ರಾಣೇಬೆನ್ನೂರು ತಾಲೂಕಿನ ಕಂಚಿಗಾರ್ ಓಣಿಯ ರವಿ ಕುಮಾರ್‍ರವರದ್ದು ಹತ್ತು ಮಂದಿಯೊಂದಿಗಿನ ಕೂಡು ಕುಟುಂಬ. ಮನೆಗೆ ಇವರೇ ಹಿರಿಯ ಮಗ. ಇವರು ಓದಿದ್ದು 8ನೇ ತರಗತಿಯಾದರೂ, ಚಿಕ್ಕಂದಿನಲ್ಲೇ ಜೀವನದ ಬಗ್ಗೆ ಕಲಿತ ಪಾಠ ಬೆಟ್ಟದಷ್ಟು.
ರವಿ ಅವರ ತಂದೆ ಹಲವು ವರ್ಷಗಳಿಂದ ಮನೆಯಲ್ಲೇ ಬೇಕರಿ ತಿಂಡಿ ತಯಾರಿಸುತ್ತಿದ್ದರು. ಪ್ರಾರಂಭದಲ್ಲಿ ಇವರು ಮಾಡುತ್ತಿದ್ದ ತಿಂಡಿ ಸಾಕಷ್ಟು ಹೆಸರು ಪಡೆದಿತ್ತು. 200 ಮಂದಿಗೆ ಇವರು ಅನ್ನದಾತರಾಗಿದ್ದರು. ಆದರೆ ಮುಂದೊಂದು ದಿನ ಉದ್ಯೋಗದಲ್ಲಿ ನಷ್ಟ ಉಂಟಾಗಿ ತಿಂಡಿ ತಯಾರಿ ಕಾಯಕವನ್ನು ಕೈ ಬಿಡುವ ಸಂದರ್ಭ ಎದುರಾಯಿತು.
ತಂದೆಯೊಂದಿಗೆ ತಿಂಡಿ ತಯಾರಿ ಮಾಡಿ ಅದರಲ್ಲಿ ಬರುವ ಆದಾಯದಲ್ಲಿ ಜೀವನ ಸಾಗಿಸುತ್ತಿದ್ದ ರವಿಯವರಿಗೆ ಬೇಕರಿ ಕೆಲಸಗಳನ್ನು ಹೊರತು ಪಡಿಸಿದರೆ ಬೇರೆ ಕೆಲಸಗಳ ಬಗ್ಗೆ ಅಷ್ಟಾಗಿ ಗೊತ್ತಿರಲಿಲ್ಲ. ಕೂಲಿಗೆ ಹೋಗಿ ದಿನವಿಡೀ ಮೈ ಮುರಿದು ದುಡಿದರೂ ಅಲ್ಲಿ ಸಿಗುವ ಹಣದಿಂದ ಮನೆಯ ಖರ್ಚು ನಿಭಾಯಿಸುವುದು ಸಾಧ್ಯವಿಲ್ಲ ಎಂಬ ಸತ್ಯವನ್ನರಿತ ರವಿ ತಂದೆ ನಿಲ್ಲಿಸಿದ್ದ ತಿಂಡಿ ತಯಾರಿ ಸ್ವ ಉದ್ಯೋಗವನ್ನೇ ಮುಂದುವರೆಸಿದರು. ಇದಕ್ಕೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನೆರವನ್ನು ಪಡೆದರು. ಆರಂಭದಲ್ಲಿ ಇದ್ದ ಅಲ್ಪ ಬಂಡವಾಳವನ್ನು ತೊಡಗಿಸಿ ಮನೆಯ ಸದಸ್ಯರೇ ಸೇರಿ ತಮ್ಮ ಮನೆಯಲ್ಲಿಯೇ ತಿಂಡಿ ತಯಾರಿ ಶುರುಮಾಡಿದರು. ಇದರಲ್ಲಿ ಯಶಸ್ವಿಯೂ ಆದರು.
ಇದೀಗ ರವಿ ಕುಮಾರ್ ರಸಗುಲ್ಲ, ಜಾಮೂನ್, ಬಾದೂಷ, ಮಿರ್ಚಿ, ಡ್ರೈಫ್ರೂಟ್ಸ್ ಸ್ವೀಟ್ಸ್, ಶೇಂಗಾ ಬೀಜ, ಚಕ್ಕುಲಿ, ನಿಪ್ಪಟ್ಟು, ಕೋಡುಬಳೆ ಸೇರಿದಂತೆ ಇನ್ನೂ ಹತ್ತು ಹಲವು ಬಗೆಯ ತಿಂಡಿಗಳನ್ನು ತಯಾರಿಸಿ ಸೈ ಅನ್ನಿಸಿಕೊಂಡಿದ್ದಾರೆ.
ತಯಾರಿಸಿದ ತಿಂಡಿಗಳನ್ನು ಇವರೇ ಗಾಡಿ ಮೂಲಕ ಸಮೀಪದ ಅಂಗಡಿಗಳಿಗೆ ಹಾಗೂ ಸುತ್ತಮುತ್ತಲಿನ ಮನೆಗಳಿಗೆ ಹೋಗಿ ಮಾರಾಟ ಮಾಡುತ್ತಾರೆ. ಪ್ರತಿನಿತ್ಯ ಬಗೆಬಗೆಯ ತಿಂಡಿಗಳ 400 ರಿಂದ 500 ಪ್ಯಾಕ್‍ಗಳು ಮಾರಾಟವಾಗುತ್ತಿದೆ. ಇವರ ಪತ್ನಿ ಕೂಡಾ ಯೋಜನೆಯ ‘ತರುಣೋದಯ’ ಸ್ವಸಹಾಯ ಸಂಘದ ಸದಸ್ಯರಾಗಿದ್ದಾರೆ. “ನಾವು ಬೇಕರಿ ತಿಂಡಿ ತಯಾರಿಸಲು ಪ್ರಾರಂಭಿಸಿ 30 ವರ್ಷಗಳೇ ಕಳೆದಿದೆ. ಹೀಗಾಗಿ ಮನೆಯ ಯಾವೊಬ್ಬ ಸದಸ್ಯರಿಗೂ ಇದು ಕಷ್ಟ ಎಂದು ಅನ್ನಿಸಲೇ ಇಲ್ಲ. ಪ್ರಾರಂಭದಲ್ಲಿ ನಾವು ಚಕ್ಕುಲಿಯನ್ನು ಮಾತ್ರ ತಯಾರಿಸುತ್ತಿದ್ದೆವು. ಇದೀಗ ಯಾವುದೇ ಕೂಲಿಯಾಳುಗಳಿಲ್ಲದೆ ಸ್ವತಃ ತಾವೇ ಬಗೆಬಗೆಯ ತಿಂಡಿಗಳನ್ನು ತಯಾರಿಸುತ್ತಿದ್ದೇವೆ. ಇದೆಲ್ಲ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನೆರವಿನಿಂದ ಸಾಧ್ಯವಾಯಿತು.” ಎನ್ನುತ್ತಾರೆ ರವಿ ಕುಮಾರ್‍ರವರು.