‘ನನ್ನ ಮನೆಯಿಂದ ಸ್ವಲ್ಪ ದೂರದಲ್ಲೆ ವೈನ್‍ಶಾಪ್ ಇದೆ. ನನಗಾಗಿಯೇ ಇಲ್ಲಿ ವೈನ್‍ಶಾಪ್ ತೆರೆದಿದ್ದಾರೇನೋ ಎನ್ನುವಷ್ಟು ಖುಷಿಯಿಂದ ಪ್ರತಿ ದಿನ ವೈನ್‍ಶಾಪ್‍ನ ಬಾಗಿಲು ತೆರೆಯುವ ಹೊತ್ತಿಗೆ ಅಲ್ಲಿಗೆ ಹಾಜರಾಗುತ್ತಿದ್ದೆ. ಮದ್ಯ ಸೇವಿಸಲು ಕುಳಿತಾಗ ದಿನನಿತ್ಯ ಇನ್ನೂರರಿಂದ ಐನೂರು ರೂಪಾಯಿಷ್ಟು ಕುಡಿದೇ ಅಭ್ಯಾಸ! ಮದ್ಯ ಸೇವಿಸುವಾಗ ತಿನ್ನಲು ಹುರಿದ ಶೇಂಗಾ ಬೀಜವೂ ಜೊತೆಗೆ ಬೇಕೇ ಬೇಕು. ಬೀಜಗಳನ್ನು ತಿನ್ನುತ್ತಾ ನನ್ನನ್ನು ನಾನು ಮರೆತು ಬಿಡುತ್ತಿದ್ದೆ. ಅಮಲೇರಿದ ನಂತರ ಯಾವ ಹೊತ್ತಿಗಾದರೂ ಸರಿ ಮನೆ ಸೇರುತ್ತಿದ್ದೆ. ಕೆಲವೊಮ್ಮೆ ಹಾಡಹಗಲೇ ರಸ್ತೆಯ ಬದಿಯಲ್ಲಿ ಎಲ್ಲಾದರೂ ಬಿದ್ದಿರುತ್ತಿದ್ದ ನನ್ನನ್ನು ಯಾರಾದರೂ ಬಂದು ಗುರುತಿಸಿ ನನ್ನ ಮನೆಗೆ ವಿಷಯ ಮುಟ್ಟಿಸುತ್ತಿದ್ದರು. ಆದರೆ ಹೆಂಡತಿ, ಮನೆಮಂದಿಯಲ್ಲೆಲ್ಲ ಜಗಳ ಕಾಯುತ್ತಿದ್ದೆನಾದ್ದರಿಂದ ನನ್ನನ್ನು ಕರೆದೊಯ್ಯಲು ಬರುವವರು ಇರಲಿಲ್ಲ. ಎಚ್ಚರವಾದಾಗ ಎದ್ದು ಮನೆ ಸೇರುತ್ತಿದ್ದೆ. ಇಷ್ಟೆಲ್ಲಾ ಆಗಿ ಸಂಜೆಯ ವೇಳೆಗೆ ಮತ್ತೆ ವೈನ್‍ಶಾಪ್‍ನಲ್ಲಿ ಪ್ರತ್ಯಕ್ಷನಾಗುತ್ತಿದ್ದೆ. ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಮದ್ಯವರ್ಜನ ಶಿಬಿರವನ್ನು ಸೇರಿ ಕುಡಿತ ಬಿಟ್ಟ ನಂತರ ಇದೀಗ ನನ್ನ ಹೊಲದಲ್ಲಿಯೇ ಶೇಂಗಾವನ್ನು ಬೆಳೆಯುತ್ತಿದ್ದೇನೆ. ಯಂತ್ರವೊಂದನ್ನು ಖರೀದಿಸಿ ಶೇಂಗಾ ಶುಚಿಗೊಳಿಸಿ ಹುರಿದು ಪ್ಯಾಕ್ ಮಾಡಿ ಅದೇ ವೈನ್‍ಶಾಪ್‍ಗೆ ಮತ್ತು ಪಾನ್ ಅಂಗಡಿಗಳಿಗೆ ಮಾರಾಟ ಮಾಡುತ್ತಿದ್ದೇನೆ.!’
ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಗುಂಡಗಟ್ಟಿ ಕಾರ್ಯಕ್ಷೇತ್ರದ ಬಸನ ಗೌಡ ತಾನು ಅಮಲುಮುಕ್ತನಾದ ಕತೆಯನ್ನು ಹೀಗೆ ಎಳೆ ಎಳೆಯಾಗಿ ಬಿಚ್ಚಿಡುವಾಗ ಮದ್ಯದಿಂದಾಗಿ ಜೀವನವನ್ನು ದುಸ್ತರಗೊಳಿಸಿಕೊಂಡ ಆ ದಿನಗಳ ಬಗ್ಗೆ ವ್ಯಥೆ ಮತ್ತು ಇದೀಗ ಸಮಾಜದಲ್ಲಿ ಗೌರವದ ಬದುಕನ್ನು ನಡೆಸಿ ಸ್ವಾವಲಂಬಿಯಾಗಿ ಬದುಕುತ್ತಿರುವುದರ ಬಗ್ಗೆ ಹೆಮ್ಮೆಪಡುವ ಮುಖಭಾವ ಎದ್ದು ಕಾಣುತ್ತಿತ್ತು.
ಸಂಸಾರದ ಕಲಹದಿಂದ ಮದ್ಯಪಾನ ಚಟಕ್ಕೆ ಬಿದ್ದರು
ಬಸನ ಗೌಡ 18ನೇ ವಯಸ್ಸಿನಲ್ಲೆ ತಂದೆ – ತಾಯಿಯನ್ನು ಕಳೆದುಕೊಂಡರು. ಇಬ್ಬರು ಸಹೋದರಿಯರನ್ನು ಸಲಹುವ ಜವಾಬ್ದಾರಿ ಇವರ ಹೆಗಲೇರಿತು. ಸಹೋದರಿಯರಿಗೆ ಮದುವೆ ಮಾಡಿಕೊಡುವ ಚಿಂತೆಯೂ ಹೆಚ್ಚುತ್ತಾ ಹೋಯಿತು. ಬಳುವಳಿಯಾಗಿ ಬಂದ ಐದು ಎಕರೆ ಜಮೀನಿದ್ದರೂ ಅದರಲ್ಲಿ ದುಡಿದು ಅವರಿಗೆ ಮದುವೆ ಮಾಡಿಸಿಕೊಡುವುದು ಕಷ್ಟಸಾಧ್ಯ ಎಂದು ನಿರ್ಧರಿಸಿ ಹೊಲವನ್ನು ಲಾವಣಿಗೆ (ಗೇಣಿ) ನೀಡಿದರು. ತಂಗಿಯರ ವಿವಾಹದ ನಂತರ ತಾನು ಕೂಲಿ ಕೆಲಸಕ್ಕೆ ಹೋಗಲಾರಂಭಿಸಿದರು. ತಂಗಿಯರ ಮದುವೆಗಾಗಿ ಮಾಡಿದ ಸಾಲ ಬೆಳೆಯುತ್ತಾ ಹೋಯಿತು. ಬಡತನದ ನಡುವೆ ವಿವಾಹವಾದರು. ದಾಂಪತ್ಯದಲ್ಲಿ ಹೊಂದಾಣಿಕೆಯ ಕೊರತೆಯಿಂದಾಗಿ ಸಣ್ಣಪುಟ್ಟ ಜಗಳವಾಗುತ್ತಿತ್ತು. ಆದರೆ ‘ತಾನು ಕುಡಿದರೆ ಜಗಳವೆಲ್ಲ ನಿಲ್ಲುತ್ತದೆ’ ಎಂದು ಭಾವಿಸಿದ ಬಸನ ಗೌಡರ ಮನಸ್ಸು ಕುಡಿತದತ್ತ ವಾಲಿತು. ಮದ್ಯಪಾನ ನಿತ್ಯದ ಅಭ್ಯಾಸವಾಯಿತು. ಕೂಲಿ ಕೆಲಸ ಮಾಡಿ ಸಿಗುವ ಆದಾಯ ಕುಡಿಯಲು ಸಾಲದೆ ಮಾಲಕರಲ್ಲಿ ಸಾಲವನ್ನು ಪಡೆಯುತ್ತಾ ಕುಡಿಯಲು ಖರ್ಚು ಮಾಡುತ್ತಿದ್ದರು. ವೈನ್‍ಶಾಪ್‍ಗೆ ಹೋಗಿ ಪ್ರತಿದಿನ ಕುಡಿದು ಬರುವುದಕ್ಕಿಂತ ಮನೆಯಲ್ಲೆ ಸಂಗ್ರಹಿಸಿಟ್ಟರೆ ಜಗಳ ಶುರುವಾದಾಗ ಬೇಕಾದಾಗಲೆಲ್ಲ ದಿನವಿಡೀ ಕುಡಿಯಬಹುದು ಎಂದು ಮನೆಯಲ್ಲೆ ತಂದಿಟ್ಟು ಕುಡಿಯಲಾರಂಭಿಸಿದರು. ಆದರೆ ಕುಡಿತ ಚಟದಿಂದಾಗಿ ದೇಹ, ಕೈ ನಡುಗಲಾರಂಭಿಸಿತು, ಆರೋಗ್ಯ ಕ್ಷೀಣಿಸಿ ಆಸ್ಪತ್ರೆಗೆ ದಾಖಲಿಸುವ ಹಂತಕ್ಕೆ ಬಂತು. ‘ಇನ್ನು ಕುಡಿತ ಬಿಡಲೇಬೇಕು’ ಎಂದು ದೃಢ ನಿರ್ಧಾರ ತಳೆದರು.
ಸುಮಾರು ಒಂಭತ್ತು ವರ್ಷಗಳ ಹಿಂದೆ ಗುಂಡಗಟ್ಟಿಯಲ್ಲಿ ನಡೆದ ಜನಜಾಗೃತಿ ವೇದಿಕೆಯ ಮದ್ಯವರ್ಜನ ಶಿಬಿರದಲ್ಲಿ ಭಾಗವಹಿಸಿ ಮದ್ಯಮುಕ್ತರಾದರು. ಯೋಜನೆಯ ‘ಉಜನೇಶ್ವರ’ ಪ್ರಗತಿಬಂಧು ಸಂಘದ ಸದಸ್ಯರಾದರು. ಕುಡಿತ ಬಿಟ್ಟ ನಂತರ ಪ್ರಾರಂಭದ ಒಂದು ವರ್ಷ ಯಾರೂ ಇವರು ಕುಡಿತ ಬಿಟ್ಟಿದ್ದಾರೆ ಎಂದು ನಂಬುತ್ತಿರಲಿಲ್ಲವಂತೆ. ಗೌಡರು ತರಕಾರಿ ವ್ಯಾಪಾರ ಪ್ರಾರಂಭಿಸಿದರು. ದಿನೇ ದಿನೇ ಉತ್ತಮ ಆದಾಯ ಕೈಸೇರತೊಡಗಿತು. ಗೇಣಿಗೆ ನೀಡಿದ್ದ ಜಮೀನನ್ನು ವಾಪಸು ಪಡೆದರು. ಯೋಜನೆಯ ಕಾರ್ಯಕರ್ತರ ಮಾರ್ಗದರ್ಶನ ಪಡೆದು ಗೋವಿನಜೋಳ, ಶೇಂಗಾ, ಸೂರ್ಯಕಾಂತಿ ಬೆಳೆಯಲಾರಂಭಿಸಿದರು.
ಶೇಂಗಾ ಬೆಳೆದು ಮಾರಾಟ
ತಾನು ಕುಡಿಯುತ್ತಿದ್ದ ವೈನ್‍ಶಾಪ್‍ಗೆ ಬಸನ ಗೌಡರು ಈಗಲೂ ತೆರಳುತ್ತಾರೆ. ಆದರೆ ಇದೀಗ ಅವರು ಹೋಗುತ್ತಿರುವುದು ತಾವೇ ಬೆಳೆದ ಶೇಂಗಾವನ್ನು ಮಾರಾಟ ಮಾಡಲು! ತಿಂಗಳಿಗೆ ಸುಮಾರು ಹತ್ತು ಸಾವಿರ ರೂಪಾಯಿ ಆದಾಯ ಇವರ ಕೈಸೇರುತ್ತಿದೆ.