ಅರ್ಥ ಚಾರಿತ್ಯ ಮತ್ತು ಕ್ರೆಡಿಟ್ ರೇಟಿಂಗ್ ಮಾನದಂಡಗಳು

ಕ್ರೆಡಿಟ್ ರೇಟಿಂಗ್ ಮಾನದಂಡಗಳು ಇಂದಿನ ಆರ್ಥಿಕ ವ್ಯವಹಾರದ ಜೀವನದಲ್ಲಿ ಅತ್ಯಂತ ಪ್ರಮುಖ ಪಾತ್ರವಹಿಸುತ್ತಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಸಾಲಗಾರರ ಕ್ಷಮತೆಯನ್ನು ನಿರ್ಧರಿಸಲು ಒಂದು ಮಾನದಂಡವನ್ನು ರೂಪಿಸಲು ಕ್ರಮ ಕೈಗೊಂಡಿದ್ದು, ಅದರ ಮುಂದಿನ ಫಲಶ್ರುತಿಯೇ 1988ನೇ ಅಸವಿಯಲ್ಲಿ ಕ್ರೆಡಿಟ್ ರೇಟಿಂಗ್ ವ್ಯವಸ್ಥೆಯನ್ನು ದೇಶದಲ್ಲಿ CRISILAನ ಮೂಲಕ ಪರಿಚಯಿಸಲಾಯಿತು. ಹಾಗೆಯೇ ಸಿಬಿಲ್ (CIBIL) 2000ನೇ ಇಸವಿಯಲ್ಲಿ ಸ್ಥಾಪನೆಗೊಂಡಿತು. ಪ್ರಸ್ತುತ ಸಿಬಿಲ್ ಮತ್ತು ಕ್ರಿಸಿಲ್ ಸಂಸ್ಥೆಗಳು ವ್ಯಕ್ತಿಗತ ಸಾಲ ಮರುಪಾವತಿ ದಕ್ಷತೆಯ ಮಾನದಂಡವನ್ನು ನೀಡುವ ಪ್ರಮುಖ ಸಂಸ್ಥೆಗಳು ಆಗಿದ್ದು, ಸಿಬಿಲ್ ಸಂಸ್ಥೆಯಲ್ಲಿ ಸುಮಾರು ನೂರು ಕೋಟೆ ಭಾರತೀಯರ ದತ್ತಾಂಶವು ಸಂಗ್ರಹವಾಗಿದ್ದು, ಕ್ಷಣಾರ್ಧದಲ್ಲೇ ಒಬ್ಬ ವ್ಯಕ್ತಿಯ ಸಾಲ ಮರುಪಾವತಿಯ ದಕ್ಷತೆಯ ಮಾನದಂಡವನ್ನು ನೀಡುತ್ತದೆ. ಓರ್ವ ವ್ಯಕ್ತಿ ಪಡೆದ ಸಾಲವನ್ನು ಹೇಗೆ ಶಿಸ್ತಿನಿಂದ ಕಂತಿನ ಪ್ರಕಾರ ಮರುಪಾವತಿ ಮಾಡುತ್ತಾನೆ ಎಂಬುವುದಕ್ಕೆ ಅತೀ ಹೆಚ್ಚು ಅಂಕೆಗಳು ಮಾನದಂಡದಲ್ಲಿ ಲಭಿಸುತ್ತದೆ. ಜೊತೆಗೆ ಒಟ್ಟು ಎಷ್ಟು ಮೊತ್ತದ ಸಾಲದ ಹೊರೆ ಹೊಂದಿರುತ್ತಾರೆ. ಅವುಗಳ ಅವಧಿ, ವಿಧಗಳು ಕೂಡ ಅಂಕಗಳಿಗೆ ಎರಡನೇ ಪ್ರಮುಖ ಅಂಶಗಳಾಗಿವೆ. ಹೀಗೆ ಒಬ್ಬ ವ್ಯಕ್ತಿ ಹೊಂದಿರುವ ಸಾಲ ಮತ್ತು ಅವುಗಳೊಂದಿಗೆ ಶಿಸ್ತಿನಿಂದ ವ್ಯವಹರಿಸಿಕೊಂಡು ಬಂದ ಆಧಾರದ ಮೇಲೆ ಕ್ರೆಡಿಟ್ ರೇಟಿಂಗ್ ಸಿಗುತ್ತದೆ. ದೇಶದ ಎಲ್ಲಾ ಬ್ಯಾಂಕ್‌ಗಳು, ಕಿರು ಆರ್ಥಿಕ ಸಂಸ್ಥೆಗಳು, NBFT’S ಹಾಗೂ ಹೆಚ್ಚಿನ ಎಲ್ಲಾ ಸಾಲ ನೀಡುವ ಸಂಸ್ಥೆಗಳು ಈ ರೇಟಿಂಗ್ ಮಾನದಂಡವನ್ನು ಸಾಲ ನೀಡುವ ಪ್ರಕ್ರಿಯೆಯಲ್ಲಿ ಅತ್ಯಂತ ಪ್ರಮುಖ ಹಾಗೂ ಮೊದಲನೇಯ ಭಾಗವಾಗಿ ಪರಿಗಣಿಸಿವೆ. ಸಾಲ ಅರ್ಜಿದಾರನ ಕೆಡಿಟ್ ರೇಟಿಂಗ್ ಅಂಕಗಳು ಸಮಾಧಾನಕರ ಅಥವಾ ಉತ್ತಮವಾಗಿದ್ದಲ್ಲಿ ಮಾತ್ರ ಮುಂದಿನ ವಿಷಯಗಳಾದ ಅವರ ಆದಾಯ, ಅಡಮಾನಕ್ಕಿಡಬಹುದಾದ ಚರಾಸ್ಥಿಗಳ ಮೌಲ್ಯ ಜಾಮೀನುದಾರರ ಬಗ್ಗೆ ವಿವರವನ್ನು ಪಡೆಯಲಾಗುವುದು. ಒಂದು ವೇಳೆ ಕ್ರೆಡಿಟ್ ರೇಟಿಂಗ್ ಕಳಪೆ ಇದ್ದಲ್ಲಿ ಸಾಲದ ಮಾತುಕತೆ ಅಲ್ಲಿಗೇ ಮುಗಿದಂತೆ. ಒಬ್ಬ ವ್ಯಕ್ತಿಗೆ ಕೋಟಿ ರೂಪಾಯಿ ಆದಾಯ ಇದ್ದು, ಆಡಮಾನ ಇಡಲು ಹತ್ತು ಬಂಗಲೆಗಳಿದ್ದರೂ ಕೂಡ ಕ್ರೆಡಿಟ್ ಮಾನದಂಡದಲ್ಲಿ ಕಳಪೆ ಇದ್ದಲ್ಲಿ ಈ ಸಂಸ್ಥೆಗಳಿಂದ ನಯಾ ಪೈಸೆ ಸಾಲ ಕೂಡಾ ಸಿಗುವುದಿಲ್ಲ. ವ್ಯಕ್ತಿಯ ವ್ಯಾವಹಾರಿಕ ಬದುಕಿನ ಶುದ್ಧ ಹಸ್ತ ಅಥವಾ ಅರ್ಥ ಚಾರಿರ್ತ್ಯ ಅವನ ಆದಾಯ, ಆಸ್ತಿ-ಅಂತಸ್ತುಗಳೆಲ್ಲವುಗಳಿAತ ಅತ್ಯುನ್ನತ ಸ್ಥಾನ ಹೊಂದುತ್ತದೆ. ಇದಕ್ಕೆ ಮತ್ತಷ್ಟು ಇಂಬು ನೀಡುವಂತೆ ಯಾವ ವ್ಯಕ್ತಿಯ ಕ್ರೆಡಿಟ್ ರೇಟಿಂಗ್‌ನ ಅಂಕಗಳು ಅತ್ಯುತ್ತಮವಾಗಿರುತ್ತದೆಯೋ, ಅವರಿಗೆ ಈ ಸಂಸ್ಥೆಗಳಿAದ ಎಲ್ಲಿಲ್ಲದ ಮಣೆ ಸಿಗುತ್ತದೆ. ಅವರ ಆಸ್ತಿ, ಜಾಮೀನುದಾರರ ಮೌಲ್ಯ ಕಿಂಚಿತ್ತಾದರೂ ತೊಂದರೆ ಇಲ್ಲ, ಸಾಲ ಸಿಗುವುದು ಖಚಿತ, ಎಷ್ಟೋ ಸಂದರ್ಭದಲ್ಲಿ ಯಾವುದೇ ಆಡಮಾನ ಹಾಗೂ ಜಾಮೀನುದಾರರಿಲ್ಲದೇ ಗರಿಷ್ಠ ಸಾಲವನ್ನು ನೀಡುತ್ತಿದೆ. ಜೊತೆಗೆ ಇತರರಿಗೆ ವಿಧಿಸುವ ಬಡ್ಡಿಗಿಂತ ಕಡಿಮೆ ಬಡ್ಡಿದರದಲ್ಲಿ ಸಾಲ, ಬ್ಯಾಂಕ್ ವಿಧಿಸುವ ಶುಲ್ಕಗಳಲ್ಲಿ ವಿಶೇಷ ವಿನಾಯಿತಿ, ಹೆಚ್ಚುವರಿ ಅವಧಿಯ ಸಾಲ, ಶೀಘ್ರ ಸಾಲ ಹೀಗೆ ಇನ್ನೂ ಹತ್ತು ಹಲವು ಸೌಲಭ್ಯಗಳ ಸರಮಾಲೆ ಇವರಿಗೆ ಸದಾ ಸಿದ್ಧವಾಗಿದೆ. ಮುಂದಿನ ದಿನಗಳಲ್ಲಿ ಈ ಕ್ರೆಡಿಟ್ ಮಾನದಂಡಕ್ಕಿರುವ ಪ್ರಾಶಸ್ತ್ಯ ಇನ್ನು ಹೆಚ್ಚುತ್ತಲೇ ಹೋಗುತ್ತದೆ. ಇಂದು ಕ್ರೆಡಿಟ್ ರೇಟಿಂಗ್ ಇತರ ಸಾಲೇತರ ವಿಚಾರಗಳಲ್ಲಿಯೂ ಬಳಕೆಯಾಗುತ್ತಿದೆ. ಉದಾ: ಕೆಲವು ಟೆಂಡರ್ ಪ್ರಕ್ರಿಯೆಗಳಲ್ಲಿ, ವ್ಯಕ್ತಿ-ಸಂಸ್ಥೆಗಳ ನಡುವಣ ದೊಡ್ಡ ಒಪ್ಪಂದಗಳಲ್ಲಿ, ಪ್ರಾಂಚೈಸಿ ಹಂಚಿಕೆಗಳಲ್ಲಿ ಇತ್ಯಾದಿ. ಈ ಕ್ರೆಡಿಟ್ ಮಾನದಂಡದ ಪ್ರಾಮುಖ್ಯತೆಯ ಅರಿವು ಇರುವವರು ತಾನು ಪಡೆದ ಸಾಲವನ್ನು ಕಂತಿನ ಪ್ರಕಾರ ಶಿಸ್ತಿನಿಂದ ಕಟ್ಟಿ ಬಹಳ ಜಾಗರುಕತೆಯಿಂದ ತನ್ನ ಉತ್ತಮ ಕ್ರೆಡಿಟ್ ರೇಟಿಂಗ್‌ನ್ನು ಮುಂದಿನ ಸುಂದರ ಭವಿಷ್ಯತ್‌ಗಾಗಿ ಕಾಯ್ದುಕೊಳ್ಳುತ್ತಾರೆ. ಆದರೆ ಇದರ ಅರಿವಿಲ್ಲದವರು ತಮ್ಮ ರೇಟಿಂಗ್‌ನ್ನು ಹಾಳುಮಾಡಿಕೊಂಡು ಭವಿಷ್ಯದಲ್ಲಿ ಸಿಗಬಹುದಾದ ಅನೇಕ ಆರ್ಥಿಕ ಭಾಗ್ಯಗಳ ಬಾಗಿಲನ್ನು ಮುಚ್ಚಿಕೊಳ್ಳುತ್ತಿದ್ದಾರೆ. ಕೆಲವರು ಸುಲಭವಾಗಿ ಸಿಗುವ ಸಣ್ಣಮಟ್ಟ ಸಾಲಗಳನ್ನು ಬೇಕಾಬಿಟ್ಟಿ ಉದ್ದೇಶಗಳಿಗೆ ಪಡೆದು ಕಂತು ಕಟ್ಟುವಾಗ ಗೋಳಾಡುತ್ತಾರೆ. ಏರು ದಿಬ್ಬದಲ್ಲಿ ಸೈಕಲ್ ಹೊಡೆದಂತೆ ದುಬಾರಿ ದಂಡ ತೆತ್ತು ಕೊನೆಗೂ ಹೇಗೂ ಸಾಲವನ್ನು ಮುಗಿಸುತ್ತಾರೆ. ಆದರೆ ಕಂತಿನ ಪ್ರಕಾರ ಮರುಪಾವತಿ ಮಾಡದೇ ಇದ್ದರಿಂದ ತಮ್ಮ ಕ್ರೆಡಿಟ್ ರೇಟಿಂಗ್ ಅಂಕಗಳನ್ನು ತೀವ್ರವಾಗಿ ಕಳೆದುಕೊಳ್ಳುತ್ತಾರೆ. ಎಷ್ಟೋ ಜನ ಸುಲಭವಾಗಿ ಸಾಲ ಸಿಕ್ಕಿದೆ ಎಂದು ದುಬಾರಿ ವಸ್ತುಗಳನ್ನು ಖರೀದಿಸಿ. ಅವಧಿಯಂತೆ ಕಂತು ಕಟ್ಟಿದೇ ಕ್ರೆಡಿಟ್ ರೇಟಿಂಗ್‌ನ್ನು ಹಾಳು ಕೆಡವಿಸಿಕೊಂಡು ಭವಿಷ್ಯತ್‌ನಲ್ಲಿ ಇದಕ್ಕೆ ಬಾರಿ ಬೆಲೆತೆರುವಂತಾಗುತ್ತದೆ. ಮುಂದೆ ಯಾವುದೇ ಒಳ್ಳೆಯ ಉದ್ದೇಶ ಇದ್ದರೂ ಇವರಿಗೆ ಯಾವ ಬ್ಯಾಂಕ್ ಸಾಲ ನೀಡುವುದಿಲ್ಲ. ಸ್ವ-ಉದ್ಯೋಗಕ್ಕಾಗಿ ಸರ್ಕಾರಿ ಸಬ್ಸಿಡಿ ಇರುವ ಯೋಜನೆಗಳಿಗೂ ಸಾಲ ಸಿಗುವುದಿಲ್ಲ. ಈ ಕ್ರೆಡಿಟ್ ಮಾನದಂಡದ ಬಗ್ಗೆ ಅಷ್ಟಾಗಿ ಅರಿವಿಲ್ಲದ ವಿಶೇಷವಾಗಿ ಗ್ರಾಮೀಣ ಜನರು ತಮ್ಮ ಮುಂದಿನ ಸುಂದರ ಭವಿಷ್ಯತ್ಗಾಗಿ ತಮ್ಮ ಉತ್ತಮ ಕ್ರೆಡಿಟ್ ಮಾನದಂಡವನ್ನು ಕಾಯ್ದುಕೊಳ್ಳಲು ಎಲ್ಲಿಲ್ಲದ ಪ್ರಾಮುಖ್ಯತೆಯನ್ನು ನೀಡಲೇಬೇಕಾಗಿರುತ್ತದೆ. ಸಾಲಮನ್ನಾ, ಮತ್ತೊಂದು, ಮಗದೊಂದು ವಿಷಯಗಳಿಗೆ ಕಿವಿಗೊಡದೆ ನೀವು ಯಾವುದೇ ಸಂಸ್ಥೆಗಳಿಂದ ಸಾಲ ಪಡೆದಿದ್ದರೂ ಕೂಡ ಅತ್ಯಂತ ಪ್ರಾಮಾಣಿಕತೆಯಿಂದ ಕಂತಿನ ಅವಧಿಯಂತೆಯೇ ಮರುಪಾವತಿ ಮಾಡಿ. ಹೀಗೆ ನಿಮ್ಮ ಕ್ರೆಡಿಟ್ ಮಾನದಂಡದ ಮೌಲ್ಯ ಹೆಚ್ಚಾದಂತೆ ನಿಮಗೆ ಸಿಗುವ ಆರ್ಥಿಕ ಸೌಲಭ್ಯಗಳ ಅವಕಾಶವೂ ಕೂಡ ಅಭೂತಪೂರ್ವವಾಗಿರುತ್ತದೆ. ಪಡೆದ ಸಾಲವನ್ನು ಪ್ರಾಮಾಣಿಕವಾಗಿ ಹಿಂತಿರುಗಿಸುವುದು ಕೇವಲ ಆರ್ಥಿಕ ಮಾನದಂಡಕ್ಕಾಗಷ್ಟೇ ಅಲ್ಲ. ಇದು ಮಾನವಧರ್ಮ ಕೂಡ! ಆದ್ದರಿಂದ ಈ ಕ್ರೆಡಿಟ್ ಮಾನದಂಡದ ವ್ಯವಸ್ಥೆಯನ್ನು ಒಂದು ವ್ಯಾವಹಾರಿಕ ಪ್ರಕ್ರಿಯೆ ಅಥವಾ ಸಲ್ಲಿಸಬೇಕಾದ ಕಡ್ಡಾಯ ದಾಖಲಾತಿ ಎಂದೆನಿಸದೆ, ಇದು ನಮ್ಮ ಶುದ್ಧ ಕೈಗಳನ್ನು ಬಿಂಬಿಸುವ ಕೈಗನ್ನಡಿ ಎಂದು ಸ್ವೀಕರಿಸೋಣ.

Facebook
Twitter
WhatsApp
LinkedIn
Telegram