ಡಾ. ಚಂದ್ರಹಾಸ್ ಚಾರ್ಮಾಡಿ
ಬೆಳ್ಳಂಬೆಳಗ್ಗೆ ನಿಮ್ಮೂರಿನ ರಸ್ತೆಯಲ್ಲೋ, ಓಣಿಯಲ್ಲೋ, ‘ಅಮ್ಮ ಕೂದ್ಲೂ… ಕೂದ್ಲೂ…’ ಎಂದು ಕರೆಯುತ್ತಾ ಸ್ಕೂಟರ್ಗೆ ಎಷ್ಟು ಸಾಧ್ಯವೋ ಅಷ್ಟು ಪಾತ್ರೆ, ಬಾಚಣಿಗೆ, ಪಿಂಗಾಣಿ ಮುಂತಾದ ವಸ್ತುಗಳನ್ನು ನೇತಾಡಿಸಿಕೊಂಡು ಓಡಾಡುವವರನ್ನು ನೀವು ನೋಡಿರುತ್ತೀರಿ. ನೀವು ಕೊಡುವ ಕೂದಲಿಗೆ ಅವರೊಂದು ಪಾತ್ರೆ ಕೊಡುತ್ತಾರೆ. ಕಸದಬುಟ್ಟಿಗೆ ಹಾಕುವ ಬದಲು ಕೂದಲನ್ನು ಜೋಪಾನವಾಗಿಟ್ಟರೆ ಚೊಂಬಾದರೂ ಸಿಗುತ್ತದೆ ಎಂಬ ಆಸೆಯನ್ನು ಬಿತ್ತುವ ಕೂದಲು ವ್ಯಾಪಾರಿಗಳು ತಾವು ಖರೀದಿಸಿದ ಕೂದಲನ್ನು ಏನು ಮಾಡುತ್ತಾರೆ? ಎಂಬ ಯೋಚನೆ ನಿಮ್ಮಲ್ಲೂ ಇರಬಹುದಲ್ವಾ! ಇದನ್ನು ತಿಳಿದುಕೊಳ್ಳಬೇಕೆಂದು ನಮ್ಮ ತಂಡ ಗದಗ ಜಿಲ್ಲೆಗೆ ತೆರಳಿ ಕೂದಲು ವ್ಯಾಪಾರಸ್ಥರನ್ನು, ಅದರ ಮಾಲಕರನ್ನು ಭೇಟಿಯಾಗಿ ತಯಾರಿಸಿದ ಸ್ಪೆಷಲ್ ಸ್ಟೋರಿಯೊಂದು ಇಲ್ಲಿದೆ.
ಮುಂಡರಗಿ ತಾಲೂಕಿನ ಪಾಟೀಲ್ ನಗರದ ಶಿವರಂಜಿನಿ ಗ್ರಾಮಾಭಿವೃದ್ಧಿ ಯೋಜನೆಯ ‘ಅಣ್ಣಮ್ಮ ಸ್ವಸಹಾಯ ಸಂಘ’ದವರು. ಕಳೆದೆರಡು ವರ್ಷಗಳಿಂದ ಇವರದು ಕೂದಲಿನ ಕಾಯಕ. ಕೂದಲು ಬೇರ್ಪಡಿಸುವ ಕೆಲಸಗಳಿಗಾಗಿ ‘ಬನ್ನಿಕಾಲಮ್ಮ’ ಎಂಬ ಹೆಸರಿನ ಘಟಕವೊಂದನ್ನು ಆರಂಭಿಸಿ ನಿತ್ಯ 40 ಮಂದಿಗೆ ಕೆಲಸ ನೀಡಿದ್ದಾರೆ.
ಬೇರೆ ಬೇರೆ ಊರುಗಳಿಂದ ಕೊಪ್ಪಳದ ಭಾಗ್ಯ ನಗರದಲ್ಲಿರುವ ಕಂಪನಿಯೊoದಕ್ಕೆ ಕೂದಲು ಬಂದು ತಲುಪುತ್ತದೆ. ಆದರೆ ಆ ಕೂದಲಿನಿಂದ ನೇರವಾಗಿ ಯಾವುದೇ ವಸ್ತುಗಳನ್ನು ತಯಾರಿಸುವಂತಿಲ್ಲ. ಮೊದಲಾಗಿ ಕಚ್ಚಾ ವಸ್ತು ತಯಾರಿ ಅಂದರೆ ಕೂದಲಿನ ಸಿಕ್ಕನ್ನು ತೆಗಯಬೇಕು. ಈ ಕೆಲಸವನ್ನು ಮಾಡಲು ಇಲ್ಲಿಂದ ಬೇರೆ ಬೇರೆ ಘಟಕಗಳಿಗೆ ನೀಡುತ್ತಾರೆ.
ಕೂದಲನ್ನು ಬೇರ್ಪಡಿಸುವ ಕೆಲಸ
ಶಿವರಂಜಿನಿಯವರ ಘಟಕಕ್ಕೆ ಕಂಪನಿಗಳು ಕೂದಲನ್ನು ಕಳುಹಿಸಿಕೊಡುತ್ತವೆ. ಪ್ರತಿನಿತ್ಯ ಹತ್ತು ಕೆ.ಜಿ. ಕೂದಲಿಗೆ ಕಚ್ಚಾ ರೂಪ ನೀಡುವ ಕೆಲಸ ಇಲ್ಲಿ ನಡೆಯುತ್ತದೆ. 100 ಗ್ರಾಂ. ನ ಒಂದು ಪ್ಯಾಕ್ ಕೂದಲಿನ ಸಿಕ್ಕು ಬಿಡಿಸಿದರೆ ಅವರಿಗೆ ರೂ. 100 ಸಂಬಳ ದೊರೆಯುತ್ತದೆ. ಒಂದು ಪ್ಯಾಕ್ ಸಿಕ್ಕು ಬಿಡಿಸಲು ಕನಿಷ್ಟ ನಾಲ್ಕು ತಾಸು ಬೇಕಾಗುತ್ತದೆಯಂತೆ. ಅಂದರೆ ಎಂಟು ಗಂಟೆ ದುಡಿದರೆ ರೂ. 200 ಕೈ ಸೇರುತ್ತದೆ. ಸಾಮಾನ್ಯವಾಗಿ ಮಹಿಳೆಯರು ಈ ಕೆಲಸದಲ್ಲಿ ತೊಡಗುತ್ತಾರೆ. ಸಿಕ್ಕು ಬಿಡಿಸಿದ ಕೂದಲು ಇಲ್ಲಿಂದ ನೇರವಾಗಿ ಕಂಪನಿಗೆ ರವಾನೆಯಾಗುತ್ತದೆ.
ಉಪಯೋಗ
ಕೂದಲನ್ನು ಬಳಸಿ, ವಿಗ್, ಚೌರಿ ತಯಾರಿಸುತ್ತಾರೆ. ಕ್ಯಾನ್ಸರ್ ರೋಗಿಗಳಿಗೆ, ಬೇರೆ ಬೇರೆ ನಾಟಕ, ಸಿನಿಮಾ, ಧಾರವಾಹಿಗಳಲ್ಲಿ ಅಭಿನಯಿಸುವ ಕಲಾವಿದರಿಗೆ ಇದರ ಬಳಕೆಯಾಗುತ್ತದೆ. ಗುಣಮಟ್ಟದ ಒಂದು ವಿಗ್ನ ಬೆಲೆ ರೂ. 2,000 ದಿಂದ ರೂ. 5,000ದವರೆಗೆ ಇರುತ್ತದೆ.
ಉದ್ದ ಕೂದಲಿಗೆ ಬೇಡಿಕೆ
ಸಾಮಾನ್ಯವಾಗಿ ಪುರುಷರ ಕೂದಲಿಗೆ ಬೇಡಿಕೆ ಕಡಿಮೆ. ಅವು ಮೀಸೆ ತಯಾರಿಗಷ್ಟೇ ಬಳಕೆಯಾಗುತ್ತದೆ. ಸ್ತಿçÃಯರ ಉದ್ದ ಕೂದಲಿಗೆ ಬೇಡಿಕೆ ಜಾಸ್ತಿ. ಇನ್ನು ಬಿಳಿ ಕೂದಲನ್ನು ಬೇರ್ಪಡಿಸಿ ಅದರಿಂದಲೂ ವಿಗ್ಗ್ ತಯಾರಿಸುತ್ತಾರೆ.
ಅಂತೂ ಉದುರುವ ಕೂದಲು ನೂರಾರು ಮಂದಿಗೆ ಉದ್ಯೋಗ ನೀಡುತ್ತಿರುವುದಂತೂ ಸತ್ಯ.