ಕೃಷಿಕರ ಮನೆಬಾಗಿಲಿಗೆ ಬರಲಿದೆ ‘ಕೃಷಿ ಸಂಜೀವಿನಿ’ ವಾಹನ

ಧಕ್ಷಿಣಿ ಮಾಸ್ತಿಕಟ್ಟೆ


‘ಎರಡು ಎಕರೆ ತುಂಬಾ ಸೊಯಾಬೀನ್ ಬಿತ್ತಿದೆ. ಆದರೆ ಇಳುವರಿ ಚೆನ್ನಾಗಿ ಬರಲಿಲ್ಲ. ಕೃಷಿ ಇಲಾಖೆಯ ಅಧಿಕಾರಿಯೊಬ್ಬರು ನಿಮ್ಮಲ್ಲಿನ ವಾತಾವರಣ, ಮಣ್ಣು ಸೊಯಾಬೀನ್ ಬೆಳೆಗೆ ಸೂಕ್ತವಾಗಿಲ್ಲ, ಅಂಜನಪ್ಪನವರೇ ನೀವೊಮ್ಮೆ ಮಣ್ಣು ಪರೀಕ್ಷೆ ಮಾಡಿ ನೋಡಿ, ಬೆಳಗಾಂನ ಈ ಮಣ್ಣಿನಲ್ಲಿ ಫಸಲು ಚೆನ್ನಾಗಿ ಬರಲ್ಲ ಅಂದ್ರು. ಕೃಷಿ ಇಲಾಖೆ ತುಂಬಾ ದೂರದಲ್ಲಿದೆ. ಆದ್ದರಿಂದ ಮಣ್ಣು ಪರೀಕ್ಷೆ ಮಾಡಿಸಿಲ್ಲ’.
‘ಕೃಷಿಯ ಬಗ್ಗೆ ಸರಿಯಾದ ಮಾಹಿತಿಯೇ ಸಿಗುತ್ತಿಲ್ಲ. ತೋಟದಲ್ಲಿ ಬೆಳೆದ ಬೆಳೆಯ ರೋಗಲಕ್ಷಣ, ಇಳುವರಿಯ ಬಗ್ಗೆ ಅಧಿಕಾರಿಗಳಲ್ಲಿ ಚರ್ಚಿಸಬೇಕಾಗಿದೆ. ಏಳೆಂಟು ಕಿ.ಮೀ. ದೂರದಲ್ಲಿರುವ ಕೃಷಿ ಇಲಾಖೆಗೆ ಹೋಗಬೇಕು. ತಜ್ಞರು ಶಿರಸಿಯಲ್ಲಿರುವ ನನ್ನ ತೋಟಕ್ಕೊಮ್ಮೆ ಭೇಟಿ ನೀಡಿದರೆ ಒಳ್ಳೆಯದಿತ್ತು’.
ಇದು ಕೇವಲ ಅಂಜನಪ್ಪ ಮತ್ತು ಗುರುರವರ ಅಭಿಪ್ರಾಯವಲ್ಲ. ಹೆಚ್ಚಿನ ರೈತರ ಬೇಡಿಕೆಯು ಹೌದು. ಹಾಗಾದರೆ ಇನ್ನು ಮುಂದೆ ಇಂತಹ ಸಮಸ್ಯೆಗಳು ಎದುರಾಗಲ್ಲ. ಈ ನಿಟ್ಟಿನಲ್ಲಿ ರೈತರಿಗೆ ನೆರವಾಗುವ ಸಲುವಾಗಿ ಸರಕಾರ ಆರಂಭಿಸಿದ ಕಾರ್ಯಕ್ರಮವೇ ‘ಕೃಷಿ ಸಂಜೀವಿನಿ’.
ಏನಿದು ಕೃಷಿ ಸಂಜೀವಿನಿ?
ಕೃಷಿಕರ ತೋಟಗಳಿಗೆ ತೆರಳಿ ಕೃಷಿಕರ ಸಮಸ್ಯೆಗಳಿಗೆ ಪರಿಹಾರ ನೀಡುವ ಯೋಜನೆಯಿದು. ಕೃಷಿಕರಿಗೆ ಕೃಷಿಯ ಬಗ್ಗೆ ಯಾವುದೇ ಅಗತ್ಯ ಮಾಹಿತಿ ಬೇಕಾದಲ್ಲಿ ಕೃಷಿ ಸಂಜೀವಿನಿ ವಾಹನದ ಟೋಲ್ ಫ್ರೀ ಸಹಾಯವಾಣಿ ಸಂಖ್ಯೆ ೧೫೫೩೧೩ ಕ್ಕೆ ಕರೆ ಮಾಡಿದ್ದಲ್ಲಿ ವಾಹನ ನಿಮ್ಮ ಮನೆಬಾಗಿಲಿಗೆ ಬರುತ್ತದೆ.
ವಾಹನದಲ್ಲಿ ಏನಿದೆ?
ಈ ವಾಹನದಲ್ಲಿ ಕೀಟ, ರೋಗಗಳ ಹತೋಟಿಗೆ ಹಾಗೂ ರೈತರಿಗೆ ಸಲಹೆ ನೀಡಲು ಇ – ತಂತ್ರಾಂಶ (ಇ – ಸ್ಯಾಪ್) ವನ್ನು ಅಳವಡಿಸಲಾಗಿದೆ. ವಾಹನವು ಉಪಗ್ರಹ ಆಧಾರಿತ ಜಿಯೋ ಫೆನ್ಸಿಂಗ್ ತಂತ್ರಜ್ಞಾನವನ್ನು ಹೊಂದಿದೆ. ಇದಕ್ಕೆ ನೆಟ್‌ವರ್ಕ್ ನ ಅಗತ್ಯವಿಲ್ಲ. ಮಣ್ಣು, ರಸಗೊಬ್ಬರ ಪರೀಕ್ಷೆ ಮಾಡುವ ಕಿಟ್, ಕೀಟ ಪರೀಕ್ಷೆ ಮಾಡುವ ಕಿಟ್ ಹೀಗೆ ಅಗತ್ಯ ಸೌಲಭ್ಯಗಳನ್ನು ಈ ಸಂಚಾರಿ ವಾಹನವು ಒಳಗೊಂಡಿದೆ.
ಕೃಷಿ ತೋಟಕ್ಕೆ ಬರುತ್ತಾರೆ ತಜ್ಞರು
ವಾಹನದ ಜೊತೆಗೆ ರೈತರ ತೋಟಕ್ಕೆ ತಾಂತ್ರಿಕ ಅಧಿಕಾರಿಗಳ ತಂಡವು ಭೇಟಿ ನೀಡಿ ಅಲ್ಲಿನ ಸಮಸ್ಯೆ, ಸವಾಲುಗಳನ್ನು ಕೂಲಂಕುಶವಾಗಿ ಗಮನಿಸಿ ಬೆಳೆಗಾರರು ಕೈಗೊಳ್ಳಬೇಕಾದ ಸಂಭವನೀಯ ನಿರ್ವಹಣಾ ಕ್ರಮಗಳ ಬಗ್ಗೆಯೂ ಮಾಹಿತಿಯನ್ನು ನೀಡುತ್ತಾರೆ. ಅಗತ್ಯಬಿದ್ದಲ್ಲಿ ಮಣ್ಣು ಪರೀಕ್ಷೆ, ಬೆಳೆ ಪರೀಕ್ಷೆಯನ್ನು ತಜ್ಞರ ತಂಡ ಮಾಡಿ ಅಲ್ಲಿ ಬೆಳೆಯಬಹುದಾದ ಬೆಳೆಗಳ ಬಗ್ಗೆ ನಿಖರ ಮಾಹಿತಿಯನ್ನು ನೀಡುತ್ತಾರೆ.
ಮಣ್ಣಿನಲ್ಲಿ ಲಭ್ಯವಿರುವ ಪೋಷಕಾಂಶಗಳ ಬಗ್ಗೆ ರೈತರಿಗೆ ಮಾಹಿತಿ ಒದಗಿಸುವುದು ಜೊತೆಗೆ ಸೂಕ್ತ ಬೆಳೆ ಬೆಳೆಯಲು ಪ್ರೋತ್ಸಾಹಿಸುವುದು ಈ ಯೋಜನೆಯ ಮುಖ್ಯ ಉದ್ದೇಶ.
ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಈ ವಾಹನವು ಕಾರ್ಯನಿರ್ವಹಿಸುತ್ತಿದ್ದು ಬೆಳೆಗಳಿಗೆ ರೋಗ, ಕೀಟ ಬಾಧೆ, ಮಣ್ಣು, ರಸಗೊಬ್ಬರ ಪರೀಕ್ಷೆ ಇತ್ಯಾದಿ ತಾಂತ್ರಿಕ ನೆರವನ್ನು ಈ ಸಂಚಾರಿ ವಾಹನ ನೀಡುತ್ತಿದ್ದು ರೈತಸ್ನೇಹಿಯಾಗಿ ಕಾರ್ಯನಿರ್ವಹಿಸಲಿದೆ.

Facebook
Twitter
WhatsApp
LinkedIn
Telegram

Leave a Reply

Your email address will not be published. Required fields are marked *

Latest Updates