ಡಾ| ಸಿದ್ಧಲಿಂಗಸ್ವಾಮಿ ಹಿರೇಮಠ
ಪಶು ವೈದ್ಯಕೀಯ ಮಹಾವಿದ್ಯಾಲಯ ಗದಗ
ಈಗ ಎಲ್ಲೆಲ್ಲೂ ಲಸಿಕೆಯದ್ದೇ ಸುದ್ದಿ. ಲಸಿಕೆಯೆಂದರೆ ರೋಗವೊಂದರ ವಿರುದ್ಧ ಪ್ರಾಣಿಯ (ಮಾನವನ) ದೇಹದಲ್ಲಿ ನಿರೋಧಕ ಶಕ್ತಿ ಬೆಳೆಸುವ ಜೈವಿಕ ಪದಾರ್ಥ. ಸಾಮಾನ್ಯವಾಗಿ ಲಸಿಕೆಗಳನ್ನು ಪ್ರಾಣಿಗಳಿಗೆ ಇಂಜೆಕ್ಷನ್ ರೂಪದಲ್ಲಿ ನೀಡಲಾಗುತ್ತದೆ. ಹೇಗೆ ಚಿಕ್ಕಮಕ್ಕಳಿಗೆ ಕಡ್ಡಾಯವಾಗಿ ಲಸಿಕೆಗಳನ್ನು ಹಾಕಿಸಲಾಗುತ್ತದೆಯೋ, ಅದೇ ರೀತಿ ಜಾನುವಾರುಗಳಿಗೆ ಪ್ರತಿ ವರ್ಷ ಕೆಲವು ಲಸಿಕೆಗಳನ್ನು ಒಂದು ಅಥವಾ ಎರಡು ಬಾರಿ ಹಾಕಿಸಲೇಬೇಕು.
ಜಾನುವಾರುಗಳಲ್ಲಿ ಬ್ಯಾಕ್ಟೀರಿಯಾ, ವೈರಸ್‌ಗಳಿಂದ ಉಂಟಾಗುವ ಹಲವಾರು ರೋಗಗಳಿವೆ. ಕೆಲವು ರೋಗಗಳು ಸಾಂಕ್ರಾಮಿಕವಾಗಿವೆ. ಮಾಸ್ಕ್, ಸಾಮಾಜಿಕ ಅಂತರ, ಸ್ವಚ್ಛತೆ ಪ್ರಾಣಿಗಳಲ್ಲಿ ಕಷ್ಟದ ಕೆಲಸ. ಈ ಕಾರಣದಿಂದ ಜಾನುವಾರುಗಳಲ್ಲಿ ಸಾಂಕ್ರಾಮಿಕತೆ ತೀವ್ರ ರೂಪದಲ್ಲಿರುತ್ತದೆ. ನೂರಾರು ಜಾನುವಾರುಗಳಿಗೆ ರೋಗ ಹರಡಿ ಸಾವು ನೋವಾಗುತ್ತದೆ. ಅವುಗಳ ಚಿಕಿತ್ಸೆಗಾಗಿ ರೈತರು ಸಾವಿರಾರು ರೂಪಾಯಿ ಖರ್ಚು ಮಾಡುತ್ತಾರೆ. ಆದರೂ ಗರ್ಭಧಾರಣೆಯ ಸಮಸ್ಯೆಗಳು ಎದುರಾಗುತ್ತವೆ. ಚಿಕಿತ್ಸೆ ಫಲಕಾರಿಯಾಗದೇ ಕೆಲವು ಜಾನುವಾರುಗಳು ಸಾವನ್ನಪ್ಪುತ್ತವೆ. ಇಂತಹ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಮತ್ತು ನಿಯಂತ್ರಿಸಲು ಮುಂಜಾಗ್ರತೆಯಾಗಿ ಲಸಿಕೆ ಹಾಕಿಸುವುದೊಂದೇ ಮಾರ್ಗ.
ಇತಿಹಾಸ : ಲಸಿಕೆ ಹಾಕುವುದರ ಮೂಲಕ ರೋಗ ಬಾರದಂತೆ ತಡೆಗಟ್ಟಬಹುದೆಂದು ಮೊಟ್ಟಮೊದಲ ಬಾರಿಗೆ 1798ರಲ್ಲಿ ತೋರಿಸಿಕೊಟ್ಟವರು ಎಡ್ವರ್ಡ್ ಜೆನ್ನರ್. ಮನುಷ್ಯರಿಗೆ ಸಿಡುಬುರೋಗ ಬಾರದಂತೆ ಪ್ರತಿಬಂಧಕ ಲಸಿಕೆ ಕಂಡುಹಿಡಿದ ಇವರು ಲಸಿಕೆಗೆ ಪ್ರಕೃತಿಯಲ್ಲಿ ನೈಜವಾಗಿ ದುರ್ಬಲವಾಗಿದ್ದ ದನದ ಸಿಡುಬನ್ನು ಬಳಸಿದ್ದನು. ಎಡ್ವರ್ಡ್ ಜೆನ್ನರ್‌ನ ಈ ತಂತ್ರ ಜಗತ್ತಿನಾದ್ಯಂತ ಜನಪ್ರಿಯವಾಯಿತು. ಆ ಕಾಲದಲ್ಲಿ ಈ ಸಿಡುಬು ಬಹು ದೊಡ್ಡ ಸಾಂಕ್ರಾಮಿಕ ರೋಗವಾಗಿತ್ತು. ಜಗತ್ತಿನ ಎಲ್ಲ ದೇಶಗಳು ತನ್ನ ಪ್ರಜೆಗಳಿಗೆ ಲಸಿಕೆಯನ್ನು ಹಾಕಿಸಿದವು. ಇದರ ಫಲವಾಗಿ 1979ರಲ್ಲಿ ವಿಶ್ವ ಸಂಸ್ಥೆಯು ನಮ್ಮ ಭೂಮಿ ಸಿಡುಬು ಮುಕ್ತವಾಗಿದೆ ಎಂದು ಸಾರಿತು. ಒಂದು ರೋಗ ಸಂಪೂರ್ಣವಾಗಿ ನಿರ್ನಾಮವಾಗಿತ್ತು. ಅಂತೆಯೇ ಲೂಯಿ ಪ್ಯಾಶ್ಚರ್‌ನು ಕೋಳಿ ಕಾಲರಾ, ದನಕುರಿಗಳಿಗೆ ಮಾರಕವಾಗಿದ್ದ ನೆಗಡಿ ರೋಗಕ್ಕೆ ಲಸಿಕೆ ತಯಾರಿಸಿದನು. ಹಾಗೆಯೇ ರೇಬಿಸ್‌ಗೆ (ಹುಚ್ಚುನಾಯಿ ಕಡಿತ), ಲಸಿಕೆ ತಯಾರಿಸಿ ಪ್ರಸಿದ್ಧನಾದನು. ಲೂಯಿಪಾಶ್ಚರ್‌ನು ಶಕ್ತಿಶಾಲಿ ಸೂಕ್ಷö್ಮಜೀವಿಗಳನ್ನು ಕೃತಕವಾಗಿ ದುರ್ಬಲಗೊಳಿಸಿ ಲಸಿಕೆ ತಯಾರಿಸಿದ್ದನು. ಈ ತಂತ್ರ ನಂತರದ ವರ್ಷಗಳಲ್ಲಿ ಸತತ ಸಂಶೋಧನೆಗಳಾಗಿ ಬಹುಮುಖ ಅಭಿವೃದ್ಧಿಗೊಂಡು ನಾನಾ ರೀತಿಯ ಲಸಿಕೆಗಳ ತಯಾರಿಕೆಗೆ ಅನುವು ಮಾಡಿಕೊಟ್ಟಿತು.
ಮಾನವರಲ್ಲಿ ಹೇಗೆ ಸಿಡುಬುರೋಗ ನಿರ್ನಾಮವಾಗಿದೆಯೋ ಹಾಗೆಯೇ ಜಾನುವಾರುಗಳಲ್ಲಿ ‘ದೊಡ್ಡರೋಗ’ ಈಗ ನಿರ್ನಾಮವಾಗಿದೆ. ಈ ‘ದೊಡ್ಡರೋಗ’ದಿಂದ ಜಾನುವಾರುಗಳು ಅಧಿಕ ಜ್ವರ, ಬೇಧಿಯಿಂದ ನರಳಿ ಸಾವನ್ನಪ್ಪುತ್ತಿದ್ದವು. ಕಳೆದ ಶತಮಾನದಲ್ಲಿ ಲಕ್ಷಗಟ್ಟಲೇ ಜಾನುವಾರುಗಳು ಮರಣ ಹೊಂದಿರುವ ಬಗ್ಗೆ ಉಲ್ಲೇಖಗಳಿವೆ. ಇದರ ಆರ್ಥಿಕ ನಷ್ಟವನ್ನು ಮನಗಂಡು ಸರ್ಕಾರ 1935ರಿಂದೀಚೆಗೆ ಯುದ್ಧೋಪಾದಿಯಲ್ಲಿ ಸಾಮೂಹಿಕ ಲಸಿಕಾ ಕಾರ್ಯಕ್ರಮ ಕೈಗೊಂಡಿತು. ಇತ್ತೀಚೆಗೆ ಎಂದರೆ 2006ರಲ್ಲಿ ನಮ್ಮ ದೇಶ ದೊಡ್ಡರೋಗದಿಂದ ಮುಕ್ತವಾಗಿದೆ ಎಂದು ಘೋಷಿಸಲ್ಪಟ್ಟಿತು. ಈಗ ಇದೇ ರೀತಿ ಜಾನುವಾರುಗಳಿಗೆ ಪೀಡಿಸುತ್ತಿರುವ ಕಾಲುಬಾಯಿ ಜ್ವರ, ಚಪ್ಪೆ ಬೇನೆ, ಗಂಟಲು ಬೇನೆ, ಕುರಿಗಳ ಕರುಳುಬೇನೆ, ಪಿಪಿಆರ್ ಇತ್ಯಾದಿ ರೋಗಗಳ ವಿರುದ್ಧ ಸಾಮೂಹಿಕ ಲಸಿಕಾ ಕಾರ್ಯಕ್ರಮ ಜಾರಿಯಲ್ಲಿದೆ.
ಯಾವಾಗ, ಯಾವ ಲಸಿಕೆ?
• ಕಾಲುಬಾಯಿ ಜ್ವರದ ವಿರುದ್ಧ 3 ತಿಂಗಳಿಗೂ ಮೇಲ್ಪಟ್ಟ ಎಲ್ಲ ಸೀಳುಗೊರಸಿನ ಪ್ರಾಣಿಗಳಿಗೆ (ಹಸು, ಎಮ್ಮೆ, ಆಡು, ಕುರಿ, ಹಂದಿ) ವರ್ಷಕ್ಕೆ ಎರಡು ಬಾರಿ ಲಸಿಕೆಯನ್ನು ಹಾಕಿಸಬೇಕು. ಚಳಿಗಾಲದ ಪ್ರಾರಂಭದಲ್ಲಿ (ಅಕ್ಟೋಬರ್) ಮೊದಲನೇ ಸಲ ಹಾಗೂ ಆರು ತಿಂಗಳಿನ ನಂತರ (ಏಪ್ರಿಲ್/ಮೇ) ಪುನರಾವರ್ತಿಸಬೇಕು.
• ಗಂಟಲುಬೇನೆ ರೋಗದ ವಿರುದ್ಧ 6 ತಿಂಗಳು ಮೇಲ್ಪಟ್ಟ ಎಲ್ಲ ಹಸು, ಎಮ್ಮೆ ಕುರಿಗೆ ವರ್ಷಕ್ಕೊಂದು ಸಾರಿಯಂತೆ ಮಳೆಗಾಲ ಪ್ರಾರಂಭದಲ್ಲಿ ಹಾಕಿಸಬೇಕು.
• 6 ತಿಂಗಳು ಮೇಲ್ಪಟ್ಟ ಹಸು, ಎಮ್ಮೆಗಳಿಗೆ ವರ್ಷಕ್ಕೊಂದು ಸಾರಿಯಂತೆ ಮಳೆಗಾಲ ಪ್ರಾರಂಭದಲ್ಲಿ ಚಪ್ಪೆ ಬೇನೆಯ ವಿರುದ್ಧದ ಲಸಿಕೆಯನ್ನು ಹಾಕಿಸಬೇಕು.
• ಕುರಿ, ಮೇಕೆಗಳಿಗೆ ಕಾಲುಬಾಯಿ ಜ್ವರ, ಕರುಳುಬೇನೆ, ಪಿಪಿಆರ್, ಕುರಿಸಿಡುಬು, ಆಡು ಸಿಡುಬು ವಿರುದ್ಧದ ಲಸಿಕೆಗಳನ್ನು ಹಾಕಿಸಬೇಕು. ಕರುಳುಬೇನೆಯ ವಿರುದ್ಧದ ಲಸಿಕೆಯನ್ನು 3 ತಿಂಗಳು ಮೇಲ್ಪಟ್ಟ ಎಲ್ಲ ಕುರಿ ಮೇಕೆಗಳಿಗೆ ಪ್ರತಿವರ್ಷ ಒಂದು ತಿಂಗಳ ಅಂತರದಲ್ಲಿ ಎರಡು ಬಾರಿ ಲಸಿಕೆಯನ್ನು ಹಾಕಿಸಬೇಕು. ಕುರಿಸಿಡುಬು, ಆಡುಸಿಡುಬು, ಗಂಟಲುಸಿಡುಬು ವಿರುದ್ಧದ ಲಸಿಕೆಯನ್ನು ಎಲ್ಲ 3 ತಿಂಗಳ ಮೇಲ್ಪಟ್ಟ ಕುರಿ, ಮೇಕೆಗಳಿಗೆ ವರ್ಷಕ್ಕೊಂದು ಬಾರಿಯಂತೆ ಹಾಕಿಸಬೇಕು. ಪಿಪಿಆರ್ ಲಸಿಕೆಯನ್ನು ಕೂಡ 3 ತಿಂಗಳ ಮೇಲ್ಪಟ್ಟ ಎಲ್ಲ ಕುರಿ, ಮೇಕೆಗಳಿಗೆ ಹಾಕಿಸಬೇಕು. ರೋಗೋದ್ರೇಕ ಹೆಚ್ಚಿರುವ ಪ್ರದೇಶಗಳಲ್ಲಿ ಪ್ರತಿವರ್ಷ ಇಲ್ಲದಿದ್ದರೆ 3 ವರ್ಷಕ್ಕೆ ಒಂದು ಬಾರಿ ಲಸಿಕೆ ಹಾಕಿಸಬೇಕು.
• ಬ್ರುಸೆಲ್ಲೋನೆಸ್(ಕಂದು ರೋಗ), ಥೈಲೇರಿಯಾ, ನೆಗಡಿ ರೋಗಗಳ ವಿರುದ್ಧವೂ ಲಸಿಕೆಗಳು ಲಭ್ಯವಿದೆ. ಪಶುವೈದ್ಯರ ಸಲಹೆಯಂತೆ ಆಯಾ ಪ್ರದೇಶದಲ್ಲಿ ಇಂತಹ ರೋಗಗಳು ಕಂಡುಬಂದರೆ ಈ ಲಸಿಕೆಗಳನ್ನು ಹಾಕಿಸಬಹುದಾಗಿದೆ.
• ಹಂದಿಗಳಿಗೆ ಕಾಲುಬಾಯಿ ಜ್ವರ, ಗಂಟಲು ಬೇನೆ, ಹಂದಿ ಜ್ವರದ ವಿರುದ್ಧದ ಲಸಿಕೆಗಳನ್ನು ಹಾಕಿಸಬೇಕು. ಕುದುರೆಗಳಿಗೆ ಹರ್ವೆಸ್ ವೈರಸ್-1, ಇನ್‌ಫ್ಲೂಯೆಂಜಾ ರೋಗಗಳ ವಿರುದ್ಧದ ಲಸಿಕೆಗಳು ಲಭ್ಯವಿದೆ.
• ನಾಯಿಗಳಿಗೆ ಮಾರಕವಾಗಿರುವ ರೇಬಿಸ್, ಡಿಸ್ಟೆಂಪರ್, ಪಾರ್ವೂ ವೈರಸ್, ಎಡಿನೋ ವೈರಸ್, ಪ್ಯಾರಾ ಇನ್‌ಫ್ಲೂಯೆಂಜಾ ವೈರಸ್, ಲೆಪ್ಟೋಸ್ಪೈರಾ ರೋಗದ ವಿರುದ್ಧ ಲಸಿಕೆ ಹಾಕಿಸಬೇಕು. ಹಾಗೆಯೇ ಬೆಕ್ಕುಗಳಿಗೆ ರೇಬಿಸ್, ಕ್ಯಾಲ್ಸಿವೈರಸ್, ಪ್ಯಾನ್‌ಲ್ಯುಕೋವೆನಿಯಾ ವೈರಸ್, ಫೆಲೈನ್ ಲ್ಯುಕೋಮಿಯಾ ವೈರಸ್, ರೈನೋಟ್ರೈಕೈಟಸ್ ವಿರುದ್ಧದ ಲಸಿಕೆಗಳು ಲಭ್ಯವಿದೆ.
• ರೇಬಿಸ್ ವಿರುದ್ಧದ ಲಸಿಕೆಯನ್ನು ನಾಯಿಗಳಿಗೆ ಮೊದಲ ಬಾರಿಗೆ ಒಂದು ತಿಂಗಳು ಅಂತರದಲ್ಲಿ ಎರಡು ಲಸಿಕೆಗಳು, ಅನಂತರ ಪ್ರತಿವರ್ಷ ಒಂದು ಬಾರಿ ಲಸಿಕೆ ಹಾಕಿಸಿದಲ್ಲಿ ನಿಮ್ಮ ಸಾಕು ನಾಯಿಗೆ, ನಿಮಗೆ ಹಾಗೂ ಸಮಾಜಕ್ಕೆ ಕ್ಷೇಮ. ಒಂದು ವೇಳೆ ರೇಬಿಸ್ ನಾಯಿ ಕಡಿತದ ನಂತರವಾದರೆ, ಒಟ್ಟು ಆರು ಬಾರಿ (0,3,7,14,28 ಮತ್ತು 90ನೇ ದಿನಗಳಂದು) ಲಸಿಕೆ ಹಾಕಿಸಬೇಕು. ಇಲ್ಲಿ “0” ದಿನವೆಂದರೆ ಮೊದಲ ಲಸಿಕೆಯನ್ನು ನೀಡಿದ ದಿನ ಮತ್ತು ಮೊದಲ ಲಸಿಕೆಯನ್ನು ಕಡಿತದ ನಂತರದ 24 ಗಂಟೆಗಳಲ್ಲಿ ಹಾಕಿಸಿದಲ್ಲಿ ಉತ್ತಮ. ತಡವಾದಷ್ಟೂ ರಕ್ಷಣೆಯ ಖಾತರಿ ಕಡಿಮೆಯಾಗುತ್ತದೆ. ಜನ, ಜಾನುವಾರುಗಳಿಗೆ ಇದೇ ವೇಳಾಪಟ್ಟಿ ಅನ್ವಯ.
• ಮನೆಯಂಗಳದಲ್ಲಿ, ಹಿತ್ತಲಿನಲ್ಲಿ ಸಾಕುವ ಕೋಳಿಗಳಿಗೆ ಕೊಕ್ಕರೆ ರೋಗ, ಪಾಕ್ಸ್ ರೋಗದ ವಿರುದ್ಧ ಲಸಿಕೆಗಳನ್ನು ಹಾಕಿಸಬೇಕು.
• ಯಾವಾಗ, ಯಾವ ಲಸಿಕೆ ಹಾಕಬೇಕು ಎಂಬುದರ ವಿವರಗಳು ಆಯಾ ಪ್ರದೇಶ, ರೋಗ ಉಂಟಾಗುವ ತೀವ್ರತೆ ಇತ್ಯಾದಿಗಳ ಮೇಲೆ ಅವಲಂಬಿತವಾಗಿರುವುದರಿಂದ ಹತ್ತಿರದ ಪಶುವೈದ್ಯರ ಸಲಹೆಯಂತೆ ಲಸಿಕೆ ಹಾಕಿಸುವುದು ಸೂಕ್ತ.
ಈ ಅಂಶಗಳತ್ತ ಗಮನವಿರಲಿ
• ಆರೋಗ್ಯವಂತ ಪ್ರಾಣಿಗಳಿಗೂ ಲಸಿಕೆ ಹಾಕಿಸಿ.
• ಉತ್ತಮ ರೋಗ ನಿರೋಧಕ ಶಕ್ತಿ ಬರಲು ಲಸಿಕೆ ನೀಡುವ 2-3 ವಾರಗಳ ಮುಂಚೆ ಜಾನುವಾರುಗಳಿಗೆ ಜಂತುನಾಶಕ ನೀಡುವುದು ಉತ್ತಮ ಕ್ರಮ.
• ಕಾಯಿಲೆಯು ಈ ಮುಂಚೆ ಕಂಡುಬAದಿರುವ ಸಂದರ್ಭಗಳಲ್ಲಿ ಆ ಸಮಯವನ್ನು ಗಣನೆಗೆ ತೆಗೆದುಕೊಂಡು, ಅದಕ್ಕೆ ಒಂದು ತಿಂಗಳು ಮುಂಚೆ ಲಸಿಕೆ ಹಾಕಿಸಲು ವ್ಯವಸ್ಥೆ ಮಾಡಿಕೊಳ್ಳಬೇಕು.