುದು, ವಾಹನಗಳಿಗೆ ಸರಿಯಾದ ರೀತಿಯಲ್ಲಿ ವಿಮೆ ಮಾಡಿಸುವುದು ಇವುಗಳಿಂದಲೂ ನಮ್ಮ ಆರೋಗ್ಯ ಸಮಸ್ಯೆಗಳನ್ನು ಮತ್ತು ಅದರಿಂದಾಗುವ ಅನಾಹುತಗಳನ್ನು ತಪ್ಪಿಸಿಕೊಳ್ಳಬಹುದಾಗಿದೆ.
ಆಸ್ಪತ್ರೆಯ ಬಿಲ್ಲುಗಳಿಂದ ಉಂಟಾಗುವ ನಷ್ಟವನ್ನು ತಪ್ಪಿಸಿಕೊಳ್ಳಲು ಆರೋಗ್ಯ ವಿಮೆ ಮಾಡಿಕೊಳ್ಳುವುದು ಉತ್ತಮ ಉಪಾಯವಾಗಿದೆ. ಇದೀಗ ಯೋಜನೆಯ ವತಿಯಿಂದ ‘ಸಂಪೂರ್ಣ ಸುರಕ್ಷಾ’ ಮತ್ತು ‘ಆರೋಗ್ಯ ರಕ್ಷಾ’ ಎಂಬ ಎರಡು ಉತ್ಕøಷ್ಟ ಯೋಜನೆಗಳನ್ನು ಹೊರತಂದಿದ್ದು, ಯೋಜನೆಯ ಕಾರ್ಯಕರ್ತರು, ಸದಸ್ಯರು ಮತ್ತು ಅವರ ಕುಟುಂಬದವರು ಇದರ ಲಾಭವನ್ನು ಪಡೆಯಬಹುದಾಗಿದೆ (ಸಂಚಿಕೆಯೊಳಗಿನ ವಿವರವನ್ನು ಗಮನಿಸಿರಿ). ಜೊತೆಗೆ ಸಾಧ್ಯವಾದಷ್ಟು ತಮ್ಮ ಆರೋಗ್ಯದ ಬಗ್ಗೆ ಗಮನ ಇಟ್ಟುಕೊಳ್ಳುವುದು, ಸಣ್ಣಪುಟ್ಟ ಕಾಯಿಲೆಗಳಿಗೆ ತಮ್ಮ ಮನೆಯ ವೈದ್ಯರಿಂದ ಸಲಹೆ ಪಡೆದುಕೊಳ್ಳುವುದು. ಸಾಧ್ಯವಿದ್ದಷ್ಟರ ಮಟ್ಟಿಗೆ ಸರಕಾರಿ ಆಸ್ಪತ್ರೆಯ ಪ್ರಯೋಜನ ಪಡೆದುಕೊಳ್ಳುವುದು. ಇವುಗಳಿಂದ ಖರ್ಚನ್ನು ತಡೆಗಟ್ಟಬಹುದಾಗಿದೆ. ಒಂದೊಮ್ಮೆ ಗಂಭೀರ ಕಾಯಿಲೆ ಬಂದಲ್ಲಿ ಇಬ್ಬರು, ಮೂವರು ತಜ್ಞ ವೈದ್ಯರುಗಳಿಂದ ಸಲಹೆ ಪಡೆದುಕೊಂಡು ನಂತರವೇ ಚಿಕಿತ್ಸೆ ಪಡೆಯುವುದರಿಂದ ಖರ್ಚನ್ನು ಕಡಿಮೆ ಮಾಡಿಕೊಳ್ಳುವುದಲ್ಲದೆ, ಉತ್ತಮ ಚಿಕಿತ್ಸೆಯನ್ನು ಪಡೆಯಬಹುದಾಗಿದೆ.
ಪೌಷ್ಠಿಕ ಆಹಾರ, ನಿಯಮಿತ ವ್ಯಾಯಾಮ, ತನ್ನ ಶರೀರದಲ್ಲಾಗುತ್ತಿರುವ ಬದಲಾವಣೆಗಳ ಕುರಿತು ಗಮನ, ಸಲಹೆ ಪಡೆದುಕೊಳ್ಳಲು, ಸರಳ ವೈದ್ಯರ ಸ್ನೇಹ, ಗಂಭೀರ ಸಮಸ್ಯೆಯುಂಟಾದರೆ ಚಿಕಿತ್ಸೆ ಪಡೆಯಲು ಆರೋಗ್ಯ ವಿಮೆ, ಇವು ನೆಮ್ಮದಿಯ ಸೂತ್ರಗಳು. ಇವುಗಳನ್ನು ಪಾಲಿಸುತ್ತೀರೆಂದು ಆಶಿಸುತ್ತೇನೆ.

Facebook
Twitter
WhatsApp
LinkedIn
Telegram

Leave a Reply

Your email address will not be published. Required fields are marked *

Latest Updates