ಬದುಕು ಸಿಹಿಯಾಗಿಸಿದ ಸಿಹಿತಿಂಡಿ ತಯಾರಿ

ರಾಣೇಬೆನ್ನೂರು ತಾಲೂಕಿನ ಸಾಯಿ ನಗರದ ರೂಪಾ ಹೆಚ್. ಶ್ರೀಹರಿಯವರದ್ದು ಇಬ್ಬರು ಮಕ್ಕಳೊಂದಿಗಿನ ಪುಟ್ಟ ಕುಟುಂಬ. ಪತಿ ಸರಕಾರಿ ಉದ್ಯೋಗಿ. ತನ್ನ ಗಂಡನಿಗೆ ತಾನು ಕೈಲಾದ ಸಹಾಯ ಮಾಡಬೇಕೆಂಬ ನಿಟ್ಟಿನಲ್ಲಿ ರೂಪಾರವರು ಹನ್ನೊಂದು ವರ್ಷಗಳ ಹಿಂದೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ‘ಪ್ರಾರ್ಥನಾ’ ಸ್ವಸಹಾಯ ಸಂಘದ ಸದಸ್ಯರಾದರು.
ಯೋಜನೆಗೆ ಸೇರಿದ ನಂತರ ಯೋಜನೆಯಿಂದ ಮಾಹಿತಿ ಪಡೆದು ಐದು ವರ್ಷಗಳ ಕಾಲ ಟೈಲರಿಂಗ್ ವೃತ್ತಿಯನ್ನು ನಡೆಸಿದರು. ನಂತರ ಎದುರಾದ ಅನಾರೋಗ್ಯ ಸಮಸ್ಯೆಯಿಂದ ತನ್ನ ಟೈಲರಿಂಗ್ ವೃತ್ತಿಯನ್ನು ಬಿಟ್ಟು ಬಿಡುತ್ತಾರೆ. ಮತ್ತೆ ಯೋಜನೆಯ ಸಹಾಯ ಪಡೆದು ‘ಸಿಹಿತಿಂಡಿ’ ತಯಾರಿಯನ್ನು ಆರಂಭಿಸಿದರು.
ರೂಪಾರವರು ಮೂಲತಃ ಮುಧೋಳದವರು. ಓದಿದ್ದು 10ನೇ ತರಗತಿ. ಚಿಕ್ಕಂದಿನಲ್ಲೇ ಹೊಸ ಹೊಸ ಬಗೆಯ ಖಾದ್ಯಗಳನ್ನು ತಯಾರಿಸುವುದರಲ್ಲಿ ಇವರಿಗೆ ಹೆಚ್ಚಿನ ಆಸಕ್ತಿ. ಹೀಗಾಗಿ ಬಾಲ್ಯದಲ್ಲೇ ತನ್ನ ತಾಯಿಯ ಸಹಾಯದಿಂದ ಸಿಹಿತಿಂಡಿ ಸೇರಿದಂತೆ ಇನ್ನಿತರ ತಿನಿಸುಗಳನ್ನು ತಯಾರಿಸಲು ಕಲಿತುಕೊಂಡಿದ್ದರು. ಈ ಅನುಭವ ಇದೀಗ ಬೇಕರಿ ಉದ್ಯಮವನ್ನು ಆರಂಭಿಸಲು ಇವರಿಗೆ ಸಹಾಯವಾಯಿತು. ಪ್ರಾರಂಭದಲ್ಲಿ ಉಂಡೆ ಮಾದರಿಯ ತಿಂಡಿಯನ್ನು ಮಾತ್ರ ತಯಾರಿಸುತ್ತಿದ್ದರು. ಇದಕ್ಕೆ ಹೆಚ್ಚಿನ ಬೇಡಿಕೆಯೂ ಬಂತು. ಇದೀಗ ಗ್ರಾಹಕರ ಬೇಡಿಕೆಯಂತೆ ಲಡ್ಡು, ಚಕ್ಕುಲಿ, ಅವಲಕ್ಕಿ, ಕರದಂಟು ಸೇರಿದಂತೆ ಹಲವಾರು ಬಗೆಯ ತಿಂಡಿಗಳನ್ನು ತಯಾರಿಸಿ ತಿಂಗಳಲ್ಲಿ ಸುಮಾರು ಹದಿನೈದು ಸಾವಿರಕ್ಕೂ ಹೆಚ್ಚು ಆದಾಯವನ್ನು ಪಡೆಯುತ್ತಿದ್ದಾರೆ. ತಾನು ಸ್ವಉದ್ಯೋಗಿಯಾಗುವ ಜೊತೆಗೆ ಇತರ ಇಬ್ಬರಿಗೆ ಉದ್ಯೋಗವನ್ನು ಕೂಡಾ ನೀಡಿದ್ದಾರೆ. ಹಬ್ಬಹರಿದಿನಗಳಲ್ಲಿ ತಿಂಡಿಗಳಿಗೆ ಹೆಚ್ಚಿನ ಬೇಡಿಕೆ ಇರುತ್ತದೆಯಂತೆ. ಆಗ ಹತ್ತರಿಂದ ಇಪ್ಪತ್ತು ಮಂದಿ ಕೂಲಿಯಾಳುಗಳೊಂದಿಗೆ ಸೇರಿಕೊಂಡು ನಾನಾ ಬಗೆಯ ತಿಂಡಿಗಳನ್ನು ತಯಾರಿಸಿ ಗ್ರಾಹಕರಿಗೆ ಒದಗಿಸುತ್ತಾರೆ. ಗೃಹಪ್ರವೇಶ, ಮದುವೆ ಹಾಗೂ ಇನ್ನಿತರ ವಿಶೇಷ ಕಾರ್ಯಕ್ರಮಗಳ ಸಂದರ್ಭದಲ್ಲಿ ಗ್ರಾಹಕರು ನೇರವಾಗಿ ಮನೆಗೆ ಬಂದು ಇವರಿಂದ ತಿಂಡಿ ಖರೀದಿಸುತ್ತಾರೆ. ಕೆಲವೊಮ್ಮೆ ಗ್ರಾಹಕರ ಮನೆಗೆ ಇವರೇ ಹೋಗಿ ತಿಂಡಿ ತಲುಪಿಸುವ ಕೆಲಸವನ್ನು ಮಾಡುತ್ತಾರೆ.
ಇವರು ತಯಾರಿಸುವ ಬಗೆಬಗೆಯ ತಿಂಡಿಗಳಿಗೆ ಆಹಾರ ಗುಣಮಟ್ಟವನ್ನು ಪರಿಶೀಲಿಸುವ ಇಲಾಖೆಯ ಅನುಮತಿ ಮತ್ತು ISಔ ಮಾನ್ಯತೆಯೂ ದೊರೆತಿದೆ. ಹೀಗಾಗಿ ಬೆಂಗಳೂರು ಹಾಗೂ ಸ್ಥಳೀಯ ಬೇಕರಿಗಳಲ್ಲೂ ಹೆಚ್ಚಿನ ಬೇಡಿಕೆ ಇದೆ. ಇವರ ಈ ಕಾರ್ಯಗಳಿಗೆ ಪತಿ ಸಾಥ್ ನೀಡಿದ್ದಾರೆ. ಇದುವರೆಗೆ ಯೋಜನೆಯಿಂದ ಸುಮಾರು ಹತ್ತು ಲಕ್ಷ ರೂಪಾಯಿ ಪ್ರಗತಿನಿಧಿಯನ್ನು ತೊಡಗಿಸಿ ಅಗತ್ಯ ಯಂತ್ರಗಳನ್ನು ಖರೀದಿಸಿದ್ದಾರೆ. ಮುಂದಿನ ದಿನಗಳಲ್ಲಿ ಉಂಡೆ ಹಿಟ್ಟು ಮಿಕ್ಸಿಂಗ್ ಮಿಶನ್, ಸ್ಪ್ರೈಯರ್ ಕಟ್ಟಿಂಗ್ ಮಿಶನ್ ಅನ್ನು ಖರೀದಿಸಲಿದ್ದಾರೆ.
‘ಮಾರುಕಟ್ಟೆಯನ್ನು ಹುಡುಕುವುದು ಸವಾಲಿನ ಕೆಲಸ. ಪ್ರಾರಂಭದಲ್ಲಿ ಮಾರುಕಟ್ಟೆ ಸಮಸ್ಯೆ ಇತ್ತು. ಈ ಬಗ್ಗೆ ಸಂಘದ ಸದಸ್ಯರಲ್ಲಿ ಚರ್ಚಿಸಿದೆ. ಎಲ್ಲರೂ ಸಹಕಾರ ನೀಡಿದರು. ಯೋಜನೆಯಿಂದ ಪ್ರಗತಿನಿಧಿ ಮಾತ್ರವಲ್ಲದೆ ನನಗೆ ಬೇಕಾದ ಮಾರ್ಗದರ್ಶನವನ್ನು ಪಡೆದುಕೊಂಡೆ. ಇದರಿಂದ ಮಾರುಕಟ್ಟೆ ಸಮಸ್ಯೆ ದೂರವಾಯಿತು. ನನ್ನ ಬದುಕಿನಲ್ಲಿ ಈಗ ಬಡತನ ದೂರವಾಗಿದೆ. ಮಕ್ಕಳಿಗೂ ಉತ್ತಮ ಶಿಕ್ಷಣವನ್ನು ನೀಡಲು ಸಾಧ್ಯವಾಯಿತು. ಇದಕ್ಕೆಲ್ಲ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯೇ ಕಾರಣ’ ಎನ್ನುತ್ತಾರೆ ರೂಪಾ ಹೆಚ್. ಶ್ರೀಹರಿಯವರು.
ತಾನು ಸ್ವಉದ್ಯೋಗವನ್ನು ಕಂಡುಕೊಳ್ಳುವ ಜೊತೆಗೆ ತನ್ನ ಊರಿನ ಇತರರಿಗೂ ಉದ್ಯೋಗವನ್ನು ನೀಡುತ್ತಿರುವ ರೂಪಾರವರ ಪ್ರಯತ್ನ ಮಾದರಿಯಾದುದು.

Facebook
Twitter
WhatsApp
LinkedIn
Telegram

Leave a Reply

Your email address will not be published. Required fields are marked *

Latest Updates